ಶುದ್ದ ಕುಡಿಯುವ ನೀರು ಪೂರೈಕೆ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಕ್ಷೇತ್ರದ ಜನತೆಗೆ ತಲುಪಿಸುವಂತಹ ಮಹತ್ತರವಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳ ಬದ್ಧತೆಯಿಂದಲೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮೂರು ತಿಂಗಳಲ್ಲಿ ಇಲಾಖೆಗಳಲ್ಲಿ ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿರುವ ಕಡತಗಳನ್ನು ವಿಲೇವಾರಿ ಮಾಡಬೇಕು. ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಅದನ್ನು ಸರಿಪಡಿಸಿಕೊಂಡು ಕೆಲಸ ಮಾಡಿ, ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸುತ್ತೇನೆ.
ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳಲ್ಲಿ ಆಗಿರುವ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡ ಅವರು, ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಪ್ರತಿ ಹಳ್ಳಿ ಹಳ್ಳಿಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವುದರ ಜೊತೆಗೆ ಮಳೆಗಾಲವಾಗಿರುವುದರಿಂದ ರೈತರಿಗೆ ವಿತರಣೆಯಾಗಬೇಕಾದ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲು ಕ್ರಮವಹಿಸಿ, ರಸಗೊಬ್ಬರ ವಿತರಣೆಗೂ ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ವಿತರಣೆ ಮಾಡಬೇಕು.
ಯಾವುದೇ ಕಾಮಗಾರಿಗಳು ಒಂದು ಬಾರಿ ಟೆಂಡರ್ ಮುಗಿದು ಕಾಮಗಾರಿ ಆರಂಭವಾದ ನಂತರ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿ ಕೆಲಸ ಮಾಡಬೇಕು. 2017 – 18 ನೇ ಸಾಲಿನಲ್ಲಿ ಆರಂಭವಾಗಿರುವ ಬಹಳಷ್ಟು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅನುದಾನ ಬಿಡುಗಡೆಯಾಗುವದಷ್ಟೆ ಮುಖ್ಯವಲ್ಲ. ಅಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ. ಸಾರ್ವಜನಿಕರಿಂದ ಹೆಚ್ಚು ದೂರುಗಳು ಬಾರದ ಹಾಗೆ ಕಾರ್ಯನಿರ್ವಹಣೆ ಮಾಡಿಕೊಂಡು ಹೋಗಿ, ಜನರಿಗೆ ಸಮಸ್ಯೆಯಾಗುವ ರೀತಿಯಲ್ಲಿ ನಡೆದುಕೊಳ್ಳಬೇಡಿ, ಸಮ್ಮಿಶ್ರ ಸರ್ಕಾರದ ಲಾಭ ಪಡೆದುಕೊಳ್ಳಲು ಹೋಗಬೇಡಿ.
ಜಿದ್ದಾಜಿದ್ದಿಗೆ ಬಿದ್ದಿದ್ದ ಪಕ್ಷಗಳು ಒಟ್ಟುಗೂಡಿ ಸರ್ಕಾರ ನಡೆಸಬೇಕಾಗಿರುವ ಅನಿವಾರ್ಯತೆ ಇದೆ. ಹೊಂದಾಣಿಕೆ ಆಗಲೇಬೇಕಾಗಿದೆ. ಒಂದು ವೇಳೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕೋಮುವಾದಿ ಪಕ್ಷದ ಅಧಿಕಾರಕ್ಕೆ ಬರುತ್ತೆ ಎನ್ನುವ ಕಾರಣಕ್ಕೋಸ್ಕರ ಮಾಡಿಕೊಂಡಿದ್ದೇವೆ. ಹಾಗಂತ ಹೊಂದಾಣಿಕೆಯನ್ನು ದುರುಪಯೋಗ ಮಾಡಿಕೊಳ್ಳಲು ಯಾರೂ ಪ್ರಯತ್ನ ಮಾಡಬಾರದು ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ನಗರಸಭೆ ಆಯುಕ್ತ ಚಲಪತಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಭೀಮೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
- Advertisement -
- Advertisement -
- Advertisement -