ರಾಷ್ಟ್ರಧ್ವಜಗಳ ನೀತಿ ಸಂಹಿತೆ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು.ಅದರ ಘನತೆ, ಗೌರವ ಗೊತ್ತಿಲ್ಲದೇ ಬೇಕಾಬಿಟ್ಟಿಯಾಗಿ ಬಳಸುವ ಮೂಲಕ ಅವಮಾನ ಮಾಡಬಾರದು. ರಾಷ್ಟ್ರಧ್ವಜದ ಗಾಂಭೀರ್ಯತೆಯ ಅರಿವು ಜನತೆಗೆ ಮೂಡಿಸುವ ಕಾರ್ಯ ನಡೆಯಬೇಕು ಎಂದು ಭಾರತ ಸೇವಾದಳ ಜಿಲ್ಲಾ ಸಂಘಟಕ ಮಹೇಶ್ಗೌಡ ತಿಳಿಸಿದರು.
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗೆ ರಾಷ್ಟ್ರಧ್ವಜ ಕುರಿತಂತೆ ನಡೆಸಿದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಧ್ವಜಗಳ ಆರೋಹಣ, ಅವರೋಹಣ, ಧ್ವಜ ಸ್ತಂಭದ ಕೆಳಗೆ ಸಭೆ ಮತ್ತು ಸಮಾರಂಭಗಳನ್ನು ನಡೆಸದಂತೆ, ಧ್ವಜವನ್ನು ಉಲ್ಟಾ ಹಾಗೂ ಹರಿದ ಧ್ವಜಗಳನ್ನು ಹಾರಿಸುವ ಮೂಲಕ ಧ್ವಜಕ್ಕೆ ಅವಮಾನಿಸುವುದನ್ನು ತಡೆಯಬೇಕು.
ಕಾಟನ್ ಖಾದಿ ಬಟ್ಟೆಯಲ್ಲಿ ತಯಾರಿಸಿದ ಹಾಗೂ ಐಎಸ್ಐ ನಂಬರ್ನಿಂದ ಮುದ್ರಿಸಿರುವ ರಾಷ್ಟ್ರಧ್ವಜಗಳನ್ನು ಮಾತ್ರ ಬಳಸಬೇಕು ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ನ ಸ್ಪಷ್ಟ ನಿರ್ದೇಶನವಿದೆ. ಖಾದಿ ಬಟ್ಟೆ ಹೊರತುಪಡಿಸಿ ಪ್ಲಾಸ್ಟಿಕ್ ಧ್ವಜಗಳ ಬಳಕೆ ನಿಷೇಧಿಸಲಾಗಿದೆ. 2*3 ಅಡಿ ಅಳತೆಯ ರಾಷ್ಟ್ರಧ್ವಜಗಳನ್ನು ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯತಿ ಕಚೇರಿಯ ಬಳಿ ಕಡ್ಡಾಯವಾಗಿ ಹಾರಿಸಬೇಕು. ರಾಷ್ಟ್ರಧ್ವಜಗಳನ್ನು ಹೊದ್ದುಕೊಂಡು ಮಲಗುವುದು, ಕಾಲಿನಿಂದ ತುಳಿಯುವುದು, ಬೆಂಕಿ ಹಚ್ಚುವುದು, ಎಲ್ಲೆಂದರಲ್ಲಿ ಬಿಸಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಿದರು.
ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ಶಿಕ್ಷಕ ವೆಂಕಟರೆಡ್ಡಿ ರಾಷ್ಟ್ರಧ್ವಜ ರೂಪುಗೊಂಡ ಬಗೆಯನ್ನು ವಿವರಿಸಿದರು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಕೆ.ರಾಮಾಂಜನೇಯ ಹಾಜರಿದ್ದರು.
- Advertisement -
- Advertisement -
- Advertisement -
- Advertisement -