ಶಿಡ್ಲಘಟ್ಟದ ನಿವೃತ್ತ ಕೃಷಿ ಇಲಾಖೆಯ ಅಧಿಕಾರಿ ಚನ್ನಕೃಷ್ಣಪ್ಪ(ಶಾಮಣ್ಣ) ಹೃದಯಾಘಾತದಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ. ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮಗಳು ಮತ್ತು ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶಿಡ್ಲಘಟ್ಟದ ರುದ್ರಭೂಮಿಯಲ್ಲಿ ಸೋಮವಾರ ನೆರವೇರಿಸುವುದಾಗಿ ಕುಟುಂಬದವರು ತಿಳಿಸಿದ್ದಾರೆ.
ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀಸಾಯಿನಾಥ ಜ್ಞಾನ ಮಂದಿರದಲ್ಲಿ ಭಾನುವಾರ ಹದಿನೈದನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀನಿವಾಸ ಕಲ್ಯಾಣೋತ್ಸವ, ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆಯನ್ನು ಆಯೋಜಿಸಲಾಗಿತ್ತು.
“ಎರಡು ದಿನಗಳ ಕಾಲ ವಿಶೇಷ ಪೂಜೆ, ಹೋಮ ಹಾಗೂ ಅರ್ಚನೆಯನ್ನು ನಡೆಸಲಾಗುತ್ತಿದೆ. ಸೋಮವಾರ ಬೆಳಗ್ಗೆ ಬಾಬಾರವರ ಪಲ್ಲಕ್ಕಿ ಉತ್ಸವವನ್ನು ನಡೆಸಲಿದ್ದೇವೆ. ಸಂಜೆ ಘಂಟಸಾಲ ಗಾಲ ಕಲಾ ವೃಂದದವರಿಂದ ಭಕ್ತಿ ಗೀತೆಗಳ ಗಾಯನ ಸಹ ಆಯೋಜಿಸಿದ್ದೇವೆ” ಎಂದು ದೇವಾಲಯದ ಪ್ರಮುಖ ಸೇವಾಕರ್ತ ನಾರಾಯಣಸ್ವಾಮಿ ತಿಳಿಸಿದರು.
ಶ್ರೀನಿವಾಸ. ಶ್ರೀದೇವಿ ಮತ್ತು ಭೂದೇವಿ ಮೂರ್ತಿಗಳೊಂದಿಗೆ ಸಾಯಿಬಾಬಾ, ಸುದರ್ಶನ ಮತ್ತು ನರಸಿಂಹ ಸ್ವಾಮಿ ಮೂರ್ತಿಗಳನ್ನಿರಿಸಿದ್ದು, ನಾನಾ ವಿಧದ ಸುಮಾರು ಐದು ನೂರು ಕೇಜಿ ಹೂಗಳಿಂದ ಪುಷ್ಪಾರ್ಚನೆಯನ್ನು ಮಾಡಲಾಯಿತು. ಸುಮಂಗಲಿಯರಿಂದ ಕುಂಕುಮಾರ್ಚನೆಯನ್ನು ಸಹ ನಡೆಸಲಾಯಿತು. ಹೋಮ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಹಲವಾರು ಮಂದಿ ಭಕ್ತರು ಭಾಗಿಯಾಗಿದ್ದರು.
ವರ್ಗಾವಣೆಗೊಂಡ ಶಿಡ್ಲಘಟ್ಟ ನಗರ ಠಾಣೆಯ ಪೊಲೀಸ್ ಪೇದೆ ರಾಮಚಂದ್ರ ಅವರನ್ನು ಸಿಟಿಜನ್ ರೀಲರ್ ಸಹಕಾರ ಸಂಘ, ಧನು ಅಭಿಮಾನಿಗಳು ಹಾಗೂ ಗೆಳೆಯರ ಬಳಗದ ಸದಸ್ಯರು ಅವರಿಂದ ರೈಲ್ವೆ ನಿಲ್ದಾಣದ ಬಳಿ ಗಿಡವನ್ನು ನೆಡಿಸಿ, ಗೌರವಿಸಿ ಬೀಳ್ಕೊಟ್ಟರು. ಮಂಜುನಾಥ್, ಲೋಕೇಶ್, ಬಾಲಕೃಷ್ಣಾಚಾರಿ, ಧನಂಜಯ್, ಮುರ್ತುಜಾ, ವಿಜ್ಞೇಶ್ ಹಾಜರಿದ್ದರು.
ಚಿಕ್ಕಬಳ್ಳಾಪುರ: ಶಿಕ್ಷಕರಾದವರು ಎಂದಿಗೂ ಕಲಿಕೆ ನಿಲ್ಲಿಸಬಾರದು, ಹುಟ್ಟಿನಿಂದ ಸಾವಿನ ವರೆಗೂ ಕಲಿಕೆ ಬಹಳ ಮುಖ್ಯ. ಪೀಳಿಗೆಗೆ ತಕ್ಕಂತೆ ಶಿಕ್ಷಣದ ಪದ್ಧತಿ ಬದಲಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಪ್ರೇರಣಾ ಶಕ್ತಿಯಾಗಬೇಕು. ಪೋಷಕರ ನಂತರ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಜಿಲ್ಲಾಡಳಿ ಭವನದ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಶಿಕ್ಷಕರು ಕಲಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮೈಗೂಡಿಸಿಕೊಂಡು ಮಕ್ಕಳ ಕಲಿಕೆಗೆ ಉತ್ಸಾಹ ತುಂಬಬೇಕು. ಶಿಕ್ಷಕನಿಗೆ ನಿವೃತ್ತಿ ಇರುವುದಿಲ್ಲ. ಕಲಿಕೆಯಲ್ಲಿ ಶಿಕ್ಷಕರು ಉತ್ಸಾಹ ದಿಂದ ತೊಡಗಿಕೊಂಡು, ಮಕ್ಕಳಿಗೆ ಪ್ರೀತಿ ವಾತ್ಸಲ್ಯ ದಿಂದ ಬೋಧನೆ ಮಾಡಬೇಕು. ಆತ್ಮ ಸಾಕ್ಷಿಗೆ ಕೊಡುವಂತಹ ಪ್ರಶಸ್ತಿ ಎಲ್ಲದಕ್ಕಿಂತ ದೊಡ್ಡದು. ಪೋಷಕರ ಸ್ಥಾನವನ್ನು ಶಿಕ್ಷಕರು ತುಂಬುತ್ತಿದ್ದಾರೆ ಎಂದು ಹೇಳಿದರು.
ಸಮಾಜದಲ್ಲಿರುವ ಜಾತಿ ಪದ್ದತಿ, ಅಜ್ಞಾನ, ಬ್ರಷ್ಟಾಚಾರವನ್ನು ತೊಡೆದುಹಾಕಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಒಬ್ಬ ವ್ಯಕ್ತಿಯು ಸಂಪೂರ್ಣ ವಿಕಾಸ ಮಾಡುವಂತಹ ಜವಾಬ್ದಾರಿ. ಅನಾದಿ ಕಾಲದಿಂದಲೂ ಗುರುಗಳಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಸರಕಾರಿ ಶಾಲೆಗಳನ್ನು ಶಾಸಕರು, ಮಂತ್ರಿಗಳು, ಐಟಿ ಬಿಟಿ ಕಂಪನಿಗಳು ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ದತ್ತು ಪಡೆದು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲು ಒಪ್ಪಿರುವುದು ಸ್ವಾಗತಾರ್ಹ. ಕೋವಿಡ್-೧೯ ತುರ್ತು ಸಂದರ್ಭದಲ್ಲಿ ವೈದ್ಯರು, ಶಿಕ್ಷಕರು, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸಮಾಜಕ್ಕೆ ಅಪಾರವಾದ ಸೇವೆಯನ್ನು ನೀಡಿರುವುದು ಸ್ಮರಿಸಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತು ಸೇವನೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.
ಕಾರ‍್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷ ಎಂ.ಬಿ ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷ ನಿರ್ಮಲಾ ಮುನಿರಾಜು, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುನಿಯಪ್ಪ, ಜಿಲ್ಲಾಧಿಕಾರಿ ಆರ್ ಲತಾ, ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್, ಎಸ್ಪಿ ಜಿ.ಕೆ ಮಿಥುನ್ ಕುಮಾರ್, ಡಿಡಿಪಿಐ ಎಸ್. ನಾಗೇಶ್ ಹಾಜರಿದ್ದರು.
ಕೊಪ್ಪಳದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಅವರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ ಎಂದು ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೊಪ್ಪಳದಲ್ಲಿ ನೀಡಿರುವ ಹೇಳಿಕೆಯನ್ನು ಖಂಡಿಸಿ ನಗರದ ಬಸ್ ನಿಲ್ದಾಣದ ಬಳಿ ಶನಿವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಮಾನವ ಸರಪಣಿಯನ್ನು ನಿರ್ಮಿಸಿ, ಸಚಿವರ ಭಾವಚಿತ್ರವನ್ನು ಸುಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೇವಲ ಹಾವೇರಿಗೆ, ಹಿರೇಕೆರೂರಿಗೆ ಸಚಿವರಲ್ಲ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅವರು ಸಚಿವರು. ಇವತ್ತು ಭೂಮಿಗೆ ಅಗತ್ಯವಾದ ಯೂರಿಯಾ ಸಿಗುತ್ತಿಲ್ಲ. ನೀವು ಸಿನಿಮಾ ನಟನಂತೆ ನಟನೆ ಮಾಡದೇ ರೈತರಿಗೆ ಅತ್ಯಗತ್ಯವಾದ ಬೀಜ ಮತ್ತು ಗೊಬ್ಬರ ಕೊಡಿ ಎಂದು ಅಧ್ಯಕ್ಷರು ಹೇಳಿದ್ದರು. ಕೃಷಿ ವಿಶ್ವವಿದ್ಯಾಲಯದಲ್ಲಿ ಆಯ್ಕೆಗಾಗಿ ರೈತರ ಮಕ್ಕಳಿಗಾಗಿ ಆಯೋಜಿಸಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಿ 3,200 ರೈತ ಮಕ್ಕಳಿಗೆ ತೊಂದರೆ ಮಾಡಿದ್ದು ಏಕೆ ಎಂದು ನಮ್ಮ ರಾಜ್ಯಾಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್ ಸಚಿವರನ್ನು ಪ್ರಶ್ನಿಸಿದ್ದರು. ಅವರು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ” ಎಂದರು.
ರೈತ ಸಂಘದ ಸದಸ್ಯರು ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು, ಬೆಂಕಿ ಹಚ್ಚಿ ಪ್ರತಿಭಟಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ವೇಣು, ಬೀರಪ್ಪ, ಕಿಶೋರ್, ರಮೇಶ್, ವೈ.ರಾಮಕೃಷ್ಣಪ್ಪ, ಅಂಬರೀಶ್, ನಾಗರಾಜ್, ನಾರಾಯಣಸ್ವಾಮಿ, ಗಂಗಾಧರ್, ಅಶ್ವತ್ಥನಾರಾಯಣ್, ಏಜಾಜ್ ಹಾಜರಿದ್ದರು.
ನಗರದ ಡಾಲ್ಫಿನ್ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ ) ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಶಿರಸ್ತೆದಾರ್ ಮಂಜುನಾಥ್ ಮಾತನಾಡಿದರು. ಉತ್ತಮ ಹವ್ಯಾಸಗಳು ನಮ್ಮ ದಿನನಿತ್ಯದ ಜೀವನಶೈಲಿಯ ಒಂದು ಭಾಗವಾಗಬೇಕು. ಹವ್ಯಾಸಗಳು ಇತರ ಕೆಲ್ಸಗಳ ಹಾಗಲ್ಲ, ಅವು ಯಾವತ್ತಿಗೂ ಮನಸ್ಸಿಗೆ ಹತ್ತಿರವಾಗುವುದರಿಂದ ನಮಗೆ ಸಂತೋಷವನ್ನೇ ಕೊಡುತ್ತವೆ. ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಸಮಯವನ್ನು ಹವ್ಯಾಸಗಳಿಗೆ ಕೊಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅವು ಒಳ್ಳೆಯ ಪ್ರಭಾವ ಬೀರಿ ಚೈತನ್ಯ ತಂದುಕೊಡುತ್ತವೆ ಎಂದು ಅವರು ತಿಳಿಸಿದರು.
ದುಶ್ಚಟಗಳಿಂದ ದೂರವಿರಿ. ಉತ್ತಮ ಲೇಖಕರ ಪುಸ್ತಕಗಳನ್ನು ಓದುವ, ಅನುಭವಗಳನ್ನು ದಾಖಲಿಸುವ, ಪ್ರವಾಸ, ಛಾಯಾಗ್ರಹಣ, ಚಿತ್ರಕಲೆ, ನೃತ್ಯ, ಡಿಜಿಟಲ್ ಮೂಲಕ ಪ್ರಯೋಗಶೀಲತೆ, ಗಿಡ ಬೆಳೆಸುವುದು ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ನಮ್ಮ ಶಿಡ್ಲಘಟ್ಟ ತಾಲ್ಲೂಕು 14 ಸ್ಥಾನವನ್ನು ಪಡೆದಿದೆ. ಇದಕ್ಕೆ ಕಾರಣವಾದದ್ದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ರೂಪಿಸಿದ ಕಾರ್ಯಕ್ರಮಗಳು ಮತ್ತು ಅದಕ್ಕೆ ತಕ್ಕಂತೆ ಪರಿಶ್ರಮ ಹಾಕಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಂದು ನುಡಿದರು.
ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಕೊರೊನಾ ಸಂದರ್ಭದಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಪ್ರಶಂಸಿಸಿ ಪುರಸ್ಕರಿಸಬೇಕಾದ್ದು ನಮ್ಮ ಕರ್ತವ್ಯ. ಎನ್.ಎಸ್.ಯು.ಐ ವತಿಯಿಂದ ವಿದ್ಯಾರ್ಥಿಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ 50 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯ 30 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ಡಾಲ್ಫಿನ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಶೋಕ್, ಬಿ.ಆರ್.ಸಿ ಯ ಪ್ರಭಾಕರ್, ಭಾಸ್ಕರ್, ಮುನಿಶಾಮಪ್ಪ, ಎನ್.ಎಸ್.ಯು.ಐ ರಾಜ್ಯ ಮುಖಂಡ ಲಿಯಾಕತ್ ಉಲ್ಲಾ, ತಾಲ್ಲೂಕು ಮುಖಂಡರಾದ ಲಕ್ಷ್ಮಿನರಸಿಂಹ, ಪ್ರಸನ್ನ, ರಫೀಕ್ ಹಾಜರಿದ್ದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಗುರು ಮಾತನಾಡಿದರು. ಯುವಕರು ಇಂದು ಸಣ್ಣಪುಟ್ಟ ಸೋಲುಗಳಿಗೂ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಮನುಷ್ಯರಾಗಿ ಹುಟ್ಟಿರುವುದೇ ಸಾಧನೆ ಮಾಡಲು. ಹೀಗಾಗಿ ಯುವ ಸಮೂಹ ಆತ್ಮಹತ್ಯೆ ಹಾದಿ ಬಿಟ್ಟು ಸಾಧನೆ ಕಡೆಗೆ ಗಮನ ಕೊಡಬೇಕು ಎಂದು ಅವರು ತಿಳಿಸಿದರು. ಅತಿಯಾದ ಒತ್ತಡದಿಂದ ಇಂದು ಆತ್ಮಹತ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಒತ್ತಡ ನಿಭಾಯಿಸುವ ಕಲೆಯನ್ನು ಪಠ್ಯದಲ್ಲಿ ಸೇರಿಸುವುದು ಅವಶ್ಯಕವಾಗಿದೆ. ಜನ ಆತ್ಮಹತ್ಯೆ ಯೋಜನೆಯನ್ನು ಮನಸ್ಸಿನಿಂದ ತೆಗೆದು ಹಾಕುವಂತೆ ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ಎಲ್ಲೆಡೆ ಹಂಚಲಾಗುತ್ತಿದೆ ಎಂದು ಹೇಳಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ, ಆರೋಗ್ಯ ಸಿಬ್ಬಂದಿ ಮುನಿಲಕ್ಷ್ಮಮ್ಮ, ಲೋಕೇಶ್, ಗೀತಾ, ನಂದಿನಿ, ಸಂದೀಪ್, ಕೀರ್ತಿ, ವಿಜಯಮ್ಮ ಹಾಜರಿದ್ದರು.