ಯಾರು ಬಲಿಪಶುಗಳಾಗಬಹುದು?
ಹಿಂಸೆಗೆ ಒಳಪಡುವವರು ಸಾಮಾಜಿಕವಾಗಿ ಕೆಳಮಟ್ಟದವರೇ ಆಗಬೇಕೆಂದಿಲ್ಲ. ಎಲ್ಲಾ ಜಾತಿ, ಧರ್ಮ, ವರ್ಗ, ಜನಾಂಗದ ಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರ ಆಗಬಹುದಾದ ಸಮಾನ ಸಾಧ್ಯತೆಗಳಿರುತ್ತದೆ. ಇದಕ್ಕೆ ಹಳ್ಳಿ ಪಟ್ಟಣಗಳ ವ್ಯತ್ಯಾಸ ಕೂಡ ಇರುವುದಿಲ್ಲ. ವಿದ್ಯಾವಂತರೂ ಕೂಡ ಅನಕ್ಷಸ್ಥರಷ್ಟೇ ಇದಕ್ಕೆ ಬಲಿಪಶುಗಳಾಗಬಹುದು. ಸುಂದರವಾಗಿರುವ ಮಕ್ಕಳ ಮೇಲೆ ಹಿಂಸಾಚಾರವಾಗುವ ಸಾಧ್ಯತೆ ಹೆಚ್ಚು ಎನ್ನುವುದೂ ಕೂಡ ತಪ್ಪು ಕಲ್ಪನೆ. ಮಾನಸಿಕ ರೋಗ ಅಥವಾ ಬುದ್ಧಿಮಾಂದ್ಯತೆ ಇರುವ ಮಕ್ಕಳು ಮತ್ತು ಅಂಗವಿಕಲರು ಹೆಚ್ಚಿನ ಅಪಾಯವನ್ನು ಎದುರಿಸುವ ಸಾಧ್ಯತೆಗಳಿರುತ್ತದೆ.
ಇಷ್ಟೇ ಅಲ್ಲ ಲೈಂಗಿಕ ಹಿಂಸೆ ಹೆಣ್ಣು ಮಕ್ಕಳ ಮೇಲೆ ಮಾತ್ರ ನಡೆಯುತ್ತದೆ, ಗಂಡು ಮಕ್ಕಳು ಸುರಕ್ಷಿತರು ಎನ್ನುವುದೂ ಕೂಡ ನಿಜವಲ್ಲ. ಕೆಲವೇ ತಿಂಗಳ ಹಸುಳೆಗಳಿಂದ ಹಿಡಿದು, ತೊಂಬತ್ತು ವರ್ಷದ ವೃದ್ಧರ ಮೇಲೆ ಹಿಂಸಾಚಾರ ನಡೆದ ಸಾಕಷ್ಟು ಮೊಕದ್ದಮೆಗಳು ಪೋಲೀಸ್ ದಾಖಲೆಗಳಲ್ಲಿವೆ. ಒಂದು ಅಂದಾಜಿನ ಪ್ರಕಾರ ಸುಮಾರು ಶೇಕಡಾ 90ರಷ್ಟು ಹಿಂಸಾಚಾರಗಳು ನಾಲ್ಕನೇ ವಯಸ್ಸಿಗಿಂತ ದೊಡ್ಡ ಮಕ್ಕಳ ಮೇಲೆ ಆಗುತ್ತದೆ.
ಆದ್ದರಿಂದ ಯಾವ ಪೋಷಕರೂ ಕೂಡ ನಮ್ಮ ಮಕ್ಕಳು ಸುರಕ್ಷಿತರು, ನಾವೇನೂ ಮಾಡಬೇಕಾಗಿಲ್ಲ ಎಂದು ಮೈಮರೆಯುವಂತಿಲ್ಲ.
ನಾವು ಮಾಡಲೇಬೇಕಾದುದೇನು?
ಮಕ್ಕಳನ್ನು ಲೈಂಗಿಕ ಶೋಷಕರಿಂದ ರಕ್ಷಿಸುವುದು ಪೋಷಕರ ಕಟ್ಟುನಿಟ್ಟಿನ ಶಿಸ್ತಿನಿಂದ ಮಾತ್ರ ಸಾಧ್ಯವಾಗಲಾರದು. ಇದಕ್ಕಾಗಿ ನಿರಂತರ ಎಚ್ಚರದ ಅಗತ್ಯವಿದೆ.
1. ಮಾತು ಬಾರದ ಅಥವಾ ವಿಷಯವನ್ನು ಸ್ಪಷ್ಟವಾಗಿ ಹೇಳಲಾಗದ ಐದು ವರ್ಷಕ್ಕಿಂತ ಚಿಕ್ಕ ಮಗುವನ್ನು ಅಪರಿಚಿತರ ಹತ್ತಿರ ಬಿಡಬಾರದು.
2. ಬೇಬಿ ಸಿಟ್ಟಿಂಗ್‍ಗಳಲ್ಲಿ ಮಗುವನ್ನು ಬಿಟ್ಟಾಗ ಮಾಮೂಲಿನ ಸಮಯದ ಹೊರತಾಗಿ ಕೆಲವೊಮ್ಮೆ ಧೀಡೀರ್ ಭೇಟಿ ನೀಡಿದರೆ ಅಲ್ಲಿನ ವಾಸ್ತವ ಸ್ಥಿತಿಗತಿಗಳ ಅರಿವಾಗುತ್ತದೆ.
3. ಮಕ್ಕಳು ಯಾರನ್ನಾದರೂ ಮುದ್ದಿಸಲು ಅಥವಾ ಹತ್ತಿರ ಸೇರಿಸಿಕೊಳ್ಳಲು ಇಷ್ಟಪಡದಿದ್ದರೆ ಬಲವಂತವಾಗಿ ಅವರನ್ನು ಅಂತಹ ಕೃತ್ಯಗಳಿಗೆ ತಳ್ಳಬಾರದು. ಮಗು ಎಷ್ಟೇ ಚಿಕ್ಕದಾಗಿದ್ದರೂ ಅದರ ಸ್ವಂತಿಕೆಯನ್ನು ಗೌರವಿಸಬೇಕು. ಪ್ರೀತಿಯನ್ನ ವ್ಯಕ್ತಪಡಿಸಲು ಮಗು ತನ್ನದೇ ಮಾರ್ಗಗಳನ್ನು ಉಪಯೋಗಿಸಲಿ. ಮನೆಯ ಹಿರಿಯರು ಮಗುವಿಗೆ ಇಷ್ಟವಿರದ ಇಂತಹ ಕೆಲಸವನ್ನು ಒತ್ತಾಯದಿಂದ ಹೇರುವುದನ್ನು ಪೋಷಕರು ತಡೆಯಬೇಕು.
4 ಗುರುಹಿರಿಯರನ್ನು ಗೌರವಿಸುವುದನ್ನು ಮಕ್ಕಳಿಗೆ ಕಲಿಸಬೇಕು. ಆದರೆ ಅವರ ಯಾವುದೇ ಅನುಚಿತ ವರ್ತನೆಯನ್ನು ಪ್ರತಿಭಟಿಸಲು ಹೇಳಬೇಕು. ವಯಸ್ಸು, ಸ್ಥಾನ ಮುಂತಾದ ಯಾವ ಅಂಶಗಳನ್ನೂ ಗಮನಿಸದೆ ಮಕ್ಕಳು ತಮ್ಮ ಖಾಸಗೀತನವನ್ನು ಉಳಿಸಿಕೊಳ್ಳುವ ಶಿಕ್ಷಣ ನೀಡಬೇಕು.
5 ಮಗುವಿನ ಜನನಾಂಗ ಮತ್ತು ಪೃಷ್ಟಭಾಗನ್ನು ಬಟ್ಟೆಯ ಮೇಲೆ ಕೂಡ ಯಾರಾದರೂ ಅತಿಯಾಗಿ ಅಥವಾ ಮತ್ತೆಮತ್ತೆ ಸ್ಪರ್ಷಿಸಿದರೆ ಅದನ್ನು ಪ್ರತಿಭಟಿಸಬೇಕೆಂದು ತಿಳಿಸಬೇಕು. ಇಂತಹ ವರ್ತನೆಗಳನ್ನು ಮನೆಯವರೇ ಮಾಡಿದ್ದರೂ ಅದನ್ನು ನಮಗೆ ತಕ್ಷಣ ತಿಳಿಸಬೇಕೆಂದು ಪೋಷಕರು ಹೇಳಬೇಕು. ಹಾಗಂತ ಮಾಮೂಲಿನ ಪ್ರೀತಿಯ ಅಭಿವ್ಯಕ್ತಿಗಳಾದ ಎತ್ತಿಕೊಳ್ಳುವುದು, ಮುದ್ದಾಡುವುದು, ಆಟವಾಡುವುದು ಇವುಗಳನ್ನೇ ತಪ್ಪಿಸಬಾರದು. ಇದರಿಂದ ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಮಗುವಿಗೆ ದೈಹಿಕವಾಗಿ ನೋವುಂಟುಮಾಡಿದರೆ ಮತ್ತು ಪದೇ ಪದೇ ಸ್ಪರ್ಷ, ಹಿಸುಕುವುದು, ಜಿಗುಟುವುದು ಮುಂತಾದವು ಆಗುತ್ತಿದ್ದರೆ ಪೋಷಕರಿಗೆ ತಿಳಿಸಬೇಕೆಂದು ಹೇಳಿಕೊಡಬೇಕು.
6. ಮಕ್ಕಳು ಆಟವಾಗಲು ಹೋಗುವ ಮನೆಗಳ ಪೂರ್ಣ ಹಿನ್ನೆಲೆ ತಿಳಿದಿರಬೇಕು. ಯಾವುದೇ ವ್ಯಕ್ತಿ ನಮ್ಮ ಮಕ್ಕಳ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರೆ ಅವನ ಬಗೆಗೆ ಮಕ್ಕಳಿಂದ ಮಾಹಿತಿ ಪಡೆಯಬೇಕು. “ನಿನಗೆ ಅವರು ಏಕೆ ಇಷ್ಟವಾಗುತ್ತಾರೆ? ನೀವಿಬ್ಬರೂ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತೀರಾ? ಇಬ್ಬರೇ ಇರುವಾಗ ಯಾವ ರೀತಿಯ ಆಟಗಳನ್ನು ಆಡುತ್ತೀರಾ?” ಮುಂತಾದ ಪ್ರಶ್ನೆಗಳನ್ನು ಮಗುವಿಗೆ ಕೇಳುತ್ತಾ ಹೋದರೆ ಅಗತ್ಯ ಮಾಹಿತಿಗಳು ನಿಧಾನವಾಗಿ ದೊರೆಯುತ್ತವೆ.
7. ನಮ್ಮ ಮಕ್ಕಳು ಕೂಡ ಇತರ ಮಕ್ಕಳ ಬಟ್ಟೆ ಎಳೆಯುವುದು, ದೇಹದ ಖಾಸಗೀ ಅಂಗಗಳಿಗೆ ಕೈಹಾಕುವುದು ಮುಂತಾದವನ್ನು ಮಾಡದಂತೆ ಎಚ್ಚರವಹಿಸಬೇಕು. ಕುತೂಹಲಕ್ಕಾಗಿ ಚಿಕ್ಕ ಮಕ್ಕಳು ಹಾಗೆ ಮಾಡುವ ಸಾದ್ಯತೆಗಳಿವೆ. ಆಗ ತಕ್ಷಣ ಬೈದು, ಹೊಡೆದು ಅಥವಾ ಇತರ ಮಕ್ಕಳ ಜೊತೆ ಸೇರದಂತೆ ಮಾಡಿ ಮಗುವಿಗೆ ಬುದ್ಧಿ ಕಲಿಸುವ ಪ್ರಯತ್ನಮಾಡಬಾರದು. ಇದರ ಬಗೆಗೆ ಸರಳವಾಗಿ ತಿಳುವಳಿಕೆ ಹೇಳುವುದರ ಮೂಲಕ ಮಗುವಿನ ಅರಿವನ್ನು ಬೆಳೆಸಬೇಕು. ಪೋಷಕರ ಎಲ್ಲಾ ಪ್ರಯತ್ನವನ್ನು ಮೀರಿ ಪದೇ ಪದೇ ಮಕ್ಕಳು ಇಂತಹ ಕೆಲಸವನ್ನು ಮಾಡುತ್ತಿದ್ದರೆ ತಜ್ಞರ ಸಹಾಯ ಪಡೆಯಬಹುದು.
8 ವಸತಿ ಶಾಲೆ, ಶಾಲಾಪ್ರವಾಸ ಅಥವಾ ಮತ್ತಿತರ ಕಾರಣಗಳಿಗಾಗಿ ಪೋಷಕರಿಂದ ದೂರವಿರುವ ಮಕ್ಕಳ ಬಗೆಗೆ ಹೆಚ್ಚು ಎಚ್ಚರ ವಹಿಸಬೇಕು. ಅವರಿಗೆ ಸಮಯೋಚಿವಾದ ಶಿಕ್ಷಣ ನೀಡುವುದಲ್ಲದೆ ಮನೆಗೆ ಬಂದಾಗ ಅವರ ವರ್ತನೆಗಳತ್ತ ಗಮನಹರಿಸಬೇಕು.
9. ಇಂತಹ ಕೃತ್ಯಗಳನ್ನು ಯಾರಾದರೂ ಮಾಡುವುದನ್ನು ನೋಡಿದರೆ ತಕ್ಷಣ ನಮಗೆ ತಿಳಿಸಲು ಮಕ್ಕಳಿಗೆ ಹೇಳಬೇಕು. ಅಂತಹ ಮಕ್ಕಳು (ಹಿಂಸೆ ಮಾಡುವವರು ಮತ್ತು ಹಿಂಸಾಚಾರಕ್ಕೊಳಪಡುವವರು) ಅಥವಾ ಅವರ ಪೋಷಕರು ನಮಗೆ ಪರಿಚಿತರಾಗಿದ್ದರೆ ಅವರನ್ನು ತಕ್ಷಣ ಎಚ್ಚರಿಸಲು ಇದರಿಂದ ಸಹಾಯವಾಗುತ್ತದೆ. ನಮಗೇಕೆ ‘ಊರ ಉಸಾಪರಿ’ ಎಂದು ಸುಮ್ಮನೆ ಕೂರುವಂತಿಲ್ಲ. ಏಕೆಂದರೆ ಸಮಾಜದಲ್ಲಿ ಇಂತಹ ಘಟನೆಗಳು ಪದೇಪದೇ ನಡೆಯುತ್ತಿದ್ದರೆ ಅದರ ಪರಿಣಾಮ ನಮ್ಮ ಮಕ್ಕಳ ಮೇಲೂ ಆಗಬಹುದು. ಹಾಗಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಒಟ್ಟಾರೆ ಸಮಾಜದ ಆರೋಗ್ಯವನ್ನು ಕಾಪಾಡುವ ಹೊಣೆಯೂ ನಮ್ಮದೇ ಎನ್ನುವುದನ್ನು ಮರೆಯಬಾರದು.
10 ಮಕ್ಕಳು ಬೆಳೆಯುತ್ತಾ ಬಂದಂತೆ ಸ್ನೇಹಿತರೊಡನೆ, ಶಾಲಾ ಕಾಲೇಜುಗಳಲ್ಲಿ ತಮ್ಮತನವನ್ನು ಕಳೆದುಕೊಳ್ಳದೆ ಎಲ್ಲರೊಡನೆ ಬೆರೆಯಲು ಸಾಧ್ಯವಾಗುವ ತರಬೇತಿ ನೀಡಬೇಕು. ಇದಕ್ಕಾಗಿ ವೈಯುಕ್ತಿಕ ಬದುಕು ಮತ್ತು ಸಾರ್ವಜನಿಕ ಬದುಕಿನ ನಡುವಿನ ತೆಳುವಾದ ಗೆರೆಯನ್ನು ಸರಿಯಾಗಿ ಗುರುತಿಸಿಕೊಳ್ಳುವ ಬಗೆಗೆ ಅವರನ್ನು ಎಚ್ಚರಿಸಬೇಕು.
11. ಯಾರಾದರೂ ಮಕ್ಕಳಿಗೆ ಪದೇಪದೇ ಚಾಕೋಲೇಟ್‍ಗಳು, ಉಡುಗೊರೆಗಳನ್ನು ಕೊಡುತ್ತಿದ್ದರೆ ಅದರ ಬಗೆಗೆ ಕಣ್ಣಿಡಬೇಕು. ಅಪರಿಚಿತರೊಡನೆ ವ್ಯವಹರಿಸಬೇಕಾದ ರೀತಿಯ ಬಗೆಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು.
12 ಕೆಟ್ಟ ಘಟನೆಗಳನ್ನು ಮಕ್ಕಳಿಂದ ಮರೆಮಾಚಿ ಅವರನ್ನು ರಕ್ಷಿಸಲು ಆಗುವುದಿಲ್ಲ. ಅವರವರ ವಯಸ್ಸಿಗನುಗುಣವಾಗಿ ಅಂತಹ ಘಟನೆಗಳ ವಿವರಣೆ ನೀಡಿ ಅವುಗಳನ್ನು ನಿಭಾಯಿಸುವ ತಯಾರಿ ಕೊಡಬೇಕು.
13 ಎಲ್ಲಾ ವಯಸ್ಸಿನ ಮಕ್ಕಳಿಗೆ ತಮ್ಮ ಭಾವನೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವಂತಹ ಮುಕ್ತ ವಾತಾವರಣ ಮನೆಯಲ್ಲಿರಬೇಕು. ಇದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರಿಗೆ ಮುನ್ಸೂಚನೆಗಳು ಸಿಗುತ್ತವೆ.
ಹಿಂಸಾಚಾರ ನಡೆದೇ ಹೋದರೆ…..?
ಪೋಷಕರ ಎಲ್ಲಾ ಎಚ್ಚರಿಕೆಯನ್ನೂ ಮೀರಿ ಕೆಲವೊಮ್ಮೆ ಮಕ್ಕಳ ಮೇಲೆ ಹಿಂಸಾಚರದ ಘಟನೆ ನಡೆಯಬಹುದು. ಅಂತಹ ಸಂದರ್ಭಗಳನ್ನು ಮೂರು ಹಂತಗಳಲ್ಲಿ ಪೋಷಕರು ನಿಭಾಯಿಸಬೇಕು.
ಸೂಚನೆಗಳನ್ನು ಗುರುತಿಸುವುದು ಹೇಗೆ?
ಸಾಕಷ್ಟು ಸಂದರ್ಭಗಳಲ್ಲಿ ಮಕ್ಕಳು ತಮ್ಮ ಮೇಲಿನ ಹಿಂಸೆಯನ್ನು ಅಜ್ಞಾನ, ಭಯ, ಅವಮಾನ ಮುಂತಾದ ಕಾರಣಗಳಿಂದಾಗಿ ಪೋಷಕರಿಗೆ ತಿಳಿಸದೇ ಹೋಗಬಹುದು. ಈ ಕೆಳಕಂಡ ಸಂದರ್ಭಗಳಲ್ಲಿ ಪೋಷಕರು ಹೆಚ್ಚಿನ ತನಿಖೆ ಮಾಡಬೇಕು.
1. ಪರಿಚಿತರ ಬಳಿ, ಬೇಬಿ ಸಿಟ್ಟಿಂಗ್ ಮುಂತಾದ ಕಡೆ ಬಿಟ್ಟಾಗ ಹಿಂತಿರುಗಿ ಬಂದ ಮೇಲೆ ಮಗುವಿನ ವರ್ತನೆಯಲ್ಲಿ ಆಗುವ ಬದಲಾವಣೆಗಳು. ಜನನಾಂಗ ಅಥವಾ ದೇಹದ ಇತರ ಕಡೆ ಆಗಿರುವ ಗಾಯಗಳು, ಅಥವಾ ಕಾರಣವೇ ಇಲ್ಲದೆ ಮಗು ಭಯಪಡುವುದು, ಅಳುವುದು.
2. ಊಟ ನಿದ್ದೆಗಳನ್ನು ಸರಿಯಾಗಿ ಮಾಡದೇ ಇರುವುದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಬೆರಳು ಚೀಪುವುದು, ಪದೇಪದೇ ಬಟ್ಟೆ ಅಥವಾ ದೇಹದ ಭಾಗಗಳನ್ನು ತೊಳೆಯುವುದು ಮುಂತಾದ ಅಸಹಜ ವರ್ತನೆಗಳು.
3. ದೇಹವನ್ನು ಹೆಚ್ಚುಹೆಚ್ಚಾಗಿ ಮುಚ್ಚಿಕೊಳ್ಳಲು ಯತ್ನಿಸುವುದು, ದಿನನಿತ್ಯದ ಶುಚಿತ್ವವನ್ನು ಕಡೆಗಣಿಸುವುದು, ಕುರೂಪಿಯಾಗಿ ಕಾಣಲು ಇಚ್ಛಿಸುವುದು.
4. ಮಾತು, ಓದು ಮತ್ತಿತರ ದೈನಂದಿನ ವ್ಯವಹಾರಗಳಲ್ಲಿ ಗಮನಾರ್ಹ ಬದಲಾವಣೆ.
5. ಏಕಾಂಗಿಯಾಗಿರಲು ಭಯಪಡುವುದು, ಹೊರಗಡೆ ಹೋಗಲು ಅಥವಾ ಜನರೊಡನೆ ಬೆರೆಯಲು ಹಿಂಜರಿಯುವುದು.
6. ಆತ್ಮಹತ್ಯೆ ಅಥವಾ ಆತ್ಮಘಾತುಕ ಕೃತ್ಯಗಳಿಗೆ ಪ್ರಯತ್ನಿಸುವುದು.
7. ಅಸಹಜ ಅಥವಾ ಅಕಾಲಿಕ ಲೈಂಗಿಕ ವರ್ತನೆಗಳು, ಲೈಂಗಿಕ ರೋಗಗಳ ಸಂಪರ್ಕ, ಗರ್ಭಧರಿಸುವುದು ಇತ್ಯಾದಿ.
ಹೀಗೆ ಯಾವುದೇ ಅಸಹಜ ವರ್ತನೆಗಳು ಕಂಡುಬಂದಲ್ಲಿ ಪೋಷಕರು ಎಚ್ಚರಗೊಳ್ಳಬೇಕು. ಇಂತಹ ವರ್ತನೆಗಳು ಬರಿಯ ಲೈಂಗಿಕ ಹಿಂಸಾಚಾರದ ಲಕ್ಷಣಗಳಲ್ಲದಿದ್ದರೂ, ಮಕ್ಕಳ ಬಗೆಗೆ ತಕ್ಷಣ ಗಮನಹರಿಸಬೇಕೆನ್ನುವುದಕ್ಕೆ ಸೂಚನೆಗಳಾಗಿರುತ್ತವೆ.
ಮುಂದುವರೆಯುವುದು…
ವಸಂತ್ ನಡಹಳ್ಳಿ
- Advertisement -
- Advertisement -
- Advertisement -
- Advertisement -