20.1 C
Sidlaghatta
Wednesday, September 11, 2024

ವಿವಿಧ ರೋಗಹರ ಹರೀತಕಿ (ಅಣಲೆಕಾಯಿ)

- Advertisement -
- Advertisement -

ಆಯುರ್ವೇದ ವೈದ್ಯರನ್ನು ಮತ್ತು ಹಳ್ಳಿಗಳಲ್ಲಿ ಗಿಡಮೂಲಕೆ ಔಷಧಿಗಳನ್ನು ಪಾರಂಪರಾಗತವಾಗಿ ನೀಡುತ್ತಾ ಬಂದಿರುವ ಪಂಡಿತರುಗಳನ್ನು “ಅಣಲೇಕಾಯಿ ಪಂಡಿತರು” ಎಂದು ಕರೆಯುವುದು ವಾಡಿಕೆ. ಹಿಂದೆಲ್ಲ ಬೇರೆ ಬೇರೆ ರೋಗಗಳಿಗೆ ಬೇರೆ ಬೇರೆ ಆಹಾರ ದ್ರವ್ಯಗಳ ಜೊತೆಗೆ (ಉದಾ: ಬೆಲ್ಲ, ಶುಂಠಿಪುಡಿ, ತುಪ್ಪ, ಜೇನುತುಪ್ಪ ಇತ್ಯಾದಿ) ಅಣಲೇಕಾಯಿಯನ್ನು ಕೊಡುವ ಪದ್ಧತಿ ರೂಢಿಯಲ್ಲಿತ್ತು. ಈ ಹರೀತಕಿ (ಅಣಲೇಕಾಯಿ)ಯ ವೈಶಿಷ್ಟ್ಯವೇ ಹಾಗೆ ಬೇರೆ ಬೇರೆ ದ್ರವ್ಯಗಳ ಜೊತೆಗೆ ಸೇರಿ ವಿವಿಧ ರೀತಿಯ ರೋಗಗಳನ್ನು ಗುಣಪಡಿಸುವ ಸಾಮಥ್ರ್ಯ ಇದಕ್ಕಿದೆ.
ಹರೀತಕಿ Combretaceae ಎನ್ನುವ ಕುಟುಂಬ ವರ್ಗಕ್ಕೆ ಸೇರಿದ್ದು, ಇದರ ಸಸ್ಯ ಶಾಸ್ತ್ರೀಯ ಹೆಸರು Terminalia Chebula
ವೃಕ್ಷ ಪರಿಚರ: ಇದು ಮಧ್ಯಮ ಗಾತ್ರದ ವೃಕ್ಷ ಎಲೆಗಳು 4 ರಿಂದ 8 ಇಂಚು ಉದ್ದವಾಗಿದ್ದು, ಸ್ವಲ್ಪ ಮೊಟ್ಟೆಯಾಕಾರದಲ್ಲದ್ದು, ನುಣುಪಾಗಿರುತ್ತದೆ. ಒಣಗಿದ ಫಲಗಳ ಮೇಲೆ 4 ರಿಂದ 5 ಗೆರೆಗಳು ಮೂಡಿರುತ್ತವೆ.
ರಾಸಾಯನಿಕ ಸಂಘಟನೆ: ಫಲದಲ್ಲಿ ಚೆಬುಲಿನಿಕ್ ಆಸಿಡ್ 20-40% ಗ್ಯಾಲಕ್ ಆಸಿಡ್, ಮೈರೋಬಾಲಿನಿನ್, ರಾಳ ಇರುತ್ತದೆ.
ವಿವಿಧ ಹೆಸರುಗಳು:
1. ಅಭಯಾ: ಇದನ್ನು ಸೇವಿಸುವುದರಿಂದ ಯಾವುದೇ ರೋಗಗಳ ಭಯ ಮನುಷ್ಯನಿಗೆ ಇರಲಾರದು.
2. ಅವ್ಯಥಾ: ಇದರ ಸೇವನೆಯಿಂದ ದು:ಖವು ಶಮನವಾಗುವುದು.
3. ಪಥ್ಯಾ: ಇದರ ಸೇವನೆಯು ದೇಹಕ್ಕೆ ಹಿತವನ್ನು ಉಂಟು ಮಾಡುವುದು.
4. ಕಾಯಸ್ಥಾ: ಇದರ ಸೇವನೆಯಿಂದ ಶರೀರವು ದೃಢವಾಗುತ್ತದೆ.
5. ಪೂತನಾ: ಇದು ದೇಹದಲ್ಲಿನ ದೂಷಿತ ವಾಯು ಹಾಗೂ ಮಲವನ್ನು ಹೊರ ಹಾಕುತ್ತದೆ.
6. ಹರೀತಕಿ: ಇದು ರೋಗವನ್ನು ಹೋಗಲಾಡಿಸುವುದು.
7. ಹೈಮವತಿ: ಇದು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ಈ ಹೆಸರು.
8. ಚೇತಕಿ: ಇದರಿಂದ ದೇಹದ ಸ್ರೋತಸ್ಸುಗಳು ಶುದ್ಧವಾಗುವವು
9. ಶ್ರೇಯಸಿ: ಇದರ ಸೇವನೆಯು ಶ್ರೇಯಸ್ಸನ್ನುಂಟು ಮಾಡುವುದು.
ಹರೀತಕಿಯ ವಿಧಗಳು
1. ವಿಜಯಾ: ಸೋರೆಕಾಯಿಯಂತೆ ವೃತ್ತಾಕಾರವಾಗಿರುವುದು. ಇದು ಎಲ್ಲ ರೋಗಗಳನ್ನು ಗುಣ ಪಡಿಸುವುದು.
2. ರೋಹಿಣಿ: ವೃತ್ತಾಕಾರವಾಗಿರುತ್ತದೆ. ಯಾವುದೇ ರೀತಿಯ ವ್ರಣ (ಹುಣ್ಣುಗಳನ್ನೂ) ಗುಣಪಡಿಸುವುದು.
3. ಪೂತನ: ದೊಡ್ಡ ಬೀಜವನ್ನು ಹೊಂದಿದ್ದು, ಸೂಕ್ಷ್ಮವಾಗಿರುತ್ತದೆ. ಇದನ್ನು ವ್ರಣಗಳ ಮೇಲೆ ಲೇಪನಕ್ಕೆ ಬಳಸಲಾಗುತ್ತದೆ.
4. ಅಮೃತಾ: ಬೀಜವು ಚಿಕ್ಕದಾಗಿದ್ದು, ಸಿಪ್ಪೆ ಮತ್ತು ಒಳಗಿನ ಭಾಗವು ದಪ್ಪವಾಗಿರುತ್ತದೆ. ದೇಹ ಶುದ್ಧಿಗೆ ಇದನ್ನು ಬಳಸಲಾಗುತ್ತದೆ.
5. ಅಭಯಾ: ಹೊರ ಭಾಗದಲ್ಲಿ ಐದು ಗೆರೆಗಳನ್ನು ಹೊಂದಿರುತ್ತದೆ. ಇದು ಕಣ್ಣಿನ ರೋಗಗಳಿಗೆ ಉತ್ತಮ.
6. ಜೀಮಂತಿ: ಬಂಗಾರದ ಬಣ್ಣವನನ್ನು ಹೊಂದಿರುತ್ತದೆ. ಎಲ್ಲ ರೋಗಗಳನ್ನು ಗುಣಪಡಿಸುವುದು.
7. ಚೇತಕಿ: ಹೊರ ಭಾಗದಲ್ಲಿ ಮೂರು ರೇಖೆಗಳನ್ನು ಹೊಂದಿರುತ್ತದೆ. ಚೂರ್ಣವನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ.
ಹರೀತಕಿಯ ಗುಣಧರ್ಮಗಳು
1. ಹರೀತಕಿಯು ಐದು ರಸಗಳನ್ನು ಹೊಂದಿದ್ದು, (ಸಿಹಿ, ಹುಳಿ, ಖಾರ, ಕಹಿ, ಒಗರು) ಒಗರು ರಸ ಪ್ರಧಾನವಾಗಿರುತ್ತದೆ.
2. ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತದೆ.
3. ರಸಾಯನವಾಗಿ ಕೆಲಸ ಮಾಡುತ್ತದೆ. (ದೇಹದ ಧಾತುಗಳನ್ನು ವರ್ಧಿಸುತ್ತದೆ)
4. ಉಷ್ಣ ವೀರ್ಯವನ್ನು ಹೊಂದಿರುತ್ತದೆ. (ವೀರ್ಯ ಅಂದರೆ ಆಹಾರ ಮತ್ತು ಔಷಧ ದ್ರವ್ಯಗಳು ಜೀರ್ಣವಾಗಿ ಪರಿವರ್ತನೆ ಹೊಂದಿದ ನಂತರ ಶರೀರದಲ್ಲಿ ವ್ಯಕ್ತವಾಗುವ ರಸ)
5. ಮಧುರ ವಿಪಾಕವನ್ನು ಹೊಂದಿರುತ್ತದೆ. (ವಿಪಾಕ ಅಂದರೆ ಆಹಾರ ಮತ್ತು ಔಷಧ ದ್ರವ್ಯಗಳು ಜೀರ್ಣವಾಗುವ ಹಂತದಲ್ಲಿ ವ್ಯಕ್ತವಾಗುವ ರಸ)
6. ಕಣ್ಣಿಗೆ ಹಿತಕರ
7. ಜೀರ್ಣಕ್ಕೆ ಹಗುರವಾದಂಥಹುದು.
8. ದೇಹದ ಧಾತುಗಳಿಗೆ ಪುಷ್ಠಿಯನ್ನು ಕೊಡುವುದು.
9. ದೇಹದಲ್ಲಿನ ದೂಷಿತ ವಾಯು, ಮಲಗಳನ್ನು ಗುದಮಾರ್ಗದ ಮೂಲಕ ಹೊರ ಹಾಕುವುದು.
10. ಶ್ವಾಸ (ದಮ್ಮು), ಕೆಮ್ಮು, ಮಧುಮೇಹ, ಅರ್ಶಸ್ಸು, ಚರ್ಮರೋಗಗಳು, ಬಾವು, ಉದರ ರೋಗ (ascites),  ಕ್ರಿಮಿ, ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ರೋಗಗಳು, ವಾಂತಿ ಹೃದ್ರೋಗ, ಕಾಮಲಾ ಪ್ಲೀಹ ಹಾಗೂ ಯಕೃತ್ ಸಂಬಂಧಿ ರೋಗಗಳು, ಮೂತ್ರ ಅಶ್ಮಂ ಕೆಲವೊಂದು ಮೂತ್ರ ಸಂಬಂಧಿ ರೋಗಗಳಲ್ಲಿ ಇದನ್ನು ಬೇರೆ ಬೇರೆ ದ್ರವ್ಯಗಳ ಜೊತೆಗೆ ಬಳಸಲಾಗುವುದು.
ಉತ್ತಮ ಹರೀತಕಿ ಫಲದ ಲಕ್ಷಣಗಳು
ಗಟ್ಟಿಯಾಗಿದ್ದು, ಜಿಡ್ಡಿನಿಂದ ಕೂಡಿದ್ದು, ವೃತ್ತಾಕಾರವಾಗಿರಬೇಕು, ನೀರಿನಲ್ಲಿ ಹಾಕಿದರೆ ಮುಳುಗಬೇಕು. ಇಂಥಹ ಅಣಲೇಕಾಯಿ ಬಳಕೆಗೆ ಉತ್ತಮ.
ಇತರೇ ಗುಣಗಳು
1. ಹರೀತಕಿ ಫಲವನ್ನು ಅಗಿದು ತಿನ್ನುವುದರಿಂದ ಜೀರ್ಣಶಕ್ತಿಯು ವೃದ್ಧಿಯಾಗುವುದು.
2. ಇದನ್ನು ಕಲ್ಲಿನಲ್ಲಿ ಅರೆದು ಉಪಯೋಗಿಸುವುದರಿಂದ ದೇಹದಲ್ಲಿ ಸಂಗ್ರಹವಾದ ಪುರಾಣ ಮಲವನ್ನು ಶೋಧನ ಮಾಡಿ ಗುದದ್ವಾರದ ಮೂಲಕ ಹೊರಗೆ ಹಾಕುವುದು.
3. ಹರೀತಕಿ ಫಲವನ್ನು ಬೇಯಿಸಿ ಉಪಯೋಗಿಸುವುದರಿಂದ ಮಲ ಬದ್ಧತೆಯನ್ನುಂಟು ಮಾಡುವುದು.
4. ಹರೀತಕಿ ಫಲವನ್ನು ಹುರಿದು ತಿನ್ನುವುದರಿಂದ ವಾತ, ಪಿತ್ತ ಹಾಗೂ ಕಫ ದೋಷಗಳನ್ನು ಶಮನ ಮಾಡುವುದು.
5. ಆಹಾರದ ಜೊತೆ ಸೇವಿಸುವುದರಿಂದ ಬುದ್ಧಿ ಶಕ್ತಿಯನ್ನು ಹೆಚ್ಚಿಸುವುದು. ಬಲವನ್ನು ಹೆಚ್ಚಿಸುವುದು ಮತ್ತು ಇಂದ್ರಿಯಗಳಿಗೆ ಶಕ್ತಿಯನ್ನು ಕೊಡುವುದು.
6. ಆಹಾರದ ನಂತರ ಸೇವಿಸುವುದರಿಂದ ಆಹಾರದಲ್ಲಿ ಏನಾದರೂ ದೋಷಗಳಿದ್ದರೆ ಶಮನ ಮಾಡುವುದು.
7. ಸೈಂಧವ ಲವಣದೊಂದಿಗೆ ಸೇವನೆ ಮಾಡಿದರೆ ಕಫ ದೋಷವನನ್ನು, ಸಕ್ಕರೆಯೊಂದಿಗೆ ಸೇವನೆ ಮಾಡಿದರೆ ಮಾತ ದೋಷವನ್ನು ಹಾಗು ಬೆಲ್ಲದೊಂದಿಗೆ ಸೇವೆನೆ ಮಾಡಿದರೆ ಎಲ್ಲ ರೋಗಗಳನ್ನು ಶಮನ ಮಾಡುವುದು.
ಋತುವಿಗನುಗುಣವಾಗಿ ಹರೀತಕಿಯ ಉಪಯೋಗಗಳು
ವರ್ಷಾ ಋತು – ಸೈಂಧವ ಲವಣ
ಶರದ್ ಋತು – ಸಕ್ಕರೆ
ಹೇಮಂತ ಋತು – ಶುಂಠಿ
ಶಿಶಿರ ಋತು _ ಹಿಪ್ಪಲಿ
ವಸಂತ ಋತು – ಜೇನುತುಪ್ಪ
ಗ್ರೀಷ್ಮ ಋತು – ಬೆಲ್ಲ
ಯಾರಿಗೆ ಹರೀತಕಿ ಸೇವನೆ ನಿಷಿದ್ಧ
ದಣಿದವರು, ದುರ್ಬಲರು, ಒಣ ಶರೀರದವರು, ಕೃಶರು, ಉಪವಾಸ ಮಾಡಿದವರು, ಪಿತ್ತ ಪ್ರಕೃತಿಯವರು, ಗರ್ಭಿಣಿ ಸ್ತ್ರೀ ಇವರೆಲ್ಲರಿಗೆ ಹರೀತಕಿ ಸೇವನೆ ನಿಷಿದ್ಧ.
ರೋಗಗಳಲ್ಲಿ ಹರೀತಕಿ ಪ್ರಯೋಗ
1. ಅರ್ಶಸ್ಸಿನಲ್ಲಿ ಇದರ ಚೂರ್ಣವನ್ನು ಬೆಣ್ಣೆಯಲ್ಲಿ ಕಲಸಿ ಲೇಪಿಸುವುದು ಉತ್ತಮ.
2. ಬಾಯಿ ಹುಣ್ಣು ಆದಾಗ ಹರೀತಕಿ ಚೂರ್ಣದ ಕಷಾಯವನ್ನು ಮಾಡಿ ಆಗಾಗ ಆ ಕಷಾಯದಲ್ಲಿ ಬಾಯಿ ಮುಕ್ಕಳಿಸುತ್ತಿರಬೇಕು.
3. ಹರೀತಕಿಯ ಸೂಕ್ಷ್ಮಚೂರ್ಣವನ್ನು ಹಲ್ಲು ತಿಕ್ಕಲೂ ಕೂಡ ಬಳಸಬಹುದು.
4. ಮಲ ಬದ್ಧತೆ ಉಂಟಾದಾಗ ಬಿಸಿ ನೀರಿಗೆ ಒಂದರಿಂದ ಎರಡು ಚಮಚದಷ್ಟು ಹರೀತಕಿ ಚೂರ್ಣವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
5. ಅತಿಯಾಗಿ ಬಿಕ್ಕಳಿಕೆ ಬರುತ್ತಿದ್ದಾಗ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚದಷ್ಟು ಹರೀತಕಿ ಚೂರ್ಣವನ್ನು ಬೆರೆಸಿ ಕುಡಿಯಬೇಕು.
6. ಕೆಲವೊಂದು ರೀತಿಯ ಗಂಟಲಿನ ರೋಗಗಳಲ್ಲಿ ಹರೀತಕಿ ಚೂರ್ಣದಿಂದ ಕಷಾಯವನ್ನು ತಯಾರಿಸಿ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು.
ಹೀಗೆ ದೋಷ, ಪ್ರಕೃತಿ, ರೋಗ, ದೇಶ, ಕಾಲ ಇವೆಲ್ಲವುಗಳನ್ನು ಗಮನಿಸಿಕೊಂಡು ಈ ಹರೀತಕಿ ಫಲದ ಬಳಕೆ ಮಾಡೋಣ.
ಡಾ. ನಾಗಶ್ರೀ ಕೆ.ಎಸ್.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!