20.1 C
Sidlaghatta
Tuesday, December 5, 2023

ಬಾನಲ್ಲಿ ತಾರಾಗ್ರಹ ಗಣತಿ

- Advertisement -
- Advertisement -

ಅತ್ತ ದೂರದ ಬಾಹ್ಯ ಆಕಾಶದಲ್ಲಿಯೂ ಗಣತಿ ಕಾರ್ಯ ನಡೆದಿದೆ. ಭರತಭೂಮಿ ಅಖಂಡ ಭೂಗ್ರಹದ ಜನ ನಿಬಿಡವಾದ ಒಂದು ತುಣುಕಾದರೆ ಅತ್ತ ಗಗನದಲ್ಲೂ ನಮ್ಮ ಗೆಲಾಕ್ಸಿಯಾದ ಕ್ಷೀರಪಥದ ಒಂದು ತುಣುಕು ಪ್ರದೇಶದಲ್ಲಿ ಕಾಣಸಿಗುವ ತಾರೆ ಮತ್ತು ಅವುಗಳನ್ನು ಸುತ್ತುತ್ತಿರುವ ಗ್ರಹಗಳ ದಟ್ಟಣೆಯನ್ನು ಎಣಿಕೆ ಮಾಡಲಾಗುತ್ತಿದೆ. ಇದಕ್ಕಾಗಿ 60 ಕೋಟಿ ಡಾಲರ್ ಅಥವಾ 3000 ಕೋಟಿ ರೂಪಾಯಿಗಳನ್ನು ಹೂಡಲಾಗಿದೆ. ‘ಕೆಪ್ಲರ್’ ಹೆಸರಿನ ದೂರದರ್ಶಕವೊಂದು ಕಳಿಸುತ್ತಿರುವ ಚಿತ್ರಗಳ ಆಧಾರದ ಮೇಲೆ ಈ ಅನ್ಯ ತಾರಾಗ್ರಹಗಳನ್ನು ಲೆಕ್ಕ ಮಾಡಲಾಗುತ್ತಿದೆ.
ವಿಜ್ಞಾನ ಮುಂದುವರೆದಂತೆ, ಬಾಹ್ಯಾಕಾಶದ ವಿವಿಧ ಭಾಗಗಳನ್ನು, ಅಲ್ಲಿ ಸೂಸುವ ವಿವಿಧ ರೀತಿಯ ಬೆಳಕುಗಳನ್ನು ಅಧ್ಯಯನ ನಡೆಸುವ ಉಪಕರಣಗಳ ನಿರ್ಮಾಣವಾದಂತೆ, ಅನ್ಯ ಅಂತರಿಕ್ಷ ಕಾಯಗಳಲ್ಲಿ ಜೀವಿಗಳ ಇರುವಿಕೆಯ ಹುಡುಕಾಟ ಇನ್ನೂ ಹೆಚ್ಚಿದೆ. ಜೀವಿಗಳಿರಬೇಕೆಂದರೆ ಅಲ್ಲಿ ನೀರಿರಬೇಕು, ನೀರಿರಬೇಕೆಂದರೆ ಭೂಮಿಯಂತಹ ವಾತಾವರಣ ಇರಬೇಕು, ಅಂದರೆ ಆ ಆಕಾಶಕಾಯ ಸೂರ್ಯನಂತೆ ಉರಿಯುವ ಬೆಂಕಿಯ ಚೆಂಡಾಗಿರಬಾರದು, ಅರ್ಥಾತ್, ಅದು ತಾರೆಯೊಂದನ್ನು ಸುತ್ತುವ ಗ್ರಹವಾಗಿರಬೇಕು. ಜೀವಿ ಸಹ್ಯ ಪರಿಸರ ಇರಬೇಕೆಂದರೆ ಅದು ತನ್ನ ಸೂರ್ಯನಿಂದ ಹೆಚ್ಚೂ ಕಡಿಮೆ ನಮ್ಮ ಭೂಮಿ ನಮ್ಮ ಸೂರ್ಯನಿಂದ ಇರುವಷ್ಟೇ ದೂರದಲ್ಲಿ ಇರಬೇಕು.
ಅಂಥಹ ವಲಯವನ್ನು, ಅಂದರೆ ಸುಮಾರು ನಮ್ಮ ಭೂಮಿ, ಸೂರ್ಯರ ನಡುವಿನ ಅಂತರದ ಆಸುಪಾಸಿನಷ್ಟಿರುವ ಪ್ರದೇಶವನ್ನು ‘ವಾಸಯೋಗ್ಯ ವಲಯ’ ಎಂದು ಹೆಸರಿಸಬಹುದು.
ಭೂಮಿಯ ಹೊರಗಣ ಅನಂತ ಆಕಾಶದಲ್ಲಿ ಅಂತಹ ಗ್ರಹಗಳ ಪತ್ತೆ ಸುಲಭವೇ? ಖಂಡಿತಾ ಇಲ್ಲ. ಬ್ರಹ್ಮಾಂಡದಲ್ಲಿ ಸೂರ್ಯನಂತಹ ಕೋಟಿ ಕೋಟಿ ನಕ್ಷತ್ರಗಳಿವೆ. ಕಗ್ಗತ್ತಲ ರಾತ್ರಿಯಲ್ಲಿ ಆಗಸಕ್ಕೆ ಮುಖ ಮಾಡಿದರೆ ಎಣಿಸಲಸಾಧ್ಯವಾದಷ್ಟು ಚುಕ್ಕೆಗಳು ಕಾಣುತ್ತವೆ. ಇದಕ್ಕೆಂದೇ ವಿಜ್ಞಾನಿಗಳು ಉಪಾಯ ಹೂಡಿದರು. ಆಕಾಶದ ನಿರ್ದಿಷ್ಟವಾದ ಒಂದು ತುಣುಕನ್ನು ಅಧ್ಯಯನ ನಡೆಸಬೇಕು, ಅಲ್ಲಿರುವ ಸೂರ್ಯರನ್ನು ಮೊದಲು ಗುರುತಿಸಿ, ಅವಕ್ಕಿರುವ ಗ್ರಹಗಳ ಪತ್ತೆ ಹಚ್ಚಬೇಕು, ಪ್ರತಿ ನಕ್ಷತ್ರದ ಪ್ರತಿಯೊಂದು ಗ್ರಹದ ಪಥವನ್ನೂ, ತನ್ನ ಮಾತೃತಾರೆಯಿಂದ ಅದಿರುವ ದೂರವನ್ನೂ ಲೆಕ್ಕಹಾಕಬೇಕು. ಆಗ ಭೂಮಿಯಂತೆ ಇದ್ದಿರಬಹುದಾದ ಗ್ರಹಗಳ ಅಜಮಾಸು ಲೆಕ್ಕ ದೊರೆಯುತ್ತದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪಿತಗೊಂಡ ವೇದಶಾಲೆ ಕೆಪ್ಲರ್. ಜರ್ಮನ್ ಖಗೋಳ ವಿಜ್ಞಾನಿ ಜೋಹಾನ್ನೆಸ್ ಕೆಪ್ಲರ್ ಅವರ ಹೆಸರಿನ ಈ ವೇದಶಾಲೆ ನಾಸಾದ ಹೊಸ ಭೂಮಿಯ ಅನ್ವೇಷಣೆಯ ಗುರಿ ಹೊತ್ತ ‘ಡಿಸ್ಕವರಿ ಯೋಜನೆ’ಯಡಿ 2009ರ ಮಾರ್ಚ್ 7ರಂದು ಉಡ್ಡಯನಗೊಂಡಿತು. ಇದೊಂದು ದೂರದರ್ಶಕವೊಂದನ್ನು ಹೊತ್ತು ಹಾರುತ್ತಿರುವ, ಸೂರ್ಯಕೇಂದ್ರಿತ ಅಂದರೆ, ಸೂರ್ಯನನ್ನು ಸುತ್ತುಹಾಕುತ್ತಿರುವ ಹಾಗೂ ನಮ್ಮ ಚಂದ್ರನಿಗಿಂತ ಹೆಚ್ಚು ದೂರದಲ್ಲಿರುವ ಅಂತರಿಕ್ಷ ನೌಕೆ. ಕೆಪ್ಲರ್ ವೇದಶಾಲೆಯ ಹಾರಾಟಕ್ಕೆಂದು ತಂತ್ರಜ್ಞರು ವಿಶೇಷವಾದ ಕಕ್ಷೆಯನ್ನು ನಿಗದಿಪಡಿಸಿದ್ದಾರೆ. ಭೂಮಿಯ ಆಚೆ (ಕಾಣುವುದಕ್ಕೆ ಭೂಮಿಯ ಬಾಲದ ಹಾಗೆ) ಸೂರ್ಯನನ್ನು ಸುತ್ತು ಹಾಕುವ ಈ ಕಕ್ಷೆಯಲ್ಲಿ ಕೆಪ್ಲರನ ದರ್ಶಕದ ನೋಟಕ್ಕೆ ಭೂಮಿಯಾಗಲೀ, ಇತರ ಆಕಾಶಕಾಯಗಳಾಗಲೀ ಅಡ್ಡಬಾರವು.
ನಮ್ಮ ಗೆಲಾಕ್ಸಿ ಕ್ಷೀರಪಥದ ಸುಮಾರು ಒಂದೂವರೆ ಲಕ್ಷ ನಕ್ಷತ್ರಗಳನ್ನು ದಿಟ್ಟಿಸಿ ನೋಡುವ ಕೆಪ್ಲರ್ ಎರಡು ತಿಂಗಳ ನಂತರ ನಿಗದಿತ ಸೂರ್ಯಕೇಂದ್ರಿತ ಕಕ್ಷೆಯಲ್ಲಿ ತಿರುಗುತ್ತ ನಕ್ಷತ್ರ ಮತ್ತು ಗ್ರಹಗಳ ಗಣತಿಯನ್ನು ಪ್ರಾರಂಭಿಸಿತು. ಮೊದಲು ನಕ್ಷತ್ರಗಳ ಗುರುತಿಸುವಿಕೆ, ನಂತರ ಅವುಗಳನ್ನು ಸುತ್ತುವ ಗ್ರಹಗಳಿವೆಯೇ ಎಂಬ ಹುಡುಕಾಟ. ಆಕಾಶಕ್ಕೆ ಜಿಗಿದ ಕೆಲವೇ ತಿಂಗಳುಗಳಲ್ಲಿ ಕೆಪ್ಲರ್ ನಿಂದ ಚಿತ್ರಗಳ ರವಾನೆ ಪ್ರಾರಂಭಗೊಂಡಿತು.
ಮಿಲ್ಕೀವೇ ಗೆಲಾಕ್ಸಿಯ ಒಂದು ನಿರ್ದಿಷ್ಟ ಸ್ಥಳವನ್ನು ನಿಟ್ಟಿಸಿ ನೋಡುತ್ತ ಅಲ್ಲಿಂದ ಹೊರಸೂಸಿದ ಬೆಳಕಿನ ಕಿರಣಗಳು, ಅವುಗಳಲ್ಲಾದ ವ್ಯತ್ಯಾಸ ಇವೆಲ್ಲವನ್ನೂ ಸತತವಾಗಿ ದಾಖಲಿಸುವಂತೆ ರಚಿಸಲಾದ ಕೆಪ್ಲರ್‍ನ ಪ್ರಮುಖ ಭಾಗವೆಂದರೆ ಬೆಳಕಿನ ಪ್ರಖರತೆಯನ್ನು ಅಳೆಯುವ ಉಪಕರಣ ಫೋಟೋಮೀಟರ್. ಈ ಉಪಕರಣದಲ್ಲಿ ಬಳಸಲಾದ ಕ್ಯಾಮೆರಾ ಈವರೆಗೆ ಗಗನವೀಕ್ಷಣೆಗೆ ಬಳಸಲಾದ ಯಾವುದೇ ಕ್ಯಾಮೆರಾಕ್ಕಿಂತ ಅತಿ ದೊಡ್ಡದು. ಆಕಾಶದಲ್ಲಿ ಹಾರಾಡುತ್ತಲೇ ಒಂದೇ ಕಡೆ ನಿಟ್ಟಿಸಿ ನೋಡುತ್ತ ಸ್ತಬ್ಧವಾಗಿರುವ ಈ ಕ್ಯಾಮೆರಾ ಚಕ್ಷುವಿನ ದೃಷ್ಟಿ ವಲಯವೂ ಅತಿದೊಡ್ಡದು, ಏಕೆಂದರೆ ಒಂದೂವರೆ ಲಕ್ಷದಷ್ಟು ನಕ್ಷತ್ರಗಳನ್ನು ಇದು ಸದಾಕಾಲ ನೋಡುತ್ತಲೇ ಇರಬೇಕು.
ಲಕ್ಷಾಂತರ ಮೈಲುಗಳಾಚೆ ಇರುವ ನಕ್ಷತ್ರಗಳನ್ನೇನೋ ಅವು ಹೊರಹಾಕುವ ಪ್ರಖರ ಬೆಳಕನ್ನು ಅಳೆದು ಪತ್ತೆಹಚ್ಚಬಹುದು, ಆದರೆ ಅವುಗಳ ಸುತ್ತ ಪ್ರದಕ್ಷಿಣೆ ಹೊಡೆಯುವ ಗ್ರಹಗಳ ಪತ್ತೆ ಹಚ್ಚುವುದು ಹೇಗೆ? ಕಾರಿನ ಹೆಡ್‍ಲೈಟ್ ಮುಂದೆ ನೊಣವೊಂದು ಅಡ್ಡಹಾಯ್ದರೆ ಹೆಡ್‍ಲೈಟು ಸೂಸುತ್ತಿರುವ ಬೆಳಕಿನ ಪ್ರಮಾಣದಲ್ಲಿ ಅಲ್ಪ ಬದಲಾವಣೆ ಆಗಿಯೇ ಆಗುತ್ತದೆ. ದೂರದಲ್ಲಿ ನಿಂತು ನೋಡುತ್ತಿರುವ ಸಾಮಾನ್ಯ ಕಣ್ಣಿಗೆ ಅದು ಕಾಣುವುದಿಲ್ಲ, ಆದರೆ ಸೂಕ್ಷ್ಮವಾದ ಬೆಳಕಿನ ಉಪಕರಣಗಳು ಇಂಥಹ ಬದಲಾವಣೆಗಳನ್ನು ಗುರುತಿಸುತ್ತವೆ. ಉದಾಹರಣೆಗೆ, ಭೂಮಿ ಮತ್ತು ಸೂರ್ಯನ ನಡುವೆ ಶುಕ್ರಗ್ರಹ ಹಾದು ಹೋದಾಗ ಭೂಮಿಯಿಂದ ಪರೀಕ್ಷಿಸುವ ದೂರದರ್ಶಕದ ಕಣ್ಣಿಗೆ ಸೂರ್ಯನ ಪ್ರಕಾಶದಲ್ಲಾದ ಕ್ಷಣಿಕ ಬದಲಾವಣೆಯೂ ಎದ್ದು ತೋರುತ್ತದೆ.
ಇದೇ ತತ್ವವನ್ನು ಅನ್ಯತಾರೆಗಳನ್ನು ಸುತ್ತುತ್ತಿರುವ ಗ್ರಹಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ. ನಕ್ಷತ್ರವು ಹೊರಹಾಕುವ ಬೆಳಕಿನ ಪ್ರಮಾಣದಲ್ಲಾದ ವ್ಯತ್ಯಾಸವನ್ನು ಬಳಸಿ ಆ ದುಂಡನೆಯ ಗ್ರಹದ ವ್ಯಾಸವನ್ನು ಲೆಕ್ಕಹಾಕಲಾಗುತ್ತದೆ. ಅದೇ ಗ್ರಹ ಮತ್ತೊಮ್ಮೆ ತನ್ನ ಸೂರ್ಯನೆದುರು ಹಾದುಹೋದಾಗ ಒಂದು ಸುತ್ತು ಸುತ್ತಲು ಅದು ತೆಗೆದುಕೊಳ್ಳುವ ಕಾಲಾವಧಿ ಅಥವಾ ಪರಿಭ್ರಮಣಾ ಅವಧಿಯನ್ನು ಲೆಕ್ಕಮಾಡಬಹುದು. ತಾರೆಯೊಂದರ ಗ್ರಹವೆಂದು ಖಾತರಿಯಾಗಲು ಅದು ತಾರೆಯ ಸುತ್ತ ತಿರುಗುತ್ತಿರುವುದನ್ನು ಕನಿಷ್ಟ ಪಕ್ಷ ಮೂರು ಬಾರಿಯಾದರೂ ಕ್ಯಾಮೆರಾ ಕಣ್ಣು ಪತ್ತೆ ಹಚ್ಚಬೇಕು. 2010 ಜನೆವರಿಯಲ್ಲಿ ಕೆಪ್ಲರ್ ದೂರದರ್ಶಕ ಮೊಟ್ಟ ಮೊದಲ ಅನ್ಯ ತಾರಾಗ್ರಹವೊಂದನ್ನು ಪತ್ತೆಹಚ್ಚಿತು. ಮೊದಲ 43 ದಿನಗಳ ಅವಧಿಯಲ್ಲಿ ಇನ್ನೂ 4 ಗ್ರಹಗಳನ್ನು ಜಗತ್ತಿಗೆ ಪರಿಚಯಿಸಿತು. ಆ ಗ್ರಹಗಳು ಸುತ್ತುತ್ತಿರುವ ತಾರೆಗಳು ನಮ್ಮ ಸೂರ್ಯನಿಗಿಂತ ಅನೇಕ ಪಟ್ಟು ದೊಡ್ಡ ಗಾತ್ರದವು ಹಾಗೂ ಬಿಸಿಯಾಗಿವೆ ಹಾಗೂ ಆ ಗ್ರಹಗಳೂ ಕೂಡ 2200-3000 ಡಿಗ್ರಿ ಫ್ಯಾರನ್‍ಹೀಟ್‍ನಷ್ಟು ಬಿಸಿ ಚೆಂಡುಗಳು ಎಂಬ ವಿಷಯಗಳು ಬಹಿರಂಗಗೊಂಡವು.
ನೂರಾರು ತಾರೆಗಳನ್ನೂ ಕೆಪ್ಲರ್ ಗುರುತಿಸಿದೆ. ಅವುಗಳಲ್ಲಿ ಗ್ರಹಮಂಡಲಗಳನ್ನು ಹೊಂದಿವೆಯೆಂದು ಕೆಪ್ಲರ್ ದೂರದರ್ಶಕ ಖಚಿತಪಡಿಸಿದ ತಾರೆಗಳಲ್ಲಿ ಹನ್ನೊಂದನೆಯದು ಕೆಪ್ಲರ್-11. 2010 ರ ಅಗಸ್ಟ್ 26 ರಂದು ಕೆಪ್ಲರ್ ಹೊಸತೊಂದು ಮಾಹಿತಿಯನ್ನು ಕಳಿಸಿತ್ತು. ಅದರ ದೃಷ್ಟಿವಲಯದೆದುರು ತಾರೆ ಕೆಪ್ಲರ್-11 ರ ಮೂರು ಗ್ರಹಗಳು ಒಮ್ಮೆಗೇ ಹಾದುಹೋದವು. ಕೆಪ್ಲರ್-11 ಭೂಮಿಯಿಂದ 2 ಸಾವಿರ ಜ್ಯೋತಿರ್ವರ್ಷ ದೂರವಿರುವ ಹೊಳೆಯುವ, ಸೂರ್ಯನಂತೆಯೇ ಇರುವ ತಾರೆ. ಬರಿಗಣ್ಣಿಗೆ ಇದು ಕಾಣದು. ಇತ್ತೀಚೆಗೆ ತಾನೇ ಅನಿಲಗಳು ಮತ್ತು ಕಲ್ಲು ಬಂಡೆಗಳಿಂದ ಕೂಡಿದ ಮೂರು ಗ್ರಹಗಳನ್ನು ಕೆಪ್ಲರ್ ಪತ್ತೆಹಚ್ಚಿತ್ತು. ಈಗ ಮತ್ತೂ ಮೂರು ಗ್ರಹಗಳು ಸೇರಿಕೊಂಡು ಅತ್ಯಂತ ನಿಬಿಡವಾಗಿ, ಅಚ್ಚುಕಟ್ಟಾಗಿರುವÀ, ಪುಟ್ಟದಾದ ಹಾಗೂ ಚಪ್ಪಟೆಯಾಗಿರುವ (ಅಂದರೆ, ಆರೂ ಗ್ರಹಗಳು ಒಂದೇ ಸಮತಲದಲ್ಲಿವೆ) ಗ್ರಹಮಂಡಲವನ್ನು ಹೊಂದಿರುವ ತಾರೆ ಎಂದು ಕೆಪ್ಲರ್-11 ಹೆಸರು ಪಡೆಯಿತು. ಈ ಗ್ರಹಗಳನ್ನು ಕ್ರಮವಾಗಿ ಕೆಪ್ಲರ್-11ಬಿ, ಕೆಪ್ಲರ್-11ಸಿ, ಕೆಪ್ಲರ್-11ಡಿ, ಕೆಪ್ಲರ್-11ಇ, ಕೆಪ್ಲರ್-11ಎಫ್, ಕೆಪ್ಲರ್-11ಜಿ ಎಂದು ಹೆಸರಿಸಲಾಗಿದೆ. ಇವೆಲ್ಲವೂ ನಮ್ಮ ಸೌರಮಂಡಲಕ್ಕೆ ಹೋಲಿಸಿದರೆ ತಮ್ಮ ಸೂರ್ಯನ ಅತಿ ಸಮೀಪದಲ್ಲೇ ಗಿರಕಿ ಹೊಡೆಯುತ್ತಿರುವ, ಭೂಮಿಗಿಂತ ದೊಡ್ಡದಾದ ಬಿಸಿಗ್ರಹಗಳು. ಮೊದಲ ಐದು ಗ್ರಹಗಳು 10 ರಿಂದ 47 ದಿನಗಳ ಪ್ರದಕ್ಷಿಣಾ ಅವಧಿಗಳನ್ನು ಹೊಂದಿದರೆ, ಕೊನೆಯ ಅಂದರೆ ಆರನೆಯ ಗ್ರಹ ಕೆಪ್ಲರ್-11ಜಿ ಪ್ರತಿ 118 ದಿನಗಳಿಗೊಮ್ಮೆ ತನ್ನ ಸೂರ್ಯನ ಸುತ್ತ ತಿರುಗುತ್ತಿದೆ.
ತಂತ್ರಜ್ಞರ ವಿಶ್ಲೇಷಣೆಯ ಬಳಿಕ ತಾರಾ, ಗ್ರಹ ಗಣತಿಯ ಒಂದಿಷ್ಟು ಕುತೂಹಲಕಾರಿಯಾದ ಅಂಕಿಅಂಶಗಳು ದೊರೆತಿವೆ. ಅದರ ಪ್ರಕಾರ, 1235 ಗ್ರಹವಾಗಿರಬಹುದಾದ ಎಲ್ಲ ಲಕ್ಷಣಗಳುಳ್ಳ ಆಕಾಶಕಾಯಗಳು, 528 ಅನ್ಯತಾರಾಗ್ರಹಗಳು, 165 ಗುರುಗ್ರಹದಷ್ಟೇ ಮತ್ತು 19 ಅದಕ್ಕಿಂತ ದೊಡ್ಡವು, 54 ವಾಸಯೋಗ್ಯವಾಗಿರಬಹುದಾದ ಮತ್ತು 49 ಭೂಮಿಗಿಂತ ದೊಡ್ಡದಾದ ಗ್ರಹಗಳನ್ನು ಕೆಪ್ಲರ್ ಕಣ್ಣು ಕಂಡಿದೆ.
ಕೆಪ್ಲರ್ ಕಳಿಸಿದ ಮಾಹಿತಿಗಳನ್ನು ಆಧಾರವಾಗಿರಿಸಿಕೊಂಡು ಭೂಮಿಯ ಮೇಲಿರುವ ದೂರದರ್ಶಕ ಹಾಗೂ ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವ ಸ್ಪಿಟ್‍ಝಲರ್ ದೂರದರ್ಶಕದ ಮೂಲಕ ಹೆಚ್ಚು ವಿವರಗಳನ್ನು ಪಡೆಯಲಾಗುತ್ತದೆ. ಇದರಿಂದಾಗಿ ಕೆಪ್ಲರ್ ಕಳಿಸಿದ ಮಾಹಿತಿಯ ಖಚಿತತೆಯನ್ನೂ ಪಡೆದಂತಾಗುತ್ತದೆ.
ಆದರೆ ಈವರೆಗೆ ದೊರೆತ ಮಾಹಿತಿಗಳು ಭೂಮಿಯಂಥಹ ಇನ್ನೊಂದು ಜೀವಿಯೋಗ್ಯ ಸ್ಥಳ ಇದೆಯೇ ಎಂಬುದರ ಪತ್ತೆಗೆ ಏನೂ ಸಾಲದು. ಇನ್ನೂ ಬಹಳಷ್ಟು ಸಂಶೋಧನೆ ನಡೆಯಬೇಕು ಎನ್ನುತ್ತಾರೆ ವಿಜ್ಞಾನಿಗಳು. ಬಿಸಿಯಾದ ಜಲಜನಕ ಮತ್ತು ಹೀಲಿಯಂ ಹೊಂದಿರುವ ಕೆಪ್ಲರ್-11 ರ ಗ್ರಹಗಳು ವಾಸಯೋಗ್ಯವಲ್ಲ ಎಂದು ಪರಿಗಣಿಸಲ್ಪಟ್ಟಿವೆಯಾದರೂ ಗ್ರಹಗಳ ಹುಟ್ಟು ಹಾಗೂ ರಚನೆಯ ಬಗ್ಗೆ ಅಧ್ಯಯನಕ್ಕೆ ಯೋಗ್ಯವಾಗಿವೆಯೆಂಬುದರಲ್ಲಿ ಸಂದೇಹವಿಲ್ಲ.
ಈ ಮೊದಲೇ ಹೇಳಿದ ಹಾಗೆ ಬ್ರಹ್ಮಾಂಡದ ತುಣುಕು ಜಾಗಕ್ಕೆ ಇದೊಂದು ಇಣುಕು ನೋಟವಷ್ಟೆ. ರಾತ್ರಿಯಾಗಸದ ನಾನೂರರಲ್ಲಿ ಒಂದು ಭಾಗವಷ್ಟನ್ನೇ ಕೆಪ್ಲರ್ ಕಣ್ಣು ನೋಡುತ್ತಿದೆ. ಆದರೆ ರೋಚಕ ಕತೆಗಳಲ್ಲಿ ಮಾತ್ರವೇ ವರ್ಣಿಸಲ್ಪಡುತ್ತಿದ್ದ ಅನ್ಯಗ್ರಹಗಳ ಇರುವನ್ನು ಇಂದು ವಿಜ್ಞಾನ ಪತ್ತೆ ಹಚ್ಚಿದೆ, ಭವಿಷ್ಯದಲ್ಲಿ ವಾಸಯೋಗ್ಯ ಗ್ರಹಗಳ ಶೋಧವೂ ಸಾಧ್ಯವಿದೆಯೆಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಸರೋಜಾ ಪ್ರಕಾಶ

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!