21.1 C
Sidlaghatta
Saturday, July 27, 2024

ಉನ್ನತ ಶಿಕ್ಷಣ ನೀಡುವುದೆಂದರೆ

- Advertisement -
- Advertisement -

ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಬಹಳ ಕಡಿಮೆ ಹೆಚ್ಚು ಹೆಚ್ಚು ಜನರಿಗೆ ಶಿಕ್ಷಣ ಲಭ್ಯವಾಗಬೇಕು. ನಮ್ಮದು ಶೈಕ್ಷಣಿಕವಾಗಿ ಮುಂದುವರಿದ ದೇಶವಾಗಬೇಕು. ಇದು ಸಾಧ್ಯವಾಗಬೇಕಾದರೆ ದೇಶದ ಉದ್ದಗಲಗಳಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಾಗಬೇಕು. ಅದಕ್ಕನುಗುಣವಾಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಬೇಕು.
ಅಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದಲ್ಲೂ ಅವುಗಳ ಸ್ಥಾಪನೆಯಾಗಬೇಕು. ಕೇವಲ ಪದವಿಗಳದ್ದೆ ಅಲ್ಲದೇ ಸ್ನಾತಕೋತ್ತರ ಶಿಕ್ಷಣ ಕೂಡ ಎಷ್ಟು ಸಾಧ್ಯವೋ ಅಷ್ಟು ಹತ್ತಿರದಲ್ಲಿ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಪೇಚಾಡುವಂತಾಗಬಾರದು. ಹೌದು ಆದರೆ ಅದಕ್ಕನುಗುಣವಾಗಿ ವ್ಯವಸ್ಥೆ ರೂಪುಗೊಳ್ಳುತ್ತಿದೆಯೇ ಎಂದು ನೋಡಿದಾಗ ನಿರಾಸೆಯಾಗುತ್ತದೆ.
ಉನ್ನತ ಶಿಕ್ಷಣ ಎಲ್ಲರಿಗೂ – ಎಲ್ಲ ಕಡೆಗೂ ದೊರಕಬೇಕೆಂದಾಕ್ಷಣ ಮೊದಲು ಪ್ರಾರಂಭಿಸುತ್ತಿರುವುದು ಪದವಿ ಕಾಲೇಜುಗಳನ್ನು, ಅವುಗಳಲ್ಲೇ ಸ್ನಾತಕೊತ್ತರ ಕೇಂದ್ರಗಳು ಇವುಗಳಲ್ಲಿ ದೊರೆಯುವುದು ಸಾಮಾನ್ಯ ಪದವಿ ಶಿಕ್ಷಣವೇ ವಿನಃ ಇನ್ನೇನೂ ಇಲ್ಲ. ಬಿ.ಎ, ಬಿ.ಕಾಂ, ಬಿ.ಎಸ್ಸಿ ಹೀಗೆ ಅದೇ ಪದವಿಗಳು ಅವುಗಳಿಗೆ ಅದೇ ಪಠ್ಯಗಳು ಒಂದೇ ರೀತಿಯ ಪದ್ಧತಿ-ಪರೀಕ್ಷೆಗಳು ಅವನ್ನೂ ವ್ಯವಸ್ಥಿತವಾಗಿ ಮಾಡಲಾಗದೆ ಕೇವಲ ಮಾಡಿದ್ದೇವೆ ಎಂದು ಬೆನ್ನುತಟ್ಟಿಕೊಳ್ಳುವುದಕ್ಕೆ ವ್ಯವಸ್ಥೆ ಸೀಮಿತವಾಗಿದೆ. ಇವುಗಳಿಂದ ಪದವಿ ಪಡೆದವರ ಸಂಖ್ಯೆ ಗಣನೀಯವಾಗಿ ಏರಬಹುದು. ಪದವೀಧರರ ಕ್ಷೇತ್ರಗಳಿಗೆ ಮಾತ್ರ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು. ಆದರೆ ಹಾಗೆ ಪಡೆದ ಪದವಿಗಳಿಂದ ವಿದ್ಯಾರ್ಥಿಗಳಿಗಾಗಲೀ, ಸಮಾಜಕ್ಕಾಗಲೀ ಪ್ರಯೋಜನವಾಗುತ್ತಿದೆಯೇ? ಆಗುತ್ತಿದ್ದರೆ ಎಷ್ಟರಮಟ್ಟಿಗೆ? ಎಂದು ಯೋಚಿಸಲು ಸಕಾಲ. ಸರಕಾರದ ಹಣವೆಂದರೆ ತೆರಿಗೆದಾರರ ಹಣ ಅದರ ಸದ್ವಿನಿಯೋಗ ಆಗುತ್ತಿದೆಯೇ? ವಿಚಾರಿಸಲು ಹೊರಟರೆ ಗಾಬರಿಯಾಗುತ್ತದೆ.
ಮೂರು ವರ್ಷಗಳ ಪದವಿ ಹೀಗೆ ವಿದ್ಯಾರ್ಥಿಗಳ ಅಮೂಲ್ಯವಾದ ವಯಸ್ಸು ಮತ್ತು ಶಕ್ತಿಯನ್ನು ವ್ಯಯಿಸಿ ಪಡೆದ ಪದವಿಗಳಿಂದ ಸುಲಭವಾಗಿ ಉದ್ಯೋಗ ಪ್ರಾಪ್ತವಾಗುತ್ತದೆಯೇ? ಸರಕಾರ ಇತ್ತೀಚೆಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ಶಾಲಾ ಶಿಕ್ಷಕರ ನೇಮಕಕ್ಕೆ ಏರ್ಪಡಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಗುಜಾರಾಯಿಸಿದವರ ಸಂಖ್ಯೆಯನ್ನು ನೋಡಿದರೆ ಭಯವಾಗುತ್ತದೆ. ಒಂದು ಸಾವಿರ ಉದ್ಯೋಗಕ್ಕೆ ಒಂದು ಲಕ್ಷಕ್ಕಿಂತ ಅಧಿಕ ಆಕಾಂಕ್ಷೆಗಳು ಕೊನೆಗೆ ತೊಂಭತ್ತೊಂಭತ್ತು ಸಾವಿರಕ್ಕಿಂತ ಅಧಿಕ ಮಂದಿ ಹಾಗೆಯೇ ಉಳಿದಿರುತ್ತಾರೆ. ಮುಂದಿನ ನೇಮಕಾತಿ ದಿನಗಳಿಗೆ ಕಾಯುತ್ತಿರುತ್ತಾರೆ. ಅಲ್ಲಿಯವರೆಗೆ ಸಿಕ್ಕ-ಸಿಕ್ಕ ಉದ್ಯೋಗಗಳಿಗೆ ಸಾಧ್ಯವಾದರೆ ಒಗ್ಗಿಕೊಳ್ಳುತ್ತಾರೆ. ಅಂದರೆ ಪಡೆವ ಪದವಿಗಳಿಗೆ ಉದ್ಯೋಗದ ಗ್ಯಾರಂಟಿ ಇಲ್ಲ. ಕೇವಲ ವಯಸ್ಸನ್ನು ವ್ಯರ್ಥಗೊಳಿಸುವ ಕಸರತ್ತಾಗುತ್ತಿದೆ ಅದಕ್ಕೆ ಬದಲಾಗಿ ಉದ್ಯೋಗ ಖಾತ್ರಿ ಶಿಕ್ಷಣ ವ್ಯವಸ್ಥೆ ಜಾರಿಯಾಗುತ್ತ ಸಾಗಿದರೆ ಓದಿದವರೂ ತಮ್ಮ ಓದಿಗೆ ಒಂದು ಬೆಲೆಯಿದೆ ಎಂದು ಶ್ರದ್ಧೆಯಿಂದ ಓದಬಹುದು ಮತ್ತು ಅದರಿಂದ ಅವರ ಬದುಕಿಗೊಂದು ನಿರ್ದಿಷ್ಟ ನೆಲೆ ಪ್ರಾಪ್ತವಾಗಬಹುದು.
ಇಂದಿನ ಪದವಿಗಳೆಂದರೆ – ಉಳಿದ ಎಲ್ಲೂ ಜಾಗೆ ಸಿಗದ ವಿದ್ಯಾರ್ಥಿಗಳ ಕೊನೆಯ ಆಸರೆಯಾಗಿದ್ದು – ಭ್ರಮನಿರಸನ ಹೊಂದಿದ – ಒಟ್ಟಾರೆ ಕಾಟಾಚಾರಕ್ಕೆ ಕಾಲೇಜಿಗೆ ಬರುವವರ ಸಂಖ್ಯೆಯೇ ಅಧಿಕ. ಪಿಯುಸಿ ಆದ ಅನಂತರ ಕಲಾ ವಿಭಾಗದವರಿಗೆ ಬಿ.ಎ ಸೇರಲು ಒಂದು ಕಾಲೇಜು ಬೇಕು. ವಾಣಿಜ್ಯ ವಿಭಾಗದವರಿಗೆ – ಬಿ.ಕಾಂ. – ಬಿ.ಬಿ.ಎಂ. ಹೀಗೆ ಬೇಕು. ತಾಂತ್ರಿಕ ಶಿಕ್ಷಣ ಅಥವಾ ಇನ್ನಿತರ ಕಡೆ ಜಾಗೆ ಸಿಗದವರು ಅನಿವಾರ್ಯವಾಗಿ ಬಿ.ಎಸ್ಸಿ ಸೇರುವುದೇ ಹೆಚ್ಚು. ಆಸಕ್ತಿಯಿಂದ ಸೇರುವವರ ಸಂಖ್ಯೆ ಅತಿ ಕಡಿಮೆ. ಮತ್ತೆ ಇವರೇ ಬಿ.ಎಡ್, ಎಂ.ಎಸ್ಸಿ ಮಾಡಿ ಪಾಠ ಹೇಳಲು ಜಾಗೆ ದೊರಕುವುದೋ ನೋಡುತ್ತಾರೆ. ಹೀಗಾಗಿ ಉತ್ತಮ ಅಂಕಗಳಿಸಿದವರೆಲ್ಲ ಬೇರೆಡೆ ಹೋದರೆ – ಸಾಮಾನ್ಯ ಪದವಿಗಳಿಗೆ ಕೇವಲ ಸಾಮಾನ್ಯ ವಿದ್ಯಾರ್ಥಿಗಳಷ್ಟೇ ಉಳಿದುಕೊಂಡು – ಭವಿಷ್ಯ ರೂಪಿಸಿಕೊಳ್ಳಲು ಹೆಣಗಾಡುತ್ತಾರೆ. ಹತ್ತಿರದಲ್ಲೇ ಇರುವ ಕಾಲೇಜಿನಲ್ಲಿ ಎಂ.ಎ, ಎಂ.ಕಾಂ, ಎಂ.ಎಸ್ಸಿ, ಇದೆ ಎಂದರೆ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಹಲವರು ಬೇರೆನೂ ಮಾಡಲಾಗದಿದ್ದ ಪಕ್ಷದಲ್ಲಿ ಅವುಗಳಿಗೆ ಅಲ್ಲಲ್ಲೇ ಸೇರುತ್ತಿರುವ ದೃಶ್ಯ ಸಾಮಾನ್ಯ. ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಅನುಕೂಲತೆಗಳಾಗಲೀ, ವಾತಾವರಣವಾಗಲೀ ಇವುಗಳಲ್ಲಿ ಇರದೆ ಇಲ್ಲಿನ ಎಂ.ಎ, ಎಂ.ಕಾಂ, ಎಂಎಸ್ಸಿಗಳು ಕೂಡ ಒಂದರ್ಥದಲ್ಲಿ ನಾಲ್ಕು-ಐದನೇ ವರ್ಷದ ಬಿ.ಎ ಬಿ.ಕಾಂ, ಬಿಎಸ್ಸಿಗಳಂತೆ ಕಂಡುಬಂದರೆ ಯಾರೂ ಹುಬ್ಬೇರಿಸುವ ಅವಶ್ಯಕತೆ ಇಲ್ಲ ಇದು ವಸ್ತುಸ್ಥಿತಿ.
ಹೀಗಾಗಿ ಉನ್ನತ ಶಿಕ್ಷಣದ ಪರಿಕಲ್ಪನೆಯೇ ಸಮಗ್ರವಾಗಿ ಬದಲಾಗುವ ಅವಶ್ಯಕತೆ ಇದೆ. ಕೇವಲ ಕಾಲೇಜುಗಳನ್ನು ಪ್ರಾರಂಭಿಸುವುದು ವಿಶ್ವವಿದ್ಯಾಲಯಗಳನ್ನು ಸೃಷ್ಠಿಸುವುದಕ್ಕೆ ಸೀಮಿತಗೊಳ್ಳದೆ – ಪದವೀಧರ ನಿರುದ್ಯೊಗಿಗಳನ್ನು ಸೃಷ್ಠಿಸುವ ಕಾರ್ಖಾನೆಗಳನ್ನು ತೆರೆಯದೆ – ಸ್ವಂತ ಉದ್ಯೋಗ ಮಾಡಬಲ್ಲ – ಅದಕ್ಕೆ ಭರವಸೆ ಮೂಡಿಸಬಲ್ಲ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದರೆ ಅನುಕೂಲ. ಮೂರು ಅಥವಾ ಐದು ವರ್ಷಗಳಷ್ಟು ಕಾಲ ತಮ್ಮ ಜೀವಿತದ ಅತ್ಯಮೂಲ್ಯ ಕಾಲವನ್ನು – ಶ್ರಮವನ್ನು ವ್ಯಯಿಸುವವರಿಗೆ – ಉದ್ಯೋಗದ ಭರವಸೆಯೇ ಇರದಿದ್ದರೆ ಅವರ ಆಯಸ್ಸು ಮತ್ತು ಶ್ರಮವನ್ನು ಅನವಶ್ಯಕವಾಗಿ ಹಾಳುಗೆಡವಿದ ಕೀರ್ತಿ ಮಾತ್ರ ಕಾಲೇಜುಗಳಿಗೆ ಲಭ್ಯವಾಗಬಹುದು.
ಉಳಿದ ದೇಶಗಳ ಶಿಕ್ಷಣ ವ್ಯವಸ್ಥೆಯನ್ನು ನೋಡುವುದರಲ್ಲಿ ಮತ್ತು ಅಭ್ಯಸಿಸುವುದರಲ್ಲಾಗಲಿ ತಪ್ಪಿಲ್ಲ. ಅಲ್ಲಿನ ಬಹುತೇಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಉನ್ನತ ಶಿಕ್ಷಣ ದೊರಕುತ್ತಿದೆ. ಆದರೆ ಇಲ್ಲಿನ ವಿದ್ಯಾರ್ಥಿಗಳು ಅದರಿಂದ ವಂಚಿತರಾಗುತ್ತಿದ್ದಾರೆ. ಅವರಿಗೂ ಉನ್ನತ ಶಿಕ್ಷಣ ಲಭ್ಯವಾಗಬೇಕು ಎಂಬ ಆದರ್ಶದಲ್ಲಿ ಯಾವುದೇ ತಪ್ಪಿಲ್ಲ. ಆದರೆ ಉಳಿದ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕೇವಲ ನಿರುದ್ಯೋಗಿಗಳಾಗಿಯೇ ದಿನ ದೂಡುತ್ತಿದ್ದಾರೆಯೇ? ಅವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನ ಮಾನಗಳು ಲಭಿಸಿವೆಯೇ? ಎಂದು ನೋಡಬೇಕಾಗುತ್ತದೆ. ಅಲ್ಲಿ ಉನ್ನತ ಶಿಕ್ಷಣ ಪಡೆದವರೆಲ್ಲ ಒಂದೋ ನೌಕರಿಯಲ್ಲಿ ಅಥವಾ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತೆಂದಾದರೆ ಇಲ್ಲೂ ಅದಾಗಬೇಕು. ಅಂತಹ ಶಿಕ್ಷಣ ಲಭ್ಯವಾಗಬೇಕು. ಉನ್ನತ ಶಿಕ್ಷಣ ಪಡೆದವರಾರೂ ಅಲೆಮಾರಿಗಳಂತಾಗಬಾರದು. ಇಲ್ಲಿ ಇಲ್ಲಿನವರೆಗೆ ಉನ್ನತ ಶಿಕ್ಷಣದ ಹೆಸರಿನಲ್ಲಿ ಪಡೆದ ಪದವಿಗಳನ್ನು ಹಿಡಿದುಕೊಂಡು ಒದ್ದಾಡುತ್ತಿರುವ ಯುವ ಸಮುದಾಯವನ್ನು ನೋಡಿದರೆ – ಇದನ್ನು ಇನ್ನಷ್ಟು ಅಧಿಕಗೊಳಿಸಲು ನಾವು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆಯೇ ವಿನಃ ಬೇರೇನೂ ಅಲ್ಲ. ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಏರಬಹುದು ಹೀಗೆ ಸಂಖ್ಯೆ ಏರಿದ್ದನ್ನು ತೋರಿಸಿ ಸರಕಾರ ಹೆಮ್ಮೆ ಪಡಬಹುದು. ಆದರೆ ಇದರಿಂದಾದ ಪ್ರಯೋಜನವನ್ನು ಕೂಡ ನೋಡಬೇಕಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಇದು ಇದ್ದ ಮಕ್ಕಳಿಗೆ ಹೊಟ್ಟೆಗಿಲ್ಲ. ಇನ್ನೂ ಕೊಡೋ ಸದಾಶಿವ ಎಂಬಂತಿದೆ.
ಉನ್ನತ ಶಿಕ್ಷಣವನ್ನು ಎಲ್ಲಡೆ – ಎಲ್ಲರ ಕೈಗೆಟಕುವಂತೆ ಮಾಡುವ ಮೊದಲು – ಅವುಗಳಿಗೆ ವಿದ್ಯಾರ್ಥಿಗಳು ವ್ಯಯಿಸುವ ವಯಸ್ಸು ಮತ್ತು ಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಯೌವನದ ಕಸವು ವ್ಯರ್ಥವಾಗದಂತೆ ಶಿಕ್ಷಣ ನೀಡುವುದು ಒಳ್ಳೆಯದು ಅದನ್ನು ಬೇಕಾದರೆ ಉನ್ನತ ಶಿಕ್ಷಣ ಅಥವಾ ಇನ್ನಾವುದೇ ರೀತಿಯ ಶಿಕ್ಷಣವೆಂದು ಕರೆದರೂ ಸರಿ ಆ ಮೂರು ಅಥವಾ ಐದು ವರ್ಷಗಳ ಓದು ಅವರ ಬದುಕಿನ ತರಬೇತಿಯ ಅವಧಿಯಂತಿದ್ದರೆ ಅನುಕೂಲ ಅದು ಬಿಟ್ಟು ಮಾಮೂಲಿ ಪದವಿ ಮತ್ತು ಸ್ನಾತಕೋತ್ತರ ಕೇಂದ್ರಗಳನ್ನು ತೆರೆದು ಅವರನ್ನು ಕೇವಲ ಗಿಳಿಪಾಠ ಒಪ್ಪಿಸುವ ಯಂತ್ರಗಳಂತೆ ತಯಾರು ಮಾಡಿದರೆ ಏನು ಪ್ರಯೋಜನ? ಪ್ರಯೋಜನಕ್ಕೆ ಬಾರದ – ವ್ಯರ್ಥವಾಗಿ ಸಮಯವನ್ನು ವ್ಯಯಿಸುವ ಪದ್ಧತಿ ರದ್ದಾಗುತ್ತಲೇ ಆ ಜಾಗೆಯಲ್ಲಿ ಹೊಸ ಹೊಸ ಪದ್ಧತಿಗಳು ಪ್ರತಿಷ್ಠಾಪನೆಗೊಳ್ಳುತ್ತಾ ಸಾಗಿದರೆ ಭsವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯವಾಗಬಹುದು. ಕೇವಲ ಪುಸ್ತಕದ ಬದನೆಗಳನ್ನು ನೀಡಿದರೆ ಊಟಕ್ಕೆ ಬರುವುದಿಲ್ಲ.!
ಇಂದು ದೊರೆಯುತ್ತಿರುವ ಸಾಮಾನ್ಯ ಪದವಿಗಳಲ್ಲಿ ಸತ್ವ ಎಷ್ಟಿದೆ ಎಂದು ಯೋಚಿಸಬೇಕು ಪ್ರಾಮಾಣಿಕವಾಗಿ ಅದನ್ನು ವಿಮರ್ಶಿಸಬೇಕು. ಅದನ್ನು ಮಾಡದೆ ಒಂದಿಷ್ಟು ಕಾಲೇಜುಗಳನ್ನು ಹುಟ್ಟುಹಾಕಿದರೆ – ಅವು ಒಂದಿಷ್ಟು ಪದವಿಗಳನ್ನು ನೀಡಿದರೆ ಸರಕಾರದ ಬೊಕ್ಕಸ ಖಾಲಿಯಾಗಬಹುದೇ ವಿನಃ ಪ್ರಯೋಜನವಂತೂ ಖಂಡಿತ ಸಾಧ್ಯವಿಲ್ಲ. ಹಾಗಂತ ಪದವಿ ಕಾಲೇಜುಗಳಲ್ಲಾಗಲಿ – ಪದವಿಗಳಲ್ಲಾಗಲಿ ಬೇಡವೇ ಬೇಡವೆಂದು ಇದರ ಅರ್ಥವಲ್ಲ – ಒಟ್ಟಾರೆ ಉದ್ಯೋಗಕ್ಕೆ ಎಷ್ಟೂ ಬೇಕೋ ಅಷ್ಟು ಉತ್ಪನ್ನಗಳಾದರೆ ಸಾಕು. ದೇಶದಲ್ಲಿ ಲಭ್ಯವಿರುವ ನೌಕÀರಿಗೆ ಅನುಗುಣವಾಗಿ ಶಿಕ್ಷಣ ನೀಡಲು ಪ್ರಾರಂಭಿಸಿದರೆ, ಅವುಗಳ ಪ್ರವೇಶಕ್ಕೆ ಖಂಡಿತವಾಗಿ ವಿದ್ಯಾರ್ಥಿಗಳು ಶ್ರಮವಹಿಸಿ ಕಲಿತು, ಪ್ರಯತ್ನಿಸುತ್ತಾರೆ. ಹಾಗಲ್ಲದೆ ರಾಶ್ಯುತ್ಪನ್ನವಾಗಿ ಬೇಡಿಕೆ ಇರದಿದ್ದರೆ, ಆ ಉತ್ಪನ್ನ ಅಲ್ಲೇ ಕೊಳೆಯಲು ಪ್ರಾರಂಭಿಸುತ್ತದೆ. ಹಾಗಾಗಿ ಉನ್ನತ ಶಿಕ್ಷಣವೆಂಬುದು ಬೇಡಿಕೆಯಿಂದ ರಾಶ್ಯುತ್ಪನ್ನದ ಕಾರ್ಖಾನೆಗಳ ಸೃಷ್ಟಿಯಾಗದಿರಲೆಂಬುದೇ ನಮ್ಮ ಕಾಳಜಿಯಾಗಿರಬೇಕು. ವಿಶಾಲವಾದ ಪ್ರಪಂಚದಲ್ಲಿ ಲಭ್ಯವಿರುವ ಅನೇಕಾನೇಕ ಅವಕಾಶಗಳಿಗೆ ಅನುಗುಣವಾಗುವಂತಹ ಶಿಕ್ಷಣ ಪಡೆಯಲು ಹಾತೊರೆಯಬಹುದು. ಹಾಗಲ್ಲದಿದ್ದಲ್ಲಿ ಅದೇ ಅಸಡ್ಡೆಯಿಂದ ಪಾಲ್ಗೊಳ್ಳುತ್ತ, ಪದವಿ ಪಡೆಯಲೂ ಅಡ್ಡಮಾರ್ಗಗಳನ್ನು ಹುಡುಕುತ್ತ, ಅಂಡತೀವ ಪ್ರವೃತ್ತಿಗೆ ವ್ಯವಸ್ಥೆಯೇ ಹೇತುವಾಗಬಲ್ಲದು.
ಹಾಗಲ್ಲದೆ ಇದ್ದವುಗಳನ್ನೇ ಇನ್ನಷ್ಟು, ಮತ್ತಷ್ಟು ಹೆಚ್ಚಿಸುತ್ತ ಹೋಗುವುದೆಂದರೆ ಉಪಯೋಗಕ್ಕೆ ಬಾರದ ಬಿಳಿಯಾನೆಗಳನ್ನು ಹೆಚ್ಚು, ಹೆಚ್ಚು ಸಾಕಿದಂತೆ ಹೊಟ್ಟೆಗೆ ಹಿಟ್ಟಿರದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿದು ಜಂಬಪಡುತ್ತಾ ದಿಕ್ಕು, ದೆಸೆಯಿಲ್ಲದೆ ಸಾಗುವಂತೆಯೇ ಸರಿ.
ರವೀಂದ್ರ ಭಟ್ ಕುಳಿಬೀಡು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!