ಕ್ರೀಡಾಭಿಮಾನಿಗಳು `ದೇಶದಲ್ಲಿ ಕ್ರಿಕೆಟ್‍ಗೇ ವಿಪರೀತ ಆದ್ಯತೆಯಿದೆ. ಹಾಗಾಗಿಯೇ ನಾವು ಒಲಂಪಿಕ್ಸ್ ಪದಕ ಗಳಿಕೆಯಲ್ಲಿ ಹಿಂದುಳಿದಿದ್ದೇವೆ. ಇನ್ನಾದರೂ ಕ್ರಿಕೆಟ್ ಅಂಧಾಭಿಮಾನದಿಂದ ಹೊರಬರಬೇಕು’ ಎಂಬರ್ಥದ ಆಕ್ರೋಶ ತೋರುತ್ತಾರೆ. ಇದರ ಅಗತ್ಯವಿದೆಯೇ ಎನ್ನುವ ಪ್ರಶ್ನೆ ವಿಶ್ಲೇಷಕರನ್ನು ಕಾಡುತ್ತಲೇ ಇದೆ.
ಬ್ರಿಟಿಷರು ತಂದು ಪರಿಚಯಿಸಿದ ಕ್ರಿಕೆಟ್, ಅದೊಂದೇ ಕಾರಣಕ್ಕೆ ನಮ್ಮಲ್ಲಿ ಜನಪ್ರಿಯವಾಯಿತೆಂದರೆ ತಪ್ಪು. ಮೊತ್ತಮೊದಲಾಗಿ, ಕ್ರಿಕೆಟ್‍ನ ವೈಶಿಷ್ಟ್ಯಗಳತ್ತ ನೋಡಬೇಕು. ಖರ್ಚು ವೆಚ್ಚಗಳ ತಂಟೆಯಿಲ್ಲದೆ, ಲಭ್ಯ ಸೌಕರ್ಯದಲ್ಲಿಯೇ ಕ್ರಿಕೆಟ್‍ನ್ನು ಆರಾಮವಾಗಿ ಆಡಬಹುದು. ಚೆಂಡು ಬೇಕಲ್ಲವೇ? ಕಾಗದದ ದೊಡ್ಡ ಸುರುಳಿಯೇ ಚೆಂಡಾದೀತು. ಉರುಟಾದ ಯಾವುದೇ ಕಾಯಿಯಾದರೂ ಸೈ. ಬ್ಯಾಟ್ ಖರೀದಿಸದಿದ್ದರೇನಂತೆ, ಮನೆಯಲ್ಲಿರುವ ಕಟ್ಟಿಗೆ ತುಂಡು, ರೀಪಿನ ತುಂಡು ಸಾಕು! ಪುಟ್ಟ ಅಂಗಳ, ರಸ್ತೆ ಬದಿ, ಕೊನೆಗೆ ಮನೆಯ ವರಾಂಡದಲ್ಲಾದರೂ ಕ್ರಿಕೆಟ್ ಆಡಬಹುದು.
ಬಹುಷಃ ಈ ತರದ `ಫ್ಲೆಕ್ಸಿಬಿಲಿಟಿ’ಯೇ ಕ್ರಿಕೆಟ್‍ನ ಅತ್ಯುತ್ತಮ ಆಕರ್ಷಣೆ. ಇದ್ದಷ್ಟು ಸಮಯದಲ್ಲಿ ಆಟ ಆಡಬಹುದು. ವೈಯುಕ್ತಿಕವಾಗಿ `ರನ್ ಸಾಧನೆ’ ಇರುವುದರಿಂದ, ವಿಕೆಟ್ ಗಳಿಕೆ ಸಾಧ್ಯವಿರುವುದರಿಂದ ಆಟದ ಅಂತ್ಯಕ್ಕೆ ಆಡುವವರ ಇಗೋಗೂ ಸಮಾಧಾನ ತಂದುಕೊಡುತ್ತದೆ. ರಾಷ್ಟ್ರೀಯ ಕ್ರೀಡೆ ಎಂಬ ಖ್ಯಾತಿಯ ಹಾಕಿಯನ್ನು ಆಡಬೇಕೆಂದರೆ ಯಬಡಾ ಬಡಸಾ ಹಾಕಿ ಸ್ಟಿಕ್ ಉಪಯೋಗವಾಗುವುದಿಲ್ಲ. ಮೈದಾನವೂ ಸಮತಟ್ಟಾಗಿರಬೇಕು. ಉಬ್ಬು ತಗ್ಗುಗಳಿದ್ದಲ್ಲಿ ಡ್ರಿಬ್ಲಿಂಗ್ ಕಲಿಯಲು ಸಾಧ್ಯವೇ? ಇನ್ನು ಟೆನಿಸ್, ವಾಲಿಬಾಲ್‍ಗಳಿಗೆ ರ್ಯಾಕೆಟ್, ಚೆಂಡು, ಹೀಗೆ ಖರ್ಚಿನ ಬಾಬತ್ತಿನ ಬೇಡಿಕೆಗಳೇ. ಚೆಸ್ ಆಡುವೆವೆಂದರೂ ಚೆಸ್ ಕಾಯಿ, ಬೋರ್ಡ್‍ನ್ನಾದರೂ ತಂದುಕೊಳ್ಳಲೇಬೇಕು.
ಇಂದು ಬಡ ಭಾರತೀಯ ಶೂಟಿಂಗ್ ಸ್ಪರ್ಧೆಯ ಕನಸು ಕಾಣುವುದೂ ದುಬಾರಿ. ಶೂಟಿಂಗ್ ರೇಂಜ್ ಸ್ಥಾಪಿಸುವುದು ಲಕ್ಷಗಳ ಮಾತು. ಅತ್ಯಾಧುನಿಕ ಪಿಸ್ತೂಲ್ ಹೊಂದಲೂ ಮತ್ತೆ ಲಕ್ಷಗಳನ್ನೇ ಸುರಿಯಬೇಕು. ಲಕ್ಷ್ಯದ ವಿಚಾರ ಮತ್ತೆಲ್ಲಿ? ಸಚಿನ್, ದ್ರಾವಿಡ್, ಧೋನಿಗಳನ್ನು `ಮಿಮಿಕ್’ ಮಾಡುತ್ತ ಕನಸಿನ ಲೋಕದಲ್ಲಿ ತೇಲಲು ಕ್ರಿಕೆಟ್‍ನಲ್ಲಿ ಸಾಧ್ಯ. ಅಭಿನವ್ ಬಿಂದ್ರಾರಂತೆ ಕನವರಿಸಲು ಪಿಸ್ತೂಲ್ ಕೈಯಲಿಲ್ಲ. ಹೆಚ್ಚೆಂದರೆ, ಯಾವುದೋ ಪಿಸ್ತೂಲ್ ಹಿಡಿದುಕೊಂಡರೂ ಪೋಲೀಸರು ಬಂದು ಎಳೆದೊಯ್ಯುತ್ತಾರೆ, ಶಂಕಿತ ಉಗ್ರಗಾಮಿ ಎನ್ನುತ್ತ!
ಕ್ರಿಕೆಟ್‍ನ ಜನಪ್ರಿಯತೆಗೆ ಒಂದು ವಿಚಿತ್ರ ಕಾರಣವಿದೆ. ಇದನ್ನು ಯಾರು ಬೇಕಾದರೂ ಆಡಬಹುದು. ಬೂನ್, ರಣತುಂಗರ ತರಹದ ದಡಿಯ, ಚಂದ್ರಶೇಖರ್, ವೆಂಕಟಪತಿ ರಾಜು ಮಾದರಿಯ ಕಡ್ಡಿ ಪೈಲ್ವಾನ್, ಕಲುವಿತರಣ, ಪೀಯೂಷ್ ಚಾವ್ಲಾ ತರಹದ ಕುಳ್ಳರೂ ಕ್ರಿಕೆಟ್ ಪಕ್ಷಪಾತಿಯಲ್ಲ. ಅವರವರ ಆಳ್ತನಕ್ಕೆ, ಸಾಮಥ್ರ್ಯಕ್ಕೆ ಹೊಂದಬಹುದಾದ ಕಾರ್ಯಕ್ಷೇತ್ರಗಳನ್ನು ಆಯ್ದುಕೊಳ್ಳಲು ಕ್ರಿಕೆಟ್‍ನಲ್ಲಿ ಅವಕಾಶವಿದೆ. ಹೋಗಿ, ಐದಡಿಯ ಯುವಕ ಬಾಸ್ಕೆಟ್‍ಬಾಲ್ ಆಡುವುದು ದುಸ್ಸಾಹಸ. ಮಂದಗತಿಯ ಚಲನೆಯವ ಫುಟಬಾಲ್ ಆಗಬಹುದಷ್ಟೇ, ಆಡಲಾರ! ಇನ್ನಾವುದು ಬೇಡ ಎಂದರೂ ಚೆಸ್ ಆಡಲು ಮೆದುಳು ಬೇಕು!!
ಭಾರತ ಕ್ರಿಕೆಟ್‍ನಲ್ಲಿ ಮಾತ್ರ ಮೂರು ವಿಶ್ವಕಪ್ ಗೆದ್ದಿದೆ. ಹಾಗೆಂದರೆ, ಕ್ರಿಕೆಟ್ ಅಲರ್ಜಿಯ ಮಂದಿ `ಬಿಡಿ, ಕ್ರಿಕೆಟ್ ವಿಶ್ವದಲ್ಲಿ ಆಡುವುದು ಬರೀ ಒಂಬತ್ತು ರಾಷ್ಟ್ರಗಳಲ್ಲಿ. ಅದೆಂತ ವಿಶ್ವದರ್ಜೆಯ ಆಟ?’ ಎನ್ನುತ್ತಾರೆ. ಊಹ್ಞೂ, ಇದು ಕೂಡ ಅಸೂಯೆಯ ಪ್ರತಿಬಿಂಬವೇ ವಿನಃ ವಾಸ್ತವವಲ್ಲ.
ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ – ಐಸಿಸಿಯಲ್ಲಿ 120 ಸದಸ್ಯ ರಾಷ್ಟ್ರಗಳಿವೆ. ಇವೆಲ್ಲ ಕ್ರಿಕೆಟ್ ಆಡುವ ದೇಶಗಳು. ಇತರ ಆಟಗಳಲ್ಲೂ ಭಾರತ – ಬರ್ಮುಡಾ ಕ್ರಿಕೆಟ್ ತಂಡಗಳ ತಾಕತ್ತಿನಲ್ಲಿ ಕಾಣುವ ಅಂತರ ಕಂಡುಬರುತ್ತದೆ. ವಿಶ್ವ ಫಿಫಾ ರ್ಯಾಂಕಿಂಗ್‍ನಲ್ಲಿ 153ನೇ ಸ್ಥಾನದ ಭಾರತ ಬ್ರೆಜಿಲ್ ವಿರುದ್ಧ ಆಡಿದಂತೆ! ಅಷ್ಟಕ್ಕೂ ಫುಟಬಾಲ್ ವಿಶ್ವಕಪ್‍ನಲ್ಲಿ ಅಗ್ರ ಎಂಟು ತಂಡದಲ್ಲಿ ಕೆಲವೇ ದೇಶಗಳು ಕಾಣಿಸಿಕೊಳ್ಳುತ್ತವೆ ಎಂದರೆ ಅಸಮತೋಲನ ಅಲ್ಲೂ ಇದೆ ಎಂತಲೇ ಅಲ್ಲವೇ?
ಡೇವಿಸ್ ಕಪ್ ಟೆನಿಸ್‍ನ ಪ್ರಮುಖ ಸ್ಪರ್ಧೆಯಲ್ಲಿ ಕೇವಲ 16 ತಂಡಗಳು ಪಾಲ್ಗೊಳ್ಳುತ್ತವೆ. ಫುಟಬಾಲ್‍ನಲ್ಲಿ 32. ಇದರರ್ಥ ಇವಿಷ್ಟೇ ದೇಶಗಳಲ್ಲಿ ಈ ಆಟಗಳಿವೆ ಎಂದಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇವು ಮುಂದಿವೆ ಎನ್ನಬಹುದು. ಕ್ರಿಕೆಟ್‍ನಲ್ಲೂ ಅಷ್ಟೇ, ಆಟದ ತಾಕತ್ತು ತೋರಿದರೆ ಇನ್ನಾವುದೇ ಹತ್ತನೇ ರಾಷ್ಟ್ರ ಮುಖ್ಯ ಪಂಕ್ತಿಯಲ್ಲಿ ಕಾಣಿಸಿಕೊಳ್ಳಬಹುದು. ಬೇರೆ ಆಟಗಳ ಹಿರಿಮೆಯ ಬಗ್ಗೆ ಕ್ರಿಕೆಟ್‍ಗೆ ಗೌರವವಿದೆ. ಉಳಿದವರು ಕ್ರಿಕೆಟ್‍ನ್ನು ಆದರಿಸುವ ಹೃದಯ ವೈಶಾಲ್ಯ ಬೇಡವೇ?
ಕ್ರಿಕೆಟ್‍ನ ಆಟದ ಸ್ವರೂಪದಿಂದಾಗಿ ಅದು ಜಾಹೀರಾತುದಾರರಿಗೂ ಅಚ್ಚುಮೆಚ್ಚು. ಅತಿ ಜನಸಂಖ್ಯೆಯ ಭಾರತೀಯ ಉಪಖಂಡದಲ್ಲಿ ಕ್ರಿಕೆಟ್ ಜನಪ್ರಿಯವಾಗಿರುವುದರಿಂದ ಅದಕ್ಕೆ ಗ್ರಾಹಕ ವಸ್ತು ತಯಾರಕರ ಮುಚ್ಚಟ್ಟೆ ಅರ್ಥವಾಗುವಂತದ್ದು. ಇನ್ನೊಂದು ಕಾರಣವಿದೆ. ಕ್ರಿಕೆಟ್‍ನಲ್ಲಿ ಓವರ್‍ಗಳ ಮಧ್ಯದ ಸಮಯ, ವಿಕೆಟ್ ಬಿದ್ದಾಗಿನ ವೇಳೆಗಳೆಲ್ಲ ಜಾಹೀರಾತು ಸ್ಲಾಟ್! ಬೇರೆ ಆಟದಲ್ಲಿ, ನೇರಪ್ರಸಾರದ ವೇಳೆ ಆಟವನ್ನು ವಂಚಿಸದೆ ಜಾಹೀರಾತು ಹಾಕುವುದು ಸುಲಭವಲ್ಲ. ಫುಟಬಾಲ್, ಹಾಕಿ, ಮೋಟಾರ್ ರೇಸಿಂಗ್….. ಊಹ್ಞೂ.
ಇಲ್ಲ, ಕ್ರಿಕೆಟ್‍ಗೆ ಬೆಳೆಯುವ ಅವಕಾಶವೇ ಹೆಚ್ಚು. 20 – 20 ಅವತರಿಸಿರುವುದು ವಿಶ್ವದ ಮತ್ತಷ್ಟು ದೇಶಗಳಿಗೆ ಈ ಕ್ರೀಡೆ ಹಬ್ಬಲು ನೆಪವಾಗುತ್ತಿದೆ. ಈಗಾಗಲೇ ಚೀನಾದ ದೃಷ್ಟಿ ಕ್ರಿಕೆಟ್‍ನತ್ತ ಬಿದ್ದಿದೆ. ಈಗಾಗಲೇ ಚೀನಾದಲ್ಲಿ ಕ್ರಿಕೆಟ್ ಅಸೋಸಿಯೇಷನ್ ಇದೆ. 2012ರ ವರ್ಷಕ್ಕೆ 60 ಸಹಸ್ರ ಮಂದಿ ಕ್ರಿಕೆಟ್ ಆಡುವ `ಪರಿಣಿತ’ರನ್ನಾಗಿಸುವ ಗುರಿ ಹೊಂದಲಾಗಿತ್ತು. ಅಲ್ಲೀಗ 140 ಅಧಿಕೃತ ಅಂಪೈರ್, ಕೋಚ್‍ಗಳಿದ್ದಾರೆ. 100 ಶಾಲೆ, 10 ಸಾವಿರ ವಿದ್ಯಾರ್ಥಿಗಳಿಗೆ ಕ್ರಿಕೆಟ್ ರುಚಿ ಹತ್ತಿಸಲಾಗಿದೆ.
ಕ್ರಿಕೆಟ್ ಟೀಕಾಕಾರರಿಗೆ ತಿಳಿಸಬೇಕಾದ ಕೊನೆಯ ವಿಚಾರವೆಂದರೆ, 2020ರ ಒಲಂಪಿಕ್ಸ್‍ನಲ್ಲಿ 20 – 20 ಕ್ರಿಕೆಟ್ ಪದಕದ ಸ್ಪರ್ಧೆಯಾಗುವ ಎಲ್ಲ ಸಾಧ್ಯತೆಗಳಿವೆ!
– ಮಾ.ವೆಂ.ಸ. ಪ್ರಸಾದ.
- Advertisement -
- Advertisement -
- Advertisement -
- Advertisement -