ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡಿರುವ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗದಿದ್ದ ಮೇಲೆ ನಾವು ಸದಸ್ಯರಾಗಿ ಮುಂದುವರೆಯುವುದು ಅವಶ್ಯವಿಲ್ಲ ಎಂದು ಹೇಳಿದ ೧೮ ನೇ ವಾರ್ಡಿನ ಸದಸ್ಯ ಇಲಿಯಾಜ್ ರಾಜೀನಾಮೆ ನೀಡಲು ಮುಂದಾದ ಘಟನೆ ಮಂಗಳವಾರ ನಡೆಯಿತು.
ನಗರಸಭಾ ಕಾರ್ಯಾಲಯದಲ್ಲಿ ಮಂಗಳವಾರ ನಗರಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಲು ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಈ ಘಟನೆ ನಡೆಯಿತು.
‘ಅಧಿಕಾರಿಗಳು, ಸದಸ್ಯರ ಮಾತಿನ ಗಮನನೀಡುತ್ತಿಲ್ಲ. ವಾರ್ಡಿನಲ್ಲಿ ಸ್ವಚ್ಚತೆಯಿಲ್ಲದೆ, ಮಕ್ಕಳು ಸೇರಿದಂತೆ ನಾಗರಿಕರು ಖಾಯಿಲೆಗಳಿಂದ ನರಳುವಂತಾಗಿದ್ದು, ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮಾತಿಗೆ ಬೆಲೆಯಿಲ್ಲವೆಂದ ಮೇಲೆ, ನಾವು ಸದಸ್ಯರಾಗಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂದು ಸದಸ್ಯ ಇಲಿಯಾಜ್ ಹಾಜರಾತಿಯ ಪುಸ್ತಕದಲ್ಲಿ ಮಾಡಿದ್ದ ಸಹಿಯನ್ನು ಹೊಡೆದುಹಾಕಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು, ನಂತರ ಉಳಿದ ಸದಸ್ಯರು ಅವರನ್ನು ಮನವೊಲಿಸಿ, ಸಭೆಯಲ್ಲಿ ಹಾಜರಿರುವಂತೆ ನೋಡಿಕೊಂಡರು.
ನಗರಾಭಿವೃದ್ದಿ ಇಲಾಖೆಯಿಂದ ೨೦೧೫-–೧೬ ನೇ ಸಾಲಿಗೆ ೧೪ ನೇ ಹಣಕಾಸು ಆಯೋಗದ ಮುಖಾಂತರ ಬಿಡುಗಡೆಯಾಗಿರುವ ಮೊದಲ ಕಂತಿನ ೫೭ ಲಕ್ಷ ೫೦ ಸಾವಿರ ರೂಪಾಯಿಗಳ ಹಣವನ್ನು ನಗರದ ವಿವಿಧ ಉದ್ದೇಶಗಳಿಗೆ ಸಮರ್ಪಕವಾಗಿ ಬಳಕೆ ಮಾಡಲು ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿನ ನಾಗರಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ೨೧.೫೦ ಲಕ್ಷ ರೂಪಾಯಿಗಳು, ಸಾಮೂಹಿಕ ಶೌಚಾಲಯಗಳ ನಿರ್ಮಾಣಕ್ಕೆ ೮ ಲಕ್ಷ ರೂಪಾಯಿಗಳು, ಒಳಚಂಡಿಗಳಿಗೆ ೫ ಲಕ್ಷ ರೂಪಾಯಿಗಳು, ಮಳೆ ನೀರು ಹರಿಯುವ ರಾಜಕಾಲುವೆ ದುರಸ್ಥಿಗಾಗಿ ೮ ಲಕ್ಷ ರೂಪಾಯಿಗಳು, ೧೨.೨೦ ಲಕ್ಷ ರೂಪಾಯಿಗಳನ್ನು ಬೀದಿದೀಪಗಳ ಅಳವಡಿಕೆಗಾಗಿ ಮತ್ತು ೨.೮೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಗರಸಭೆಗೆ ಪೀಠೋಪಕರಣಗಳನ್ನು ಖರೀದಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
೧೩ ನೇ ಹಣಕಾಸು ಯೋಜನೆಯಡಿಯಲ್ಲಿ ೧೭.೫೦ ಲಕ್ಷ ಹಣದಲ್ಲಿ ಉಳಿಕೆಯಾಗಿರುವ ೬.೧೫ ಲಕ್ಷಗಳ ಹಣವನ್ನು ನಗರದ ರೇಷ್ಮೆ ಗೂಡು ಮಾರುಕಟ್ಟೆಯ ಮುಂಭಾಗದಲ್ಲಿನ ರಸ್ತೆಗೆ ಡಾಂಬರೀಕರಣ, ರಸ್ತೆಯ ಅಗಲೀಕರಣ ಹಾಗೂ ಚರಂಡಿಗಳ ನಿರ್ಮಾಣ ಕಾಮಗಾರಿಗೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.
೨೦೧೪-–೧೫ ನೇ ಸಾಲಿನ ಎಸ್.ಎಫ್.ಸಿ. ಅಲ್ಪಾವದಿಯ ಟೆಂಡರ್ನಲ್ಲಿ ಕಾಮಗಾರಿಯನ್ನು ಮಾಡಲು ನೀಡುವ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಿಮುಗಿಸುವಂತೆ ಕ್ರಮವಹಿಸಬೇಕು. ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೆ, ಇಲ್ಲವೇ ಕಾಮಗಾರಿಯನ್ನು ಪ್ರಾರಂಭ ಮಾಡದೆ ವಿಳಂಬ ಮಾಡುವಂತಹ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್ಗೆ ಸೇರ್ಪಡೆಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಸದಸ್ಯರು ತಿಳಿಸಿದರು.
ನಗರಸಭಾ ಅಧ್ಯಕ್ಷೆ ಮುಷ್ಟರೀತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿಸಮಿತಿ ಅಧ್ಯಕ್ಷ ಕೇಶವಮೂರ್ತಿ, ಮುಖ್ಯಾಧಿಕಾರಿ ರಾಮ್ಪ್ರಕಾಶ್ ಹಾಗೂ ಎಲ್ಲಾ ನಗರಸಭಾ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -