ತುಳಸಿ ಗಿಡದ ಪರಿಚಯ ಯಾರಿಗಿರದಿರಲು ಸಾಧ್ಯ? ನಿತ್ಯವೂ ಪೂಜೆಗೆ ಬಳಸುವ ಸಾಮಗ್ರಿಗಳಲ್ಲಿ ತುಳಸಿಯೂ ಒಂದು. ಹಿಂದೂ ಧರ್ಮದವರು ಈ ಗಿಡವನ್ನು ಪವಿತ್ರವೆಂದು ಪೂಜಿಸುವರು. ಎಲ್ಲರ ಮನೆಯೆದುರು ತುಳಸಿ ಕಟ್ಟೆಯನ್ನೊಳಗೊಂಡ ತುಳಸಿ ಗಿಡ ಸರ್ವೇ ಸಾಮಾನ್ಯ. ಕಾರ್ತೀಕ ಮಾಸದ ಉತ್ಥಾನ ದ್ವಾದಶಿಯಂದು ತುಳಸಿ ಗಿಡವನ್ನು ವಿಷ್ಣುವಿನೊಂದಿಗೆ ವಿವಾಹ ನೆರವೇರಿಸಿ ಪೂಜಿಸುವುದು ಹಿಂದೂಗಳ ಸಂಪ್ರದಾಯ.
“ನಮಸ್ತುಲಸಿ ಕಲ್ಯಾಣೀ ನಮೋ ವಿಷ್ಣು ಪ್ರಿಯೆ ಶುಭೆ
ನಮೋ ಮೋಕ್ಷ ಪ್ರದೇ ದೇವಿ ನಮ: ಸಂಪತ್ ಪ್ರದಾಯಿಕೆ||
ಕಲ್ಯಾಣವನ್ನುಂಟು ಮಾಡುವ ತುಳಸಿಯೇ, ವಿಷ್ಣುವಿಗೆ ಪ್ರಿಯಳಾದವಳೇ, ಶುಭ ತರುವಳೇ ಮೋಕ್ಷ ನೀಡುವ ಹಾಗು ಸಂಪತ್ತು ನೀಡುವ ತುಳಸೀ ದೇವಿಯೇ ನಿನಗೆ ನಮನ.
ಈ ಮಂತ್ರದೊಂದಿಗೆ ತುಳಸಿ ಪೂಜೆಯು ನೆರವೇರುವುದು. ತುಳಸೀ ಗಿಡವು ವಾತಾವರಣದಲ್ಲಿರುವ ಗಾಳಿಯನ್ನು ಸ್ವಚ್ಛಗೊಳಿಸುವುದು, ಮನೆಯ ಸುತ್ತಲೂ 4 ರಿಂದ 5 ತುಳಸಿಯ ಸಸ್ಯಗಳನ್ನು ನೆಡುವುದರಿಂದ ಸರ್ಪ ಇತ್ಯಾದಿ ವಿಷಕಾರಕ ಜಂತುಗಳು, ಕ್ರಿಮಿಕೀಟಗಳು ಮನೆಯನ್ನು ಪ್ರವೇಶಿಸಲಾರವು.
ತುಳಸಿ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ocimum Sanctum. ಇದು Labiatae ಎನ್ನುವ ಸಸ್ಯಶಾಸ್ತ್ರೀಯ ಕುಟುಂಬ ವರ್ಗಕ್ಕೆ ಸೇರಿದ್ದು, ಇದನ್ನು ಆಂಗ್ಲ ಭಾಷೆಯಲ್ಲಿ Sacred Basil ಎಂದೂ ಕರೆಯುತ್ತಾರೆ.
ಸಂಸ್ಕøತದ ವಿವಿಧ ಹೆಸರುಗಳು
1. ತುಳಸಿ: ಇದು ಅಸಾಧಾರಣ ಶ್ರೇಷ್ಠ ಗುಣಗಳನ್ನೊಳಗೊಂಡಿರುವುದರಿಂದ ಇದನ್ನು ಬೇರೆ ಸಸ್ಯಗಳೊಂದಿಗೆ ಹೋಲಿಕೆ ಮಾಡಲಾಗದು.
2. ಸುರಸಾ: ಇದರ ರಸ ಅತ್ಯುತ್ತಮವಾದಂಥಹುದು.
3. ದೇವದುಂದುಭಿ: ಈ ಸಸ್ಯವು ದೇವತೆಗಳಿಗೆ ಪ್ರಿಯವಾದುದಾಗಿದೆ. ಆದ್ದರಿಂದ ಇದನ್ನು ದೇವದುಂದುಭಿ ಎಂದೂ ಕೂಡ ಕರೆಯುತ್ತಾರೆ.
4. ಅಪೇತರಾಕ್ಷಸಿ: ಇದರ ಸೇವನೆಯಿಂದ ರಾಕ್ಷಸ ಸದೃಶವಾದ ರೋಗಗಳು ದೂರವಾಗುತ್ತವೆ. ಅಥವಾ ಇದರ ಸೇವನೆಯಿಂದ ಪಾಪ ಸಮಾನವಾದ ರೋಗಗಳು ದೂರವಾಗುತ್ತವೆ.
ತುಳಸಿಯು ಅತ್ಯಂತ ಚಿಕ್ಕ ಸಸ್ಯವಾಗಿದ್ದು 1 ರಿಂದ 2 ಅಡಿಗಳಷ್ಟು ಎತ್ತರವಾಗಿ ಬೆಳೆಯುತ್ತದೆ. ಎಲೆಗಳು ಎದುರುಬದುರಾಗಿದ್ದು, ಕತ್ತರಿ ಕತ್ತರಿ ಅಂಚುಗಳನ್ನು ಹೊಂದಿರುತ್ತದೆ. ಇದರ ಎಲೆ ಹಾಗು ಬೀಜಗಳಲ್ಲಿ volatile oil ಇದ್ದು, ಇದು ವಾತಾವರಣದಲ್ಲರುವ ಕ್ರಿಮಿ ಕೀಟಗಳನ್ನು ನಾಶಪಡಿಸಿ, ಶುದ್ಧ ಹವೆಯನ್ನು ಒದಗಿಸುತ್ತದೆ.
ಉಪಯುಕ್ತ ಅಂಗ: ಎಲೆ ಮತ್ತು ಬೀಜ
ಗುಣ ವಿಸೇಷತೆ: ಇದು ಕಟು ಹಾಗೂ ಕಹಿ ರಸವನ್ನು ಹೊಂದಿದ್ದು ಉಷ್ಣ ವೀರ್ಯವನ್ನು ಒಳಗೊಂಡಿರುತ್ತದೆ. ವಾತ ಹಾಗೂ ಕಫ ದೋಷಗಳನ್ನು ಶಮನ ಮಾಡುವುದು. ಕೆಮ್ಮು, ಅಸ್ತಮಾ, ಪಕ್ಕೆಗಳ ಸೆಳೆತಗಳಲ್ಲಿ ಇದನ್ನು ಉಪಯೋಗಿಸಬಹುದು. ದುರ್ಗಂಧವನ್ನು ಹೋಗಲಾಡುಸುವುದು. ನಾಲಿಗೆ ರುಚಿಯನ್ನು ಹೆಚ್ಚಿಸುವುದು, ಜೀರ್ಣಶಕ್ತಿಯನನ್ನು ಹೆಚ್ಚು ಮಾಡುವುದು.
ರೋಗಗಳಲ್ಲಿ ಉಪಯೋಗಗಳು
1. ಕಫದಿಂದ ಕೂಡಿದ ಕೆಮ್ಮು ಇದ್ದಾಗ: ತುಳಸಿಯ ರಸದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಆಗಾಗ ಸೇವಿಸುತ್ತಿರುವುದು ಉತ್ತಮ.
2. ನೇತ್ರ ರೋಗಗಳಲ್ಲಿ: ತುಳಸಿಯ ರಸದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಕಣ್ಣಿಗೆ ಕಾಡಿಗೆಯ ರೀತಿಯಲ್ಲಿ ಬಳಸಬೇಕು.
3. ಕಿವಿ ಸೋರುತ್ತಿದ್ದರೆ ಅಥವಾ ಕಿವಿಯಿಂದ ದುರ್ಗಂಧ ಬರುತ್ತಿದ್ದಲ್ಲಿ: ತುಳಸಿ ರಸವನ್ನು ಕಿವಿಯಲ್ಲಿ ಹಾಕುವುದರಿಂದ ನಿವಾರಣೆಯಾಗುವುದು.
4. ಚರ್ಮ ರೋಗಗಳಲ್ಲಿ: ತುಳಸಿ ಗಿಡದ ರಸವನ್ನು ಪ್ರತಿ ದಿನ ಮುಂಜಾನೆ ಸೇವಿಸುವುದು ಉತ್ತಮ.
5. ಮೈಯಲ್ಲಿ ಪಿತ್ತದ ಗಂಧಗಳು ಏಳುತ್ತಿದ್ದಲ್ಲಿ ತುಳಸಿಯ ರಸದ ಲೇಪನ ಮಾಡುವುದು ಉತ್ತಮ.
6. ವಿಷಮ ಜ್ವರದಲ್ಲಿ: ತುಳಸಿಯ ರಸದೊಂದಿಗೆ ಕಾಳುಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಬೇಕು.
7. ಕಿವಿ ನೋವು: ಇರುವಾಗ ತುಳಸಿಯ ರಸದಿಂದ ಸಿದ್ಧಪಡಿಸಿದ ತೈಲವನ್ನು ಕಿವಿಯಲ್ಲಿ ಹಾಕುವುದರಿಂದ ನೋವು ನಿವಾರಣೆಯಾಗುವುದು.
8. ತುಂಬಾ ದಿನಗಳಿಂದ ನೆಗಡಿಯಿಂದ ಬಳಲುತ್ತಿರುವವರು ತುಳಸಿಯ ರಸದಿಂದ ಸಿದ್ಧಪಡಿಸಿದ ತೈಲವನ್ನು ಎರಡೆರಡು ಹನಿ ಮೂಗಿಗೆ ಹಾಕಿಕೊಳ್ಳುವುದು ಉತ್ತಮ.
ಡಾ. ನಾಗಶ್ರೀ.ಕೆ.ಎಸ್.
- Advertisement -
- Advertisement -
- Advertisement -
- Advertisement -