ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

0
369

ಚಿಕಿತ್ಸೆಗೆಂದು ಕರೆದುಕೊಂಡು ಹೋಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ ಎಂದು ಆರೋಪಿಸಿ, ಆಶಾ ಕಾರ್ಯಕರ್ತೆ ಬಿ.ವಿ.ಪದ್ಮಾವತಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ನೂರಾರು ಮಂದಿ ಆಶಾ ಕಾರ್ಯಕರ್ತೆಯರು, ಸಿ.ಐ.ಟಿ.ಯು.ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಅವರು, ನಮ್ಮ ಕುಟುಂಬಗಳನ್ನು ನಿರ್ಲಕ್ಷಿಸಿ, ಸಮುದಾಯದ ಏಳಿಗೆಗಾಗಿ ನಿರಂತರವಾಗಿ ದುಡಿಯುತ್ತಿರುವ ನಮಗೆ ಭದ್ರತೆ ಇಲ್ಲದಂತಾಗಿದೆ ಎಂದು ದೂರಿದರು.
ತಾಲ್ಲೂಕಿನ ದೇವರ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಪ್ಪನಹಳ್ಳಿ ನಿವಾಸಿ ನರಸಿಂಹಮೂರ್ತಿ ಅವರು, ಸ್ವಯಂ ಪ್ರೇರಿತರಾಗಿ ಬಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅವರ ಪತ್ನಿ ಛಾಯಾ ಅವರಿಗೆ 2014 ರಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಯಾಗಿದೆ. ಸರ್ಕಾರದಿಂದ ನೀಡುವಂತಹ 1100 ರೂಪಾಯಿಗಳ ಅನುದಾನ ಪಡೆದುಕೊಂಡಿದ್ದಾರೆ. ಹೀಗಿದ್ದರೂ ವಿನಾಕಾರಣ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ಕೂಡಲೇ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸಿ ಕಾನೂನು ಪ್ರಕಾರ ತನಿಖೆಗೆ ಒಳಪಡಿಸಬೇಕು. ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆದಿರುವ ಬಗ್ಗೆ ತನಿಖೆಯಾಗಲಿ, ಒಂದು ವೇಳೆ ಆಶಾ ಕಾರ್ತಯಕರ್ತೆ ಬಿ.ವಿ.ಪದ್ಮಾವತಿ ಅವರು, ನರಸಿಂಹಮೂರ್ತಿ ಅವರನ್ನು ಬಲವಂತವಾಗಿ ಕರೆದುಕೊಂಡು ಬಂದು ಮಾಡಿಸಿದ್ದರೆ, ಅವರ ಮೇಲೆ ಇಲಾಖೆಯವರು ಕ್ರಮ ಜರುಗಿಸಲಿ. ಅದನ್ನು ಬಿಟ್ಟು ಮಹಿಳೆಯೆಂಬುದನ್ನು ಗಮನಿಸಿದೆ ಏಕಾಏಕಿ ಹಲ್ಲೆ ನಡೆಸಿರುವ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕಿ ಲಕ್ಷ್ಮೀದೇವಮ್ಮ ಹೇಳಿದರು.
ಸಿ.ಐ.ಟಿ.ಯು.ಜಿಲ್ಲಾ ಮುಖಂಡ ಫಯಾಜ್ ಮಾತನಾಡಿ, ಕಾನೂನುನನ್ನು ಕೈಗೆತ್ತಿಕೊಳ್ಳುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಆಶಾ ಕಾರ್ಯಕರ್ತೆಯರು ಮುಕ್ತವಾಗಿ, ನಿರ್ಭಿತಿಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು, ಒಂದು ವೇಳೆ ಪೊಲೀಸ್ ಇಲಾಖೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ವಿಫಲವಾದರೆ ರಾಜ್ಯಾದ್ಯಂತ ಸಂಘಟನೆಯ ಮೂಲಕ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು.
ನೂರಾರು ಮಂದಿ ಆಶಾ ಕಾರ್ಯಕರ್ತೆಯರು ಪ್ರವಾಸಿಮಂದಿರದಿಂದ ಹೊರಟು ಕೋಟೆ ಸರ್ಕಲ್ ವರೆಗೂ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದರು. ನಂತರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!