‘ಐರಿಫ್ಲೆಕ್ಸ್’ ಮತ್ತು ‘ಹ್ಯಾಕೋಫ್ಲೆಕ್ಸ್’ ಎಂಬ ಹೆಸರುಗಳನ್ನು ಕೇಳಿದರೆ ಈಗಿನ ಛಾಯಾಗ್ರಾಹಕರು ವಿಚಿತ್ರವಾಗಿ ನೋಡುತ್ತಾರೆ. ಆದರೆ ಅರವತ್ತರ ದಶಕದ ಪ್ರಾರಂಭದಲ್ಲಿ ಶಿಡ್ಲಘಟ್ಟದ ಜನರ ಮಂದಹಾಸಕ್ಕೆ ಬೆಳಕು ಚೆಲ್ಲಿ ನೆಗೆಟೀವ್‌ಗಳಲ್ಲಿ ಸೆರೆಹಿಡಿದು ಕಪ್ಪುಬಿಳುಪು ಚಿತ್ರಗಳನ್ನಾಗಿಸಿದ್ದ ಕ್ಯಾಮೆರಾಗಳಿವು.
ತಾಲ್ಲೂಕಿನ ಮುತ್ತೂರಿನ ವಿ.ವೆಂಕೋಬರಾವ್ ಶಿಡ್ಲಘಟ್ಟದ ಅಶೋಕ ರಸ್ತೆಯಲ್ಲಿ ೧೯೬೪ ರ ಸೆಪ್ಟೆಂಬರ್ ತಿಂಗಳಿನಲ್ಲಿ ಡೀಲಕ್ಸ್ ಫೋಟೋ ಸ್ಟುಡಿಯೋ ಪ್ರಾರಂಭಿಸಿದಾಗ ಬಳಸುತ್ತಿದ್ದ ಕ್ಯಾಮೆರಾಗಳು ‘ಐರಿಫ್ಲೆಕ್ಸ್’ ಮತ್ತು ‘ಹ್ಯಾಕೋಫ್ಲೆಕ್ಸ್’. ಈ ಕ್ಯಾಮೆರಾಗಳ ಬೆಲೆ ಆಗ ೧,೫೦೦ ರೂಗಳು. ಇವುಗಳ ನಂತರ ಯಾಷಿಕಾ ಡಿ ಎಂಬ ೨,೦೦೦ ರೂಗಳ ಕ್ಯಾಮೆರಾ ಹಾಗೂ ಕ್ಯಾನನ್ ಕ್ಯೂ ಎಲ್೧೭ ಎಂಬ ೩,೦೦೦ ರೂಗಳ ಕ್ಯಾಮೆರಾಗಳನ್ನು ಬಳಸುತ್ತಿದ್ದರು.
ಪೋಟೋ ತೆಗೆಯುವವರು ವಿರಳವಾಗಿದ್ದ ಆ ಕಾಲದಲ್ಲಿ ಕ್ಯಾಮೆರಾ, ಫಿಲಂ ಸಂಸ್ಕರಣೆ, ಪ್ರಿಂಟ್ ಹಾಕುವುದನ್ನು ಕಲಿತ ವೆಂಕೋಬರಾವ್ ತಾಲ್ಲೂಕಿನಲ್ಲಿ ಮೊಟ್ಟಮೊದಲ ಸ್ಟುಡಿಯೋ ಸ್ಥಾಪಿಸಿದರು.
‘ನನಗೆ ಫೋಟೋ ಸಂಸ್ಕರಣೆಯನ್ನು ಕಲಿಸಿಕೊಟ್ಟವರು ಆಗ ಪುರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ನಿರಂಜನ್ ಸಿಂಗ್. ೧೬ ರೂಗಳ ಬಾಡಿಗೆ ನೀಡಿ ೧೨೦ ರೂಗಳ ಬಂಡವಾಳದೊಂದಿಗೆ ೧೯೬೪ರ ಸೆಪ್ಟೆಂಬರ್ ೧೨ರಂದು ಪಟ್ಟಣದ ಅಶೋಕ ರಸ್ತೆಯಲ್ಲಿ ಸ್ಟುಡಿಯೋ ಪ್ರಾರಂಭಿಸಿದೆ. ಆಗ ದಿನವೆಲ್ಲಾ ಕುಳಿತರೂ ೫ ರೂ ವ್ಯಾಪಾರವಾಗುತ್ತಿರಲಿಲ್ಲ. ಕಪ್ಪುಬಿಳುಪಿನ ೩ ಪಾಸ್‌ಪೋರ್ಟ್ ಚಿತ್ರಗಳಿಗೆ ೩ ರೂಗಳು ಪಡೆಯುತ್ತಿದ್ದೆ. ಗ್ರೂಪ್ ಫೋಟೋ ತೆಗೆಯಲೆಂದೇ ೫,೦೦೦ ರೂಗಳ ಫೀಲ್ಡ್ ಕ್ಯಾಮೆರಾ ತಂದಿದ್ದೆ. ದಕ್ಷಿಣ ಭಾರತೀಯ ಛಾಯಾಗ್ರಾಹಕರ ಸಂಘದ ಸದಸ್ಯತ್ವವನ್ನೂ ಹೊಂದಿದ್ದೆ. ಅದರ ಚುನಾವಣೆ ಮತ್ತು ಸಭೆಗೆ ಮದ್ರಾಸಿಗೆ ಹೋಗಿಬರುತ್ತಿದ್ದೆ’ ಎಂದು ೭೪ ವರ್ಷದ ವಿ.ವೆಂಕೋಬರಾವ್ ತಮ್ಮ ಫೋಟೋಗ್ರಫಿ ಪ್ರಾರಂಭದ ದಿನಗಳನ್ನು ನೆನೆಸಿಕೊಳ್ಳುತ್ತಾರೆ.
‘೧೯೮೯ರಲ್ಲಿ ಸ್ಟುಡಿಯೋದ ಬೆಳ್ಳಿಹಬ್ಬವನ್ನು ಆಚರಿಸಿದೆ. ಆಗ ತಹಶೀಲ್ದಾರರಾಗಿದ್ದ ಟಿ.ಎನ್.ರೆಡ್ಡಿ, ಬೆಂಗಳೂರಿನ ಎಂಪೈರ್ ಸ್ಟುಡಿಯೋದ ಗುರ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನನ್ನ ಛಾಯಾಗ್ರಹಣ ಕಲೆಯ ಗುರುಗಳಾದ ನಿರಂಜನ್ ಸಿಂಗ್ ಮತ್ತು ನನ್ನ ಸಹಾಯಕರಾಗಿ ದುಡಿದಿದ್ದ ಪಿ.ವಿ.ರಾಜೇಂದ್ರಪ್ರಸಾದ್ ಅವರನ್ನು ಸನ್ಮಾನಿಸಲಾಗಿತ್ತು. ಆಗ ತಾಲ್ಲೂಕಿಗೇ ಮೊಟ್ಟ ಮೊದಲಬಾರಿಗೆ ೭೫ ಸಾವಿರ ರೂಗಳ ವೀಡಿಯೋ ಕ್ಯಾಮೆರಾ ತಂದಿದ್ದೆ. ಸುಮಾರು ೪೩ ವರ್ಷಗಳ ಕಾಲ ನಡೆಸಿದ್ದ ಸ್ಟುಡಿಯೋ ಇದ್ದ ಕಟ್ಟಡವನ್ನು ರಸ್ತೆ ಅಗಲೀಕರಣದಿಂದ ಕೆಡವಲಾಯಿತು. ಮಕ್ಕಳು ಕೂಡ ತಮ್ಮದೇ ಸ್ಟುಡಿಯೋಗಳನ್ನು ಮಾಡಿಕೊಂಡಿದ್ದರಿಂದ ಈಗ ಮನೆಯಲ್ಲಿಯೇ ಇರುವಂತಾಗಿದೆ’ ಎನ್ನುತ್ತಾರೆ ವೆಂಕೋಬರಾವ್.
‘ಈಗ ನಮ್ಮ ತಾಲ್ಲೂಕಿನಲ್ಲಿ ೪೫ ಸ್ಟುಡಿಯೋಗಳಿವೆ. ಡಿಜಿಟಲ್ ಕಾಲ ಬಂದ ಮೇಲೆ ಅನೇಕರು ಛಾಯಾಗ್ರಾಹಕರಾಗಿದ್ದಾರೆ. ಈಗ ಫೋಟೋ ತೆಗೆಯುವುದು, ಪ್ರಿಂಟ್ ಹಾಕಿಸುವುದು ಸುಲಭವಾಗಿದೆ. ಕಪ್ಪು ಬಿಳುಪು ಚಿತ್ರವನ್ನು ಕ್ಯಾಬಿನೆಟ್ ಆಕಾರದ ಚಿತ್ರವನ್ನು ಕಟ್ಟು ಹಾಕಿಸಿ ಮನೆಗೆ ಬಂದವರೆಲ್ಲರಿಗೂ ಕಾಣುವಂತೆ ನೇತು ಹಾಕಿ ಹೆಮ್ಮೆ ಪಟ್ಟುಕೊಳ್ಳುವ ಕಾಲದಲ್ಲಿ ತಾಲ್ಲೂಕಿನಲ್ಲಿ ಮೊಟ್ಟ ಮೊದಲು ಸ್ಟುಡಿಯೋ ಪ್ರಾರಂಭಿಸಿದ್ದ ವೆಂಕೋಬರಾವ್ ಅವರು ಈ ವೃತ್ತಿಬಾಂಧವರಿಗೆ ಮಾದರಿಯಾಗಿದ್ದಾರೆ’ ಎಂದು ತಾಲ್ಲೂಕು ಛಾಯಾಗ್ರಾಹಕ ಸಂಘದ ಸದಸ್ಯರೊಬ್ಬರು ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
- Advertisement -
- Advertisement -
- Advertisement -
- Advertisement -