30.1 C
Sidlaghatta
Wednesday, August 17, 2022

ದು:ಖವನ್ನು ಮರೆಯಬೇಡಿ!

- Advertisement -
- Advertisement -

ಈ ತಲೆಬರಹವನ್ನು ನೋಡಿ ಆಶ್ಚರ್ಯಪಡಬೇಡಿ. ಇದರ ಪೂರ್ಣರೂಪ ಹೀಗಿದೆ-ದು:ಖವನ್ನು ಕೇವಲ ಮರೆಯಲು ಪ್ರಯತ್ನಿಸಬೇಡಿ, ಅದನ್ನು ಪೂರ್ಣವಾಗಿ ಹೊರಹಾಕಿ.
ಸುರೇಶ್ (52) ಮತ್ತು ಸುನೀತ (47) ದಂಪತಿಗಳು. ಅವರಿಗೆ ರಾಹುಲ್ (20) ಮತ್ತು ರಾಜೀವಿ (14) ಮಕ್ಕಳು. ಸರ್ಕಾರಿ ನೌಕರಿಯಲಿದ್ದ ಸುರೇಶ್ ನ ಸುಖೀ ಸಂಸಾರಕ್ಕೆ ಬರಸಿಡಿಲು ಬಡಿದಿತ್ತು. ಮನೆಯೊಡತಿ ಸುನೀತ ಖಾಯಿಲೆಯಿಂದ ಚೇತರಿಸಿಕೊಳ್ಳಲಾರದೆ ಮರಣ ಹೊಂದಿದಳು. ದು:ಖದಲ್ಲಿ ಮುಳುಗಿದ ಕುಟುಂಬಕ್ಕೆ ಎಲ್ಲರೂ ತಮತಮಗೆ ತಿಳಿದಂತೆ ಸಾಂತ್ವನ ಹೇಳಿದರು.
“ಮನೆಯ ಯಜಮಾನನಾಗಿ ನೀನೇ ಹೀಗೆ ಮಂಕಾಗಿ ಕುಳಿತರೆ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಮಕ್ಕಳನ್ನು ನೋಡಿ, ಅವರ ಭವಿಷ್ಯದ ದೃಷ್ಟಿಯಿಂದ ನಿನ್ನ ದು:ಖವನ್ನು ಮರೆತು ಕೆಲಸಮಾಡು” ಎಂದು ಹಿರಿಯರು ಸುರೇಶನಿಗೆ ಧೈರ್ಯ ತುಂಬಿದರು.
“ಮಕ್ಕಳೇ ನೀವು ಅಳುತ್ತಾ ಕುಳಿತರೆ ಅಪ್ಪನಿಗೂ ಬೇಜಾರಾಗುತ್ತದೆ. ಆಗಿದ್ದಾಯಿತು ಏಳಿ, ದು:ಖವನ್ನು ಮರೆತು ನಿಮ್ಮ ನಿಮ್ಮ ಕೆಲಸ ಮಾಡಿ” ಎಂದು ಮಕ್ಕಳನ್ನು ಹುರಿದುಂಬಿಸಲು ಪ್ರಯತ್ನಿಸಿದರು.
ನಿಧಾನವಾಗಿ ಎಲ್ಲಾ ಮಾಮೂಲಿನ ಸ್ಥಿತಿಗೆ ಬರುತ್ತಿದೆ ಎನ್ನಿಸುತ್ತಿತ್ತು. ಸುರೇಶ ಹೇಗೋ ಸಂಸಾರವನ್ನು ನಿಭಾಯಿಸುತ್ತಿದ್ದ. ರಾಹುಲ್ ಎಂದಿನಂತೆ ತನ್ನ ವಿದ್ಯಾಭ್ಯಾಸ ಮುಂದುವರೆಸಿದ್ದ. ಆದರೆ ಆರೆಂಟು ತಿಂಗಳ ನಂತರ ಮಗಳು ರಾಜೀವಿ ಮಂಕಾಗತೊಡಗಿದ್ದಳು. ವಿದ್ಯಾಭ್ಯಾಸ ಸುಮಾರಾಗಿ ನಡೆಯುತ್ತಿದ್ದರೂ ಅವಳು ಹಿಂದಿನಂತೆ ಲವಲವಿಕೆಯಿಂದ ಇರುತ್ತಿರಲಿಲ್ಲ. ಪ್ರಾರಂಭದಲ್ಲಿ ತಾಯಿಯನ್ನು ಕಳೆದುಕೊಂಡ ದು:ಖವೇ ಇದಕ್ಕೆ ಕಾರಣ ಎಂದುಕೊಂಡ ಸುರೇಶ್ ಪರಿಸ್ಥಿತಿ ಹಾಗೆಯೇ ಮುಂದುವರೆದಾಗ ಕಳವಳಗೊಂಡು ನನ್ನ ಬಳಿ ಆಪ್ತಸಲಹೆಗೆ ಕರೆತಂದರು.
ಕುಟುಂಬದ ಒಬ್ಬೊಬ್ಬ ವ್ಯಕ್ತಿಯನ್ನೂ ಬೇರೆಬೇರೆಯಾಗಿ ಮಾತನಾಡಿಸುತ್ತಾ ಹೋದೆ. ಮಾತುಗಳಿಗಿಂತ ಹೆಚ್ಚಾಗಿ ಎಲ್ಲರಿಂದಲೂ ದು:ಖದ ಮಹಾಪೂರವೇ ಹರಿಯುತ್ತಿತ್ತು. ದು:ಖವನ್ನು ಹೊರಹಾಕಲು ಆಪ್ತಸಲಹೆಗಾರರ ಕೊಠಡಿಯಲ್ಲಿ ಮುಕ್ತವಾಗಿ ಅವಕಾಶ ಮಾಡಿಕೊಡಲಾಗುತ್ತದೆ. ಸಾಕಷ್ಟು ಕಣ್ಣೀರು ಹರಿದ ಮೇಲೆ ಎಲ್ಲರೂ ಹಗುರಾಗುತ್ತಿರುವಂತೆ ಕಂಡಿತು. ಹೆಂಡತಿ/ತಾಯಿಯನ್ನು ಅಕಾಲಿಕವಾಗಿ ಕಳೆದುಕೊಂಡ ದು:ಖ ಒಮ್ಮೆಗೆ ಕಡಿಮೆಯಾಗುವುದು ಸುಲುಭವಲ್ಲ. ಸಮಯ ಹೆಚ್ಚಿನ ದು:ಖಗಳನ್ನು ಕಡಿಮೆ ಮಾಡುತ್ತದೆ. ಆದರೆ ಹತ್ತಿಕಲ್ಪಟ್ಟ ದು:ಖವನ್ನು ಹೊರಹಾಕದಿದ್ದರೆ ಅದಕ್ಕೆ ದೂರಗಾಮಿ ಮಾನಸಿಕ ಮತ್ತು ದೈಹಿಕ ಪರಿಣಾಮಗಳಿರಬಹುದು.
ಆ ಕುಟುಂಬದಲ್ಲಿ ವಾಸ್ತವವಾಗಿ ನಡೆದದ್ದು ಏನು? ಸುನೀತಳ ಶವಸಂಸ್ಕಾರವಾಗಿ ಕೆಲವು ದಿನಗಳ ನಂತರ ನೆಂಟರು ಮತ್ತು ಸ್ನೇಹಿತರೆಲ್ಲಾ ಹೊರಟು ಹೋದರು. ಉಳಿದ ಮೂರು ಜನರು ಸಾವಿನ ದು:ಖವನ್ನು ಇನ್ನೂ ಜೀರ್ಣಿಸಿಕೊಂಡಿರಲಿಲ್ಲ. ಆದರೂ ಯಾರೂ ತಮ್ಮ ದು:ಖದ ಬಗೆಗೆ ಮಾತನಾಡುತ್ತಿರಲಿಲ್ಲ. ಎಲ್ಲರಿಗೂ ಒಳಗೊಳಗೇ ಸುನೀತಾಳ ಬಗೆಗೆ ಮಾತನಾಡುವ ಆಸೆ ಇದ್ದರೂ ಅದರಿಂದ ಬೇರೆಯವರಿಗೆ ಬೇಸರವಾಗಬಹುದೆಂದು ಸುಮ್ಮನಾಗುತ್ತಿದ್ದರು. ಹೊರಗಿನಿಂದ ಆ ಮೂವರೂ ಸಾಮಾನ್ಯವಾಗಿ ವರ್ತಿಸುವಂತೆ ಕಾಣುತ್ತಿದ್ದರೂ ಅವರೆಲ್ಲರ ಮನಸ್ಸಿನಾಳದಲ್ಲಿ ದು:ಖ ಮಡುವುಗಟ್ಟಿತ್ತು. ಸುರೇಶ್ ಕಛೇರಿ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿಕೊಂಡಿದ್ದರೆ ರಾಹುಲ್ ಕಾಲೇಜಿನಲ್ಲಿ ಮತ್ತು ಸ್ನೇಹಿತರೊಡನೆ ವ್ಯಸ್ತನಾಗಿರುತ್ತಿದ್ದ. ಶಾಲೆಯಿಂದ ಬಂದ ತಕ್ಷಣ ಮನೆಯಲ್ಲಿ ಏಕಾಂಗಿಯಾಗಿ ಇರುತ್ತಿದ್ದ ರಾಜೀವಿಗೆ ಅಮ್ಮನ ಸಾವಿನ ದು:ಖವನ್ನು ಮರೆಯುವುದು ಸುಲಭವಾಗಿರಲಿಲ್ಲ. ತನ್ನೊಳಗಿನ ತುಮುಲಗಳ ಬಗೆಗೆ ಮಾತನಾಡಿದರೆ ಬೇರೆಯವರಿಗೆ ಬೇಸರವಾಗಬಹುದೆಂದು ಅವಳು ಎಲ್ಲವನ್ನು ನುಂಗಿಕೊಳ್ಳುತ್ತಾ ಮಂಕಾಗತೊಡಗಿದ್ದಳು. ಇಡೀ ಕುಟುಂಬ ದು:ಖದ ಜ್ವಾಲಾಮುಖಿಯನ್ನು ತುಂಬಿಕೊಂಡಿದ್ದರೂ ಹೊರ ನೋಟಕ್ಕೆ ಪ್ರಶಾಂತವಾದ ಪರ್ವತದಂತಿದ್ದು ಯಾವುದೇ ಕ್ಷಣದಲ್ಲಿ ಸ್ಫೋಟಿಸಬಹುದಾಗಿತ್ತು.
ದು:ಖವನ್ನು ವ್ಯಕ್ತಪಡಿಸುವ ಬಗೆಗೆ ನಮ್ಮೆಲ್ಲರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ರಕ್ತ ಸಂಬಂಧಿಗಳು ಸತ್ತಾಗ ಕೆಲವರು ನಿಜವಾಗಿ ದು:ಖವಾಗದಿದ್ದರೂ ಬೂಟಾಟಿಕೆಯ ಕಣ್ಣೀರಿಡುತ್ತಾರೆ. ಇನ್ನೂ ಕೆಲವರು ಕಣ್ಣೀರಿನ ಮೂಲಕ ದು:ಖವನ್ನು ಹೊರಹಾಕುವುದು ಮಾನಸಿಕ ದೌರ್ಬಲ್ಯದ ಲಕ್ಷಣ ಎಂದುಕೊಂಡಿರುತ್ತಾರೆ. ಗಂಡುಮಕ್ಕಳು ಸಾರ್ವಜನಿಕವಾಗಿ ಅಳಬಾರದು ಎಂದು ಬಾಲ್ಯದಿಂದಲೇ ಕಲಿಸಲಾಗುತ್ತದೆ. ದು:ಖದ ಸಮಯದಲ್ಲಿ ಸಹಜವಾಗಿರುವವರು ಮಾನಸಿಕ ಧೃಡತೆ ಉಳ್ಳವರು ಎಂದು ಬಿಂಬಿಸಲಾಗುತ್ತದೆ. ಆಶ್ಚರ್ಯವೆಂದರೆ ನನ್ನ ಆಪ್ತಸಲಹಾ ಕೊಠಡಿಯ ಏಕಾಂತದಲ್ಲಿ ದು:ಖವನ್ನು ಹೊರಹಾಕಲು ಮುಕ್ತವಾಗಿ ಅವಕಾಶ ನೀಡಿದಾಗ ಸುಮಾರಾಗಿ ಪ್ರತಿಯೊಬ್ಬರೂ ಅತ್ತು ಹಗುರಾಗುತ್ತಾರೆ. ಗಂಡು ಹೆಣ್ಣು, ಮೇಲು ಕೀಳು, ಓದು ವಿದ್ಯೆ, ವೃತ್ತಿ ವಯಸ್ಸು-ಇವೆಲ್ಲವುಗಳಲ್ಲಿ ಏನೇ ವ್ಯತ್ಯಾಸವಿದ್ದರೂ ಎಲ್ಲರೂ ಕಣ್ಣೀರಿನಿಂದ ಮಾತ್ರ ದು:ಖವನ್ನು ಕಡಿಮೆಮಾಡಿಕೊಳ್ಳುತ್ತಾರೆ.
ನಾವೆಲ್ಲರೂ ನೆನಪಿಡಬೇಕಾಗಿದ್ದು ನಮ್ಮೆಲ್ಲಾ ಹೊರ ಮುಖವಾಡಗಳ ಹಿಂದೆ ಎಲ್ಲರೂ ಮನುಷ್ಯ ಸಹಜವಾದ ಭಾವನೆಗಳನ್ನು ಹೊಂದಿರುವವರು. ದು:ಖವಾದಾಗ ಕಣ್ಣೀರು ಬರುವುದು ಅತ್ಯಂತ ಸಹಜವಾದದ್ದು. ಕಣ್ಣೀರನ್ನು ಹತ್ತಿಕ್ಕುವುದು ಗಟ್ಟಿತನವಲ್ಲ, ನಮ್ಮ ದು:ಖವನ್ನು ಸಹಜವಾಗಿ ವ್ಯಕ್ತಪಡಿಸದೆ ಗಟ್ಟಿತನದ ಸೋಗುಹಾಕುವುದು ನಿಜವಾದ ದೌರ್ಬಲ್ಯ.
ಸಾವಿನ ದು:ಖಕ್ಕೆ ಕಣ್ಣೀರು ಸಹಜವಾದ ಹೊರದಾರಿ. ಸತ್ತವರ ನೆನಪಾದೊಡನೆ ನಮ್ಮಲ್ಲಿ ದು:ಖ ಉಮ್ಮಳಿಸುತ್ತಿದ್ದರೆ ಅದು ನಮ್ಮೊಳಗೆ ದು:ಖದ ಖಜಾನೆ ಇನ್ನೂ ಖಾಲಿಯಾಗಿಲ್ಲ ಎನ್ನುವುದರ ಸೂಚನೆ. ದು:ಖ ಸಹಜವಾಗಿ ಹೊರಬಂದಾಗ ಸಮಯ ಕಳೆದಂತೆ ನಮ್ಮೊಡನೆ ಇಲ್ಲದವರೂ ನಮ್ಮೊಳಗೆ ಸಿಹಿಯಾದ ನೆನಪಾಗಿ ಉಳಿಯುತ್ತಾರೆ. ಅವರ ಚಿತ್ರ ಕಣ್ಮುಂದೆ ಬಂದೊಡನೆ ವಿಷಾದದ ಛಾಯೆಯ ನಡುವೆಯೂ ಮನಸ್ಸು ಸ್ಥಿಮಿತದಲ್ಲಿರುತ್ತದೆ.
ನಿಮಗೆ ಕಣ್ಣೀರು ಬರುತ್ತಿಲ್ಲ ಮತ್ತು ದು:ಖವೂ ಮಾಸುತ್ತಿಲ್ಲ ಎಂದಾದರೆ ಅಥವಾ ಕಣ್ಣಿರು ಹರಿಸಿದ ಮೇಲೂ ದು:ಖವನ್ನು ಮರೆಯುವುದು ಸಾಧ್ಯವೇ ಇಲ್ಲ ಎಂದಾದರೆ ತಜ್ಞ ಆಪ್ತಸಲಹೆಗಾರರ ಸಹಾಯ ಕೋರಬಹುದು.
ವಸಂತ್ ನಡಹಳ್ಳಿ

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here