ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದು, ತಾಲ್ಲೂಕಿನಲ್ಲಿ ಗ್ರಾಮೀಣ, ಶ್ರಮಿಕರ, ವ್ಯವಸಾಯಗಾರರ ಮಕ್ಕಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ತಾಲ್ಲೂಕಿನ ಅಂಕತಟ್ಟಿಯ ವಿದ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಾದ ಮಸೀದಿಯ ಮೌಲ್ವಿಯ ಮಗಳು ತೂಬಾ ನುದ್ರತ್ ಮತ್ತು ಶಿಕ್ಷಕರ ಮಗ ಸುಂದರೇಶ್ 581 (96.8%) ಪಡೆದು ತಾಲ್ಲೂಕಿಗೆ ಪ್ರಥಮರಾಗಿದ್ದಾರೆ. ಬಿ.ಜಿ.ಎಸ್. ಕಾಲೇಜಿನ ಜ್ಯೋಷಿಕಾ 576 (96%), ಎಸ್.ಜಾನಕಿ 574 (95.66%), ಮಳ್ಳೂರು ಸ್ವಾಮಿ ವಿವೇಕಾನಂದ ಕಾಲೇಜಿನ ಮಗ್ಗದ ಕಸುಬಿನವರ ಮಗ ಸುಗಟೂರಿನ ಎಸ್.ಎಸ್.ಲಕ್ಷ್ಮೀಕಾಂತ್ 569 (95%), ಕಲಾ ವಿಭಾಗದಲ್ಲಿ ಕಾರ್ಮಿಕರ ಮಗ ಗೌತಮ್ ರಾಜ್ 543 (91%), ವಾಣಿಜ್ಯ ವಿಭಾಗದಲ್ಲಿ ವಾಹನ ಚಾಲಕರ ಮಗಳು ಬಿ.ಎಂ.ಪ್ರಿಯಾಂಕ ಮತ್ತು ಆಟೋ ಚಾಲಕರ ಮಗಳು ಆರ್.ತನುಶ್ರೀ 569 (95%), ಬಿ.ಜಿ.ಎಸ್. ಕಾಲೇಜಿನ ವಾಣಿಜ್ಯ ವಿಭಾಗದ ಕೃಷ್ಣವೇಣಿ 564 (94%), ಡಾಲ್ಫಿನ್ ಪಿಯು ಕಾಲೇಜಿನ ಮರಗೆಲಸದ ಕಾರ್ಮಿಕರ ಮಗಳು ತಸ್ಮಿಯಾ ಕೌಸರ್ 578 (96.33%), ವಾಣಿಜ್ಯ ವಿಭಾಗದಲ್ಲಿ ರೇಷ್ಮೆ ಕಾರ್ಮಿಕರ ಮಗಳು ಸಿಮ್ರಾನ್ ಫಿರ್ ದೌಸ್ 585 (97.5%) ಅಂಕಗಳನ್ನು ಗಳಿಸಿದ್ದಾರೆ.
ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿ.ಐ.ಟಿ.ಯು ಸಂಘಟನೆಯ ನೇತೃತ್ವದಲ್ಲಿ ಅಂಗನವಾಡಿ ನೌಕರರು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಮುಂದೆ ಸೋಮವಾರ ಪ್ರತಿಭಟನೆಯನ್ನು ನಡೆಸಿದರು.
ಅಂಗನವಾಡಿ ಕೇಂದ್ರಗಳಿಗೆ ಮತ್ತು ಅಂಗನವಾಡಿ ನೌಕರರಿಗೆ ಕೊರೊನಾ ಸಂರಕ್ಷಣೆಯನ್ನು ಒದಗಿಸಿ. ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಇತ್ಯಾದಿ ಸಂರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ವಿಮೆ ಸೌಲಭ್ಯವನ್ನು ಒದಗಿಸಬೇಕು. ಕೊರೊನಾ ಸಂದರ್ಭದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 25 ಸಾವಿರ ರೂ ಪ್ರೋತ್ಸಾಹಧನ ಮತ್ತು ಸ್ಥಳೀಯ ಸಾರಿಗೆ ಬಸ್ ಪಾಸ್ ಮತ್ತು ಊಟದ ವೆಚ್ಚವನ್ನು ಭರಿಸಬೇಕು. ಈಗಿರುವ ಎನ್.ಪಿ.ಎಸ್ ಲೈಟ್ ಅನ್ನು ಬದಲಿಸಿ ಎಲ್.ಐ.ಸಿ ಆಧಾರಿತ ನಿವೃತ್ತಿ ವೇತನ ನೀಡಬೇಕು. ಐ.ಸಿ.ಡಿ.ಎಸ್ ಯೋಜನೆಗೆ ಅನುದಾನವನ್ನು ಹೆಚ್ಚಳ ಮಾಡಿ ಎಂಬ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದರು.
ನಮ್ಮ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ಆಹಸ್ಟ್ ತಿಂಗಳಿನಿಂದ ಅಸಹಕಾರ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿ, ಎ.ಸಿ.ಡಿ.ಪಿ.ಒ ಮಹೇಶ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ, ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ನಂದಿನಿ, ಗಾಯಿತ್ರಿ, ಗೌರಮ್ಮ, ಮುನಿರತ್ನ, ಗಂಗ, ಶಾಂತಮ್ಮ ಹಾಜರಿದ್ದರು.
ಒಂದೇ ದಿನ ಶಿಡ್ಲಘಟ್ಟ ನಗರದಲ್ಲಿ ನಾಲ್ಕು ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ರಹಮತ್ ನಗರದ 35 ವರ್ಷದ ಮಹಿಳೆ, ಮಾರುತಿ ನಗರದ 19 ವರ್ಷದ ಯುವಕ ಮತ್ತು ಗಾಂಧಿನಗರ (ಜಂಗಮಕೋಟೆ ಮೂಲದ) 32 ವರ್ಷದ ಯುವಕ, ಶಾಮಣ್ಣ ಬಾವಿ ರಸ್ತೆ 36 ವರ್ಷದ ಯುವಕನಲ್ಲಿ ಕೊರೊನ ಸೋಂಕು ಇರುವುದು ಭಾನುವಾರ ವರದಿಯಾಗಿದೆ.
ಬ್ರೈನ್ ಟ್ಯೂಮರ್ ಕಾಯಿಲೆಯಿಂದಾಗಿ ಸೊಂಟದ ಸ್ವಾಧೀನತೆಯನ್ನು ಕಳೆದುಕೊಂಡಿರುವ ತಾಲ್ಲೂಕಿನ ಮೇಲೂರಿನ 12 ವರ್ಷದ ಬಾಲಕ ಯಶಸ್ ಸಿದ್ದಾರ್ಥ್ ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 30ಸಾವಿರ ಸಹಾಯಧನ ಮಂಜೂರು ಮಾಡಿದ್ದಾರೆ. ಶ್ರೀ ಕ್ಷೇತ್ರದಿಂದ ಮಂಜೂರಾದ 30 ಸಾವಿರ ಸಹಾಯಧನ ಮೊತ್ತವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಭಂದಕ ಪ್ರಕಾಶ್ ಅವರು ಬಾಲಕನ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್, ಮೇಲ್ವಿಚಾರಕರಾದ ಜ್ಯೋತಿ, ಸೇವಾಪ್ರತಿನಿಧಿ ಪದ್ಮಾ ಹಾಜರಿದ್ದರು. Attachments area
‘ಶ್ರೀ ಎಚ್.ಡಿ.ದೇವೇಗೌಡ ರವರ ಮತ್ತು ಶ್ರೀ ಜಯಪ್ರಕಾಶ್ ನಾರಾಯಣ್ ರವರ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್’ ವತಿಯಿಂದ ಮೇಲೂರಿನ ಗೌಡ ಕಮ್ಯುನಿಕೇಷನ್ಸ್ ನಲ್ಲಿ ಆಯೋಜಿಸಿದ್ದ ಗ್ರಾಮಸ್ಥರಿಗೆ ಆರೋಗ್ಯ ಕಾರ್ಡ್ ಮಾಡಿಸಿಕೊಡುವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್ ಮಾತನಾಡಿದರು.
ಬಡವರಿಗೆ ಆರೋಗ್ಯ ಭದ್ರತೆ ಒದಗಿಸುವ “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಯೋಜನೆ ಕಾರ್ಡ್ ಗ್ರಾಮಸ್ಥರಿಗೆ ಸಿಗಬೇಕೆಂದು ಪ್ರತಿ ಶನಿವಾರ ಸಂಬಂಧಪಟ್ಟ ಸೇವಾಕೇಂದ್ರದವರನ್ನು ಮೇಲೂರಿಗೆ ಕರೆಸಿ ಕಾರ್ಡ್ ಮಾಡಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡುವ ಈ ಯೋಜನೆಯಡಿ ಕಾರ್ಡ್‌ಗಳ ವಿತರಣೆ ಗ್ರಾಮೀಣ ಬಡ ಕುಟುಂಬಗಳಿಗೆ ಪೂರ್ಣ ಮಟ್ಟದಲ್ಲಿ ಆಗಿಲ್ಲ. ಕೊರೊನಾ ಕಾರಣದಿಂದ ಜಂಗಮಕೋಟೆಗೆ ಹೋಗಿ ಕಾರ್ಡ್ ಮಾಡಿಸಿಕೊಂಡು ಬರಲು ತೊಂದರೆಯಾಗುತ್ತಿತ್ತು. ಅದಕ್ಕಾಗಿ ಟ್ರಸ್ಟ್ ವತಿಯಿಂದ ಪ್ರತಿ ಶನಿವಾರ ಈ ಸೇವೆಯನ್ನು ಗ್ರಾಮದಲ್ಲಿ ಒದಗಿಸುತ್ತಿದ್ದೇವೆ. ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಹಾಜರುಪಡಿಸಿ ಆರೋಗ್ಯ ಕಾರ್ಡ್ ಪಡೆಯಬಹುದಾಗಿದೆ ಎಂದು ಹೇಳಿದರು.
ಡಿಜಿಟಲ್ ಸೇವಾ ಕೇಂದ್ರ ಮತ್ತು ಸೇವಾಸಿಂಧು ಜೆ.ಕೆ.ರವಿಕುಮಾರ್ ಮಾತನಾಡಿ, ಜಂಗಮಕೋಟೆಯಲ್ಲಿ ನಮ್ಮ ಕೇಂದ್ರವಿದೆ. ಕೋವಿಡ್ ಕಾರಣದಿಂದ ಜನರು ಹೆಚ್ಚು ಓಡಾಡಬಾರದಾದ್ದರಿಂದ ಬಹಳಷ್ಟು ಮಂದಿಗೆ ಆರೋಗ್ಯ ಕಾರ್ಡ್ ಪಡೆಯಲು ಕಷ್ಟವಾಗುತ್ತಿದೆ. ಮೇಲೂರಿನಲ್ಲಿ ಸೇವೆ ಒದಗಿಸಲು ಅನುಕೂಲ ಮಾಡಿಕೊಟ್ಟು, ಜನರಿಗೆ ಸಹಾಯವಾಗುತ್ತಿದೆ ಎಂದರು.
ಶಿಡ್ಲಘಟ್ಟ ನಗರದ ೨೨ ವರ್ಷದ ಮಹಬೂಬ್ ನಗರ ನಿವಾಸಿ ಗರ್ಭಿಣಿ ಕೊರೊನ ಪಾಸಿಟಿವ್ ಎಂದು ಶನಿವಾರ ವರದಿಯಾಗಿದೆ. ಒಂಭತ್ತು ತಿಂಗಳ ಗರ್ಭಿಣಿ ಬೆಂಗಳೂರಿನ ತನ್ನ ಗಂಡನ ಮನೆಗೆ ಹೋಗಿ ಬಂದಿದ್ದರು. ಸೋಂಕಿತ ಮಹಿಳೆಯನ್ನು ಚಿಕ್ಕಬಳ್ಳಾಪುರದ ಕೋವಿಡ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅವರ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ನಗರದಲ್ಲಿ ಎ.ಐ.ಸಿ.ಟಿ.ಯು ಸಂಘಟನೆಯ ಮೂಲಕ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಕೆಲಸವನ್ನು ಸ್ಥಗಿತಗೊಳಿಸಿ ಮನವಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರಿಗೆ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರಿಗೆ ಈಗ ಇರುವ ಪ್ರೋತ್ಸಾಹಧನ ಮತ್ತು ಗೌರವಧನ ಎರಡನ್ನೂ ಒಟ್ಟಿಗೆ ಸೇರಿಸಿ ಮಾಸಿಕ ಹನ್ನೆರಡು ಸಾವಿರ ರೂ ಗೌರವಧನ ನಿಗಧಿಪಡಿಸಬೇಕು. ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಅಗತ್ಯವಾದ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಇತ್ಯಾದಿ ಸಂರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ಪಾಸಿಟೀವ್ ಬಂದಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಮತ್ತು ಚಿಕಿತ್ಸೆಯ ಅವಧಿಯಲ್ಲಿ ಸಂಪೂರ್ಣ ಗೌರವಧನ ನೀಡಬೇಕೆಂದು ಒತ್ತಾಯಿಸಿದರು.
ಸರ್ಕಾರ ಇದುವರೆಗೂ ನಮ್ಮ ಬೇಡಿಕೆಗಳನ್ನು ಪರಿಗಣಿಸದಿರುವುದರಿಂದ ಅನಿವಾರ್ಯವಾಗಿ ಜುಲೈ 10 ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ನಾವು ಹೋರಾಟ ನಡೆಸಿದ್ದೇವೆ ಎಂದರು.
ಆಶಾ ಕಾರ್ಯಕರ್ತೆಯರ ಸಂಘದ ಸುಶೀಲಾ, ನಾಗರತ್ನ, ಶಾಮಲ, ಕನಕಮ್ಮ, ಶಿವಮ್ಮ, ವಿಜಯಲಕ್ಷ್ಮಿ, ಲಕ್ಷ್ಮೀದೇವಿ, ನೇತ್ರಾವತಿ ಹಾಜರಿದ್ದರು.
ಕರ್ತವ್ಯ ನಿರತ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕೆ.ಅರುಂದತಿ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ, ದೇಶದ ಸಂವಿಧಾನದಡಿಯಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರ ಮೇಲೆ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ ಎಂದರು.
ದಿನ ನಿತ್ಯ ಆತಂಕ ಹಾಗೂ ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ಅಗತ್ಯ ರಕ್ಷಣಾ ಕ್ರಮಗಳನ್ನು ಸರ್ಕಾರ ಜಾರಿ ತರಬೇಕು. ಸರ್ಕಾರದಿಂದ ಮೃತರ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ನೀಡುವುದು ಸೇರಿದಂತೆ ಕುಟುಂಬದ ಸದಸ್ಯರಿಗೆ ಅನುಕಂಪದ ಆದಾರದ ಮೇಲೆ ಉದ್ಯೋಗ ನೀಡಬೇಕು. ಅಧಿಕಾರಿಯೊಬ್ಬರನ್ನು ಹಾಡಹಗಲೇ ಕೊಲೆ ಮಾಡಿರುವ ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕೆ.ಅರುಂದತಿ ರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ.ಅರುಂದತಿ ಮಾತನಾಡಿ ಬಂಗಾರಪೇಟೆ ತಹಸೀಲ್ದಾರ್ ಆಗಿದ್ದ ಚಂದ್ರಮೌಳೇಶ್ವರ ಅವರನ್ನು ಹತ್ತಿರದಿಂದ ನೋಡಿದ್ದು ತುಂಬಾ ಸಹೃದಯವಂತರಾಗಿದ್ದರು. ಇಂತಹ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ನಾನೂ ಸಹ ಓರ್ವ ಅಧಿಕಾರಿಯಾಗಿ ಮೇಲಾಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಶಶಿಕುಮಾರ್, ಕಾರ್ಯದರ್ಶಿ ಅಕ್ಕಲರೆಡ್ಡಿ, ಖಜಾಂಚಿ ಡಿ.ಆರ್.ಪ್ರೀತಮ್, ಶಿರಸ್ತೇದಾರ್ ಕೆ.ಎನ್.ಮಂಜುನಾಥ್ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಗಳಲ್ಲಿ ಕೊರೊನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಂಗಮಕೋಟೆ ಹೋಬಳಿ ಸುಂಡ್ರಹಳ್ಳಿ ಗ್ರಾಮದ ಮೂವರು ಮಹಿಳೆಯರು ಕೊರೊನ ಪಾಸಿಟಿವ್ ಎಂದು ಗುರುವಾರ ವರದಿಯಾಗಿದೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಪ್ಪೇಗೌಡನಹಳ್ಳಿ ಶ್ರೀರಾಮ ಯುವಕರ ಸಂಘಕ್ಕೆ ನೀಡಿರುವ ಕ್ರೀಡಾ ಪರಿಗಳನ್ನು ವಿತರಿಸಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಗ್ರಾಮಗಳಲ್ಲಿ ಯುವಕರು ಆಟೋಟಗಳಲ್ಲಿ ತೊಡಗಿಸಿಕೊಂಡು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆರೋಗ್ಯವಂತ ಸದೃಢ ಯುವಕರು ನಾಡಿನ ಆಸ್ತಿಯಿದ್ದಂತೆ ಎಂದು ಅವರು ತಿಳಿಸಿದರು.
ವಾಲಿಬಾಲ್, ವಾಲಿಬಾಲ್ ನೆಟ್, ಫುಟ್ ಬಾಲ್, ಕ್ರಿಕೆಟ್ ಆಟದ ಸಾಮಗ್ರಿಗಳು, ಸ್ಕಿಪ್ಪಿಂಗ್, ಭಾರ ಎತ್ತುವ ಡೆಂಬಲ್ ಮುಂತಾದ ಕ್ರೀಡಾ ಪರಿಕರಗಳನ್ನು ಕ್ರೀಡಾ ಇಲಾಖೆ ನೀಡಿದೆ. ದೈಹಿಕ ಕ್ಷಮತೆಗೆ ಆಟೋಟಗಳು ಅನಿವಾರ್ಯ. ಮೊಬೈಲ್ ಕೈಯಲ್ಲಿ ಹಿಡಿದು ಆಟೋಟಗಳಲ್ಲಿ ಪಾಲ್ಗೊಳ್ಳದೇ ಸಾಮಾಜಿಕ ತಾಣಗಳಲ್ಲಿ ಸಮಯ ಕಳೆಯುವುದೇ ಇತ್ತೀಚೆಗೆ ಹೆಚ್ಚಾಗಿ ಹೋಗಿದೆ. ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸಿರುತ್ತದೆ ಎಂದು ಹೇಳಿದರು.
ಶ್ರೀರಾಮ ಯುವಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ದೊಣ್ಣಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2.5 ಕೋಟಿ ರೂಗಳ ರಸ್ತೆ ಕಾಮಗಾರಿಗೆ ಶಾಸಕ ವಿ.ಮುನಿಯಪ್ಪ ಗುದ್ದಲಿ ಪೂಜೆ ಬುಧವಾರ ನೆರವೇರಿಸಿದರು.
ದೊಣ್ಣಹಳ್ಳಿ ಚಿಕ್ಕಪಾಪನಹಳ್ಳಿ ಮಾರ್ಗವಾಗಿ ವಾರಹುಣಸೇನಹಳ್ಳಿ ಗಡಿಭಾಗ ಮುಖಾಂತರ ಶಿಡ್ಲಘಟ್ಟ ತಲುಪುವ ರಸ್ತೆಯಿದಾಗಿದೆ. ಈ ಸಂದರ್ಭದಲ್ಲಿ ವಿ.ಸುಬ್ರಮಣಿ, ಕೆ.ಎಂ.ವೆಂಕಟೇಶ್, ನಿರಂಜನ್, ಕೆ.ಪಿ.ಮುನಿರೆಡ್ಡಿ, ರಾಮಚಂದ್ರರೆಡ್ಡಿ, ಟಿ.ಕೆ.ನಟರಾಜ್, ಕ್ಯಾತಪ್ಪ, ಆಂಜನೇಯರೆಡ್ಡಿ, ಚಂದ್ರಪ್ಪ, ಸೋಣ್ಣೇಗೌಡ, ಮನೋಹರ್, ಜಯರಾಮ್, ಆನಂದ, ರಮೇಶ್, ವಿನೋದ್, ಮುರಳಿ ಹಾಜರಿದ್ದರು.