Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಭೂಸ್ವಾಧೀನಗೊಂಡ ರೈತರಿಗೆ ಸೂಕ್ತ ಭೂಪರಿಹಾರ, ಶಾಶ್ವತ ಉದ್ಯೋಗ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯದೊಂದಿಗೆ KIADB ರೈತ ಪರ ಹೋರಾಟ ಸಮಿತಿ ಸದಸ್ಯರು ಕರ್ನಾಟಕದ ಬೃಹತ್ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರು ನಗರದ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು ಸಚಿವರನ್ನು ಭೇಟಿಯಾಗಿ, 13 ಹಳ್ಳಿಗಳ 2823 ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಸ್ವಾಧೀನ ಮಾಡಲಾಗಿದ್ದು, 13 ತಿಂಗಳು ಕಳೆದರೂ ಯಾವುದೇ ಕೈಗಾರಿಕಾ ಅಭಿವೃದ್ಧಿ ಪ್ರಕ್ರಿಯೆ ಆರಂಭವಾಗಿಲ್ಲವೆಂದು ತಿಳಿಸಿದರು.
ಅವರು ಮನವಿಯಲ್ಲಿ ಸರಕಾರ ಈ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು, ನೀರಾವರಿ ಪ್ರದೇಶಗಳನ್ನು ಹೊರತುಪಡಿಸಬೇಕು, ಹಾಗೂ ಭೂಮಿ ನೀಡಿದ ರೈತರಿಗೆ ಎಕರೆಗೊಂದು ₹3 ಕೋಟಿ ಪರಿಹಾರ ಹಾಗೂ ಶಾಶ್ವತ ಉದ್ಯೋಗ ನೀಡಬೇಕು ಎಂಬುದಾಗಿ ಒತ್ತಾಯಿಸಿದರು.
ಪಿಎಸ್‌ಎಲ್ ಕಂಪನಿಗೆ ಸಂಬಂಧಿಸಿದ ಭೂಮಿ ಕುರಿತು, ಕಂಪನಿಯಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಮನವಿಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ್, “ನಾನು ಸ್ವತಃ ರೈತ ಕುಟುಂಬದಿಂದ ಬಂದವನಾಗಿದ್ದು, ರೈತರಿಗೆ ಅನ್ಯಾಯ ಆಗದಂತೆ ಎಲ್ಲ ರೀತಿಯ ಕ್ರಮ ವಹಿಸಲಾಗುವುದು. ಶೀಘ್ರದಲ್ಲೇ ಮೂರನೇ ಅಧಿಸೂಚನೆ ಹೊರಡಿಸಿ, ಜಿಲ್ಲಾಧಿಕಾರಿಗಳ ಸಭೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಯುವ ಘಟಕದ ಸುಬ್ರಮಣಿ, ಮತ್ತು ಪದಾಧಿಕಾರಿಗಳಾದ ಪ್ರಭುಗೌಡ, ನಾಗರಾಜ್, ವೆಂಕಟೇಶ್, ಪ್ರಮೋದ್‌ಗೌಡ, ಹರೀಶ್, ಈರಪ್ಪ, ಪ್ರದೀಪ್‌ಗೌಡ, ಚಿನ್ನಪ್ಪ, ಜೆ.ಸಿ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
Sidlaghatta : ನಾವು ಬದುಕುವ ಜತೆಗೆ ನಮ್ಮ ಜತೆಯಲ್ಲಿ ಇರುವವರನ್ನು ಕೂಡ ಜತೆಗೂಡಿಸಿಕೊಂಡು ಬದುಕುವುದೆ ಉತ್ತಮ ಬದುಕು ಎಂದು ಶಿಡ್ಲಘಟ್ಟ ಲಯನ್ಸ್ ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ಫುಡ್ ಮನೋಹರ್ ಅಭಿಪ್ರಾಯಪಟ್ಟರು.
ನಗರದಲ್ಲಿನ ಲಯನ್ಸ್ ಕ್ಲಬ್‌ನ ಕಚೇರಿಯಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿ ಮಾತನಾಡಿದರು.
ನಾನು ಅಧ್ಯಕ್ಷನಾದ ನಂತರ ನನ್ನ ಕ್ಲಬ್‌ನ ಸದಸ್ಯರ ಜತೆಗೂಡಿ ಅನೇಕ ಸೇವಾ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ವಾರದ ಸಂತೆಯಲ್ಲಿನ ಬಡ ವ್ಯಾಪಾರಿಗಳಿಗೆ ಮದ್ಯಾಹ್ನ ಊಟ ವಿತರಣೆ, ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಬೇತಿ ನೀಡಲಾಗಿದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಕೆಲ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲಾಗಿದೆ. ಮುಖ್ಯವಾಗಿ ಶಾಲೆಗಳಲ್ಲಿ ಮಕ್ಕಳ ಕಣ್ಣಿನ ಪರೀಕ್ಷೆ ಮಾಡಿ ಅಂಧತ್ವದ ಬಾಲಕಿ ಬಾಲಕಿಯರಿಗೆ ಸಲಕರಣೆಗಳ ವಿತರಣೆ ಮಾಡುವಂತ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು ತೃಪ್ತಿ ತಂದಿದೆ ಎಂದು ಹೇಳಿದರು.
ಹಾಗೆಯೆ ಮುಂದೆ ಅಧ್ಯಕ್ಷರಾಗುವವರು ಕೂಡ ಈ ಎಲ್ಲಾ ಸೇವಾ ಕಾರ್ಯಗಳನ್ನು ಮುಂದುವರೆಸಬೇಕು ಮತ್ತು ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ನಮ್ಮೆಲ್ಲರ ಬೆಂಬಲ ಇರುತ್ತದೆ ಎಂದು ವಿವರಿಸಿದರು.
ಮೊಹಮ್ಮದ್ ಅಮಾನುಲ್ಲಾ ಅವರನ್ನು ಲಯನ್ಸ್ ಶಿಡ್ಲಘಟ್ಟ ಕ್ಲಬ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷ ಮೊಹಮ್ಮದ್ ಅಮಾನುಲ್ಲಾ ತನ್ನ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಎಲ್ಲರ ಸಹಕಾರ ಕೋರಿದರು.
ಲಯನ್ಸ್ ಕ್ಲಬ್‌ನ ಯುವ ಅಭಿವೃದ್ದಿ ಘಟಕದ ಜಿಲ್ಲಾಧ್ಯಕ್ಷ ಅಜಯ್ ಕೀರ್ತಿ, ಉಪಾಧ್ಯಕ್ಷ ಅನಿಲ್ ಕುಮಾರ್, ಸದಸ್ಯ ಎಸ್.ವಿಜಯ್ ಕುಮಾರ್, ಎಸ್.ಎಂ.ಮಂಜುನಾಥ್, ಅಪ್ಪಿ, ಮಂಜುನಾಥ್ ಇನ್ನಿತರರು ಹಾಜರಿದ್ದರು.
Sidlaghatta: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಸುಮಾರು 13 ಹಳ್ಳಿಗಳ ರೈತರ ಸಂಪೂರ್ಣ ವಿರೋಧದ ನಡುವೆಯೂ ಬಲವಂತವಾಗಿ ರೈತರ ಭೂಮಿಯನ್ನು ಭೂಸ್ವಾದೀನ ಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಜೀವಿಕ ತಾಲ್ಲೂಕು ಸಂಚಾಲಕ ಶ್ರೀನಿವಾಸ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನೆರೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಭೂ ಸ್ವಾದೀನ ಅಧಿಸೂಚನೆ ವಿರೋಧಿಸಿ ಇದೇ ಜು 04 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವದಿ ಧರಣಿಗೆ ಜೀವಿಕ ಹಾಗು ಕರ್ನಾಟಕ ಜೀತದಾಳುಗಳ ಕೃಷಿ ಕಾರ್ಮಿಕ ಒಕ್ಕೂಟ ಬೆಂಬಲ ವ್ಯಕ್ತಪಡಿಸುವ ಮೂಲಕ ಹೋರಾಟದಲ್ಲಿ ಪಾಲ್ಗೊಳ್ಳಲಿದೆ ಎಂದರು.
ಕೆಐಎಡಿಬಿ ಯಿಂದ ನಿರ್ಮಾಣವಾಗುವ ಕೈಗಾರಿಕೆಗಳಿಂದ ಈ ಭಾಗದ ಯಾವುದೇ ರೈತನಿಗೆ ಉಪಯೋಗವಿಲ್ಲ. ಬದಲಿಗೆ ವಿದೇಶಿ ಹಾಗು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭವಾಗಲಿದೆ. ಸರ್ಕಾರಗಳು ರೈತರ ಪರ ನಿಲ್ಲುವ ಬದಲಿಗೆ ಕಾರ್ಪೊರೇಟ್ ಸಂಸ್ಥೆಗಳ ಪರ ನಿಂತಿರುವುದು ದುರದೃಷ್ಟಕರ. ಇಡೀ ದೇಶಕ್ಕೆ ಅನ್ನ ನೀಡುವ ರೈತ ತಮ್ಮ ಜಮೀನನ್ನು ಉಳಿಸಿಕೊಳ್ಳಲು ದಿನವಿಡೀ ಉಪವಾಸ ಕುಳಿತು ಹೋರಾಟ ಮಾಡುವ ಸ್ಥಿತಿ ಬಂದಿದೆ. ಒಂದು ವೇಳೆ ನೀವು ಕೈಗಾರಿಕೆಗಳನ್ನೆ ಮಾಡಬೇಕು ಎಂದಾದರೆ ಭೂ ಒಡೆತನ ರೈತರ ಹೆಸರಲ್ಲೇ ಉಳಿಸಿ ಕೈಗಾರಿಕೆಗಳನ್ನು ಸ್ಥಾಪಿಸಿಕೊಳ್ಳಿ, ಅದು ಬಿಟ್ಟು ರೈತರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಳ್ಳುವ ಯತ್ನ ಬಿಡಬೇಕು ಎಂದರು.
ಕಳೆದ ಮೂರೂವರೆ ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿರುವ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಪರವಾಗಿ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಯಿಂದ ಜನ ಸೇರುತ್ತಿದ್ದು ಭೂ ಸ್ವಾದೀನ ಪ್ರಕ್ರಿಯೆ ಕೈ ಬಿಡುವವರೆಗೂ ಹೋರಾಟ ನಡೆಯಲಿದೆ. ಈ ಹೋರಾಟಕ್ಕೆ ತಾಲ್ಲೂಕಿನಿಂದ ಜೀವಿಕ ಪದಾಧಿಕಾರಿಗಳೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಲಿದ್ದೇವೆ ಎಂದರು.
ಈ ಸಂದರ್ಬದಲ್ಲಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ನರಸಿಂಹಪ್ಪ, ತಾಲ್ಲೂಕು ಅಧ್ಯಕ್ಷ ಜಿ.ಮುನಿಯಪ್ಪ, ಹೋಬಳಿ ಅಧ್ಯಕ್ಷರುಗಳಾದ ಗುರುಮೂರ್ತಿ, ವಿನೋದ್, ನರಸಿಂಹಮೂರ್ತಿ, ರವಿ, ತಾಲ್ಲೂಕು ಗೌರವಾಧ್ಯಕ್ಷ ಮುನಿಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಹಾಗೂ ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಷನ್ನ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ವೃತ್ತಿ ಯೋಜನೆ ಕಾರ್ಯಕ್ರಮದಡಿ ತರಬೇತಿ ಕಾರ್ಯಾಗಾರ ನಡೆಯಿತು.
ಜಿಲ್ಲೆಯ ವಿವಿಧ ವಸತಿ ಶಾಲೆಗಳಿಂದ ಸುಮಾರು ೫೦ ಕ್ಕೂ ಹೆಚ್ಚು ಮಂದಿ ಶಿಕ್ಷಕರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಷನ್ ಮುಖ್ಯಸ್ಥ ಡಾ.ಶರವಣ ಮಾತನಾಡಿ, ವಸತಿ ಶಾಲೆಗಳಲ್ಲಿ, ಮಕ್ಕಳಿಗೆ ಪಠ್ಯಪುಸ್ತಕಗಳಲ್ಲಿನ ಪಾಠಪ್ರವಚನಗಳ ಜೊತೆಯಲ್ಲೆ, ಕೌಶಲ್ಯಾಧಾರಿತ ಶಿಕ್ಷಣದ ಬಗ್ಗೆಯೂ ಶಿಕ್ಷಕರು ಹೆಚ್ಚು ಒತ್ತುಕೊಡಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯು, ತನ್ನ ಜೀವನದಲ್ಲಿ ಏನಾದರೂ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಹೇಗೆ ಯಶಸ್ಸು ಕಾಣಬಹುದು ಎಂಬುದನ್ನು ಕಲಿಸಿಕೊಡುವುದರ ಜೊತೆಗೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಗೆ ತರುವುದು, ಅವರು, ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿಯುಳ್ಳವರಾಗಿದ್ದಾರೆ ಎನ್ನುವ ಕುರಿತು, ಗುರ್ತಿಸಿ, ಅವರನ್ನು ಪ್ರೋತ್ಸಾಹಿಸಿದರೆ, ಶಿಕ್ಷಣದ ನಂತರದಲ್ಲಿ, ಅವರು ಸರ್ಕಾರಿ ಉದ್ಯೋಗದ ಮೇಲಷ್ಟೇ ಅವಲಂಬಿತರಾಗದೆ ಜೀವನದಲ್ಲಿ ಸ್ವಂತ ಉದ್ಯೋಗವನ್ನು ಮಾಡಿಕೊಂಡು, ಜೀವನ ನಡೆಸಲಿದ್ದಾರೆ. ಶಿಕ್ಷಕರು, ತರಬೇತಿಯಲ್ಲಿ ಕಲಿತಿರುವಂತಹ ಎಲ್ಲಾ ವಿಚಾರಗಳನ್ನು ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಬೆಂಗಳೂರು ವಿಭಾಗದ ವಿಜನ್ ಇಂಪ್ಯಾಕ್ಟ್ ವ್ಯವಸ್ಥಾಪಕ ರಾಘವೇಂದ್ರ ಪ್ರಸಾದ್ ಮಾತನಾಡಿ, ಶಾಲಾ ಹಂತದಲ್ಲೆ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಕೌಶಲ್ಯಾಧಾರಿತ ತರಬೇತಿಯನ್ನು ನೀಡುವುದರಿಂದ, ಮಕ್ಕಳಲ್ಲಿ ಇನ್ನಷ್ಟು ಭರವಸೆಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಇಂತಹ ತರಬೇತಿ ಕಾರ್ಯಾಗಾರಗಳಿಂದ ಬಹಳಷ್ಟು ಮಂದಿ ವಿದ್ಯಾರ್ಥಿಗಳು ಜೀವನ ರೂಪಿಸಿಕೊಂಡಿದ್ದಾರೆ. ಶಿಕ್ಷಕರು, ಬದ್ಧತೆಯಿಂದ ವಿದ್ಯಾರ್ಥಿಗಳನ್ನು ತಯಾರು ಮಾಡುವಂತಹ ಕಾರ್ಯವನ್ನು ಮಾಡಬೇಕು ಎಂದರು.
ಚಿಕ್ಕಬಳ್ಳಾಪುರ ನಿರ್ವಹಣಾ ತಂಡದ ಮುಖ್ಯಸ್ಥ ಶ್ರೀನಿವಾಸ್, ತುಮಕೂರು ಜಿಲ್ಲೆ ನಿರ್ವಹಣಾ ತಂಡದ ಮುಖ್ಯಸ್ಥ ನಿಂಗಪ್ಪ, ಕಂಟೆಂಟ್ ಮೆಹರಿನ್ ಫಾತಿಮಾ, ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲೆ ವಿಜಯಶ್ರೀ, ಶಿಕ್ಷಕ ಎಸ್.ಎ.ಪ್ರಸಾದ್ ಮತ್ತಿತರರು ಹಾಜರಿದ್ದರು.
Sidlaghatta : ಕನ್ನಡ ನಾಡಿನ ಪ್ರಸಿದ್ಧ ವಚನ ಚಿಂತಕ ಮತ್ತು ಸಾಹಿತಿ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನದ ಅಂಗವಾಗಿ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಸರಳ ಹಾಗೂ ಸಾಂಸ್ಕೃತಿಕ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಡಾ. ಹಳಕಟ್ಟಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಮೇಲೂರು ಮಂಜುನಾಥ್ ಅವರು, “ವಚನ ಸಾಹಿತ್ಯ ಕೇವಲ ಸಾಹಿತ್ಯ ಶೈಲಿ ಅಲ್ಲ, ಅದು ಸಮಾಜದಲ್ಲಿ ಬದಲಾವಣೆ ತರುವ ತತ್ವಶಾಸ್ತ್ರವಾಗಿದೆ. ಡಾ. ಹಳಕಟ್ಟಿ ಅವರು ಈ ಪರಂಪರೆಯ ಪ್ರಬಲ ಪ್ರತಿನಿಧಿಯಾಗಿದ್ದರು. ಯುವಪೀಳಿಗೆಗೆ ವಚನ ಪರಂಪರೆಯ ಅರಿವು ಮೂಡಿಸುವುದು ಈ ಸಂದರ್ಭದಲ್ಲಿ ಅಗತ್ಯ,” ಎಂದು ಹೇಳಿದರು.
ಡಾ. ಹಳಕಟ್ಟಿಯ ಸಾಹಿತ್ಯ ಸೇವೆ ಹಾಗೂ ವಚನ ಪರಂಪರೆಯ ಉಳಿವಿಗಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಲಾಗಿದ್ದು, ನವ ತಂತ್ರಜ್ಞಾನ ಯುಗದಲ್ಲಿಯೂ ವಚನ ತತ್ವಗಳು ಪ್ರಸ್ತುತವಾಗಿವೆ ಎಂಬುದು ಸ್ಪಷ್ಟವಾಯಿತು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಅಸೀಯ ಬಿ., ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಮುಖಂಡ ವೇಣು ಸೇರಿದಂತೆ ಕೆಲವೇ ಅಧಿಕೃತರು ಭಾಗವಹಿಸಿದ್ದರು. ಆದರೆ ತಹಶೀಲ್ದಾರ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳ ಗೈರುಹಾಜರಿ ಗಮನ ಸೆಳೆಯಿತು.
Kambadahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ, ಕಾಳಿಕಾಂಬಾದೇವಿಯ ದೀಪೋತ್ಸವ ಹಾಗೂ ಜಾತ್ರಾಮಹೋತ್ಸವ ಮಂಗಳವಾರ ಅದ್ದೂರಿಯಾಗಿ ನಡೆಯಿತು.
ಕಾಳಿಕಾಂಬ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಗ್ರಾಮದ ಮಹಿಳೆಯರು, ಹೆಣ್ಣು ಮಕ್ಕಳು, ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದ್ದ ಬುಟ್ಟಿಗಳಲ್ಲಿ ತಂಬಿಟ್ಟಿನ ದೀಪಗಳನ್ನು ಹೊತ್ತುಕೊಂಡು, ತಮಟೆ ವಾದನಗಳೊಂದಿಗೆ ಮೆರವಣಿಗೆಯ ಬಂದು, ದೇವರಿಗೆ ದೀಪಗಳು ಬೆಳಗಿದರು.
ದೀಪಗಳು ಸಾಗುವ ರಸ್ತೆಯಲ್ಲಿ ರಂಗೋಲಿಗಳನ್ನು ಬಿಡಿಸಿ, ತಳಿರು ತೋರಣಗಳನ್ನು ಕಟ್ಟಿ, ಮೆರವಣಿಗೆ ನಡೆಸಿದರು. ಗ್ರಾಮದ ಹಿರಿಯರು, ದೀಪೋತ್ಸವಗಳಿಗೆ ಚಾಲನೆ ನೀಡಿ, ದೀಪಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದೀಪೋತ್ಸವಗಳ ವೀಕ್ಷಣೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಬಂದಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಹಳ್ಳಿಗಳಲ್ಲಿ ಪ್ರತಿಯೊಬ್ಬರೂ ಸಾಮರಸ್ಯದಿಂದ ಅಣ್ಣ ತಮ್ಮಂದಿರಂತೆ ಜೀವಿಸುವುದನ್ನು ರೂಢಿಸಿಕೊಳ್ಳುವುದರ ಜೊತೆಗೆ, ದೇವತಾ ಕಾರ್ಯಗಳನ್ನೂ ಒಗ್ಗಟ್ಟಿನಿಂದ ಆಚರಣೆ ಮಾಡುವ ಮೂಲಕ ಗ್ರಾಮಕ್ಕೆ ಒಳಿತು ಮಾಡಬೇಕಿದೆ. ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಇಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಯುವಜನರಿಗೆ ಉತ್ತಮ ಮಾರ್ಗದರ್ಶನವಾಗುತ್ತದೆ. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡಬೇಕು ಎಂದರು.