ಕ್ಷೇತ್ರದ ಶಾಸಕ ಎಂ.ರಾಜಣ್ಣ ಅವರ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಸುಮಾರು ಹನ್ನೊಂದು ರಾಸುಗಳ ಮರಣದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
‘ಜುಲೈ ತಿಂಗಳ ಕೊನೆಯ ವಾರದಲ್ಲಿ ಎಲ್.ಮುತ್ತುಗದಹಳ್ಳಿಯ ಅಂಗಡಿ ಮುನಿವೆಂಕಟಸ್ವಾಮಿ ಅವರ ಒಂದು ಮಿಶ್ರತಳಿ ಹಸು, ಆಗಸ್ಟ್ ತಿಂಗಳಿನಲ್ಲಿ ಅಕ್ಕಲಪ್ಪ ಅವರ ಮಿಶ್ರತಳಿ ಹಸುವಿಗೆ ಚಿಕಿತ್ಸೆ ನೀಡಿದ ನಂತರ ಮೃತಪಟ್ಟ ಹಿನ್ನೆಲೆಯಲ್ಲಿ ಅವುಗಳ ಕಿವಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದು ನೆರಡಿ ರೋಗ(ಆಂಥ್ರಾಕ್ಸ್) ಎಂದು ತಿಳಿದು ಬಂದಿತು. ಹೀಗಾಗಿ ಗ್ರಾಮದ 138 ದನಗಳು, 48 ಎಮ್ಮೆಗಳು, 518 ಕುರಿಗಳು ಮತ್ತು 40 ಮೇಕೆಗಳಿಗೆ ಆಂಥ್ರಾಕ್ಸ್ ಖಾಯಿಲೆಯ ವಿರುದ್ಧ ಲಸಿಕೆ ಹಾಕಿದ್ದೇವೆ. ನಾವು ಚಿಕಿತ್ಸೆ ನೀಡಿ ಪ್ರಯೋಗಾಲಯದಿಂದ ವರದಿ ಬಂದಿರುವ ಪ್ರಕಾರ ಎರಡು ಹಸುಗಳು ಆಂಥ್ರಾಕ್ಸ್ ಖಾಯಿಲೆಯಿಂದ ಮೃತಪಟ್ಟಿವೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ತಿಳಿಸಿದರು.
‘ಎಲ್.ಮುತ್ತುಗದಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆಂಥ್ರಾಕ್ಸ್ ರೋಗಗ್ರಸ್ಥ ಗ್ರಾಮಗಳಾಗಿರುವುದರಿಂದ ಸತ್ತ ಜಾನುವಾರುಗಳನ್ನು ಆಳವಾದ ಗುಣಿಯಲ್ಲಿ ಹೂಳಬೇಕು. ನಂತರ ಸುಣ್ಣ ಹಾಕಬೇಕು. ಈ ರೋಗ ಮನುಷ್ಯರಿಗೂ ಹರಡುವ ಸಾಧ್ಯತೆಯಿದೆ. ಹಲವು ವರ್ಷಗಳ ಹಿಂದೆ ಅಲಗುರ್ಕಿ ಗ್ರಾಮದ ಶ್ರೀರಾಮಪ್ಪ ಅವರಿಗೆ ಈ ಖಾಯಿಲೆ ತಗುಲಿ ರಾಷ್ಟ್ರೀಯ ಸುದ್ದಿಯಾಗಿತ್ತು’ ಎಂದು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಎನ್.ಶಿವರಾಮ್ ಹೇಳಿದರು.
‘ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಆಂಥ್ರಾಕ್ಸ್ ಖಾಯಿಲೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಆಂಥ್ರಾಕ್ಸ್, ಗಳಲೆ ಮತ್ತು ಚಪ್ಪೆರೋಗಗಳ ಗುಣಲಕ್ಷಣಗಳು ಒಂದೇ ರೀತಿಯಾಗಿದ್ದು ಪ್ರಯೋಗಾಲಯದ ಮೂಲಕವಷ್ಟೇ ಅವನ್ನು ಗುರುತಿಸಬೇಕು. ಈ ರೀತಿಯ ಖಾಯಿಲೆಗಳು ಕಂಡುಬಂದಲ್ಲಿ ತಕ್ಷಣವೇ ಕೋಚಿಮುಲ್, ಪಶುವೈದ್ಯಾಧಿಕಾರಿಗಳಿಗೆ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗೆ ಮಾಹಿತಿ ನೀಡಿ. ಗುಂಪು ವಿಮಾ ಯೋಜನೆಯನ್ನು ಹಾಲು ಒಕ್ಕೂಟ ಜಾರಿಗೆ ತಂದಿದ್ದು, ಕೇವಲ 400 ರೂಗಳಷ್ಟು ಹಣ ಕಟ್ಟಿ 40 ಸಾವಿರ ರೂಗಳ ವಿಮೆಯನ್ನು ಪಡೆದುಕೊಳ್ಳಬಹುದು. ಸುಮಾರು 150 ರಾಸುಗಳಿರುವ ಎಲ್.ಮುತ್ತುಗದಹಳ್ಳಿಯಲ್ಲಿ ಕೇವಲ 40 ರಾಸುಗಳಿಗೆ ವಿಮೆ ಮಾಡಿಸಿದ್ದಾರೆ’ ಎಂದು ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ ಹೇಳಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ‘ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಅವರಿಗೆ ಸರ್ಕಾರ ಪರಿಹಾರ ನೀಡಬೇಕು. ಆಂಥ್ರಾಕ್ಸ್ ಖಾಯಿಲೆಯೆಂದು ದೃಢಪಟ್ಟಿರುವುದರಿಂದ ಪಂಚಾಯತಿ ವತಿಯಿಂದ ಸ್ವಚ್ಛತೆಗೆ ಗಮನ ಕೊಡಬೇಕು. ಆಂಥ್ರಾಕ್ಸ್ ಖಾಯಿಲೆ ಮನುಷ್ಯರಿಗೂ ಹರಡುವ ಸಾಧ್ಯತೆಯಿರುವುದರಿಂದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ಮೊಕ್ಕಾಂ ಹೂಡಿ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಒತ್ತಾಯಿಸಿದರು.
- Advertisement -
- Advertisement -
- Advertisement -
- Advertisement -