26.1 C
Sidlaghatta
Wednesday, August 17, 2022

ಕಂದಮ್ಮಗಳು ಕರೆಯುತ್ತಿವೆ ರಕ್ಷಣೆಗಾಗಿ – ಭಾಗ 1

- Advertisement -
- Advertisement -

ಮನೆಯ ಅಂಗಳದಲ್ಲಿ ಮಗು ಆಡುತ್ತಿದೆ. ಹತ್ತಿರದಲ್ಲಿ ಯಾರೂ ಇಲ್ಲದಿರುವ ಸಮಯವನ್ನು ನೋಡಿ ಅಪರಿಚಿತನೋ ಅಥವಾ ಸ್ವಲ್ಪ ಪರಿಚಿತನೋ ಆಗಮಿಸಿ ಮಗುವಿಗೆ ತಿಂಡಿತಿನಿಸುಗಳ ಆಸೆ ತೋರಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಅವನ ವಿಕೃತ ಮನಸ್ಸು ಮಗುವಿಗೆ ಜೀವಮಾನವಿಡೀ ಕಾಡಬಲ್ಲ ಹಿಂಸೆಯನ್ನು ನೀಡುತ್ತದೆ.
ಕುಟುಂಬಕ್ಕೆ ಬಹಳ ಆಪ್ತರಾದವರಲ್ಲಿ ಅಥವಾ ಕುಟುಂಬದ ಸದಸ್ಯರಲ್ಲಿ ಒಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗುವನ್ನು ಒಲಿಸಿಕೊಳ್ಳುತ್ತಾರೆ. ಮುಂದೆ ಆ ಮುಗ್ಧ ಜೀವ ಏನೂ ತಿಳಿಯದ ಹಿಂಸೆಗೆ ಒಳಗಾಗುತ್ತದೆ.
ಅನಾಥಾಶ್ರಮಗಳಲ್ಲಿ ಏನೂ ಅರಿಯದ ಮಕ್ಕಳ ಮೇಲೆ ಒತ್ತಡವನ್ನು ಹೇರಲಾಗುತ್ತದೆ. ಬೇರೆ ದಾರಿಯಿಲ್ಲದೆ ಅದನ್ನು ಸಹಿಸಿಕೊಳ್ಳುವ ಮಕ್ಕಳು ಯಾರ್ಯಾರದ್ದೋ ಲೈಂಗಿಕ ತೃಷೆಗೆ ಬಲಿಯಾಗುತ್ತಾರೆ.
3ಇದೆಲ್ಲಾ ಇವತ್ತು ದಿನನಿತ್ಯ ವರದಿಯಾಗುತ್ತಿರುವ ಘಟನೆಗಳ ಕೆಲವೇ ಪ್ರಾತಿನಿಧಿಕ ರೂಪಗಳು. ಏನಾಗುತ್ತಿದೆ ಈ ಮನುಕುಲಕ್ಕೆ? ಏಕಿಷ್ಟು ವಿಕೃತ ಮನಸ್ಸುಗಳನ್ನು ನೋಡುತ್ತಿದ್ದೇವೆ? ಎಲ್ಲವನ್ನೂ ಬರಿಯ ಕಾನೂನಿನ ಸಮಸ್ಯೆಯಾಗಿ ನೋಡಿ ಕೈತೊಳೆದುಕೊಳ್ಳವು ಸರ್ಕಾರಗಳ ಮಧ್ಯೆ ಜನಸಾಮಾನ್ಯರು ಅಸಹಾಯಕರೇ? ನಮ್ಮ ಕಂದಮ್ಮಗಳನ್ನು ಲೈಂಗಿಕ ಹಿಂಸಾಚಾರದಿಂದ ರಕ್ಷಿಸಲು ಪೋಷಕರು ತಮ್ಮ ಮಿತಿಗಳಲ್ಲಿ ಮಾಡಬಹುದಾದ್ದು ಏನಾದರೂ ಇದೆಯೇ? ಎಲ್ಲ ಎಚ್ಚರಿಕೆಯನ್ನೂ ಮೀರಿ ಇಂತಹ ಕರಾಳ ಘಟನೆಗಳು ಸಂಭವಿಸಿದಾಗ ಅವುಗಳನ್ನು ನಿಭಾಯಿಸುವುದು ಹೇಗೆ?
ಕಾಲ ಯಾವಾಗಲೂ ಕೆಟ್ಟಿಲ್ಲ!
ಮನೆಯಲ್ಲಿ ಹಳೆಯ ತಲೆಮಾರಿನ ಜನಗಳಿದ್ದರೆ, “ಅಯ್ಯೋ ಕಾಲು ಕೆಟ್ಟು ಹೋಗಿದೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಎಂದು ಆಗಾಗ ಹೇಳುತ್ತಲೇ ಇರುತ್ತಾರೆ. ಹೀಗೆ ಗೊಣಗುವವರನ್ನು ಸಮರ್ಥಿಸಲೋ ಎನ್ನುವಂತೆ ಇತ್ತೀಚೆಗೆ ಸ್ತ್ರೀಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳ, ಮತ್ತಿತರ ಲೈಂಗಿಕ ಅಪರಾಧಗಳ ವಿಷಯಗಳು ಟೀವಿ ಮತ್ತು ಪತ್ರಿಕೆಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದೆ. ವಾಸ್ತವ ಅಂದರೆ ಇವು ಹಿಂದಿನ ಕಾಲದಲ್ಲೂ ಇದ್ದೇ ಇತ್ತು. ಇವತ್ತಿನ ಸಾಮಾಜಿಕ ವಾತಾವರಣ ಇವುಗಳನ್ನು ಸ್ವಲ್ಪ ಹೆಚ್ಚು ಮಾಡಿರಬಹುದು ಅಷ್ಟೆ.
ಹಿಂದಿನ ಕಾಲದಲ್ಲಿ ಲೈಂಗಿಕ ಹಿಂಸಾಚಾರದ ಬಗೆಗೆ ಕಟ್ಟುನಿಟ್ಟಿನ ಕಾನೂನುಗಳಿರಲಿಲ್ಲ. ಅದೂ ಅಲ್ಲದೆ ಈ ರೀತಿಯ ಹಿಂಸೆಗೆ ಒಳಪಡುವವರು ಯಾವಾಗಲೂ ಸ್ತ್ರೀಯರು ಅಥವಾ ಮಕ್ಕಳು ಆಗಿರುತ್ತಾರೆ. ಇವರಿಬ್ಬರೂ ಹೆಚ್ಚಿನ ಹಿಂಸಾಚಾರವೆಸಗುವ ಪುರುಷ ವರ್ಗದ ಮೇಲೆ ಒಂದಲ್ಲಾ ಒಂದು ರೀತಿಯಿಂದ ಅವಲಂಬಿತರು. ಇನ್ನೂ ಕ್ರೂರವಾದ ವಿಷಯವೆಂದರೆ ಹಿಂಸೆಗೆ ಒಳಪಟ್ಟವರೇ ಹಿಂಸಾಚಾರಿಗಳಿಗಿಂತ ಹೆಚ್ಚಾಗಿ ಸಾಮಾಜಿಕ ಕಳಂಕವನ್ನು ಎದುರಿಸಬೇಕಾಗುತ್ತದೆ.
ಈ ಎಲ್ಲಾ ಕಾರಣಗಳಿಂದ ಹಿಂಸಾಚಾರದ ಹೆಚ್ಚಿನ ಪ್ರಕರಣಗಳು ಪೋಲಿಸರಿಗೆ ದೂರಕೊಡುವುದಿರಲಿ, ಅಪ್ಪ ಅಮ್ಮಂದಿರಿಗೂ ತಿಳಿಯದೇ ಹೋಗುತ್ತಿತ್ತು.
ಹೀಗೆ ಅನ್ಯಾಯಕ್ಕೊಳಗಾದವರು ನೋವು ಅವಮಾನಗಳನ್ನು ನುಂಗಿಕೊಂಡು ಜೀವಮಾನವೆಲ್ಲಾ ನರಕಯಾತನೆಯನ್ನು ಅನುಭವಿಸುತ್ತಾರೆ. ಇನ್ನು ಹಿಂಸೆಗೊಳಗಾದವರು ಮಕ್ಕಳಾದರಂತೂ ಅದರ ಪರಿಣಾಮ ಅವರ ಜೀವನದುದ್ದಕ್ಕೂ ಇರುತ್ತದೆ. ಇದೇ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಒಂದು ಕಡೆಯಾದರೆ, ಬದುಕಿ ಉಳಿಯುವವರೂ ಕೂಡ ಭಾವನಾತ್ಮಕಾವಾಗಿ ಸತ್ತಂತೆಯೇ ಇರುತ್ತಾರೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಮ್ಮ ಮಕ್ಕಳಲ್ಲಿ ಲೈಂಗಿಕ ಹಿಂಸಾಚಾರದ ಬಗೆಗೆ ಸಂಪೂರ್ಣ ಜಾಗೃತಿ ಮೂಡಿಸಬೇಕು. ಇಂತಹ ಜಾಗೃತಿಯ ಉದ್ದೇಶ ಅವರು ಹಿಂಸೆಗೆ ಒಳಗಾಗುವುದನ್ನು ತಪ್ಪಿಸುವುದಲ್ಲದೇ ನಮ್ಮ ಮಕ್ಕಳು ತಾವೇ ಹಿಂಸಾಚಾರಿಗಳಾಗುವುದನ್ನು ತಡೆಯುವಂತಾದ್ದೂ ಆಗಿರಬೇಕು.
ಲೈಂಗಿಕ ಹಿಂಸಾಚಾರವೆಂದರೇನು?
ಒತ್ತಾಯದ ಸಂಭೋಗ ಮಾತ್ರ ಲೈಂಗಿಕ ಹಿಂಸಾಚಾರವೆನ್ನುವುದು ನಮ್ಮೆಲ್ಲರ ತಪ್ಪು ತಿಳುವಳಿಕೆ. ಇದರಷ್ಟೇ ದೂರಗಾಮೀ ದುಷ್ಪÀರಿಣಾಮಗಳನ್ನು ಇನ್ನಿತರ ಸಾಮಾನ್ಯ ಎನ್ನಿಸುವ ವಿಕೃತಿಗಳೂ ಉಂಟುಮಾಡಬಹುದು. ಉದಾಹರಣೆಗೆ,
* ಒತ್ತಾಯದಿಂದ ಚುಂಬಿಸುವುದು.
* ಮಗುವಿನ ಖಾಸಗೀ ಆಂಗಗಳನ್ನು ಅನಗತ್ಯವಾಗಿ ಮುಟ್ಟುವುದು, ಹಿಸುಕುವುದು, ಬೆರಳು ತೂರಿಸುವುದು.
* ಮಗುವಿಗೆ ನಗ್ನ ದೇಹ, ನೀಲಿ ಚಿತ್ರ, ಹಸ್ತಮೈಥುನ ಅಥವಾ ಸಂಭೋಗ ಕ್ರಿಯೆಯನ್ನು ಒತ್ತಾಯದಿಂದ ತೋರಿಸುವುದು.
* ಮಗುವಿನ ಜೊತೆ ಲೈಂಗಿಕ ವಿಚಾರಗಳನ್ನು ಮಾತನಾಡುವುದು ಮತ್ತು ಪ್ರಚೋದಿಸುವುದು.
ಹೀಗೆ ಮಗುವಿಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುವ ಮತ್ತು ಅದರ ಮುಂದಿನ ಆರೋಗ್ಯಕರ ಲೈಂಗಿಕ ಜೀವನದ ಬೆಳವಣಿಗೆಗೆ ತೊಂದರೆಯಾಗುವ ಎಲ್ಲದರ ಬಗೆಗೂ ನಾವು ಎಚ್ಚರದಿಂದಿರಬೇಕಲ್ಲದೆ ಅವುಗಳನ್ನು ಕಡೆಗಣಿಸದೆ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.
ಪರಿಚಿತರೇ ಹೆಚ್ಚು ಅಪಾಯಕಾರಿ!
ಇನ್ನೊಂದು ಪ್ರಮುಖ ವಿಚಾರವೆಂದರೆ ಹಿಂಸಾಚಾರ ಮಾಡುವವರು ಅಪರಿಚಿತರು ಅಥವಾ ಕ್ರಿಮಿನಲ್‍ಗಳೇ ಆಗಬೇಕೆಂದಿಲ್ಲ. ಮನೆಯ ಹಿರಿಯರು, ಸ್ನೇಹಿತರು, ಪರಿಚಿತರು, ಶಾಲೆಯ ಬಸ್, ಆಟೋ ಚಾಲಕರು, ಶಿಕ್ಷಕರು, ಕಛೇರಿಯ ಮೇಲಧಿಕಾರಿಗಳು, ಕೊನೆಗೆ ಧಾರ್ಮಿಕ ಕ್ಷೇತ್ರದಲ್ಲಿರುವವರೂ ಕೂಡ ಇಂತಹ ಹೀನ ಕೃತ್ಯವನ್ನು ಮಾಡುವ ಸಾಧ್ಯತೆಗಳಿರುತ್ತವೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಹೆತ್ತ ತಂದೆಯೇ ಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರವೆಸಿಗೆದ ಘಟನೆಗಳೂ ಆಗಾಗ ವರದಿಯಾಗುತ್ತಿರುತ್ತದೆ.
ಅಮೇರಿಕಾದಲ್ಲಿ ನಡೆದ ಸಮೀಕ್ಷೆಯೊಂದರ ಫಲಿತಾಶ ಬೆಚ್ಚಿ ಬೀಳಿಸುವಂತಿದೆ. ಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರವೆಸಗುವವರಲ್ಲಿ ಶೇಕಡ 60ರಷ್ಟು ಜನರು ಪರಿಚಿತರು ಮತ್ತು ಶೇಕಡಾ 30ರಷ್ಟು ಜನ ಕುಟುಂಬದವರೇ ಆಗಿರುತ್ತಾರೆ. ಕೇವಲ ಶೇಕಡಾ 10ರಷ್ಟು ಜನ ಮಾತ್ರ ಅಪರಿಚಿತರಾಗಿರುತ್ತಾರೆ. ಕೇವಲ ಅಪರಿಚಿತರಿಂದಾಗುವ ಘಟನೆಗಳಲ್ಲಿ ಕೆಲವು ಮಾತ್ರ ಪೋಲಿಸರಿಗೆ ವರದಿಯಾಗುತ್ತವೆ. ಅಂದರೆ ಯಾರ ಗಮನಕ್ಕೂ ಬಾರದ ಹಿಂಸಾಚಾರದ ಮಟ್ಟ ಎಷ್ಟಿರಬಹುದು ಎಂದು ಊಹಿಸುವುದೇ ಕಷ್ಟ ಮತ್ತು ಭಯಾನಕ. ಇವುಗಳ ಬಗೆಗೆ ಪೋಷಕರು ಮೊದಲು ಎಚ್ಚೆತ್ತುಕೊಳ್ಳಬೇಕಿದೆ.
ಹಿಂಸಾಚಾರವೆಸುಗುವವರು ವಯಸ್ಕರು ಅಥವಾ ಪುರುಷರೇ ಆಗಬೇಕೆಂದಿಲ್ಲ. ದೊಡ್ಡ ಮಕ್ಕಳು ಚಿಕ್ಕ ಮಕ್ಕಳ ಮೇಲಿನ ಅಥವಾ ಸ್ತ್ರೀಯರೂ ಕೂಡ ಗಂಡು ಹಾಗೂ ಹೆಣ್ಣು ಮಕ್ಕಳ ಮೇಲಿನ ಇಂತಹ ವಿಕೃತಿಗಳಿಗೆ ಕಾರಣರಾಗಬಹುದು.
ಮಧ್ಯವ್ಯಸನಿಗಳು, ಮಾನಸಿಕ ಅಸಮತೋಲನ ಇರುವವರು, ಅಥವಾ ಕ್ರಿಮಿನಲ್ ಹಿನ್ನೆಲೆ ಇರುವವರ ಬಗೆಗೆ ಹೆಚ್ಚು ಎಚ್ಚರಿಕೆಯಿಂದಿರಬೇಕು.
ಮುಂದುವರೆಯುವುದು
ವಸಂತ್ ನಡಹಳ್ಳಿ

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here