ಮಹರ್ಷಿ ವಾಲ್ಮೀಕಿಯವರ ಕಲ್ಪನೆಯಂತೆ ಸಮಾಜದಲ್ಲಿನ ಬಡವರು, ಶೋಷಿತವರ್ಗದವರು, ಅಲ್ಪಸಂಖ್ಯಾತರು ಒಟ್ಟಾರೆ ಎಲ್ಲರೂ ಕೂಡಾ ಒಗ್ಗಟ್ಟಿನಿಂದ ಜೀವಿಸುವಂತಾಗಬೇಕು ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ಶನಿವಾರ ಸುಮಾರು ೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಮಹರ್ಷಿ ವಾಲ್ಮೀಕಿ ಭವನದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರೂ ಒಟ್ಟಾಗಿ ಸೇರಿ ದುಡಿಯಬೇಕು. ಇದೀಗ ನೂತನವಾಗಿ ನಿರ್ಮಾಣವಾಗಿರುವ ಮಹರ್ಷಿ ವಾಲ್ಮೀಕಿ ಭವನವನ್ನು ಎಲ್ಲಾ ವರ್ಗದ ಜನರಿಗೆ ಬಳಕೆಯಾಗಬೇಕು. ವಾಲ್ಮೀಕಿ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಅತ್ಯತ್ತಮ ವ್ಯಕ್ತಿಗಳನ್ನಾಗಿ ರೂಪುಗೊಳಿಸುವಂತಹ ಕೆಲಸವನ್ನು ಮಾಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಹೆಚ್ಚು ಅನುದಾನಗಳನ್ನು ನೀಡುತ್ತಿದೆ ಈಗಾಗಲೇ ನಗರದಲ್ಲಿ ಸುಮಾರು ೧ ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ, ನಿರ್ಮಾಣ ಕಾರ್ಯ ಸೇರಿದಂತೆ ೧.೫ ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ, ಹೋಬಳಿ ಕೇಂದ್ರಗಳಲ್ಲಿ ತಲಾ ೫೦ ಲಕ್ಷಗಳ ವೆಚ್ಚದಲ್ಲಿ ಅಂಬೇಡ್ಕರ್ ಹಾಗೂ ವಾಲ್ಮೀಕಿ ಭವನಗಳನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನಗಳು ಮಂಜೂರಾಗಿವೆ. ತಾಲ್ಲೂಕಿನಾಧ್ಯಂತ ೧೯ ಜಗಜೀವನರಾಂ ಭವನಗಳಿಗೆ ಮಂಜೂರಾತಿ ದೊರೆತಿದ್ದು ಕಾಮಗಾರಿ ಶುರುಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ವಾಲ್ಮೀಕಿ ಜನಾಂಗದ ಏಳಿಗೆಗಾಗಿ ಈಗಾಗಲೇ ತಾಲ್ಲೂಕಿನ ಸುಂಡ್ರಹಳ್ಳಿಯಲ್ಲಿ ಸುಮಾರು ೧೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಾಲ್ಮೀಕಿ ಆಶ್ರಮಶಾಲೆ ನಿರ್ಮಾಣವಾಗುತ್ತಿದ್ದು ಸಮುದಾಯದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು, ಸದಸ್ಯ ಕೆ.ಎಂ.ಸತೀಶ್, ತಹಸೀಲ್ದಾರ್ ಅಜಿತ್ಕುಮಾರ್ರೈ, ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಸದಸ್ಯೆ ಶಂಕರಮ್ಮ, ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಶ್ರೀನಿವಾಸ, ಉಪಾಧ್ಯಕ್ಷೆ ಗಾಯಿತ್ರಿನಾರಾಯಣಸ್ವಾಮಿ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ಕೃಷ್ಣೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅನಸೂಯದೇವಿ, ಮುಖಂಡರಾದ ಶೇಷಗಿರಿರಾವ್, ಜಗದೀಶ್, ಶ್ರೀರಾಮರೆಡ್ಡಿ, ಮುನಿಯಮ್ಮ, ಯರಬಚ್ಚಪ್ಪ, ಧನಂಜಯರೆಡ್ಡಿ, ಅಶ್ವಥ್ಥಪ್ಪ, ನಾಗರಾಜ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -