ಎಂ.ಎಸ್. ಸುಬ್ಬಲಕ್ಷ್ಮಿಯವರ ಸಂಗೀತವನ್ನು ಕೇಳಿದವರಿಗೆ ನಮಗೂ ಅಂತಹ ಕಂಠವಿದ್ದಿದ್ದರೆ! ಎಂದೆನಿಸುವುದು ಸಹಜ. ಕಿಶೋರ್ ಕುಮಾರ್ ರವರ ಗಾಯನವನ್ನಾಲಿಸಿದಾಗ ನಾನೂ ಅದೇ ರೀತಿ ಹಾಡುವಂತಿದ್ದಿದ್ದರೆ ಎಂಬಾಸೆಯಾಗುವುದು ಸ್ವಾಭಾವಿಕ. ಧ್ವನಿ ಹುಟ್ಟಿನಿಂದ ಬಂದದ್ದು ಅದನ್ನು ಬದಲಿಸಲಾಗದು ಎಂಬುದು ಸಹಜ ಅಭಿಪ್ರಾಯ. ಆದರೆ ಭಾರತೀಯ ಸಂಸ್ಕøತಿಯಲ್ಲಿ ಧ್ವನಿಯ ಗುಣಮಟ್ಟವನ್ನು ಸುಧಾರಿಸಲು ಅನೇಕ ವಿಧಿ-ವಿಧಾನಗಳು ತಿಳಿಸಲ್ಪಟ್ಟಿವೆ. ಪಾಶ್ಚಾತ್ಯ ದೇಶಗಳಲ್ಲಿ “voice Culture” ಎಂಬಂತಹ ತರಬೇತಿ ಇತ್ತೀಚಿನ ದಿನಗಳಲ್ಲಿ ಆರಂಭವಾಗಿದೆ, ಆದರೆ ಭಾರತೀಯ ವಿಜ್ಞಾನಗಳಾದ ಆಯುರ್ವೇದ, ಯೋಗ ಸಂಗೀತ ಶಾಸ್ತ್ರಗಳಲ್ಲಿ ಸಹಸ್ರಾರು ವರ್ಷಗಳ ಮೊದಲೇ ಧ್ವನಿಯ ಗುಣವಟ್ಟವನ್ನು ಹೆಚ್ಚಿಸಿಕೊಳ್ಳಲು ಅನೇಕ ವೈಜ್ಞಾನಿಕ ಕ್ರಮಗಳು ತಿಳಿಸಲ್ಪಟ್ಟಿವೆ. ‘ಧ್ವನಿ’ ಇದು ಸಂವಹನ ಮಾಧ್ಯಮ, ಕೇವಲ ಗಾಯನಕ್ಕೊಂದೇ ಅಲ್ಲ, ಪರಿಣಾಮಕಾರಿ ಸಂವಹನ (communication) ಕ್ಕೂ ಕೂಡ ಉತ್ತಮ ಧ್ವನಿ ಅಗತ್ಯ. ಪ್ರಜ್ಞಾಪೂರ್ವಕವಾಗಿ ಧ್ವನಿಯನ್ನು ಸಂಸ್ಕರಿಸುವ ವಿಧಾನಕ್ಕೆ ‘ಧ್ವನಿ ಸಂಸ್ಕರಣೆ’ ಎನ್ನುತ್ತಾರೆ. ಅದಕ್ಕೆ ‘ಧ್ವನಿ’ ಹೇಗೆ ಉತ್ಪತ್ತಿ ಆಗುತ್ತದೆ ಎಂಬುದು ತಿಳಿದಿರಬೇಕು. ಗಂಟಲಿನಲ್ಲಿರುವ ಸ್ವರಯಂತ್ರ (Larynx) ದ ಸ್ವರತಂತುಗಳು ಕಂಪಿಸಿದಾಗ ಶಬ್ದ ಉತ್ಪತ್ತಿ ಆಗುತ್ತದೆ ಎಂಬ ಜ್ಞಾನ ನಮಗೆಲ್ಲಾ ಇದೆ. ಆದರೆ ಇದರ ಜೊತೆ ಇನ್ನೆರಡು ಅಂಶಗಳು ಬಹಳ ಮುಖ್ಯ. ಮೆದುಳಿನಿಂದ ಸ್ವರಯಂತ್ರಕ್ಕೆ ಆದೇಶ ಬಂದಾಗ ಉಸಿರಾಟದ ಕ್ರಮದಲ್ಲಿ ಹೊಂದಾಣೀಕೆಯಾಗಿ, ಉಸಿರನ್ನು ಬಿಡುವಾಗ ಸ್ವರತಂತುಗಳು ಕಂಪಿಸಿ ಧ್ವನಿ ಉತ್ಪತ್ತಿಯಾಗುತ್ತದೆ. ಇನ್ನು ಸಂಗೀತಕ್ಕೆ ಸಂಬಂಧ ಪಟ್ಟಂತೆ ‘ನಾದ’ ಉತ್ಪತ್ತಿಯಾಗಬೇಕೆಂದರೆ ಅಲ್ಲಿ ಇನ್ನೂ ಕೆಲವು ಅಂಶಗಳು ಅಗತ್ಯ. ಮೆದುಳಿನ ಬಲಭಾಗದಿಂದ ಭಾವ ಉತ್ಪತ್ತಿಯಾದರೆ, ಮೆದುಳಿನ ಎಡಭಾಗದಿಂದ ಧ್ವನಿಯ ಏರಿಳಿತ ಅಂದರೆ ಪ್ರಮಾಣದ ಜ್ಞಾನ ಉಂಟಾಗುತ್ತದೆ. ಇವುಗಳ ಜೊತೆ ಪೂರ್ವಾನುಭವ ಮನೋಧರ್ಮ, ಸೃಜನ ಶೀಲತೆ, ಉಸಿರಾಟದ ಹೊಂದಾಣಿಕೆ ಇವೆಲ್ಲವೂ ಸೇರಿದಾಗ ಸುಶ್ರಾವ್ಯವಾದ ‘ನಾದ’ ಉಂಟಾಗುತ್ತದೆ. ವಿವಿಧ ಸಂಗೀತ ಪ್ರಾಕಾರಗಳಾದ ಜನಪದ ಸಂಗೀತ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತಗಳಿಗೆ ಧ್ವನಿ ಸಂಸ್ಕರಣ ವಿಧಾನವು ಬೇರೆ ಬೇರೆ ರೀತಿಯಾಗಿರುತ್ತದೆ. ಇನ್ನು ಸರಳೀಕೃತ ‘ಧ್ವನಿ ಸಂಸ್ಕರಣೆ’ ಕುರಿತು ಒಂದೆರಡು ಮಾತು.
ಧ್ವನಿ ಸಂಸ್ಕರಣೆಯ ಮೂಲಭೂತ ಅವಶ್ಯಕತೆಗಳೆಂದರೆ ಉಸಿರಾಟದ ನಿಯಂತ್ರಣೆ, ಸದೃಢ ಆರೋಗ್ಯಪೂರ್ಣ ಶರೀರ ಹಾಗೂ ಶಾಂತವಾದ ಮನಸ್ಸು, ಧನಾತ್ಮಕವಾದ ಆಲೋಚನೆ ಹಾಗೂ ಆತ್ಮವಿಶ್ವಾಸಗಳಿದ್ದಲ್ಲಿ ಧ್ವನಿಯ ಪರಿವರ್ತನೆ ಸಾಧ್ಯ. ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ; ಇವುಗಳ ಮೂಲಕ ನಾವು ಬಾಹ್ಯ ಪ್ರಪಂಚದ ಜೊತೆ ಸಂಪರ್ಕವನ್ನು ಹೊಂದುತ್ತೇವೆ. ಜ್ಞಾನೇಂದ್ರಿಯಗಳಿಂದ ಸದಾ ಧನಾತ್ಮಕ ಅಂಶಗಳನ್ನು ಗ್ರಹಿಸಿದಾಗ ಮಾತ್ರ ಮನಸ್ಸು ಧನಾತ್ಮಕವಾಗಿ ಆಲೋಚಿಸಲು ಸಾಧ್ಯ. ಸಂತುಲಿತ ಸಾತ್ವಿಕ ಆಹಾರ ಅಂದರೆ ಹಣ್ಣು, ತರಕಾರಿ, ಹಾಲು, ಸಿಹಿರಸ ಪ್ರಧಾನ ಆಹಾರದ ಸೇವನೆ ಅಗತ್ಯ. ಬೆಚ್ಚಗಿನ ಕಾದಾರಿಸಿದ ನೀರನ ಸೇವನೆ, ಬೆಚ್ಚಗಿನ ನೀರಿನಿಂದ ದಿನಕ್ಕೆರಡು ಬಾರಿ ಬಾಯಿ ಮುಕ್ಕಳಿಸುವುದು ಹಿತಕರ. ದಿನಕ್ಕೊಂದು ಬಾರಿ ಬೆಚ್ಚಗಿನ ಎಳ್ಳೆಣ್ಣೆಯನ್ನು ಎರಡೆರಡು ಹನಿ ಪ್ರತಿಯೊಂದು ಮೂಗಿನ ಹೊಳ್ಳೆಗೂ ಹಾಕಿಕೊಳ್ಳಬೇಕು. ಉಸಿರಾಟದ ನಿಯಂತ್ರಣೆಯನ್ನು ಸರಳವಾದ ಉಸಿರಾಟದ ಮೂಲಕ ಮಾಡಿಕೊಳ್ಳಬೇಕು. ನಿಧಾನಗತಿಯಲ್ಲಿ ಕ್ರಮಬದ್ಧವಾಗಿ ಸಮಪ್ರಮಾಣದಲ್ಲಿ ಉಸಿರನ್ನು ಬಿಡುವುದು ಹಾಗೂ ಉಸಿರನ್ನು ತೆಗೆದುಕೊಳ್ಳುವುದು ಈ ಕ್ರಮವನ್ನು ಅನುಸರಿಸುವುದರಿಂದ ಉಸಿರಾಟದ ನಿಯಂತ್ರಣೆ ಉಂಟಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿನ ಅಭ್ಯಾಸ ಗಾನದ ಕಲಿಕೆಯಿರುವುದೂ ಕೂಡ ಧ್ವನಿ ಸಂಸ್ಕರಣೆಗಾಗಿಯೇ. ಶ್ರುತಿಯ ಅಭ್ಯಾಸ, ಸರಳೆ ವರಸೆ, ಜಂಟಿವರಸೆ, ದಾಟುವರಸೆ, ಅಲಂಕಾರ ಹೆಚ್ಚುಸ್ಥಾಯಿ, ತಗ್ಗುಸ್ಥಾಯಿ, ಗೀತೆ, ಸ್ವರಜತಿ, ವರ್ಣ – ಹೀಗೆ.
ಈ ಎಲ್ಲಾ ಪಾಠಗಳಿರುವುದು ಧ್ವನಿ ಸಂಸ್ಕರಣೆಗಾಗಿಯೇ. ಇಷ್ಟೇ ಅಲ್ಲದೇ ಆಯುರ್ವೇದ ಶಾಸ್ತ್ರದಲ್ಲಿ ಧ್ವನಿಯ ವಿವಿಧ ದೋಷಗಳಿಗಾಗಿ ಅನೇಕ ಔಷಧಿಗಳು ಉಲ್ಲೇಖಿಸಲ್ಪಟ್ಟಿವೆ. ಆಚಾರ್ಯ ಚರಕರು “ಕಂಠ್ಯ ಔಷಧಿ” ಗಳ ಪಟ್ಟಿಯನ್ನೇ ನೀಡಿದ್ದಾರೆ. ಧ್ವನಿಯ ದೋಷಕ್ಕೆ ಅನುಸಾರವಾಗಿ ಈ ಔಷಧಿಗಳನ್ನು ಬಳಸಬಹುದು. ಮಾನವ ಉಳಿದೆಲ್ಲಾ ಜೀವಿಗಳಿಗಿಂತ ಭಿನ್ನನಾಗಿರುವುದೇ ಅವನ ಸಂವಹನ ಸಾಮಥ್ರ್ಯವಾದ ಧ್ವನಿಯಿಂದ. ಧ್ವನಿಯೇ ಆಧಾರ ಜೀವನಕೆ, ಧ್ವನಿ ಬೇಕು ಸಂವಹನಕೆ, ಸಂವಹನವೇ ಜೀವಾಳ ಉನ್ನತಿಗೆ, ಅಂತಹ ಉನ್ನತಿಯ ಹೊಂದಲು ಬೇಕು ಧ್ವನಿಯ ಸಂಸ್ಕರಣೆ.
ಡಾ. ಶ್ರೀವತ್ಸ
- Advertisement -
- Advertisement -
- Advertisement -
- Advertisement -