23.1 C
Sidlaghatta
Monday, August 15, 2022

ಗರ್ಭಿಣಿ ಆರೈಕೆ ಭಾಗ – 2

- Advertisement -
- Advertisement -

ಗರ್ಭಿಣಿಯರಿಗೆ ನಿಷಿದ್ಧವಾದ ಆಹಾರ
1. ಒಣಗಿದ, ಹಳಸಿದ, ಕೆಟ್ಟ ಹಾಗು ಸೀದ ಆಹಾರ ಭಕ್ಷ್ಯಗಳನ್ನು ಗರ್ಭಿಣಿ ವರ್ಜಿಸಬೇಕು.
2. ತಂಬಾಕು, ಮಧ್ಯಪಾನ ಸೇವನೆ ಕೂಡದು.
3. ತುಂಬಾ ಖಾರ, ಸಿಹಿ, ಬಿಸಿಯಾದ ಆಹಾರ ಸೇವನೆ ನಿಷಿದ್ಧ.
4. ಗುರು ಅಥವಾ ಜೀರ್ಣಕ್ಕೆ ಕಷ್ಟಕರವಾದ ಆಹಾರ ಸೇವನೆಯನ್ನು ಮಾಡಬಾರದು.
ಗಭೀಣಿಯರಿಗೆ ನಿಷಿದ್ಧವಾದ ಜೀವನ ಶೈಲಿ
1. ಗರ್ಭಿಣಿಯರಿಗೆ ತೀಕ್ಷ್ಣವಾದ ಔಷಧಿಗಳು, ವ್ಯಾಯಾಮ, ಮೈಥುನ, ಅತಿಯಾಗಿ ಆಯಾಸ ಪಡುವುದು ಪ್ರಯಾಣ ಮಾಡುವುದು ಅಹಿತಕರ.
2. ಅತಿಯಾದ ಆಹಾರ ಸೇವನೆ ಹಾಗೂ ಅತಿ ಕಡಿಮೆ ಆಹಾರ ಸೇವನೆ ಕೂಡ ವಜ್ರ್ಯ. ಮಧ್ಯಾಹ್ನ ಮಲಗುವುದು, ರಾತ್ರಿ ಜಾಗರಣೆ ಮಾಡುವುದು, ದ್ವಿ ಚಕ್ರ ವಾಹನದಲ್ಲಿ ಪ್ರಯಾಣ ಮಾಡುವುದು ನಿಷಿದ್ಧ.
3. ಆಯುರ್ವೇದದಲ್ಲಿ ವಿವರಿಸಲಾದ ಪಂಚಕರ್ಮ ಚಿಕಿತ್ಸೆಗಳನ್ನು ಅನುಸರಿಸಬಾರದು.
4. ಮಲಿನ, ವಿಕೃತ, ಹೀನ ವಸ್ತುಗಳ ಸ್ಪರ್ಶನ ದುರ್ಗಂಧ, ದುರ್ದರ್ಶನ ಮಾಡಬಾರದು.
5. ಎತ್ತರದ ಪ್ರದೇಶದಲ್ಲಿ, ಸ್ಮಶಾನದಲ್ಲಿ ಓಡಾಡುವುದು, ಕತ್ತಲೆಯಿರುವ ಜಾಗಕ್ಕೆ ಒಂಟಿ ಪ್ರವೇಶ ಹಾಗೂ ಮನಸ್ಸಿಗೆ ಆಘಾತ ತರುವ ಪ್ರದೇಶಗಳ ವೀಕ್ಷಣೆ ಮಾಡಬಾರದು.
6. ಅಸಮತಲವಾದ ಹಾಸಿಗೆ, ಆಸನ ಹಾಗೂ ಕಠಿಣ ಆಸನಗಳ ಉಪಯೋಗ ನಿಷಿದ್ಧ.
7. ಯಾವಾಗಲೂ ಶೋಕದಿಂದ ಕೂಡಿರುವುದು, ಚಿಂತೆ, ಭಯ ಕೋಪ, ಉದ್ವೇಗ, ಕಿರುಚಾಟಗಳೂ ಕೂಡ ಸಲ್ಲದು.
ಗರ್ಭಿಣಿ ಅನುಸರಿಸಬೇಕಾದ ಕೆಲವು ವಿಹಾರ ಅಥವಾ ಜೀವನ ಶೈಲಿ
1. ಗರ್ಭಿಣಿ ಸ್ತ್ರೀ ನಿತ್ಯವೂ ಸ್ನಾನ ಮಾಡಿ, ಶುಭ್ರವಸ್ತ್ರ ಹಾಗೂ ಆಭರಣಗಳನ್ನು ಧರಿಸಿ ಪೂಜಾ ಕಾರ್ಯಗಳನ್ನು ಮಾಡಬೇಕು.
2. ಸ್ತೋತ್ರ ಪಠಣ, ಧರ್ಮಗ್ರಂಥಗಳ ಪಠಣ, ವೀರರ ಶೂರರ ಕಥೆಗಳನ್ನು ಕೇಳುವುದು, ಓದುವುದು, ಭಕಿಗೀತೆಗಳನ್ನು, ಮಂತ್ರಗಳನ್ನು ಆಲಿಸುವುದು ಇತ್ಯಾದಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು.
3. ಗರ್ಭಿಣಿಯು ಮೃದುವಾದ ಸ್ವಚ್ಛವಾದ, ಸಮತಟ್ಟಾದ ಹಾಸಿಗೆಯಲ್ಲಿ ಮಲಗುವುದು ಉತ್ತಮ.
4. ಅತಿಯಾಗಿ ಎಣ್ಣೆ ಹಚ್ಚಿ ಮೈಯನ್ನು ಉಜ್ಜಿ ಸ್ನಾನ ಮಾಡುವುದು ನಿಷಿದ್ಧ.
5. ನಿತ್ಯವೂ ಸಂತೋಷದಿಂದ ಧೈರ್ಯದಿಂದ ಇರಬೇಕು.
6. ಸ್ನಾನಕ್ಕೆ ಬಿಲ್ವ, ಗುಲಾಬಿ, ಬೇವು, ಹರಳೆಣ್ಣೆ ಗಿಡಗಳ ಎಲೆಗಳ ಕಷಾಯ ಮತ್ತು ಸುಗಂಧ ದ್ರವ್ಯಗಳನ್ನೊಳಗೊಂಡ ನೀರನ್ನು ಉಪಯೋಗಿಸಬೇಕು.
7. ರಾತ್ರಿ 7ರಿಂದ 8 ಘಂಟೆಗಳ ಕಾಲ ನಿದ್ರಿಸುವುದು ಹಿತಕರ.
8. ಸ್ತನದ ತೊಟ್ಟನ್ನು ಶುಚಿಯಾಗಿಟ್ಟುಕೊಳ್ಳಬೇಕು. ನಿತ್ಯವೂ ಸ್ನಾನ ಮಾಡುವಾಗ ಗರ್ಭಿಣಿ ಅದರಲ್ಲೂ ಚೊಚ್ಚಲ ಗರ್ಭದಲ್ಲಿ ಸ್ತನದ ತೊಟ್ಟಿಗೆ ಎಣ್ಣೆ ಹಚ್ಚಿ ತಿಕ್ಕಿ ಹೊರಗೆಳೆದುಕೊಳ್ಳುತ್ತಿರಬೇಕು.
ಗರ್ಭಿಣಿಯ ಸಾಮಾನ್ಯ ತೊಂದರೆಗಳು ಹಾಗೂ ಚಿಕಿತ್ಸೆ
1. ವಾಂತಿ: ಮೊದಲ 2 – 3 ತಿಂಗಳಲ್ಲಿ ವಾಂತಿ, ಸುಸ್ತು, ತಲೆ ಸುತ್ತು ವಿಶೇಷವಾಗಿ ಬೆಳಗಿನ ಹೊತ್ತು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.
ಚಿಕಿತ್ಸೆ: 1. ಆಗಾಗ ಸಿಹಿಯಾದ, ಶೀತವಾದ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಳ್ಳಬೇಕು.
2. ದಾಳಿಂಬೆ ಹಣ್ಣಿನ ರಸಕ್ಕೆ ಸಕ್ಕರೆ ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು.
3. ದೊಡ್ಡ ಏಲಕ್ಕಿ ಪುಡಿಯನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಆಗಾಗ ಸೇವಿಸಬೇಕು.
4. ಪ್ರತಿ ದಿನ ಬೆಳಗ್ಗೆ ಒಂದು ನೆಲ್ಲಿಕಾಯಿಯನ್ನು ತಿನ್ನಬೇಕು.
5. ಆಗಾಗ ಒಣ ದ್ರಾಕ್ಷಿಯನ್ನು ತಿನ್ನುತ್ತಿರಬೇಕು.
6. ನಿಂಬೆ ಹಣ್ಣನ್ನು ಕತ್ತರಿಸಿ 2 ಭಾಗ ಮಾಡಿಕೊಂಡು ಅದಕ್ಕೆ ಉಪ್ಪು ಅಥವಾ ಸಕ್ಕರೆಯನ್ನು ಸಿಂಪಡಿಸಿಕೊಂಡು ಚೀಪಬೇಕು,
2. ಹಸಿವೆ ಇಲ್ಲದಿರುವುದು
1. ಬಡೆಸೊಪ್ಪು (ಸೋಂಪು), ಕೊತ್ತುಂಬರಿ, ಜೀರಿಗೆ, ಕಾಲುಮೆಣಸು ಇವೆಲ್ಲವುಗಳನ್ನು ಪುಡಿ ಮಾಡಿ ಇಟ್ಟುಕೊಂಡು, ನೀರಿಗೆ ಬೆರೆಸಿ, ಕುದಿಸಿ ಸೋಸಿ, ಸಕ್ಕರೆಯೊಂದಿಗೆ ಸೇವಿಸಬೇಕು.
2. ಒಂದು ಸಣ್ಣ ತುಂಡು ಶುಂಠಿಯನ್ನು ನಿಂಬೆರಸದಲ್ಲಿ ಅದ್ದಿ, ಸ್ವಲ್ಪ ಉಪ್ಪು ಬೆರೆಸಿ ಚಪ್ಪರಿಸುತ್ತಿರಬೇಕು.
3. ಮಲಬದ್ಧತೆ
1. ತಾಜಾ ಹಸಿ ತರಕಾರಿಯ ಸೇವನೆ ಉತ್ತಮ.
2. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
3. ಸೀಬೆ ಹಣ್ಣು, ಬಾಳೆಹಣ್ಣುಗಳನ್ನು ಸೇವಿಸಬೇಕು.
4. ಒಣ ದ್ರಾಕ್ಷಿಯನ್ನು ಹಾಲಿನೊಂದಿಗೆ ಸೇರಿಸಿ ಕುದಿಸಿ ಆ ಹಾಲನ್ನು ದ್ರಾಕ್ಷಿಯೊಡನೆ ಸೇವಿಸಬೇಕು.
5. ಒಂದು ಲೋಟ ಬಿಸಿ ನೀರಿಗೆ ಉಪ್ಪು ಹಾಗೂ ಲಿಂಬೆರಸವನ್ನು ಬೆರೆಸಿ ಬಳಸುವುದರಿಂದ ವಾಯುವಿನ ಅನುಲೋಮನವಾಗುವುದು.
4. ಹೊಟ್ಟೆ ಉರಿ ಮತ್ತು ಹುಳಿ ತೇಗು
ಸಿಹಿ ಹಾಲು, ಎಳೆ ನೀರು, ಸೋರೆಕಾಯಿ ಸೂಪ್, ನೆಲ್ಲಿಕಾಯಿ ಪುಡಿಯೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬೇಕು. ಒಣದ್ರಾಕ್ಷಿ ಸೇವನೆ ಹಾಗೂ ಜೇಷ್ಠಮಧುವಿನ ಕ್ಷೀರ ಪಾಕ ಸೇವನೆ ಹಿತಕರ. (ಒಂದು ಚಮಚ ಜೇಷ್ಠಮಧು ಪುಡಿಯನ್ನು ಒಂದು ಲೋಟ ಹಾಲು ಹಾಗೂ ಒಂದು ಲೋಟ ನೀರಿನ ಮಿಶ್ರಣಕ್ಕೆ ಬೆರೆಸಿ ಕುದಿಸಿ ಒಂದು ಲೋಟ ಹಾಲಿನ ಪ್ರಮಾಣಕ್ಕೆ ಇಳಿಸಿ ಸೋಸಬೇಕು).
5. ಕೈ ಕಾಲುಗಳಲ್ಲಿ ಊತ
ಕೈ ಕಾಲುಗಳಲ್ಲಿ ಊತ ಅಲ್ಪ ಪ್ರಮಾಣದಲ್ಲಿದ್ದು, ಇನ್ನಿತರ ಪರೀಕ್ಷೆಗಳು ಸಾಮಾನ್ಯವಾಗಿದ್ದಲ್ಲಿ, ಮನೆ ಮದ್ದುಗಳ ಉಪಯೋಗ ಮಾಡಬಹುದು. ಇಲ್ಲದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.
ನೆಗ್ಗಿಲ ಮುಳ್ಳಿನ ಚೂರ್ಣ ಒಂದು ಚಮಚದಷ್ಟು ತೆಗೆದುಕೊಂಡು ಒಂದು ಲೋಟ ನೀರಿಗೆ ಸೇರಿಸಿ, ಕುದಿಸಿ ಸೋಸಿ ಕುಡಿಯುವುದು ಹಿತಕರ.
ಡಿ.ವಿ.ಜಿ. ಯವರು ತಮ್ಮ “ಮಂಕು ತಿಮ್ಮನ ಕಗ್ಗ” ದಲ್ಲಿ ಈ ರೀತಿ ಹೇಳಿದ್ದಾರೆ.
“ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು|
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ||
ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಲವಿಸೆ|
ಜಸವು ಜನ ಜೀವನಕೆ – ಮಂಕುತಿಮ್ಮ||
ಹಳೆಯ ಬೇರಿನ ಮರಕ್ಕೆ ಹೊಸ ಚಿಗುರು ಸೇರಿದರೆÀ ಮರವು ಸುಂದರವಾಗಿ ಕಾಣುವುದು. ಅದೇ ರೀತಿ ಹಳೆಯ ತತ್ವಕ್ಕೆ ಹೊಸ ಯುಕ್ತಿಯು ಸೇರಿದರೆÀ, ಅಲ್ಲದೆ ಪ್ರಾಚೀನ ಋಷಿಮುನಿಗಳು ರಚಿಸಿರುವ ವೇದ ಗ್ರಂಥಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜನರು ಆರೋಗ್ಯವಂತ, ಸತ್ವಯುತ ಜೀವನದ ಹಾದಿಯಲ್ಲಿ ಸಾಗಬಹುದು.
ಮುಗಿಯಿತು.
ಡಾ. ನಾಗಶ್ರೀ. ಕೆ.ಎಸ್.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here