ವಾಯುವಿಹಾರಕ್ಕೆ ಹೋದಾಗ ಚಿನ್ನದ ಚೈನ್ ಅಪಹರಿಸುವ ಚೋರರು, ಬ್ಯಾಂಕಿನಿಂದ ಹಣ ಡ್ರಾ ಮಾಡಿ ತರುವಾಗ ಗಮನವನ್ನು ಬೇರೆಡೆಗೆ ಸೆಳೆದು ಹಣದ ಚೀಲ ಕದಿಯುವ ಕಳ್ಳರು, ದ್ವಿಚಕ್ರ ವಾಹನವನ್ನು ಕಳ್ಳತನ ಮಾಡುವುದು ಮುಂತಾದ ಅಪರಾಧಗಳ ಕುರಿತಂತೆ ಪ್ರಾತ್ಯಕ್ಷಿಕೆಯ ಮೂಲಕ ಸ್ವತಃ ಅಭಿನಯಿಸುವುದರ ಮೂಲಕ ಪುರಠಾಣೆ ಪೊಲೀಸರು ಜಾಗೃತಿ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಂಡಿದ್ದರು.
ಅಪರಾಧ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪಟ್ಟಣದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಮುಂದೆ ಪೊಲೀಸರು ಅಣಕು ಪ್ರದರ್ಶನವನ್ನು ನೀಡಿದರು. ಶಾಲಾ ವಿದ್ಯಾರ್ಥಿಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಪರಾಧ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಠಾಣೆ ಸಬ್ಇನ್ಸ್ಪೆಕ್ಟರ್ ಪುರುಷೋತ್ತಮ್, ‘ಅಪರಾಧವನ್ನು ತಡೆಯಬೇಕಾದರೆ ಎಚ್ಚರಿಕೆಯಿಂದಿರಬೇಕು. ಅಪರಿಚಿತರು ಕರೆದಾಗ ಶಾಲಾ ವಿದ್ಯಾರ್ಥಿಗಳು, ಒಂಟಿಯಾಗಿ ಮಹಿಳೆಯರು ತೆರಳಬಾರದು. ವಾಕಿಂಗ್ ಹೋಗುವಾಗ ಗುಂಪಿನಲ್ಲಿ ಹೋಗಬೇಕು. ಬ್ಯಾಂಕಿನಿಂದ ಹಣ ತರುವಾಗ ಬಹು ಎಚ್ಚರಿಕೆಯಿಂದಿರಬೇಕು. ಗಮನವನ್ನು ಬೇರೆಡೆಗೆ ಸೆಳೆದು ಹಣದ ಚೀಲವನ್ನು ಲಪಟಾಯಿಸುವವರಿರುತ್ತಾರೆ. ಎಟಿಎಂ ನ ಕಾರ್ಡ್ ಮತ್ತು ಪಾಸ್ವರ್ಡ್ ಬೇರೆಯವರಿಗೆ ಕೊಡಬಾರದು. ದ್ವಿಚಕ್ರ ವಾಹನಗಳನ್ನು ಮನೆಯ ಆವರಣದಲ್ಲಿ ನಿಲ್ಲಿಸುವಾಗ ಚೈನ್ ಹಾಕಿ ಭದ್ರಪಡಿಸಬೇಕು. ಅಪರಿಚಿತರು ಕೋಳಿ ವ್ಯಾಪಾರ, ಶಾಸ್ತ್ರ, ಮಣಿ ವ್ಯಾಪಾರ, ಪಾಲಿಷ್ ನೆಪದಲ್ಲಿ ಬಂದಾಗ ತಕ್ಷಣ ಪೊಲೀಸರಿಗೆ ಮಾಹಿತಿ ಕೊಡಿ. ಅಪರಿಚಿತರು ಮನೆಗೆ ಬಂದಾಗ ಬಾಗಿಲು ತೆರೆಯಬೇಡಿ’ ಎಂದು ಹಲವಾರು ಎಚ್ಚರಿಕೆಯ ಮಾತುಗಳನ್ನು ತಿಳಿಸಿದರು.
ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ ಇಸ್ಮಾಯಿಲ್, ಮುಖ್ಯಪೇದೆಗಳಾದ ಪ್ರಕಾಶ್, ಆಂಜಿನೇಯ, ರಮೇಶ್, ಶಿವಕುಮಾರ್, ದಿಬ್ಬೂರಹಳ್ಳಿ ಮಹಿಳಾಪೇದೆ ಗಾಯತ್ರಿ, ಡಾಲ್ಫಿನ್ ವಿದ್ಯಾಸಂಸ್ಥೆಯ ನಿರ್ದೇಶಕ ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -