ತಾಲ್ಲೂಕಿನ ಕಂಬಾಲಹಳ್ಳಿಯ ಒಡೆಯನ ಕೆರೆ ತುಂಬಿರುವ ಪ್ರಯುಕ್ತ ಭಾನುವಾರ ಅನಂತಪದ್ಮನಾಭ ಸ್ವಾಮಿಯ ಉತ್ಸವಮೂರ್ತಿಯೊಂದಿಗೆ ವಿಜೃಂಭಣೆಯಿಂದ ತೆಪ್ಪೋತ್ಸವವನ್ನು ಆಚರಿಸಲಾಯಿತು.
ಸುತ್ತಮುತ್ತಲಿನ ತಾಲ್ಲೂಕುಗಳಿಂದ ಮತ್ತು ಗ್ರಾಮಾಂತರದಿಂದ ಭಕ್ತರು ಆಗಮಿಸಿ ಪೂಜೆ ಕೈಂಕರ್ಯಗಳನ್ನು ನೆರವೇರಿಸಿದರು. ದೇವಾಲಯದ ಆವರಣದಲ್ಲಿ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆಯನ್ನು ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದರು.
‘ನೀನು ಒಲಿದು ಬಂದರೆ ನನ್ನ ಸಾಲಗಳು ತೀರಿಹೋಗುವುವು’ ಎಂದು ಕೈವಾರ ತಾತಯ್ಯ ಏಮಮ್ಮ ಗಂಗಾಭವಾನಿ ಎಂಬ ಕೀರ್ತನೆಯಲ್ಲಿ ಹೇಳಿ ಬಯಲು ಸೀಮೆಗೆ ನೀರಿನಿಂದಲೇ ಸುಖ ಶಾಂತಿ ಎಂಬುದನ್ನು ಹೇಳಿರುವಂತೆಯೇ ಎರಡು ನೂರು ವರ್ಷಗಳು ಕಳೆದರೂ ಈ ಪ್ರದೇಶದಲ್ಲಿ ಇದೇ ಪರಿಸ್ಥಿತಿ ಹಾಗೂ ಪ್ರಾರ್ಥನೆ ಮುಂದುವರೆದಿದೆ. ಅದರಂತೆಯೇ ಕೆರೆಗಳು ಮತ್ತು ದೊಡ್ಡ ಕುಂಟೆಗಳು ತುಂಬಿದರೆ ಜನ ತೆಪ್ಪೋತ್ಸವವನ್ನು ಆಚರಿಸುತ್ತಾ ಗಂಗೆಗೆ ಕೃತಜ್ಞತೆ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿಯೂ ಹದಿನಾರು ವರ್ಷಗಳ ನಂತರ ಕೆರೆ ತುಂಬಿ ಕೋಡಿ ಹೋದ ಹಿನ್ನೆಯಲ್ಲಿ ತೆಪ್ಪೋತ್ಸವವನ್ನು ಆಚರಿಸಲಾಗುತ್ತಿದೆ. ಕೆರೆ ತುಂಬಿರುವುದರಿಂದ ಅಂತರ್ಜಲ ವೃದ್ಧಿಸಿ, ಜನ ಜಾನುವಾರುಗಳಿಗೆ ನೆಮ್ಮದಿಯನ್ನು ತಂದಿದೆ’ ಎಂದು ಅನಂತಶಯನಾಚಾರ್ ತಿಳಿಸಿದರು.
ಅರ್ಚಕ ಅಶ್ವತ್ಥನಾರಾಯಣಾಚಾರ್, ಗೋಪಾಲಕೃಷ್ಣಾಚಾರ್, ಶಾಮಾಚಾರ್, ನರಸಿಂಹಾಚಾರ್, ಹರಿ, ಶ್ರೀರಂಗಾಚಾರ್, ಅನಂತಪದ್ಮನಾಭಾಚಾರ್, ವೇಣು ಮತ್ತಿತರರು ಹಾಜರಿದ್ದರು.
ಪ್ರತೀತಿ: ಬೆಟ್ಟಗಳ ನಡುವೆ ಚಂದ್ರಪುಷ್ಕರಣಿ ಎಂದು ಕರೆಯುವ ಒಡೆಯನ ಕೆರೆಯಲ್ಲಿ ಶಯನಾರೂಢನಾಗಿ ಅನಂತಪದ್ಮನಾಭಸ್ವಾಮಿ ಇರುವುದು ಇಲ್ಲಿನ ವಿಶೇಷ.
ಹಿಂದೆ ಚಿಂತಾಮಣಿ ಬಳಿಯ ಗವಿಚಂದ್ರಾಯಸ್ವಾಮಿ ದೇವಸ್ಥಾನದಲ್ಲಿ ದೈವಭಕ್ತಿಯುಳ್ಳ ಬ್ರಾಹ್ಮಣರು ವಾಸಿಸುತ್ತಿದ್ದರು. ಅವರಿಗೆ ಮೊದಲ ಪತ್ನಿಯಿಂದ ಏಳು ಹೆಣ್ಣುಮಕ್ಕಳು ಜನಿಸಿದ್ದರು. ಅಷ್ಟಾಕ್ಷರಿ ಮಹಾಯಾಗ ಮಾಡಿದ ಫಲವಾಗಿ ಅವರ ಎರಡನೇ ಪತ್ನಿಗೆ ಏಳು ಹೆಡೆಯ ಸರ್ಪವು ಜನಿಸಿತು. ಆ ಹೆಣ್ಣು ಮಕ್ಕಳ ಮದುವೆಯ ಸಂದರ್ಭದಲ್ಲಿ ಸರ್ಪವನ್ನು ಕಂಡರೆ ಅಪಶಕುನವಾದೀತೆಂದು ಒಂದು ಮರೆಯಲ್ಲಿ ಸಿಂಬೆಸುತ್ತಿಕೊಂಡು ಈ ಹಾವು ಮಲಗಿತ್ತು. ವಿವಾಹದಲ್ಲಿ ಅಡುಗೆಯವರು ತಿಳಿಯದೇ ಬಿಸಿಯಾದ ಪಾಯಸದ ಪಾತ್ರೆಯನ್ನು ಸಿಂಬೆಯೆಂದು ಬಗೆದು ಹಾವಿನ ಮೇಲಿಟ್ಟ ಪರಿಣಾಮ ಸರ್ಪ ಮರಣಿಸಿತು. ಇದನ್ನು ನೋಡಿ ಎದೆಯೊಡೆದು ಇಬ್ಬರು ತಾಯಂದಿರು ಹಾಗೂ ಏಳು ಮಂದಿ ಅಕ್ಕಂದಿರೂ ಸಾವನ್ನಪ್ಪಿದರು. ಶಾಪದಿಂದ ಸರ್ಪರೂಪ ತಳೆದಿದ್ದ ದೇವತೆಯು ಬ್ರಾಹ್ಮಣನಿಗೆ ಅಂತಿಮ ಸಂಸ್ಕಾರಕ್ಕೆ ಸ್ಥಳವನ್ನು ಸೂಚಿಸಿದರಂತೆ. ಈ ಸ್ಥಳದಲ್ಲಿ ಅನಂತಪದ್ಮನಾಭಸ್ವಾಮಿ ದೇವರನ್ನು ಸ್ಥಾಪಿಸಿ ಪೂಜಿಸಲು ಸೂಚಿಸಿದರಂತೆ.
- Advertisement -
- Advertisement -
- Advertisement -
- Advertisement -