‘ಅಗ್ನಿಮಿಳೇ ಪುರೋಹಿತಂ…ಯಜ್ಞಸ್ತದೇವಮೃತ್ವಿಜಂ|
ಹೊರಾರಂ ರತ್ನಧಾತಮಂ||೧||’
ಮನುಕುಲದ ಅತ್ಯಂತ ಪುರಾತನವಾದ ವೇದಗಳಲ್ಲಿ ಮೊದಲನೆಯದಾದ ಋಗ್ವೇದದ ಮೊಟ್ಟ ಮೊದಲ ಸಾಲು ‘ಅಗ್ನಿದೇವನೇ ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಅಂಧಕಾರವನ್ನ ಕರಗಿಸಿ ಬೆಳಕು ನೀಡುವವನೇ, ನಿನ್ನೆಡೆಗೆ ಅನುದಿನವು ಬರುತ್ತಿದ್ದೇವೆ. ಅತ್ಯಂತ ಭಕ್ತಿಪೂರ್ವಕವಾಗಿ ಕೃತಜ್ಞತಾಭಾವದಿಂದ ನಿನಗಿದೋ ವಂದನೆ.’ ಇದು ಸನಾತನ ಹಿಂದುಧರ್ಮಕ್ಕೆ, ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ. ಇದರಿಂದ ಜರ್ಮನಿಯ ಪ್ರಖ್ಯಾತ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ಕೂಡ ಪ್ರಭಾವಿತರಾಗಿದ್ದರಂತೆ.
ಈ ವೇದಗಳೆಡೆಗೆ ತಾಲ್ಲೂಕಿನ ಮೇಲೂರು ಗ್ರಾಮದ ಎಂ.ಆರ್.ಪ್ರಭಾಕರ್ ಕೂಡ ಆಕರ್ಷಿತರಾಗಿದ್ದಾರೆ. ಸುಮಾರು 10 ಸಾವಿರ ಪುಟಗಳ ನಾಲ್ಕೂ ವೇದಗಳ 21 ಸಾವಿರ ಮಂತ್ರಗಳನ್ನು ಕೇವಲ 60 ಪುಟಗಳಲ್ಲಿ ಸೂಕ್ಷ್ಮವಾದ ಅಕ್ಷರಗಳಲ್ಲಿ ಬರೆಯಲು ಮುಂದಾಗಿದ್ದಾರೆ.
ಈ ಪ್ರಯತ್ನದಲ್ಲಿ ಒಂದಿನಿತೂ ಚಿತ್ತಿಲ್ಲದೆ ಸೂಕ್ಷ್ಮವಾಗಿ ಸುಮಾರು 13 ಸಾವಿರ ಮಂತ್ರಗಳನ್ನು ಬರೆದಿದ್ದಾರೆ. ಋಗ್ವೇದ, ಯಜುರ್ವೇದವನ್ನು ಮುಗಿಸಿ ಸಾಮವೇದದ ಮಂತ್ರಗಲನ್ನು ಬರೆಯುತ್ತಿದ್ದಾರೆ.
ಈಗಾಗಲೇ ಭಗವದ್ಗೀತೆಯ 18 ಅಧ್ಯಾಯಗಳ ಏಳು ನೂರು ಶ್ಲೋಕಗಳನ್ನು 9 ಅಂಗುಲ ಉದ್ದ ಮತ್ತು 8 ಅಂಗುಲ ಅಗಲದ ಹಾಳೆಯಲ್ಲಿ ಬರೆದಿರುವ ಅವರು ಕೆಲ ದಿನಗಳಲ್ಲಿ ವೇದಗಳನ್ನು ಬರೆದು ಒಂದೆಡೆ ಪ್ರದರ್ಶಿಸುವ ಆಶಯದಲ್ಲಿದ್ದಾರೆ.
‘ಸುಮಾರು 60 ವರ್ಷಗಳ ಹಿಂದೆ ಮೈಸೂರು ಮಹಾರಾಜರು ಋಗ್ವೇದವನ್ನು ಕನ್ನಡಕ್ಕೆ ತಂದಿದ್ದರು. ಅದರ ನಂತರ ಆರ್ಯ ಸಮಾಜದವರು ಈಚೆಗೆ ನಾಲ್ಕೂ ವೇದಗಳನ್ನು ಕನ್ನಡಕ್ಕೆ ತಂದರು. ಈ ಪ್ರಯತ್ನ ಭಾರತೀಯ ಭಾಷೆಗಳಲ್ಲಿ ಅಪರೂಪದ್ದು. ಅವರ ಒಡನಾಟದಿಂದ ಈ ಪುಸ್ತಕಗಳನ್ನು ಕೊಂಡು ಕನ್ನಡದಲ್ಲಿ ಓದುವಾಗ ಈ 10 ಸಾವಿರ ಪುಟಗಳನ್ನು 60 ಪುಟದಲ್ಲಿ ಬರೆಯುವ ಮನಸ್ಸಾಯಿತು. ಹಿಂದೆ ಭಗವದ್ಗೀತೆಯ ಶ್ಲೋಕಗಳನ್ನು ಸೂಕ್ಷ್ಮ ಅಕ್ಷರದಲ್ಲಿ ಬರೆದಿದ್ದ ಅನುಭವವಿದ್ದುದರಿಂದ ಈ ಕೆಲಸವನ್ನು ಪ್ರಾರಂಭಿಸಿದೆ. ಈ ಮಂತ್ರಗಳಲ್ಲಿ ಬಹಳಷ್ಟು ಕನ್ನಡ ಪದಗಳಿವೆ. ಅಥವಾ ಅಲ್ಲಿನ ಸಂಸ್ಕೃತ ಪದಗಳು ಈಗ ಕನ್ನಡದ್ದಾಗಿವೆ ಎನ್ನಬಹುದು. ಹೀಗಾಗಿ ಕನ್ನಡಕ್ಕೂ ವೇದಕ್ಕೂ ನಂಟಿದೆ. ಆದಷ್ಟು ಬೇಗ ಬರೆದು ಮುಗಿಸಿ ಈ ಎಲ್ಲಾ ಮಂತ್ರಗಳನ್ನೂ ಒಂದೆಡೆ ದರ್ಶಿಸುವಂತೆ ಪ್ರದರ್ಶಿಸುತ್ತೇನೆ’ ಎಂದು ಎಂ.ಆರ್.ಪ್ರಭಾಕರ್ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
- Advertisement -
- Advertisement -
- Advertisement -
- Advertisement -