ಬಡವರ ಬದುಕಿಗೆ ದಾರಿತೋರಿಸುವುದು ನಮ್ಮ ಮೂಲ ಉದ್ದೇಶ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿಯ ದೊಡ್ಡಬಂದರಘಟ್ಟ ಗ್ರಾಮದ ವೃದ್ಧ ದಂಪತಿಗಳಾದ ಮುದ್ದಪ್ಪ ಮತ್ತು ಕದಿರಮ್ಮ ಅವರಿಗೆ ಐದು ನೂರುಗಳ ಮಾಸಾಶನ ಮಂಜೂರಾತಿ ಪತ್ರವನ್ನು ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮದಲ್ಲೂ ನಮ್ಮ ಕಾರ್ಯಕರ್ತರು ಸರ್ವೇಕ್ಷಣೆ ನಡೆಸುತ್ತಿರುವಾಗ ಈ ಹಳ್ಳಿಯಲ್ಲಿ ಯಾವುದೇ ಆಸರೆಯಿಲ್ಲದೆ, ದುಡಿಯಲು ಶಕ್ತಿಯಿಲ್ಲದ ಪರಿಸ್ಥಿತಿಯಲ್ಲಿ ಗ್ರಾಮದ ಗಡಿಯಂಚಿನ ರಸ್ತೆ ಬದಿ ಗುಡಿಸಲಲ್ಲಿ ನೆಲೆಸಿರುವ ದಂಪತಿಗಳನ್ನು ಗುರುತಿಸಿದರು. ವೃದ್ಧ ಮುದ್ದಪ್ಪನಿಗೆ ನಡುವಿನ ಕೆಳಗೆ ಸ್ವಾಧೀನವಿಲ್ಲದೆ ಪರಾವಲಂಬಿಯಾದರೆ, ಕದಿರಮ್ಮ ವಾಸಿಯಾಗದ ಬಾಯುಣ್ಣು ಕಾಡುತ್ತಿದೆ. ಅವರಿಗೆ ಬದುಕಲು ಆಸರೆ ಹಾಗೂ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಈಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಮಂಜೂರಾತಿ ಪತ್ರವನ್ನು ನೀಡಲಾಗಿದೆ. ಮುಂದೆ ಅದನ್ನು ಹೆಚ್ಚಿಸಲಾಗುವುದು. ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಗ್ರಾಮದ ಸದಸ್ಯರನ್ನೂ ಸಂಪರ್ಕಿಸಿದ್ದು, ಈ ಅಶಕ್ತ ವೃದ್ಧರಿಗೆ ನಿವೇಶನವನ್ನೂ ಕೊಡಲು ಅವರು ಒಪ್ಪಿದ್ದಾರೆ. ಅಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮನೆ ಕಟ್ಟಿಕೊಡಲು ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ಭುವನೇಶ್ವರಿ ಸ್ವಸಹಾಯ ಸಂಘದ ಪ್ರಬಂಧಕಿ ಪುಷ್ಪ, ಸಹಯೋಜಕಿ ನಾರಾಯಣಮ್ಮ, ಮೇಲ್ವಿಚಾರಕ ಶಶಿಕುಮಾರ್, ಸೇವಾ ಪ್ರತಿನಿಧಿ ಪ್ರಮೀಳಮ್ಮ, ಚೌಡರೆಡ್ಡಿ, ಸಂಜೀವರೆಡ್ಡಿ, ಅಶೋಕ್, ರಾಮಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -