ಭಾರತೀಯ ರೆಡ್‌ಕ್ರಾಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಸೇರಿದಂತೆ ಸುಮಾರು 65 ಶಿಕ್ಷಕರು ರಕ್ತದಾನ ಮಾಡಿದರು. ಆದರೆ ಸುಮಾರು 1700 ಮಂದಿ ತಾಲ್ಲೂಕಿನ ಶಿಕ್ಷಕರಲ್ಲಿ ಕೇವಲ 65 ಮಂದಿ ರಕ್ತದಾನ ಮಾಡಿದ್ದು ವಿಪರ್ಯಾಸವಾಗಿತ್ತು.
ವ್ಯಕ್ತತ್ವ ರೂಪಿಸುವ ಶಿಕ್ಷಕರ ಪಾತ್ರ ಬಹುಮುಖ್ಯ
ಮನುಷ್ಯನನ್ನು ರೂಪಿಸುವುದೇ ಶಿಕ್ಷಣ. ಮುಗ್ಧ ಮಗುವನ್ನು ಪರಿಪೂರ್ಣ ವ್ಯಕ್ತತ್ವಗಳನ್ನಾಗಿಸುವ ಶಿಕ್ಷಕರ ಪಾತ್ರ ಬಹು ಮುಖ್ಯವಾದದ್ದು ಚಿಕ್ಕಬಳ್ಳಾಪುರ ವಾಪಸಂದ್ರದ ರಾಧಾಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದಸ್ವಾಮಿ ಆಶೀರ್ವಚನದಲ್ಲಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ನಿರಂತರ ಅಧ್ಯಯನ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಸ ಬೆಳಕನ್ನು ಹೊಸ ಹೊಳಹುಗಳನ್ನು ತೋರಿಸಬೇಕಾಗಿದೆ. ಕಲಿಯುತ್ತಾ ಕಲಿಸುತ್ತಾ ಸಾಗುವ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಗುರು ಎಂಬ ಉನ್ನತ ಸ್ಥಾನಕ್ಕೆ ಧಕ್ಕೆ ಬರದಂತೆ ಸಮಾಜ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ ನೀಡಬೇಕೆಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಶಿಲೆಯನ್ನು ಕೆತ್ತಿ ಪೂಜನೀಯ ಶಿಲ್ಪವನ್ನಾಗಿಸುವ ಶಿಲ್ಪಿಯಂಥಹ ವ್ಯಕ್ತಿತ್ವ ರೂಪಿಸುವ ಪವಿತ್ರ ವೃತ್ತಿ ಶಿಕ್ಷಕರದ್ದು. ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಪೈಪೋಟಿ ಎದುರಿಸಬೇಕಾದರೆ ತಾವೂ ಹೊಸದನ್ನು ಕಲಿತು ಮಕ್ಕಳಿಗೂ ಕಲಿಸಬೇಕು. ಸಾಮರಸ್ಯ, ಸಾಮಾಜಿಕ ಕಳಕಳಿ, ಪರಿಸರಪ್ರೇಮ, ಉತ್ತಮ ಹವ್ಯಾಸಗಳನ್ನು ಮಕ್ಕಳಿಗೆ ಕಲಿಸಿ ಎಂದು ನುಡಿದರು.
ಶಿಕ್ಷಕರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಿವೃತ್ತರಾದ 22 ಮಂದಿ ಶಿಕ್ಷಕರು ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಕುಂದಲಗುರ್ಕಿ ಮೃದುಲಾ ಮತ್ತು ಮುತ್ತೂರು ಎ.ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು.
ಶಿಕ್ಷಕ ನಾಗರಾಜ್‌ಶೆಟ್ಟಿ ಮಹಾಭಾರತದ ಒಂದು ದೃಶ್ಯವನ್ನು ವೇಷಭೂಷಣಗಳೊಂದಿಗೆ ಏಕಪಾತ್ರಾಭಿನಯ ಪ್ರದರ್ಶಿಸಿದರು. ಬಡ್ತಿ ನೀಡಬೇಕೆಂದು ಪ್ರೌಢಶಾಲಾ ಶಿಕ್ಷಕರು ಶಾಸಕ ಎಂ.ರಾಜಣ್ಣ ಅವರಿಗೆ ಮನವಿಯನ್ನು ಸಲ್ಲಿಸಿದರು.
ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಸದಸ್ಯ ಡಿ.ಎಸ್.ಎನ್ ರಾಜು, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಮುನಿವೆಂಕಟಸ್ವಾಮಿ, ದ್ಯಾವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರ್ಲಿ ಚಿತ್ರಕಲೆಯಿಂದ ಅಲಂಕೃತಗೊಂಡ ವೇದಿಕೆ
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ವೇದಿಕೆಯ ಅಲಂಕಾರ ವಿಶಿಷ್ಟವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಜಾನಪದ ಲೊಕವನ್ನು ಪ್ರವೇಶಿಸುವಂತೆ ಶಿಡ್ಲಘಟ್ಟ ಮುಖ್ಯ ರಸ್ತೆಯಿಂದಲೇ ಬಿದಿರು ಹಾಗೂ ಬಣ್ಣದ ಬಟ್ಟೆಗಳನ್ನು ಬಳಸಿ ದಾರಿಯುದ್ದಕ್ಕೂ ಸಿಂಗರಿಸಲಾಗಿತ್ತು. ವರ್ಲಿ ಚಿತ್ರಕಲೆಯಿಂದ ವೇದಿಕೆಯ ಮುಂಭಾಗದಲ್ಲಿ ವಿವಿಧ ವಾದ್ಯಗಳು, ನೃತ್ಯ, ಶಾಲೆಗೆ ಹೋಗುವ ಬಾಲಕರನ್ನು ಚಿತ್ರಿಸಲಾಗಿತ್ತು. ಅಲ್ಲಲ್ಲಿ ಬಿಡಿಸಿದ್ದ ಬಣ್ಣಬಣ್ಣದ ರಂಗೋಲಿಗಳು, ಚಿತ್ತಾರಗಳಿರುವ ಮಡಕೆಗಳು, ಹೂಗಳು ಅಂದವನ್ನು ಹೆಚ್ಚಿಸಿದ್ದರೆ, ವೇದಿಕೆಯ ಮೇಲಿನ ಬ್ಯಾನರ್ ಗುರು ಮತ್ತು ಶಿಷ್ಯರ ಆರೋಗ್ಯಕರ ಸಂಬಂಧದ ಪ್ರತೀಕವಾಗಿ ರೂಪಿತವಾಗಿತ್ತು. ಸುತ್ತ ಶಿಕ್ಷಣಕ್ಕೆ ಸಂಬಂಧಿಸಿದ ಗಾಂಧೀಜಿ, ಐನ್‌ಸ್ಟೈನ್, ಅಬ್ದುಲ್ ಕಲಾಂ ಮುಂತಾದವರ ಶಿಕ್ಷಣಕ್ಕೆ ಸಂಬಂಧಿಸಿದ ಸೂಕ್ತಿಗಳು ಶಿಕ್ಷಣ ದಿನಾಚರಣೆಗೆ ಅನ್ವರ್ಥಕವಾಗಿದ್ದವು.
‘ಗುರು ಪಠ್ಯ ಪುಸ್ತಕಗಳ ಮಿತಿಯನ್ನು ಮೀರಿ ಶಿಕ್ಷಣವನ್ನು ನೀಡಬೇಕು ಎಂಬುದನ್ನು ಸಾರುವ ಉದ್ದೇಶದಿಂದ ಕ್ರಿಯಾಶೀಲವಾಗಿ ವೇದಿಕೆ ಹಾಗೂ ಕಾರ್ಯಕ್ರಮದ ಸ್ಥಳವನ್ನು ದೇಶೀ ಪದ್ಧತಿಯಲ್ಲಿ ಅಲಂಕರಿಸಿದೆವು. ಕನ್ನಮಂಗಲ, ತಾತಹಳ್ಳಿ ಮತ್ತು ಗುಡಿಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ಕಲಾಧರ್, ನಾರಾಯಣಸ್ವಾಮಿ, ಬಾಲಚಂದ್ರ, ನಾಗರಾಜ್, ಟಿ.ಮಂಜುನಾಥ್ ಮತ್ತು ಸುರೇಶ್ ವೇದಿಕೆ ಹಾಗೂ ಕಾರ್ಯಕ್ರಮದ ಸಿಂಗಾರಕ್ಕೆ ಶ್ರಮಿಸಿದ್ದಾರೆ’ ಎಂದು ಶಿಕ್ಷಕ ದೇವರಾಜ್ ತಿಳಿಸಿದರು.
ಕೆಟ್ಟ ನಡತೆಯಿರುವ ವಾಟರ್‌ಮನ್ ಬದಲಿಸಲು ಒತ್ತಾಯ
ಗ್ರಾಮದ ಮಹಿಳೆಯರನ್ನು ಅವಾಚ್ಯವಾಗಿ ಮಾತನಾಡುವ ಕೆಟ್ಟ ನಡತೆಯಿರುವ ವಾಟರ್‌ಮನ್ ನನ್ನು ಕೆಲಸದಿಂದ ತೆಗೆದು ಬೇರೆಯವರನ್ನು ನಿಯುಕ್ತಿಗೊಳಿಸುವಂತೆ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಮುತ್ತೂರು ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರು ಸಭೆ ಸೇರಿ ವಾಟರ್‌ಮನ್ ನಿಂದಾಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು. ವಾಟರ್‌ಮನ್ ಸಂತೋಷ್ ಬದಲಿಗೆ ಆತನ ತಂದೆ ಕುಪ್ಪಪ್ಪ ಸುಮಾರು ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಒಂದೂವರೆ ವರ್ಷಗಳಿಂದ ಕುಡಿತದ ಚಟಕ್ಕೆ ಬಲಿಯಾಗಿ ಮಹಿಳೆಯರನ್ನು ಲೈಂಗಿಕ ಆಸಕ್ತಿಯಿಂದ ಮಾತನಾಡಿಸುವುದು, ಹಿರಿಯರನ್ನು ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡುವುದೂ ರೂಢಿಸಿಕೊಂಡಿದ್ದಾನೆ. ಹಲವಾರು ಬಾರಿ ಎಚ್ಚರಿಸಿದ್ದರೂ ತನ್ನ ದುರಭ್ಯಾಸವನ್ನು ಆತ ಬಿಡದ ಕಾರಣ ಆತನನ್ನು ಆ ಕೆಲಸದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟರಾಜೇಗೌಡ ಮತ್ತು ವೇಣುಗೋಪಾಲ್ ಈ ಬಗ್ಗೆ ಪಂಚಾಯತಿಯಲ್ಲಿ ತುರ್ತು ಸಭೆ ಸೇರಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
‘ಅತ್ಯಂತ ಸುಸಂಸ್ಕೃತ ಜನರಿರುವ ನಮ್ಮ ಗ್ರಾಮ ಸಾಮರಸ್ಯಕ್ಕೆ ಹೆಸರಾದುದು. ಚುನಾವಣೆ ಬಿಟ್ಟರೆ ಮಿಕ್ಕೆಲ್ಲಾ ಸಮಯದಲ್ಲೂ ಒಗ್ಗಟ್ಟಿನಿಂದಿರುವ ನಮ್ಮ ಗ್ರಾಮದಲ್ಲಿ ಎಲ್ಲಾ ಜನಾಂಗದವರೂ ಅಣ್ಣತಮ್ಮಂದಿರಂತೆ ವಾಸಿಸುತ್ತಿದ್ದೇವೆ. ನೀರಿನ ಹಂಚಿಕೆಯಲ್ಲೂ ಯಾರಿಗೂ ಸಮಸ್ಯೆಯಾಗದಂತೆ ಸಮನಾಗಿ ಹಂಚಿಕೆ ಮಾಡುತ್ತಾ ಬಂದಿದ್ದೇವೆ. ಆದರೆ ಕುಡಿತಕ್ಕೆ ದಾಸನಾಗಿರುವ ವಾಟರ್‌ಮನ್ ಗ್ರಾಮದ ಮಹಿಳೆಯರು ಹಾಗೂ ಹಿರಿಯರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದರಿಂದ ನಾವೆಲ್ಲಾ ಒಗ್ಗಟ್ಟಿನಿಂದ ಆತನನ್ನು ಬದಲಿಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ಗ್ರಾಮ ಪಂಚಾಯತಿ ಕಾರ್ಯದರ್ಶಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೂ ದೂರು ನೀಡುತ್ತೇವೆ’ ಎಂದು ಗ್ರಾಮದ ಮುಖಂಡ ಎ.ಎಸ್.ಚಂದ್ರೇಗೌಡ ತಿಳಿಸಿದರು.
ಗ್ರಾಮದ ಗೋಪಾಲಪ್ಪ, ಮುರಳಿ, ಸೂರ್ಯನಾರಾಯಣಪ್ಪ, ರಾಮರೆಡ್ಡಿ, ಬೈರೇಗೌಡ, ನಾರಾಯಣಸ್ವಾಮಿ, ಶ್ರೀನಿವಾಸ್, ವೀರೇಗೌಡ, ಮುನಿನಾರಾಯಣ, ಗಜೇಂದ್ರ, ಬೈರಾರೆಡ್ಡಿ, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದಲಿತರಿಗೆ ರಕ್ಷಣೆ ನೀಡುವಂತೆ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಮನವಿ
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ದಲಿತರಿಗೆ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆ ನೀಡುವಂತೆ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಗುರುವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ರಾಜ್ಯದಲ್ಲಿ ಇತ್ತೀಚೆಗೆ ದಲಿತರ ಮೇಲೆ ದೌರ್ಜನ್ಯ ಏರುತ್ತಿವೆ. ದೇವಸ್ಥಾನ ಪ್ರವೇಶ ನಿರಾಕರಣೆ ಮುಂತಾದ ಸಾಮಾಜಿಕ ತಾರತಮ್ಯಗಳು ನಡೆಯುತ್ತಿರುವುದು ದುರದೃಷ್ಟಕರ. ಕೊಪ್ಪಳ ಜಿಲ್ಲೆಯ ಮರತುಂಬಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿರಾಕರಣೆ ವಿರೋಧಿಸಿದ ದಲಿತರರಿಗೆ ನ್ಯಾಯ ಕೊಡುವ ಬದಲು ಜಾತಿವಾದಿಗಳು ದಲಿತರ ಕಾಲೋನಿಗಳಿಗೆ ಧಾಳಿ ಮಾಡಿ ಗುಡಿಸಲುಗಳಿಗೆ ಬೆಂಕಿ ಹಚ್ಚಿ 22 ಜನರನ್ನು ಗಾಯಗೊಳಿಸಿರುವುದು ಖಂಡನೀಯ. ದಲಿತರ ಹೋರಾಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ರಾಜ್ಯದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ 45 ರಷ್ಟು ದಲಿತ ಮಹಿಳೆಯರು ಬಲಿಯಾಗಿರುವುದು ಶೋಚನೀಯ. ದೇವಸ್ಥಾನ ಪ್ರವೇಶ ನಿರಾಕರಣೆ, ದಲಿತ ಮಹಿಳೆ ಮಾಡಿದ ಅಡುಗೆ ನಿಷೇಧ, ದಲಿತ ಅಂಗನವಾಡಿ ಕಾರ್ಯಕರ್ತೆ ಇರುವ ಕೇಂದ್ರಕ್ಕೆ ಮಕ್ಕಳನ್ನು ಕಳಿಸದಿರುವುದು, ದಲಿತರಿಗೆ ಬಾಡಿಗೆ ಮನೆ ನೀಡದಿರುವಂಥ ಅನಿಷ್ಠ ಪದ್ಧತಿಗಳು ಈ ತಾಂತ್ರಿಕ ಯುಗದಲ್ಲೂ ಮುಂದುವರೆಸುತ್ತಿರುವುದು ದುರದೃಷ್ಟಕರ. ದಲಿತರಿಗೆ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆ ನೀಡುವಂತೆ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ.ಎಂ ಪಕ್ಷದ ಕುಂದಲಗುರ್ಕಿ ಮುನೀಂದ್ರ, ಕೆ.ಎಂ.ನಟರಾಜ್, ಗುರುಮೂರ್ತಿ, ಚಂದ್ರು, ಅಪ್ಪು, ಮಹೇಶ್, ಹರೀಶ್, ಮುನಿರಾಜು, ಹರಿಕೃಷ್ಣ, ನರಸಿಂಹಪ್ಪ, ಸುರೇಶ್, ಮಂಜುನಾಥ್, ಬಾಲರಾಜ್ ಮತ್ತಿತರರು ಹಾಜರಿದ್ದರು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಎ.ಶ್ರೀನಿವಾಸ್
ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಎ.ಶ್ರೀನಿವಾಸ್ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ವಿಜ್ಞಾನ ಶಿಕ್ಷಕರಾದ ಎ.ಶ್ರೀನಿವಾಸ್ ಸಮುದಾಯವನ್ನು ತಮ್ಮ ಶಾಲೆಯತ್ತ ಆಕರ್ಷಿಸಿ ಮಕ್ಕಳ ಪ್ರಗತಿಗೆ ಪೂರಕವಾಗಿ ಕಲಿಕೆಗಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸೌರವಿದ್ಯುತ್ ದೀಪಗಳನ್ನು ಸೆಲ್ಕೋ ಸೋಲಾರ್ ಸಂಸ್ಥೆಯಿಂದ ದೊರೆಕಿಸಿಕೊಟ್ಟಿದ್ದಾರೆ. ಶಾಲೆಗೆ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ದಾನಿಗಳಿಂದ ಮಾಡಿಸಿ, ಶಾಲೆಯ ಶಿಕ್ಷಕರನ್ನು ಒಗ್ಗೂಡಿಸಿಕೊಂಡು ಸಂಜೀವಿನಿವನ, ಗೋಬರ್ ಗ್ಯಾಸ್ ಅಸ್ತ್ರಒಲೆ ಮಾಡಿಸಿದ್ದಾರೆ. ಮ್ಯಾಗ್ಸೆಸ್ ಪ್ರಶಸ್ತಿಗೆ ವಿಜೇತರಾದ ಡಾ. ಹರೀಶ್ ಹಂದೆರವರಿಂದ ಅನುದಾನ ಪಡೆದು ೫ ವರ್ಷದ ವಿಜ್ಞಾನದ ಪ್ರಾಯೋಗಿಕ ಚಟುವಟಿಕೆಗಳು ಎನ್ನುವ ವಿನೂತನವಾದ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುತ್ತಾರೆ
‘ಶಾಲೆಯಲ್ಲಿ ವಿಜ್ಞಾನ ಶಿಕ್ಷಕನಾಗಿ ಕೇವಲ ಬೋಧನೆಗೆ ಮಾತ್ರ ಸೀಮಿತನಾಗಬಾರದೆಂದು ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡೆ. ನನ್ನ ಚಟುವಟಿಕೆಗೆ ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ, ಗ್ರಾಮಸ್ಥರು ಮತ್ತು ಸಹಶಿಕ್ಷಕರು ಸಹಕಾರ ನೀಡಿದ್ದಾರೆ’ ಎನ್ನುತ್ತಾರೆ ಶಿಕ್ಷಕ ಎ.ಶ್ರೀನಿವಾಸ್.
ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರ ಚೌಡಸಂದ್ರದ ನಾರಾಯಣಪ್ಪ ವಿಧಿವಶ
ತಾಲ್ಲೂಕಿನ ಚೌಡಸಂದ್ರದ ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪ(95) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಮೃತರು ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಹುಟ್ಟೂರು ಚೌಡಸಂದ್ರದಲ್ಲಿ ಬುಧವಾರ ಮೃತರ ಅಂತ್ಯ ಸಂಸ್ಕಾರ ನಡೆಯಿತು. ಚೌಡಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಾರಾಯಣಪ್ಪ ಅವರು ಸೇವೆ ಸಲ್ಲಿಸಿದ್ದರು.
ತಾಲ್ಲೂಕು ಆಡಳಿತದ ಪರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಮೃತರಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಮಾಜಿ ಸಚಿವ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಮೇಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಅಪಾರ ಬಂಧು ಬಳಗ, ಅಭಿಮಾನಿಗಳ ಸಾಕ್ಷಿಯಲ್ಲಿ ಅಂತಿಮ ಸಂಸ್ಕಾರದ ವಿದಿವಿಧಾನಗಳನ್ನು ಪೂರೈಸಲಾಯಿತು.
ನಾರಾಯಣಪ್ಪರವರ ಸ್ವಾತಂತ್ರ ಹೋರಾಟದ ನೆನಪುಗಳನ್ನು ಇಲ್ಲಿ ಓದಬಹುದು
http://www.sidlaghatta.com/?p=1483
ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪ
ತಾಲ್ಲೂಕಿನ ಚೌಡಸಂದ್ರದ ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪರವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸೇವೆ ಸಲ್ಲಿಸಿದ ಮಹನೀಯರು. ಚೌಡಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿಯೂ ನಾರಾಯಣಪ್ಪ ಅವರು ಸೇವೆ ಸಲ್ಲಿಸಿದ್ದರು. ಅವರು ಹಂಚಿಕೊಂಡ ಸ್ವಾತಂತ್ರ್ಯ ಹೋರಾಟದ ನೆನಪುಗಳು:
‘ಎಲ್ಲರೂ ನೋಡುತ್ತಿರುವಾಗಲೇ ಇದ್ದಕ್ಕಿದ್ದಂತೆ ಕಂಬದಹಳ್ಳಿಯ ಮುನಿಶಾಮಪ್ಪ ಅವರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರ ಹ್ಯಾಟ್ ತೆಗೆದು ಗಾಂಧಿ ಟೋಪಿಯನ್ನು ಇಟ್ಟುಬಿಟ್ಟರು. ತಕ್ಷಣವೇ ‘ಲಾಠೀ ಚಾರ್ಜ್’ ಎಂಬ ಕೂಗು ಕೇಳಿತು. ಬೆತ್ತಗಳು ಮಾತಾಡಿದವು. ಸತ್ಯಾಗ್ರಹ ಮಾಡುತ್ತಿದ್ದವರನ್ನು ಪೊಲೀಸರು ಚೆನ್ನಾಗಿ ಬಡಿದರು’ ಎಂದು ತಮ್ಮ ಸ್ವಾತಂತ್ರ್ಯದ ಹೋರಾಟದ ನೆನಪುಗಳನ್ನು ತೆರೆದಿಟ್ಟಿದ್ದರು ಚೌಡಸಂದ್ರದ ನಾರಾಯಣಪ್ಪ.
‘ರೈಲ್ವೆ ಹಳಿಗಳ ಬಳಿ ಇದ್ದ ಕಲ್ಲುಗಳನ್ನು ಕೆಲವರು ಪೊಲೀಸರೆಡೆಗೆ ತೂರತೊಡಗಿದರು. ‘ಫೈರ್’ ಅಂದರು ಪೊಲೀಸರು. ಒಮ್ಮೆಗೇ ಢಮಾರ್ ಢಮಾರ್ ಎಂಬ ದೊಡ್ಡದಾದ ಸದ್ದು. ಸಬ್‌ಇನ್ಸ್‌ಪೆಕ್ಟರ್ ಸಿಡಿಸಿದ ಗುಂಡಿಗೆ ಇಬ್ಬರು ಸತ್ತರು. ನಮ್ಮನ್ನೆಲ್ಲಾ ಹಿಡಿದು ಜೈಲಿಗೆ ಹಾಕಿದರು. ಆನಂತರ ತಿಳಿಯಿತು ಪೊಲೀಸ್ ಪೇದೆಗಳು ಆಕಾಶಕ್ಕೆ ಗುಂಡು ಹಾರಿಸಿದ್ದರಂತೆ. ಅವರಿಗೂ ಸ್ವಾತಂತ್ರ್ಯದ ಹಂಬಲವಂತೆ. ಇಲ್ಲದಿದ್ದರೆ ಈ ಕಥೆ ಹೇಳಲು ನಾನು ಇರುತ್ತಿರಲಿಲ್ಲ ಮತ್ತು ಆ ದಿನ ನೂರಾರು ಹೆಣಗಳು ಉರುಳುತ್ತಿದ್ದವು.
ಹದಿನೈದು ದಿನಗಳ ಕಾಲ ಶಿಡ್ಲಘಟ್ಟ ಜೈಲಿನಲ್ಲಿ ಮತ್ತು ಒಂದು ತಿಂಗಳು ಮೂರು ದಿನ ಚಿಕ್ಕಬಳ್ಳಾಪುರದ ಜೈಲಿನಲ್ಲಿ ನಮ್ಮನ್ನು ಇಟ್ಟಿದ್ದರು. ಆಗ ಬಂತು ಸ್ವಾತಂತ್ರ್ಯ. ಮಧ್ಯರಾತ್ರಿಯ ಸ್ವಾತಂತ್ರ್ಯ. ೨೮೦ ಜನ ಇದ್ದೆವು. ನಮ್ಮ ಊರುಗಳಿಗೆ ವಾಪಸ್ ಕಳಿಸಿದರು. ನಮ್ಮ ಹೋರಾಟ ಸಾರ್ಥಕವಾದ ಭಾವದಿಂದ ಊರಿಗೆ ಮರಳಿದೆವು. ಹೋರಾಟ ಪ್ರಾರಂಭಿಸಿದಾಗ ನಮಗೆ ಇಷ್ಟು ಬೇಗ ಸ್ವಾತಂತ್ರ್ಯ ಸಿಗುವುದೆಂಬ ಕಲ್ಪನೆಯಿರಲಿಲ್ಲ. ಆದರೆ ನಮ್ಮ ಹೋರಾಟಕ್ಕೆ ಸಿಕ್ಕ ಫಲ ತೃಪ್ತಿ ತಂದಿತು.
ರಾಜೀವ್ ಗಾಂಧಿ ಪ್ರಧಾನಿಯಾದಾಗ ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ದೆಹಲಿಗೆ ಕರೆಸಿ ಗೌರವಿಸಿದ್ದರು. ಮೇಲೂರು ಸುಬ್ಬಣ್ಣ, ಮಳ್ಳೂರು ಮುನಿನಾಗಪ್ಪ, ಭಕ್ತರಹಳ್ಳಿ ಬಚ್ಚೇಗೌಡ, ಬಚ್ಚಹಳ್ಳಿ ಚಂಗಲರಾವ್, ಚೌಡಸಂದ್ರ ರಾಮಪ್ಪ, ಮೇಲೂರು ಸಂಜೀವಪ್ಪ, ಹುಜಗೂರು ಹನುಮಂತರಾಯಪ್ಪ, ಮಳ್ಳೂರು ಮುನಿಯಪ್ಪ, ಅಪ್ಪೇಗೌಡನಹಳ್ಳಿ ಪಿಳ್ಳಪ್ಪ ಮುಂತಾದವರು ದೆಹಲಿಗೆ ಹೋಗಿದ್ದೆವು. ಅವರಲ್ಲಿ ಬಹುತೇಕ ಮಂದಿ ಈಗಿಲ್ಲ’ ಎಂದು ತಮ್ಮ ಗತಕಾಲದ ನೆನಪುಗಳನ್ನು ಹಂಚಿಕೊಂಡಿದ್ದರು.
ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಗಣಪತಿಗೆ ‘ಗಂಧ ಪುಷ್ಪ’ ಕಾರ್ಯಕ್ರಮ
ಶಿಡ್ಲಘಟ್ಟದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ 38ನೇ ವರ್ಷದ ವಿನಾಯಕ ಚೌತಿಯ ಪ್ರಯುಕ್ತ ಇರಿಸಿರುವ ದರ್ಬಾರ್ ಗಣಪತಿಗೆ ಮಂಗಳವಾರ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿಯವರಿಂದ ಪ್ರಥಮ ಬಾರಿಗೆ ‘ಗಂಧ ಪುಷ್ಪ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತ್ರಿವರ್ಣ ಬಣ್ಣದ ಹೂವಿನ ಅಲಂಕಾರ ವಿಶೇಷ ಆಕರ್ಷಣೆಯಾಗಿತ್ತು.
ದೇಶದಪೇಟೆ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶನಿಗೆ ಪುಷ್ಪಾಯಾಗಾರ್ಚನೆ ಕಾರ್ಯಕ್ರಮ
ಶಿಡ್ಲಘಟ್ಟದ ದೇಶದಪೇಟೆಯಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಹತ್ತನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಂಗಳವಾರ ವಿಶೇಷ ಪುಷ್ಪಾಯಾಗಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಡಿಯಾಲಜಿ, ನ್ಯೂರಾಲಜಿ, ಹೃದಯ ತಪಾಸಣಾ ಯಂತ್ರಗಳು, ಹೃದಯ ರೋಗ ತಜ್ಞರು, ಸಕ್ಕರೆ ಖಾಯಿಲೆ ತಜ್ಞರು, ಮಕ್ಕಳ ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ಸ್ತ್ರೀರೋಗ ತಜ್ಞರು, ಚರ್ಮ ರೋಗ ತಜ್ಞರು, ನರರೋಗ ತಜ್ಞರು, ದಂತ ವೈದ್ಯರು ಮುಂತಾದವರು ಆಗಮಿಸಿದ್ದರಿಂದ ಸುಮಾರು 800 ಕ್ಕೂ ಹೆಚ್ಚು ಮಂದಿ ಚಿಕಿತ್ಸೆಯನ್ನು ಪಡೆದರು. ಈ ಸಂದರ್ಭದಲ್ಲಿ ಉಚಿತವಾಗಿ ರೋಗಿಗಳಿಗೆ ಔಷಧಿಗಳನ್ನು ವಿತರಿಸಿದರು. ಆಗಮಿಸಿದ್ದ ರೋಗಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
‘ನಿಯಮಿತವಾಗಿ ತೋರಿಸಿಕೊಂಡು ಚಿಕಿತ್ಸೆ ಪಡೆಯಬೇಕಾದ ಖಾಯಿಲೆಗಳಾದ ಕ್ಯಾನ್ಸರ್, ಮಾನಸಿಕ ರೋಗ ಮುಂತಾದವುಗಳಿಗೆ ಬೆಂಗಳೂರಿನಂಥ ನಗರಗಳಿಗೆ ಹೋಗಲಾಗದೇ ಹಲವಾರು ಮಂದಿ ಹಾಗೇ ಇದ್ದುಬಿಟ್ಟಿರುತ್ತಾರೆ. ಇನ್ನು ಕೆಲವು ರೋಗಗಳಾದ ಸಕ್ಕರೆ ಖಾಯಿಲೆ, ಬಿ.ಪಿ ಮುಂತಾದವುಗಳು ಇರುವುದೇ ತಿಳಿದಿರುವುದಿಲ್ಲ. ಬೃಹತ್ ಆರೋಗ್ಯ ತಪಾಸಣಾ ಶಿಬಿರವೆಂದರೆ ರೋಗಿಯ ಬಳಿ ಆಸ್ಪತ್ರೆಯನ್ನೇ ತರುವುದಾಗಿದೆ. ಇಲ್ಲಿ ಎಲ್ಲಾ ರೀತಿಯ ತಜ್ಞ ವೈದ್ಯರು ಮತ್ತು ಎಲ್ಲಾ ಉಪಕರಣಗಳನ್ನು ತಂದಿರುವುದರಿಂದ ತಾಲ್ಲೂಕಿನ ಜನರಿಗೆ ಉಪಯುಕ್ತವಾಗಲಿದೆ’ ಎಂದು ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಡಾ.ಬಿ.ಜಿ.ರಂಗನಾಥ್ ತಿಳಿಸಿದರು.
ಶಾಸಕ ಎಂ.ರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಾ.ಈಶ್ವರಯ್ಯ, ತಜ್ಞ ವೈದ್ಯರಾದ ಡಾ.ಮುನಿನಾರಾಯಣ, ಡಾ.ಹರೀಶ್, ಡಾ.ಸುಮಂತ್, ಡಾ.ಪ್ರಮೋದ್, ಡಾ.ಮುನಿಕೃಷ್ಣ, ಎನ್.ಅಕ್ಷಯ್‌ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.


