ಮಕ್ಕಳಿಗೆ ರಜೆ ಬಂತೆಂದರೆ ಖುಷಿಯೋ ಖುಷಿ, ಬೇಗ ಏಳಬೇಕೆಂದಿಲ್ಲ ಹೋಂವರ್ಕ್ ಮಾಡಬೇಕೆಂದಿಲ್ಲ, ಇದೀ ದಿನ ಆಟ ನೆಗೆದಾಡ ಜೊತೆಗೆ ತಿರುಗಾಟ.
ರಜೆಯಲ್ಲಿ ಎಲ್ಲಿಗೆ ತಿರುಗಾಟ ಎಂದು ನಾನು ನನ್ನ ಪತಿ ಸೇರಿ ಯೋಚಿಸಿ ಊಟಿಗೆ ಹೋಗುವುದೆಂದು ನಿರ್ಧರಿಸಿದೆವು. ನಾವಿಬ್ಬರೆ ಮಗಳ ಜೊತೆಗೆ ಹೋದರೆ ಚೆನ್ನಾಗಿರುವುದಿಲ್ಲ ಎಂದು ಯೋಚಿಸಿ ನನ್ನ ತಮ್ಮಂದಿರಿಬ್ಬರ ಕುಟುಂಬದೊಡಗೂಡಿ ಹೋಗುವುದೆಂದು ನಿರ್ಧರಿಸಿದೆವು. ಅಂತೂ ಎಲ್ಲರಿಗೂ ಸರಿಯಾಗುವ ದಿನ ಗೊತ್ತುಮಾಡಿಕೊಂಡು ಊಟಿಯ ಕಡೆ ಪ್ರಯಾಣ ಬೆಳೆಸಿದೆವು.
ಮಕ್ಕಳ ಖುಷಿಗಾಗಿ ಊಟಿಯಿಂದ ಕೂನೂರಿಗೆ ನಾವೆಲ್ಲರೂ ಟ್ರೈನ್ ನಲ್ಲಿ ಹೋದೆವು. ಮಳೆಯಲ್ಲಿಯೇ ಪ್ರಕೃತಿಯನ್ನು ಆಸ್ವಾದಿಸುತ್ತಾ ಟೀ ಎಸ್ಟೇಟ್, ಗುಡ್ಡಗಾಡುಗಳನ್ನು ನೋಡುತ್ತಾ ಮಕ್ಕಳ ಕೇಕೆಯನ್ನು ಕೇಳುತ್ತಾ ಎರಡು ಗಂಟೆಯ ನಂತರ ಅದೇ ಟ್ರೈನ್ ನಲ್ಲಿ ಊಟಿಗೆ ವಾಪಾಸಾದೆವು.
ಮಾರನೆ ದಿನ ಊಟಿಯಲ್ಲಿರು ಸ್ಥಳಗಳನ್ನು ಒಂದೊಂದಾಗಿ ನೋಡುತ್ತಾ ಬಟಾನಿಕಲ್ ಗಾರ್ಡನ್ ಗೆ ಬಂದೆವು. ಆಹಾ! ಅದೆಷ್ಟು ಸುಂದರ ಪುಷ್ಪಗಳು, ಹಸಿರು ಹಸಿರಾಗಿ ಬೆಳೆದಿರುವ ಹುಲ್ಲುಗಳು, (Lawn) ಅದಕ್ಕೆ ಚೆಂದವಾಗಿ ಆಕಾರ ಕೊಟ್ಟ ರೀತಿ ನಯನ ಮನೋಹರ.
ಇಷ್ಟೆಲ್ಲ ಸೌಂದರ್ಯ ಆಸ್ವಾದನೆಯ ಮಧ್ಯೆ ದೃಷ್ಟಿ ಬೊಟ್ಟಿನಂತೆ ಒಂದು ಅಂಗಡಿ ಕಣ್ಣಿಗೆ ಬಿತ್ತು. ತಿನ್ನುವ ವಸ್ತುವಿನ ಅಂಗಡಿ ನೋಡಿದೊಡನೆ ಎಲ್ಲರಿಗೂ ಹೊಟ್ಟೆಯ ನೆನಪಾಯಿತು. ಅಂತ ಚಳಿಯಲ್ಲಿಯೂ ಐಸ್ ಕ್ರೀಮ್ ಪೋತ ನನ್ನ ತಮ್ಮ ಐಸ್ ಕ್ರೀಮ್ ತೆಗೆದುಕೊಂಡು ತಿಂದನು, ಅಲ್ಲದೆ ಯಾರು ಯಾರಿಗೆ ಏನೇನು ಬೇಕೋ ಎಲ್ಲರೂ ತಿಂದೆವು.
ನಮ್ಮಂತೆ ಅನೇಕರು ಅಲ್ಲಿಗೆ ಬಂದಿದ್ದರು. ಅಲ್ಲಿ ಒಬ್ಬ ಹುಡುಗ ಐಸ್ ಕ್ರೀಮ್ ತೆಗೆದುಕೊಂಡು ಅದರ ಕಾಗದವನ್ನು ತೆಗೆದು ಕೆಳಗೆ ಎಸೆದ. ಅಲ್ಲಿಯೇ ಪಕ್ಕದಲ್ಲಿ “USE Me” ಎಂದು ಫಲಕ ಹೊತ್ತ ಡಬ್ಬ ನಿಂತಿದ್ದರೂ ಅಲ್ಲಿ ಹಾಕದೆ ಕೆಳಗೆ ಬಿಸಾಡಿದ್ದ. ನನಗೆ ಅದನ್ನು ನೋಡಿ ಸುಮ್ಮನಿರಲಾಗಲಿಲ್ಲ. ನಾನು ಆ ಹುಡುಗನಿಗೆ ಹೇಳಿದೆ “ಯಾಕೆ ಹಾಗೆ ಕೆಳಗೆ ಬಿಸಾಡುತ್ತೀರಿ ಇಲ್ಲೆ ಕಸದ ಡಬ್ಬಿ ಇದೆ ಹಾಕಿ” ಎಂದು. ಎಲ್ಲರ ಎದುರಿಗೆ ನಾನು ಹೇಳಿದ್ದಕ್ಕೆ ಸ್ವಲ್ಪ ನಾಚಿಕಯಾಗಿಯೋ ಅಥವಾ ಆತನಿಗೆ ಹೌದು ಅನಿನಿಸಿತೋ ಗೊತ್ತಿಲ್ಲ, ನಗುತ್ತಾ ಅದನ್ನು ಎತ್ತಿ ಡಬ್ಬದೊಳಗೆ ಹಾಕಿ ಸ್ವಲ್ಪ ಮುಂದೆ ಹೋಗಿ ಮರದ ಕೆಳಗೆ ತಿನ್ನುತ್ತಾ ನಿಂತ. ನಾವೂ ಎಲ್ಲರೂ ಅಂಗಡಿಯವನಿಗೆ ದುಡ್ಡು ಕೊಟ್ಟು ಮುಂದೆ ಹೊರಟೆವು.
ಹೀಗೆ ಮುಂದೆ ಹೋಗುತ್ತಿದ್ದಾಗ ಯಾಕೋ ಹಿಂದೆ ನೋಡಬೇಕು ಎನ್ನಿಸಿ ತಿರುಗಿ ನೋಡಿದೆ. ಅದೇ ಹುಡುಗ ಅದೇ ಅಂಗಡಿಯ ಹತ್ತಿರ ಐಸ್ ಕ್ರೀಮ್ ನ ತುದಿಯ ಕಾಗದವನ್ನು ನಾನು ನೋಡುತ್ತಿರುವಾಗಲೇ ನಗುತ್ತಾ ಕೆಳಗೆ ಬಿಸಾಡಿದ. ನಾನು ಹಿಂತಿರುಗಿ ಬರಲಾರದೇ ಹೋದೆ. ದೂರವೂ ಹೋಗಿದ್ದೆ, ಮೇಲಿಂದ ಹಿಂತಿರುಗಿ ಬಂದು ಹೇಳುವಷ್ಟು ಧೈರ್ಯ ಇರಲಿಲ್ಲವೋ ಅಥವಾ ನಾನು ಹೊರಟರೆ ನನ್ನ ಪತಿ, ತಮ್ಮಂದಿರು ಬೈಯುತ್ತಾರೆನೋ ಎನ್ನುವ ಭಯವೋ ಗೊತ್ತಾಗದೆ ತುಂಬಾ ನೋವಿನಿಂದ ಮುಂದೆ ನಡೆದೆ.
ತುಂಬಾ ದು:ಖ ಉದಾಸಿನತೆಯಿಂದ ನಾನು ಆ ಉದ್ಯಾನವನದಿಂದ ಹೊರಬಂದೆ. ಅಲ್ಲೆ ಹತ್ತಿರದಲ್ಲೆ ಇದ್ದಿದ್ದರೆ ಖಂಡಿತವಾಗಿ ನಾನೇ ಅವನ ಎದುರಿಗೇ ಅದನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಬರುತ್ತಿದೆ. ಆದರೆ ಈಗ ಅನ್ನಿಸುತ್ತದೆ ನನಗೆ ನಾನು ತಿರುಗಿ ಹೋಗಿ ಆತನಿಗೆ ಏನು ಹೇಳದೆ ಆ ಕಾಗದವನ್ನು ಅವನ ಎದುರಿಗೆ ನಾನೇ ತೆಗೆದು ಕಸದ ಬುಟ್ಟಿಗೆ ಹಾಕಿ ಬರಬೇಕಿತ್ತು ಎಂದು. ಆ ಸಮಯದಲ್ಲಿ ಯಾಕೆ ಹಾಗೆ ಹೊಳೆಯಲಿಲ್ಲ ನನಗೆ ತಿಳಿಯದು.
ಯಾಕೆ ಹೀಗೆ? ನಾನು ಹೇಳಿದ್ದಾದರೂ ಏನೂ? ಅಷ್ಟು ಹೇಳಿದ್ದಕ್ಕೆ ಸ್ವಾಭಿಮಾನಕ್ಕೆ ಧಕ್ಕೆ ಬಂತಾ! ಆ ಹುಡುಗನಿಗೆ? ಆ ನಗು! “ನೀನೇನು ಹೇಳೋದು ನನಗೆ” ಎನ್ನುವಂತೆ ಕುಕ್ಕುತ್ತಿತ್ತು!. ಆತನೇ ಒಮ್ಮೆ ಯೋಚಿಸದಾದನಾ? ತಾನು ಮಾಡಿದ್ದು ತಪ್ಪು ಎಂದು. ಯೋಚಿಸುವ ವ್ಯವಧಾನ ಎಲ್ಲಿರಬೇಕು? ಎಲ್ಲರ ಎದುರಿಗೆ ಹಾಗೆ ಹೇಳಿದ್ದೇ ಎನ್ನುವುದೊಂದೇ ಮುಖ್ಯವಾಯಿತು ಆತನಿಗೆ. ಈಗಿನ ಹುಡುಗರ ಯೋಚನೆ “ಯಾರೂ ಏನು ಹೇಳುವ ಅವಶ್ಯಕತೆ ಇಲ್ಲ ತನಗೆಲ್ಲಾ ಗೊತ್ತು” ಎನ್ನುವ ಪೊಳ್ಳು ಅಹಾಂ!! ಗೊತ್ತಿಲ್ಲ!.
“ಇಂದಿನ ಯುವಕರು ನಾಳಿನ ಪ್ರಜೆಗಳು” ಎನ್ನುವುದಕ್ಕೆ ಅರ್ಥವೇ ಇಲ್ಲವಾ! ಎಲ್ಲಿಗೆ ಹೋಗುತ್ತಿದ್ದೇವೆ ನಾವು? ಏನು ಮಾಡುತ್ತಿದ್ದೇವೆ? ಸರಿಯಾ? ತಪ್ಪಾ? ಎನ್ನವು ಪರಿಕಲ್ಪನೆಯೇ ಇಲ್ಲವಾ? ಮೋದಿಯ ಅಲೆ, ದೇಶದ ತುಂಬೆಲ್ಲಾ! ಸ್ವಚ್ಛತೆಯ ಅಭಿಯಾನ!. ಸ್ವಚ್ಛ ಮಾಡುವುದು ಒತ್ತಟ್ಟಿಗಿರಲಿ, ಮಾಡಿಟ್ಟ ಸ್ವಚ್ಛತೆಯನ್ನು ಉಳಿಸಿಕೊಂಡು ಹೋಗುವ ಮನಸ್ಸತ್ವವಾದರೂ ಬೇಡವಾ? ಈ ರೀತಿ ವರ್ತನೆಯಾ ನಾಳಿನ ಪ್ರಜೆಗಳದ್ದು!?.
ದೇಶದೆಡೆಗೆ ನಮ್ಮೆಲ್ಲರಿಗೂ ನಮ್ಮದೇ ಆದ ಕರ್ತವ್ಯ ಇಲ್ಲವಾ? ಯಾವುದೇ ಜವಾಬ್ದಾರಿಯನ್ನು ಹೊರದೆ ಎಲ್ಲವನ್ನೂ ಬೇರೆಯವರ ಅಥವಾ ಸರ್ಕಾರದ ತಲೆಗೆ ಕಟ್ಟಿದರೆ ಹೇಗೆ? ಎಲ್ಲರೂ ಅವರವರ ಕರ್ತವ್ಯವೇನು ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕು ಎನ್ನುವುದನ್ನೂ ಸರಿಯಾಗಿ ಅರಿತರೆ ಎಲ್ಲವೂ ಸರಿಯಾಗಿರುತ್ತದೇನೋ.
ಯಾರು ಯಾರಿಗೆ ಏನೇನು ಹೇಳುವುದು? ಇದು ಹೇಳಿ ಕೇಳಿ ಬರುವಂತಹದ್ದಲ್ಲ. ಸ್ವತ: ಅವರಿಗೆ ಇದು ತಪ್ಪು ಇದು ಸರಿ ಎಂದು ಮನವರಿಕೆಯಾಗಬೇಕು ಅಥವಾ ಮನವರಿಕೆಯಾಗುವಂತೆ ಮಾಡಬೇಕು. ಅದೇ ಆಗದ ಹೊರತು ಯಾವುದೂ ಬದಲಾವಣೆಯಾಗಲಾರದು. ಆ ದಿನ ಎಂದಿಗೆ ಬರುತ್ತದೋ ಕಾದು ನೋಡಬೇಕು ಅಲ್ಲವೇ?
– ರಚನ
- Advertisement -
- Advertisement -
- Advertisement -
- Advertisement -