28.8 C
Sidlaghatta
Thursday, June 13, 2024

ನಾವೆಷ್ಟು ಕೊಳ್ಳುಬಾಕರು? – ಭಾಗ 1

- Advertisement -
- Advertisement -

ಇತ್ತೀಚೆಗೆ ಹೇರ್ ಟ್ರಿಮ್ಮರ್ ಒಂದನ್ನು ಖರೀದಿಸಲು ಮಾರುಕಟ್ಟೆಯಲ್ಲಿ ಹುಕಾಡಿದೆ. ಹತ್ತಾರು ಬ್ರಾಂಡ್‍ನ ನೂರಾರು ಮಾದರಿಗಳು ಕಂಡುಬಂದವು. ಸ್ವಲ್ಪ ಗೊಂದಲವಾಯಿತು. ಆನ್‍ಲೈನ್‍ನಲ್ಲಿ ತರಿಸೋಣ ಎಂದು ಮಗ ಹೇಳಿದಾಗ ಹಲವಾರು ಜಾಲತಾಣಗಳಲ್ಲಿ ಕೈಯಾಡಿಸಿದೆವು. ನೂರಾರು ಬ್ರಾಂಡ್‍ನ ಸಾವಿರಾರು ಮಾದರಿಗಳು ಕಣ್ಣಿಗೆ ಬಿತ್ತು! ನನ್ನ ಗೊಂದಲ ಇನ್ನೂ ಹೆಚ್ಚಾಯಿತು!!
ಈ ತರಹದ ಅನುಭವ ನಿಮಗೆಲ್ಲರಿಗೂ ಆಗಿರಲು ಸಾಧ್ಯ. ಇವತ್ತು ಏನನ್ನಾದರೂ ಕೊಳ್ಳಲು ನಮಗೆಲ್ಲಾ ಸಾಕಷ್ಟು ಆಯ್ಕೆಗಳಿವೆ. ವಿಪರ್ಯಾಸವೆಂದರೆ ಈ ಆಯ್ಕೆಗಳು ನಮ್ಮ ಗೊಂದಲವನ್ನು ಹೆಚ್ಚಿಸಿವೆ. ಗುಣಮಟ್ಟ, ವೈವಿಧ್ಯತೆ, ಸೌಲಭ್ಯಗಳು, ಬೆಲೆ ಇವೆಲ್ಲವನ್ನೂ ಅಳೆದು ಸುರಿದು ಯಾವುದನ್ನು ಖರೀದಿಸಿದರೂ ಒಂದಂತೂ ಖಾತ್ರಿಯಾಗಿ ದೊರಕುತ್ತದೆ. ಅದೇನು ಗೊತ್ತೇ? ವಸ್ತು ಮನೆಗೆ ಬಂದ ಮೇಲೆ ನಾವು ಬೇರೆಯದನ್ನು ಕೊಳ್ಳಬೇಕಾಗಿತ್ತು ಎನ್ನುವ ಅತೃಪ್ತಿ! ಆರ್ಥಿಕ ವ್ಯವಸ್ಥೆ ಜಾಗತೀಕರಣವಾಗಿ ಮಾರುಕಟ್ಟೆ ಮುಕ್ತವಾದ ಮೇಲೆ ಗ್ರಾಹಕ ಎಂದೂ ತೃಪ್ತನಾಗಿ ಉಳಿಯುವುದು ಸಾಧ್ಯವೇ ಆಗುತ್ತಿಲ್ಲ. ನಮ್ಮೆಲ್ಲರ ಇಂತಹ ನಿರಂತರ ಅತೃಪ್ತಿಯೇ ಕೊಳ್ಳಬಾಕತನದ ಮೂಲಸೆಲೆ.
ಕಳೆದ ಇಪ್ಪತ್ತು ವರ್ಷಗಳಲ್ಲಿ ನಾವೆಲ್ಲಾ ಜಾಗತೀಕರಣದ ಬಗೆಗೆ ಹೆಚ್ಚು ಹೆಚ್ಚು ಮಾತನಾಡುತ್ತಿದ್ದೇವೆ. ಈ ಜಾಗತೀಕರಣದ ನೇರ ಪರಿಣಾಮವೆಂದರೆ ಇದು ನಮ್ಮ ಮಿದುಳಿನಲ್ಲಿ ಕೊಳ್ಳುಬಾಕತನವನ್ನು ವ್ಯವಸ್ಥಿತವಾಗಿ ಮತ್ತು ಆಳವಾಗಿ ಬೇರೂರಿಸಿದೆ ಹೀಗೆ ನಮ್ಮ ಮಿದುಳುಗಳಲ್ಲಿ ಕೊಳ್ಳುಬಾಕತನದ ನಶೆಯನ್ನು ಬಿತ್ತಲು ಮತ್ತು ಅದನ್ನು ನಿರಂತರವಾಗಿ ಪೋಷಿಸಿಕೊಂಡು ಹೋಗಲು ದೊಡ್ಡದೊಡ್ಡ ಕಾರ್ಪೋರೇಟ್‍ಗಳು ಉಪಯೋಗಿಸುವ ತಂತ್ರ ಪ್ರತಿತಂತ್ರ ಕುತಂತ್ರಗಳ ನವಿರು ನಾಜೂಕುಗಳನ್ನು ಒಳಹೊಕ್ಕು ನೋಡಿದಾಗ ಎಂತವರೂ ದಂಗಾಗಿ ಬಿಡುತ್ತಾರೆ. ಆದರೆ ಇವೆಲ್ಲವನ್ನು ಎಷ್ಟು ಸಹಜವಾಗಿ ಮತ್ತು ಸೂಕ್ಷ್ಮವಾಗಿ ಮಾಡಲಾಗುತ್ತಿದೆಯೆಂದರೆ ನಾವೆಲ್ಲಾ ನಾಗರಿಕ ಸಮಾಜದಲ್ಲಿ ಬದುಕಬೇಕಾದ ರೀತಿಯೇ ಇದು ಎಂದು ನಂಬಿಕೊಂಡುಬಿಟ್ಟಿದ್ದೇವೆ.
ಇವತ್ತಿನ ಕೊಳ್ಳುಬಾಕ ಸಂಸ್ಕøತಿಯ ಹಿಂದಿರುವ ಮುಖಗಳ ಬಗೆಗೆ ಬರೆಯುತ್ತಾ ಹೋದರೆ ಹತ್ತಾರು ಸಂಪುಟಗಳ ಗ್ರಂಥವನ್ನು ರಚಿಸಬಹುದು. ನಮ್ಮ ದಿನನಿತ್ಯದ ಬದುಕಿನಲ್ಲಿ ಇದರ ಪ್ರಭಾವವದ ಬಗೆಗೆ ಮಾತ್ರ ಸ್ಥೂಲವಾಗಿ ನೋಡೋಣ.
ಎಲ್ಲವನ್ನೂ ಮಾರಾಟ ಮಾಡಿ ಹಣ ಗಳಿಸಿ
ಇವತ್ತಿನ ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲವನ್ನೂ ಮಾರಾಟ ಮಾಡಬಲ್ಲ ವಸ್ತುಗಳನ್ನಾಗಿ ಪರಿವರ್ತಿಸಲಾಗಿದೆ. ಮೇಲುನೋಟಕ್ಕೆ ಇದು ಅಂತಹ ವಿಶೇಷವಾದ ಅಂಶದಂತೆ ಕಾಣಿಸುವುದಿಲ್ಲ. ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಸೃಷ್ಟಿಯಾಗುವುದು, ಅದರಿಂದ ಹಣದ ಕೈಬದಲಾವಣೆಯಾಗುತ್ತಾ, ಜನ ಸಮುದಾಯಕ್ಕೆ ಜೀವನೋಪಾಯವನ್ನು ಕಲ್ಪಿಸುವುದು ಲಾಗಾಯ್ತಿನಿಂದಲೂ ನಡೆದುಬಂದ ಪ್ರಕ್ರಿಯೆ. ಆದರೆ ಇದು ವಸ್ತುಗಳಿಗೆ ಮಾತ್ರ ಅನ್ವಯವಾಗುವ ಕಾಲವೊಂದಿತ್ತು. ಶಿಕ್ಷಣ ಸಾರ್ವಜನಿಕ ಆರೋಗ್ಯ, ಸಾಹಿತ್ಯ, ಕಲೆ, ಸಂಶೋಧನೆಗಳಂತಹ ದೂರಗಾಮೀ ಪರಿಣಾಮಗಳುಳ್ಳ ಮತ್ತು ಹಣ ಹೂಡುವಿಕೆ/ಗಳಿಸುವಿಕೆಗಿಂತ ಮಿಗಿಲಾದ ಉದ್ದೇಶಗಳುಳ್ಳ ಕ್ಷೇತ್ರಗಳನ್ನೂ ಕೂಡ ಈಗ ಬರೀ ಲಾಭದ ಮಾನದಂಡಗಳ ಮೇಲೆ ತೂಗಲಾಗುತ್ತದೆ. ಇದು ಹೋಗಲಿ ವ್ಯಕ್ತಿಯೊಬ್ಬನ ಪ್ರೇಮ, ಮಮತೆಯಂತಹ ಮೃದು ಭಾವನೆಗಳು ಮತ್ತು ತೀರಾ ಆಪ್ತವಾದ ಕಾಮವೂ ಕೂಡ ಇವತ್ತು ಮಾರುಕಟ್ಟೆ ವಸ್ತುಗಳಾಗಿವೆ. ಇಂತಿಂತಹ ಉಡುಗೊರೆಗಳನ್ನೂ ಕೊಟ್ಟರೆ ನಿಮ್ಮವರನ್ನು ಹೆಚ್ಚು ಪ್ರೇಮಿಸಬಹುದು; ಇಂತಿಂತಹ ಸೋಪು, ನ್ಯಾಪಿಗಳಿಂದ ತಾಯಂದಿರು ಮಕ್ಕಳನ್ನು ಹೆಚ್ಚು ಪ್ರೀತಿಸಬಹುದು; ಇಂತಿಂತಹ ಕಾಮವರ್ಧಕಗಳನ್ನು ಬಳಸಿ ದೀರ್ಘವಾಗಿ ಸಂಭೋಗಿಸಿ ನಿಮ್ಮ ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳಬಹುದು(!)-ಇವೆಲ್ಲಾ ಇವತ್ತಿನ ಜಾಹಿರಾತಿನ ವಸ್ತುಗಳು ಮತ್ತು ಇದರಲ್ಲಿ ನಮಗೆ ವಿಶೇಷವೇನೂ ಕಾಣುವುದಿಲ್ಲ.
ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಇವತ್ತು ಧರ್ಮ, ಆಧ್ಯಾತ್ಮಿಕತೆಗಳೂ ಕೂಡ ವ್ಯಾಪಾರೀಕರಣಗೊಂಡಿರುವುದು ಜಾಗತೀಕರಣದ ಇನ್ನೊಂದು ಮುಖ ಮಾತ್ರ ಎನ್ನುವುದು ಗೋಚರವಾಗುತ್ತದೆ. ಇಲ್ಲೂ ಕೂಡ ಹಣವನ್ನು ಹೂಡಿ, ಪ್ರಚಾರ ಮುಂತಾದ ಮಾರುಕಟ್ಟೆ ತಂತ್ರಗಳಿಂದ ಭಾರೀ ಲಾಭಗಳಿಸಬಹುದು ಎನ್ನುವುದಕ್ಕೆ ನಮ್ಮ ಸುತ್ತಲೂ ಸಾಕಷ್ಟು ನಿದರ್ಶನಗಳು ಸಿಗುತ್ತವೆ.
ಮಾರಾಟ ಮಾಡಲು ಹೊಸ ಹೊಸ ಉತ್ಪಾದನೆಗಳನ್ನು ಹುಡುಕುವುದೇ ಒಂದು ದೊಡ್ಡ ಸಂಶೋಧನಾ ವಿಷಯವಾಗಿದೆ. ಹೀಗೆ ಸೃಷ್ಟಿಯಾದ ಹೊಸ ಹೊಸ ವಸ್ತುಗಳ ಮೂಲಕ ಬಹಳ ನವಿರಾಗಿ ಮತ್ತು ನಾಜೂಕಿನಿಂದ ಹೆಚ್ಚಿನವರ ಅರಿವಿಗೇ ಬಾರದಂತೆ ಜೇಬುಗಳನ್ನು ಕತ್ತರಿಸಲಾಗುತ್ತದೆ. ಈಗ ಇಪ್ಪತ್ತು ವರ್ಷಗಳ ಹಿಂದೆ ಪ್ರೇಮಿಗಳ ದಿನಾಚರಣೆಯನ್ನು ಯಾರೂ ಗಮನಿಸುತ್ತಲೇ ಇರಲಿಲ್ಲ. ಈಗ ಅದನ್ನು ದೊಡ್ಡ ಉತ್ಸವ ಎನ್ನುವಂತೆ ಪ್ರಚಾರ ಮಾಡಲಾಗುತ್ತದೆ. ಇದಕ್ಕಾಗಿಯೇ ಸಾಕಷ್ಟು ವಸ್ತುಗಳು, ಸೇವೆಗಳು ತಯಾರಾಗಿ ಕಂಪನಿಗಳ ಬೊಕ್ಕಸವನ್ನು ತುಂಬುತ್ತವೆ. ಇದೇ ರೀತಿ ಇತ್ತೀಚೆಗೆ ಅಮ್ಮನ ದಿನ, ಅಪ್ಪನ ದಿನ ಮುಂತಾದ ದಿನಗಳನ್ನು ಹುಟ್ಟು ಹಾಕಲಾಗುತ್ತಿದೆ. ಇದರ ಭಾರತೀಯ ರೂಪಾಂತರಗಳೂ ಬರುತ್ತಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ರಕ್ಷಾಬಂಧನ್, ವರಮಹಾಲಕ್ಷ್ಮಿ, ಹೋಳಿ, ಕೃಷ್ಣಜನ್ಮಾಷ್ಟಮಿ ಮುಂತಾದ ಹಬ್ಬಗಳ ಸಂದರ್ಭಗಳಲ್ಲಿ ಮಾರಾಟವಾಗಿ, ಒಂದೇ ದಿನದಲ್ಲಿ ತಿಪ್ಪೆ ಸೇರುವ ವಸ್ತುಗಳನ್ನು ನೋಡಿದರೆ ನಮಗೆ ಇದರ ಅರಿವಾಗುತ್ತದೆ. ಇವೆಲ್ಲಾ ಮನುಷ್ಯನ ನಂಬಿಕೆ ಭಕ್ತಿ, ಭಾವನೆಗಳನ್ನೂ ಕೂಡ ಮಾರಾಟದ ವಸ್ತುವನ್ನಾಗಿಸುವ ಹುನ್ನಾರಿನ ಒಂದು ಭಾಗ ಮಾತ್ರ.
ಜಾಹಿರಾತುಗಳ ಮಾಯಾಜಾಲ
ಇತ್ತೀಚೆಗೆ ನೀವು “ಸುಧಾ”ದಲ್ಲಿ ಜಾಹಿರಾತು ಜಗತ್ತಿನ ಬಗೆಗೆ ಒಳ್ಳೆಯ ಬರಹವೊಂದನ್ನು ಓದಿದ್ದೀರಿ. ಈ ಜಾಹಿರಾತುಗಳ ಮಾಯಾಜಾಲ ಮನೆಮನೆಗಳಲ್ಲಿ ಟೀವಿಗಳು ಬಂದಮೇಲೆ ಅಪಾಯಕಾರಿ ಮಟ್ಟದಲ್ಲಿ ಹರಡಿಕೊಳ್ಳುತ್ತಿದೆ. ಯಾವುದೇ ನೈತಿಕ ಅಥವಾ ಕಾನೂನಿನ ಹಿಡಿತಕ್ಕೆ ಒಳಪಡದಿರುವ ಈ ಜಾಹಿರಾತುಗಳು ನಮ್ಮನ್ನು ದಾರಿತಪ್ಪಿಸುತ್ತಿರುವುದಕ್ಕೆ ಕೆಲವು ಸರಳ ಉದಾಹರಣೆಗಳನ್ನು ನೋಡಿ.
* ಮಾಡೆಲ್ ಒಬ್ಬನಿಗೆ ಬಿಳಿಯ ಕೋಟನ್ನು ತೊಡಿಸಿ, ವೈದ್ಯರು ಹೇಳುತ್ತಿದ್ದಾರೆ ಎಂದು ಟೂತ್‍ಪೇಸ್ಟ್, ಹೆಲ್ತ್ ಡ್ರಿಂಕ್ ಮುಂತಾದವುಗಳನ್ನು ಪ್ರಚಾರಮಾಡಲಾಗುತ್ತದೆ. ಇಂಡಿಯನ್ ಮೆಡಿಕಲ್ ಅಕಾಡಮಿ, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಮುಂತಾದವುಗಳಿಂದ ಪ್ರಮಾಣೀಕೃತ ಎಂದು ತೋರಿಸಲಾಗುತ್ತದೆ. ಈ ಅಕಾಡಮಿ, ಅಸೋಸಿಯೇಶನ್‍ಗಳೆಲ್ಲಾ ಎಷ್ಟು ನಂಬಿಕೆಗೆ ಅರ್ಹವಾದದ್ದು ಎಂದು ಯಾರೂ ಹೇಳುತ್ತಿಲ್ಲ ಮತ್ತು ಯಾರೂ ಕೇಳುತ್ತಲೂ ಇಲ್ಲ.
* ವೈದ್ಯವಿಜ್ಞಾನ ಸಂಪೂರ್ಣ ನಿಷ್ಪ್ರಯೋಜಕ ಎಂದು ಖಡಾಖಂಡಿತವಾಗಿ ಹೇಳಿದ್ದರೂ ಇವತ್ತು ಕಾಮವರ್ಧಕಗಳ ಜಾಹಿರಾತುಗಳು ಲಂಗುಲಗಾಮಿಲ್ಲದೆ ಎಲ್ಲಾ ಕಡೆ ರಾರಾಜಿಸುತ್ತಿವೆ.
* ಹಳೆಯ ಮಾಲಿಗೆ ಹೊಸ ಬಣ್ಣ ಬ್ಯಾಗಡಿ ಬಳಿದು, ನ್ಯೂ, ಅಡ್ವಾನ್ಸ್‍ಡ್, ಎನ್ರಿಚ್ಡ್, ಎಕ್ಸ್ಟ್ರಾ, ಪ್ಲಸ್, ಮೋರ್ ಮುಂತಾದ ಹೆಸರಿನೊಂದಿಗೆ ನಮಗೆ ಮಂಕುಬೂದಿ ಎರಚಲಾಗುತ್ತದೆ.
ಇಲ್ಲಿ ಗಮನಿಸಬೇಕಾದದ್ದು ದೊಡ್ಡ ಕಾರ್ಪೋರೇಟ್ ಹೌಸ್‍ಗಳು ವಸ್ತುಗಳ ಅವಿಷ್ಕಾರಕ್ಕೆ ಭೌತ, ರಾಸಾಯನಿಕ ಮತ್ತು ಜೀವವಿಜ್ಞಾನಗಳ ಸಂಶೋಧನೆಗಳನ್ನು ಬಳಸಿಕೊಂಡರೆ, ಅದನ್ನು ಮಾರಾಟ ಮಾಡಲು ಪ್ರಚಾರಕ್ಕಾಗಿ ಮನೋವಿಜ್ಞಾನದ ಸಂಶೋಧನೆಗಳನ್ನು ಉಪಯೋಗಿಸುತ್ತಾರೆ. ಅಂದರೆ ವಿಜ್ಞಾನ ಕೂಡ ನಮ್ಮಲ್ಲಿ ಕೊಳ್ಳುಬಾಕತವನ್ನು ಹುಟ್ಟುಹಾಕಿಸಲು ಹಿಂಬಾಗಿಲಿನಿಂದ ಸಹಾಯ ಮಾಡುತ್ತದೆ. ಇವತ್ತಿನ ಹೆಚ್ಚಿನ ಗ್ರಾಹಕ ವಸ್ತುಗಳ ಬೆಲೆಯ ಸುಮಾರು ಶೇ 20-30 ಅಂಶ ಕೇವಲ ಪ್ರಚಾರಕ್ಕಾಗಿ ವೆಚ್ಚವಾಗುತ್ತದೆ. ವರ್ತಮಾನ ಪತ್ರಿಕೆಗಳಲ್ಲಿ, ಟೀವಿಗಳಲ್ಲಿ ಜಾಹಿರಾತನ್ನು ಒಮ್ಮೆಯೂ ನೋಡದೇ ಇರುವವರೂ ಕೂಡ ಅದಕ್ಕಾಗಿ ವೆಚ್ಚವಾದ ಹಣದ ಒಂದು ಭಾಗವನ್ನು ಭರಿಸಿರುತ್ತಾರೆ. ಐಪಿಲ್ ಕ್ರಿಕೆಟ್‍ನ ಬಗೆಗೆ ಗಂಧಗಾಳಿ ಇಲ್ಲದ ವ್ಯಕ್ತಿಯೊಬ್ಬ ಕಂಪನಿಗಳು ಅದಕ್ಕೆ ಹಣ ಚಲ್ಲಿದರೆ ನನ್ನದೇನು ಹೋಗುತ್ತದೆ ಎಂದುಕೊಳ್ಳುವಂತಿಲ್ಲ. ಏಕೆಂದರೆ ಆ ಕಂಪನಿಯ ವಸ್ತುವಿಗಾಗಿ ಅವನು ಕೊಡುವ ಬೆಲೆಯ ಒಂದು ಭಾಗ ಐಪಿಲ್‍ನಲ್ಲಿ ಲೀನವಾಗಿರುತ್ತದೆ.
ಮುಂದುವರೆಯುವುದು…
ವಸಂತ್ ನಡಹಳ್ಳಿ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!