30.1 C
Sidlaghatta
Thursday, February 22, 2024

ನಾವೆಷ್ಟು ಕೊಳ್ಳುಬಾಕರು – ಭಾಗ 2

- Advertisement -
- Advertisement -

ಮಾರಾಟದ ಬೆಲೆ ನೂರಾರು ಪಟ್ಟು
ಇಡೀ ದೇಶದ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ಪಾದನೆಯಾಗುವ ಹೆಚ್ಚಿನ ವಸ್ತುಗಳ ಬೆಲೆ ಉತ್ಪಾದನ ವೆಚ್ಚಕ್ಕಿಂತ ನೂರಾರು ಪಟ್ಟು ಹೆಚ್ಚಾಗಿರುತ್ತದೆ. ಉತ್ಪಾದನೆಯ ವೆಚ್ಚ ಮತ್ತು ಮಾರಾಟದ ಬೆಲೆಯ ಅಂತರದ ಹಣ ಮಾರಾಟ ಜಾಲ, ಸಾಗಾಣಿಕೆ, ಪ್ರಚಾರ ಮತ್ತು ಕಂಪನಿಗಳ ದೊಡ್ಡ ಮೊತ್ತದ ಲಾಭಾಂಶಕ್ಕೆ ಹೋಗುತ್ತದೆ.
ಆಧುನಿಕ ಅರ್ಥಶಾಸ್ತ್ರಜ್ಞರ ಪ್ರಕಾರ ವಸ್ತುಗಳನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸುವುದರಿಂದ ಅವುಗಳ ಉತ್ಪಾದನ ವೆಚ್ಚ ಕಡಿಮೆಯಾಗುತ್ತದೆ. ಇದು ಸತ್ಯವೇ ಇದ್ದರೂ ಇಂತಹ ದೊಡ್ಡ ಮಟ್ಟದ ಉತ್ಪಾದನೆಯನ್ನು ಪ್ರಪಂಚಾದಾದ್ಯಂತ ಗ್ರಾಹಕರಿಗೆ ತಲುಪಿಸಲು ಪ್ರಚಾರ, ಮಾರಾಟ ಜಾಲ, ಸಾಗಾಣಿಕೆ-ಮುಂತಾದ ವೆಚ್ಚಗಳಿರುತ್ತವೆ. ಹಾಗಾಗಿ ವಸ್ತುಗಳು ಗ್ರಾಹಕರಿಗೆ ತಲುಪುವಷ್ಟರಲ್ಲಿ ಅವುಗಳ ಬೆಲೆ ನೂರಾರು ಪಟ್ಟು ಹೆಚ್ಚಾಗಿರುತ್ತದೆ ಎನ್ನುವ ಸತ್ಯವನ್ನು ಅರ್ಥಶಾಸ್ತ್ರದ ಪುಸ್ತಕಗಳಲ್ಲಿ ಮರೆಮಾಚಲಾಗತ್ತದೆ.
ಅವರ ಉತ್ಪಾದನೆಯೇ ನಮ್ಮ ಅಗತ್ಯಗಳು “ಅಗತ್ಯಗಳು ಅವಿಷ್ಕಾರದ ಮೂಲ” ಎನ್ನುವುದು ಹಳೆಯ ಮಾತಾಯಿತು. ಇವತ್ತು ಕಾರ್ಪೋರೇಟ್‍ಗಳು ತಾವು ಉತ್ಪಾದಿಸಿದ್ದನ್ನು ಜನರ ಅಗತ್ಯ ಎಂದು ಭಾರೀ ಪ್ರಚಾರದ ಮೂಲಕ ಬಿಂಬಿಸುತ್ತಾರೆ ಇದಕ್ಕೆ ಒಂದು ಸಣ್ಣ ಉದಾಹರಣೆ ನೋಡೋಣ. ನಮ್ಮ ಹಳ್ಳಿಗಳಲ್ಲಿ ಹಿಂದಿನಿಂದಲೂ ಹಲ್ಲನ್ನು ಉಜ್ಜಲು ಕಹಿಬೇವಿನ ಕಡ್ಡಿ, ಇದ್ದಿಲು ಮತ್ತು ಉಪ್ಪು ಅಥವಾ ಭತ್ತದ ಹೊಟ್ಟನ್ನು ಸುಟ್ಟನಂತರ ಬರುವ ಉಮಿ (ಕಪ್ಪುಬೂದಿ) ಮುಂತಾದವುಗಳನ್ನು ಉಪಯೋಗಿಸಲಾಗುತ್ತಿತ್ತು. ಟೂತ್ ಬ್ರಷ್ ಮತ್ತು ಪೇಸ್ಟ್‍ಗಳನ್ನು ಕಂಡುಹಿಡಿದ ಮೇಲೆ ಇವುಗಳನ್ನು ಅನಿವಾರ್ಯವೆಂದು ತೋರಿಸಲಾಯಿತು. ಎಲ್ಲರನ್ನೂ ಸಮಾಧಾನ ಪಡಿಸಲು ನೀಮ್‍ಯುಕ್ತ ಪೇಸ್ಟ್‍ಗಳೂ ಬಂದವು. ಇದೇ ರೀತಿ ಸೀಗೆಪುಡಿಗೆ ಬದಲಾಗಿ ಶಿಕಾಕಾಯಿ ಶಾಂಪೂಗಳೂ, ಜಿಡ್ಡಿನ ಅಂಶವನ್ನು ಚರ್ಮದಲ್ಲೇ ಉಳಿಸುವ ಕಡಲೆಹಿಟ್ಟಿಗೆ ಬದಲಾಗಿ ಗ್ಲಿಸರೀನ್ ಇರುವ ಸೋಪುಗಳೂ ಬಂದಿವೆ. ಇವುಗಳ ಬಣ,್ಣ ಸುವಾಸನೆ, ಉಪಯೋಗಿಸುವ ಅನುಕೂಲ, ಇವುಗಳಿಂದಾಗಿ ನಾವೆಲ್ಲಾ ಇವುಗಳಿಗೆ ಮುಗಿಬಿದ್ದು ಹಣ ತೆರುತ್ತೇವೆ. ಇಂತಹ ವಸ್ತುಗಳು ನಿಜವಾಗಿ ನಮ್ಮ ಸುತ್ತಲೂ ಪುಕ್ಕಟೆ ಸಿಗುವ ವಸ್ತುಗಳಿಗಿಂತ ಹೇಗೆ ಭಿನ್ನ ಎಂದು ನಾವು ಯೋಚಿಸುವುದಕ್ಕೆ ಅವಕಾಶವಿರದಷ್ಟು ಪ್ರಚಾರದ ಭರಾಟೆ ಇರುತ್ತದೆ.
ಸಂಶೋಧನೆಗಳ ವಿಶ್ವಸಾರ್ಹತೆ
ಪ್ರಪಂಚದ ಎಲ್ಲಾ ಕ್ಷೇತ್ರಗಳಲ್ಲಿನ ಹೆಚ್ಚಿನ ಸಂಶೋಧನೆಗೆ ಹಣ ಕಾರ್ಪೋರೇಟ್‍ಗಳಿಂದಲೇ ಬರುತ್ತದೆ. ಹಾಗಾಗಿ ಸಂಶೋಧನೆಗಳ ವಿಷಯವನ್ನು, ದಿಕ್ಕನ್ನು ಮತ್ತು ಅದರ ಫಲಿತಾಂಶಗಳನ್ನೂ ಕೂಡ ಇವರು ತಮಗೆ ಬೇಕಾದಂತೆ ತಿರುಚಿರುತ್ತಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಮನುಷ್ಯನ ರಕ್ತದೊತ್ತಡ 120/80 ಇರಬೇಕು ಎಂದು ಶತಮಾನಗಳ ಹಿಂದಿನಿಂದಲೇ ವೈದ್ಯಕೀಯ ಸಂಶೋಧನೆಗಳು ಹೇಳಿವೆ. ಇದನ್ನು 110/70ಕ್ಕೆ ಇಳಿಸುವ ಹುನ್ನಾರಗಳು ನಡೆಯುತ್ತಿವೆ. ಇದಕ್ಕಾಗಿ ಹಲವು ಸಂಶೋಧನೆಗಳ ಪ್ರಹಸನ ನಡೆಸುವುದು ಬಹುರಾಷ್ಟ್ರೀಯ ಔಷಧ ಕಂಪನಿಗಳಿಗೆ ಕಷ್ಟವೇನಲ್ಲ. ಹೀಗೆ ಇವರ ಸಂಶೋಧನೆಗೆ ಮಾನ್ಯತೆ ಸಿಕ್ಕ ತಕ್ಷಣ ಇವರ ಉತ್ಪನ್ನಗಳಿಗೆ ಕಡಿಮೆ ಎಂದರೆ 50 ಕೋಟಿ ಜನ ಹೊಸ ಗ್ರಾಹಕರು ಸಿಗಬಹುದು ಎಂಬುದು ಒಂದು ಆಂದಾಜು. ನಮ್ಮ ತಾತ ಮುತ್ತಾತಂದಿರು 120/80 ಕ್ಕಿಂತ ಹೆಚ್ಚಿನ ರಕ್ತದೊತ್ತಡ ಇದ್ದಾಗ್ಯೂ ವೈದ್ಯರ ಹತ್ತಿರ ಹೋಗದೇ ಆರೋಗ್ಯವಾಗಿ ತುಂಬು ಜೀವನವನ್ನು ಕಳೆದಿರುವ ಸಾಧ್ಯತೆಗಳನ್ನು ಇಂತಹ ಸಂಶೋಧನೆಗಳ ಪರಿಧಿಯಿಂದ ಹೊರಗಿಟ್ಟಿರುತ್ತಾರೆ.
ಜೀವನ ಮಟ್ಟದ ಭ್ರಮಾಲೋಕ
ವಾಹನಗಳು, ಮನೆಯಲ್ಲಿ ಬಳಸುವ ಯಂತ್ರಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಡ್ಜೆಟ್‍ಗಳನ್ನು ಮಾರಾಟ ಮಾಡಲು, ಇವುಗಳನ್ನು ಹೊಂದಿರುವವರು “ಸುಧಾರಿತ ಜೀವನ ಮಟ್ಟ” ಉಳ್ಳವರು ಎಂದು ಬಿಂಬಿಸಲಾಯಿತು. ಸರ್ಕಾರಗಳು ತಮ್ಮ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಈ ರೀತಿಯ “ಜೀವನ ಮಟ್ಟ”ವನ್ನೇ ಮಾನದಂಡಗಳನ್ನಾಗಿ ಉಪಯೋಗಿಸಲು ಆರಂಭಿಸಿದ ಮೇಲೆ ಕಾರ್ಪೋರೇಟ್‍ಗಳ ಖಜಾನೆ ಉಕ್ಕಿ ಹರಿಯತೊಡಗಿತು. ಜನತೆ ಇವುಗಳನ್ನು ಹೊಂದಲು ಸಾಲಸೂಲಗಳನ್ನು ಮೈಮೇಲೆ ಎಳೆದುಕೊಳ್ಳತೊಡಗಿತು. ಈ ಗ್ಯಾಡ್ಜೆಟ್‍ಗಳನ್ನು ಹೊಂದಲಾಗದ ಏಷ್ಯಾ, ಆಫ್ರಿಕಾ, ದಕ್ಷಿಣಾ ಅಮೇರಿಕಾದ ದರಿದ್ರರು ಬಡತನದ ಜೊತೆಗೆ ಕೀಳರಿಮೆ, ಹತಾಷೆಗಳಿಂದ ಇದ್ದೂ ಸತ್ತಂತಾದರು.
ಬಳಸಿ ಮತು ಬಿಸಾಕಿ
“ಯೂಸ್ ಅಂಡ್ ಥ್ರೋ” ಸಂಸ್ಕøತಿಯನ್ನು ಹುಟ್ಟುಹಾಕಿರುವ ಅಮೇರಿಕಾದಲ್ಲಿ ಪ್ರತಿವರ್ಷ ಸುಮಾರು 4000 ಕೋಟಿ ತಂಪುಪಾನೀಯಗಳ ಬಾಟಲಿ ಮತ್ತು ಕ್ಯಾನ್‍ಗಳನ್ನು ಉಪಯೋಗಿಸಿ ಎಸೆಯುತ್ತಾರೆ. ಇವುಗಳನ್ನು ಸಾಲಾಗಿ ಜೋಡಿಸಿದರೆ 20ಸಾರಿ ಚಂದ್ರನವರೆಗೆ ಹೋಗಿ ಹಿಂತಿರುಗಬಹುದು!! ಪ್ಲಾಸ್ಟಿಕ್ ಮತ್ತು ಇಂತಹ ಇತರ ಅಪಾಯಕಾರೀ ತ್ಯಾಜ್ಯವನ್ನೆಲ್ಲಾ ಅವರು ಉತ್ತರ ಶಾಂತಸಾಗರದ ಮಧ್ಯೆ ಸುರಿದು ಅಲ್ಲಿ ಟೆಕ್ಸಾಸ್ ರಾಜ್ಯದ ಅಳತೆಯ “ಗ್ರೇಟ್ ಪ್ಯಾಸಿಫಿಕ್ ಗಾರ್ಬೇಜ್ ಪ್ಯಾಚ್”ನ್ನು ಸೃಷ್ಟಿಸಿದ್ದಾರೆ. ನಮ್ಮ ಮನೆಯ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಕುವುದಕ್ಕೂ ಇದಕ್ಕೂ ವ್ಯತ್ಯಾಸವೇನಿದೆ ಹೇಳಿ? ಆದರೆ ದೊಡ್ಡಣ್ಣನನ್ನು ಪ್ರಶ್ನಿಸುವ ಎದೆಗಾರಿಕೆ ಯಾರಿಗೂ ಇಲ್ಲ.
ಇದು ಒಂದು ಉದಾಹರಣೆ ಮಾತ್ರ. ಇಂತಹ “ಬಳಸಿ ಮತ್ತು ಬಿಸಾಕಿ” ಸಂಸ್ಕøತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಬಹಳ ವ್ಯವಸ್ಥಿತವಾಗಿಯೇ ರೂಪಿಸಿದ್ದಾರೆ. ಇದರಿಂದ ಅವರ ಉತ್ಪನ್ನಗಳಿಗೆ ನಿರಂತರವಾಗಿ ಬೇಡಿಕೆ ಇರುತ್ತದೆ. ನಮ್ಮ ಅಪ್ಪ ಮೂವತ್ತು ವರ್ಷ ಉಪಯೋಗಿಸಿದ್ದ ಗಟ್ಟಿಮುಟ್ಟಾದ ಸ್ಟೀಲ್ ರೇಜರ್ ಒಂದನ್ನು ನಾನು ಮೂವತ್ತು ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ಆದರೆ ನನ್ನ ಮಗನಿಗೆ ಬಳಸಿ ಬಿಸಾಕುವ ರೇಜರ್‍ಗಳು ಬೇಕು. ಜಾಹಿರಾತುಗಳಿಂದ ನಮ್ಮನ್ನು ನಿರಂತರ ಗ್ರಾಹಕರನ್ನಾಗಿಸುವ ಪರಿ ಇದು. ಇದರಲ್ಲಿ ಏನೂ ವಿಶೇಷವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಇದನ್ನು ಒಪ್ಪಿಕೊಂಡಿದ್ದೇವೆ.
ಕಡಿಮೆ ಗುಣ ಮಟ್ಟದ ವಸ್ತುಗಳನ್ನು ಉಪಯೋಗಿಸಿದರೂ ವಸ್ತುಗಳನ್ನು ಅತಿ ಆಕರ್ಷಕವಾಗಿ ಮಾಡುವುದು ಮತ್ತು ನಿರಂತರ ಬದಲಾಗುತ್ತಿರುವ ತಾಂತ್ರಿಕತೆಯ ಭ್ರಮೆ ಹುಟ್ಟಿಸುವುದು- ಇವುಗಳಿಂದಾಗಿ ಈ ಸಂಸ್ಕøತಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಜೊತೆಗೆ ಪ್ಲಾಸ್ಟಿಕ್‍ನ ಅವಿಷ್ಕಾರ ವಸ್ತುಗಳ ಬೆಲೆಯನ್ನು ಗಮನಾರ್ಹವಾಗಿ ಇಳಿಸಲು ಸಹಾಯಮಾಡಿದೆ. ಈ ಪ್ಲಾಸ್ಟಿಕ್ ಎಂಬ ರಕ್ತಬೀಜಾಸುರನ ದೂರಗಾಮೀ ಪರಿಣಾಮಗಳೇನು ಎನ್ನುವ ಬಗೆಗೆ ಜನತೆ ಮತ್ತು ಸರ್ಕಾರಗಳೇ ತಲೆಕೆಡಿಸಿಕೊಳ್ಳದಿರುವಾಗ, ಹಣದ ಥೈಲಿಗಳಿಗಾಗಿ ಮಾತ್ರ ಬದುಕುತ್ತಿರುವ ಉದ್ಯಮಿಗಳು ಇದರ ಲಾಭ ಪಡೆಯದೆ ಹೇಗಿದ್ದಾರು?
ಈ ‘ಬಳಸಿ ಮತ್ತು ಬಿಸಾಕಿ’ ಸಂಸ್ಕøತಿಯಲ್ಲೂ ಸಾಕಷ್ಟು ಅವಿಷ್ಕಾರಗಳಾಗಿವೆ! ಕಂಪನಿಗಳು ತಮ್ಮ ಉತ್ಪನ್ನದ ವಿಷಯದಲ್ಲಿ ತಾವು ಅಭಿವೃದ್ಧಿಪಡಿಸಿದ ಎಲ್ಲಾ ಫೀಚರ್‍ಗಳನ್ನು ಒಮ್ಮೆಲೇ ಮಾರುಕಟ್ಟೆಗೆ ಬಿಡುಗಡೆ ಮಾಡದೇ ಹಂತಹಂತವಾಗಿ ಮಾಡುವುದು ಇತ್ತೀಚಿನ ಹುನ್ನಾರ ಎಂದು ಹಲವರಿಂದ ಕೇಳಿದ್ದೇನೆ. ಉದಾಹರಣೆಗೆ ಟೀವಿ, ಕ್ಯಾಮರಾ, ಮೊಬೈಲ್ ಫೋನ್ ಮುಂತಾದವುಗಳಿಗೆ ಪ್ರತಿ ಮೂರು ತಿಂಗಳಿಗೆ ಒಂದೆರೆಡು ಹೊಸ ಫೀಚರ್‍ಗಳನ್ನು ಹಾಕಿ ಮಾರುಕಟ್ಟೆಗೆ ಬಿಡುಗಡೆಮಾಡುತ್ತಾರೆ. ಅದೇ ರೀತಿ ಮೈಕ್ರೋಸಾಫ್ಟ್‍ನವರ ಬಳಿ ಈಗಾಗಲೇ 2020 ಕ್ಕೆ ಬಿಡುಗಡೆ ಮಾಡಲು ಯೋಜಿಸಿರುವ ವಿಂಡೋಸ್‍ನ ರೂಪರೇಷೆ ಇರುವ ಸಾಧ್ಯತೆ ಇದೆ. ಹಾಗಿದ್ದರೂ 2015 ರಲ್ಲಿ ಬಿಡುಗಡೆ ಮಾಡಬಹುದಾದ ವಿಂಡೋಸ್ 9ನಲ್ಲಿ ಅದನ್ನು ಅಳವಡಿಸುವುದಿಲ್ಲ. ಪ್ರತಿ ವಿಂಡೋಸ್‍ನಲ್ಲೂ ಈಗಾಗಲೇ ಸಂಶೋಧಿಸಿ ಇಟ್ಟುಕೊಂಡಿರುವ ಕೆಲವೇ ಫೀಚರ್‍ಗಳನ್ನು ಸೇರಿಸಿ ಮಾರಕಟ್ಟೆಗೆ ಧಾಳಿ ಇಡುತ್ತಾ ಹೋಗುತ್ತಾರೆ. ಇದು ನಮ್ಮನ್ನು ನಿರಂತರವಾಗಿ “ಲೇಟೆಸ್ಟ್ ಮಾಡೆಲ್”ನ ಹಪಹಪಿಕೆ ಸಿಕ್ಕಿಸಿ, ಗ್ರಾಹಕ ವಸ್ತುಗಳ ಜೀವನಪರ್ಯಂತದ ಗುಲಾಮಗಿರಿಯಲ್ಲೇ ಇಡುವುದಕ್ಕೆ ಸಹಾಯ ಮಾಡುತ್ತದೆ. ನಮ್ಮೆಲ್ಲರ ಮನೆಗಳಲ್ಲಿ ಇವತ್ತು ಎಷ್ಟು ಹಳೆಯ ಮಾಡೆಲ್‍ನ ವಸ್ತುಗಳು ನಿರುಪಯುಕ್ತವಾಗಿ ಬಿದ್ದಿವೆ ಎಂದು ನೋಡಿದರೆ ಇದರ ತೀವ್ರತೆಯ ಅರಿವಾಗುತ್ತದೆ.
ನಮ್ಮೆಲ್ಲರ ಹಣಕಾಸಿನ ಪರಿಸ್ಥಿತಿ ಮತ್ತು ಪರಿಸರದ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಜೊತೆಗೆ ಈ ಸಂಸ್ಕøತಿ, “ಸರ್ವೀಸ್ ಇಂಡಸ್ಟ್ರಿ” ಎಂದು ಕರೆಸಿಕೊಳ್ಳುವ ವಸ್ತುಗಳನ್ನು ದುರಸ್ತಿ ಮಾಡುವ ಸ್ವಯಂ ಉದ್ಯೋಗಿಗಳನ್ನು ನಿರುದ್ಯೋಗಿಗಳನ್ನಾಗಿಸಿದೆ. ಉತ್ಪನ್ನಗಳನ್ನು ಆಯಾ ಕಂಪನಿಗಳೇ ಸರ್ವೀಸ್ ಕೂಡ ಮಾಡುವುದರಿಂದ ಇದರಿಂದ ಬರುವ ಹಣವೂ ಅವರಿಗೇ ಸೇರುತ್ತದೆ. ಜೊತೆಗೆ ವಸ್ತುವಿನ ಬೆಲೆಯನ್ನು ಸ್ವಲ್ಪ ಹೆಚ್ಚು ಮಾಡಿ ಒಂದು ವರ್ಷ ಉಚಿತ ಸರ್ವೀಸ್ ಕೊಡುವ ಆಮಿಷಗಳನ್ನೊಡ್ಡುವುದು ಈಗ ಸರ್ವೇಸಾಮಾನ್ಯ.
ಈ ‘ಬಳಸಿ ಮತ್ತು ಬಿಸಾಕಿ’ ಸಂಸ್ಕøತಿಗೆ ಇನ್ನೂ ಆಳವಾದ ಮುಖಗಳಿವೆ. ಇದರ ಮೂಲ ಉದ್ದೇಶ ಯಾವುದನ್ನೂ ಮರುಬಳಕೆ ಮಾಡಲು ಆಗದಂತೆ ಮಾಡುವುದು. ಈಗ ಕೃಷಿಕ ಕೂಡ ಇದರ ಸುಳಿಗೆ ಸಿಕ್ಕಿದ್ದಾನೆ. ಸುಧಾರಿತ ತಳಿಗಳ ಧವಸಧಾನ್ಯಗಳನ್ನು ಬೆಳೆಯಲು ಆರಂಭಿಸಿದ ಮೇಲೆ ಅವನಿಗೆ ಬಿತ್ತನೆ ಬೀಜಗಳನ್ನು ತನ್ನದೇ ಫಸಲಿನಿಂದ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಪ್ರತಿಬಾರಿಯೂ ಕಂಪನಿಗಳ ಕೊಡುವ ಬಿತ್ತನೆ ಬೀಜವನ್ನೇ ಕೊಳ್ಳಬೇಕಾಗುತ್ತದೆ. ಇಷ್ಟಾದ ಮೇಲೂ ಕಂಪನಿಗಳು ಸುಧಾರಿತ ತಳಿಯ ಸುಳಿಯಲ್ಲಿ ರೈತನನ್ನು ಸಿಕ್ಕಿಸಿದ್ದು ಜನಸಾಗರದ ಹಸಿವನ್ನು ಹಿಂಗಿಸಲು ಎಂದು ಸರ್ಕಾರಗಳು ಹೇಳುವುದನ್ನು ನಾವು ನಂಬಬೇಕಿದೆ. ಸುಧಾರಿತ ತಳಿ, ರಸಗೊಬ್ಬರ, ಕ್ರಿಮಿನಾಶಕಗಳ ವಿಷವರ್ತುಲ ಇವತ್ತು ರೈತನನ್ನು ಮತ್ತು ನಮ್ಮ ಭೂಮಿ, ಪರಿಸರಗಳನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ಈಗ ನೋಡುತ್ತಿದ್ದೇವೆ. ಹಾಗಿದ್ದರೂ ಈಗಲೂ ಸುಧಾರಿತ ತಳಿಗಳಷ್ಟೇ ಅಲ್ಲ, ಕುಲಾಂತರೀ ತಳಿಗಳ ಪ್ರಚಾರದ ಭರಾಟೆಯೇನೂ ಕಡಿಮೆಯಾಗಿಲ್ಲ.
ಮುಂದುವರೆಯುವುದು…
ವಸಂತ್ ನಡಹಳ್ಳಿ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!