21.1 C
Sidlaghatta
Saturday, July 27, 2024

ಆಸಕ್ತ ಜನರ ಶ್ರಮದಿಂದ ಪುನಶ್ಚೇತನ ಪಡೆದ ಸಂತೆಮೈದಾನದ ಆಂಜನೇಯಸ್ವಾಮಿ ದೇವಾಲಯ

- Advertisement -
- Advertisement -

ಪುರಸಭೆ ಮತ್ತು ತಾಲ್ಲೂಕು ಆಡಳಿತ ಮಾಡಬೇಕಿದ್ದ ಕೆಲಸವನ್ನು ಕೆಲವು ಆಸಕ್ತ ಜನರೇ ನಿಂತು ನಿರ್ವಹಿಸಿರುವ ಉದಾಹರಣೆಯು ಅಪರೂಪ. ಕಸ ತ್ಯಾಜ್ಯ ಹಾಗೂ ಹಂದಿಗಳ ಆಶ್ರಯ ತಾಣವಾಗಿದ್ದ ಪಟ್ಟಣದ ಸಂತೆಮೈದಾನದಲ್ಲಿರುವ ಆಂಜನೇಯಸ್ವಾಮಿ ದೇವಾಲಯವನ್ನು ಕೆಲವು ಆಸಕ್ತರು ಸೇರಿಕೊಂಡು ಸಭ್ಯ ಸ್ಥಳವನ್ನಾಗಿಸಿದ್ದಾರೆ.
ಪಟ್ಟಣದಿಂದ ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಎಡಭಾಗದಲ್ಲಿ ರಾಜಕಾಲುವೆ ಹತ್ತಿರವಿರುವ ಈ ದೇವಾಲಯದ ಮುಂಭಾಗದಲ್ಲಿ ಕೆಸರು, ಕಲ್ಮಶ ಸೇರಿಕೊಂಡು ಹಂದಿಗಳ ಆಹಾರ ಮತ್ತು ಪೋಷಣೆಯ ಕೇಂದ್ರವಾಗಿ ಪರಿಣಮಿಸಿತ್ತು. ಕೆಲಭಕ್ತರು ಮತ್ತು ಅಯ್ಯಪ್ಪಸ್ವಾಮಿ ಭಜನೆ ಮಂಡಳಿ ಸದಸ್ಯರು ಸೇರಿಕೊಂಡು ದೇವಾಲಯಕ್ಕೆ ಸುಣ್ಣ ಬಣ್ಣ, ಮುಂದೆ ನೆರಳಿಗಾಗಿ ಶೀಟ್‌ ಹೊದಿಕೆ, ನೀರಿನ ವ್ಯವಸ್ಥೆ ಹಾಗೂ ಶುಚಿತ್ವವನ್ನು ಕಾಪಾಡಿದ್ದಾರೆ.
ಪಟ್ಟಣದ ನೈರುತ್ಯಕ್ಕಿರುವ ಅಮ್ಮನಕೆರೆಯನ್ನು ಶಿಡ್ಲಘಟ್ಟದ ನಿರ್ಮಾತೃ ಕೆಂಪೇಗೌಡನ ಮಡದಿ ಹಲಸೂರಮ್ಮ ಮತ್ತು ಆಗ್ನೇಯಕ್ಕಿರುವ ಗೌಡನಕೆರೆಯನ್ನು ಆಕೆಯ ಮಗ ಶಿವನೇಗೌಡನು ಕಟ್ಟಿಸಿದರೆಂದು ಪ್ರತೀತಿಯಿದೆ. ಈ ಕೆರೆಯನ್ನು ನಿರ್ಮಿಸಿದ ಶಿವನೇಗೌಡನೇ ಈ ಆಂಜನೇಯಸ್ವಾಮಿ ದೇವಾಲಯವನ್ನು ನಿರ್ಮಿಸಿರುವುದಾಗಿ ಹಿರಿಯರು ಹೇಳುತ್ತಾರೆ. ಬಾಲಾಂಜನೇಯಸ್ವರೂಪಿಯಾಗಿ ಆಗ್ನೇಯ ದಿಕ್ಕಿಗೆ ದೃಷ್ಟಿಯಿಟ್ಟಂತಿರುವುದು ಇಲ್ಲಿನ ವಿಗ್ರಹದ ವಿಶೇಷವಾಗಿದೆ.
ಈ ದೇವಾಲಯದ ಪಕ್ಕದಲ್ಲಿರುವ ಸಂತೆ ಮೈದಾನವು ಹಿಂದೆ ಉದ್ಯಾನವನವಾಗಿತ್ತು. ಅದಕ್ಕಾಗಿಯೇ ಇದನ್ನು ಗಾರ್ಡನ್‌ ರಸ್ತೆಯೆಂದೇ ಈಗಲೂ ಕರೆಯಲಾಗುತ್ತದೆ. ರೇಡಿಯೋದಲ್ಲಿ ಪ್ರಸಾರವಾಗುವ ಪ್ರದೇಶ ಸಮಾಚಾರವನ್ನು ಧ್ವನಿವರ್ಧಕದ ಮೂಲಕ ಇಲ್ಲಿ ಬಿತ್ತರಿಸಲಾಗುತ್ತಿತ್ತು. ವಾಯವಿಹಾರಾರ್ಥವಾಗಿ ಬಂದವರು ವಾರ್ತೆಗಳನ್ನು ಆಲಿಸುತ್ತಾ ಪಾರ್ಕ್‌ನಲ್ಲಿ ಅಡ್ಡಾಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅದರ ಮುಂದಿನ ಮೆಟ್ಟಿಲ ಮೇಲೆ ಕುಳಿತುಕೊಳ್ಳುತ್ತಿದ್ದುದಾಗಿ ಹಿರಿಯರು ನೆನೆಸಿಕೊಳ್ಳುತ್ತಾರೆ. ಆಗ ದೇವಾಲಯದ ಮುಂಭಾಗದಲ್ಲಿ ಕಲ್ಯಾಣಿ ಇತ್ತು, ಕೆರೆ ತುಂಬಿದಾಗ ಹೆಚ್ಚಾದ ನೀರು ಮೆಟ್ಟಿಲವರೆಗೂ ಬರುತ್ತಿದ್ದುದಾಗಿ ಜ್ಞಾಪಿಸಿಕೊಳ್ಳುತ್ತಾರೆ.
ದುರಂತವೆಂದರೆ ಆಗ ಕಲ್ಯಾಣಿಯಾಗಿದ್ದ ಜಾಗ ನಂತರ ಕೆಸರಿನ ಹೊಂಡವಾಯಿತು. ಊರಿನ ಚರಂಡಿಗಳ ತ್ಯಾಜ್ಯ ನೀರೆಲ್ಲಾ ದೇವಸ್ಥಾನದ ಪಕ್ಕದಲ್ಲೇ ಹರಿಯುವಂತೆ ಮಾಡಿದ್ದರಿಂದ ತ್ಯಾಜ್ಯದ ನೀರು ಹರಿದು ಬಂದು ಇಲ್ಲಿ ನಿಲ್ಲುವಂತಾಯಿತು. ಹಿಂದೆ ಕಲ್ಯಾಣಿಯಿದ್ದ ಸ್ಥಳ ಕೆಸರಿನ ಹೊಂಡವಾಗಿ ಹಂದಿಗಳ ತಾಣವಾಯಿತು. ಯಾವುದೇ ಪಟ್ಟಣ ಪ್ರವೇಶಿಸುತ್ತಿದ್ದಂತೆಯೇ ಆಹ್ಲಾದಕರ ವಾತಾವರಣ ಸ್ವಾಗತಿಸುವಂತಿರಬೇಕು. ಆದರೆ ಹಂದಿಗಳಿಂದ ಕೆಸರು ಹೊಂಡಗಳಿಂದ ಸ್ವಾಗತಿಸುವಂತಹ ಸ್ಥಿತಿಯಲ್ಲಿ ನಮ್ಮ ಪುರಸಭೆಯವರು ವಾತಾವರಣ ನಿರ್ಮಾಣ ಮಾಡಿದೆಯೆಂದು ಸಾರ್ವಜನಿಕರು ಗೇಲಿಮಾಡುವಂತಾಯಿತು.
‘ಕೆಲ ತಲೆಮಾರುಗಳಿಂದ ನಾವು ಈ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದೇವೆ. ಹಿಂದೆ ಶ್ರೀರಾಮನವಮಿ ಮತ್ತು ಹನುಮಜ್ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿತ್ತು. ಗಣಪತಿ ಹಬ್ಬದ ನಂತರ ಎಲ್ಲಾ ಗಣಪತಿಗಳನ್ನೂ ಇಲ್ಲಿನ ಕಲ್ಯಾಣಿಯಲ್ಲೇ ಬಿಡುತ್ತಿದ್ದರು. ಸಂತೆ ನಡೆಯುವುದು ಪ್ರಾರಂಭವಾದ ಮೇಲೆ ಇಲ್ಲಿ ಗಲೀಜು ಹೆಚ್ಚಾಯಿತು. ಊರಿನ ತ್ಯಾಜ್ಯದ ನೀರು ಹರಿಯಲು ದೇವಾಲಯದ ಪಕ್ಕ ಚರಂಡಿ ಮಾಡಿದ್ದರಿಂದ ಆ ನೀರು ಬಂದು ದೇವಸ್ಥಾನದ ಮುಂದೆ ಸಂಗ್ರಹವಾಗತೊಡಗಿತು. ಕೆಟ್ಟ ವಾಸನೆ ಮತ್ತು ಹಂದಿಗಳ ತಾಣವೆಂದು ಜನರು ಬರುವುದು ಕಡಿಮೆಯಾಯಿತು. ಇತ್ತೀಚೆಗೆ ಸ್ಥಳೀಯ ಭಕ್ತರು ಮತ್ತು ಅಯ್ಯಪ್ಪಸ್ವಾಮಿ ಭಜನೆ ಮಂಡಳಿಯ ರಮೇಶ್‌ ಮತ್ತು ತಂಡದವರು ಸೇರಿ ತಹಶೀಲ್ದಾರ್‌ ಅವರಿಗೆ ತಿಳಿಸಿ ದೇವಾಲಯಕ್ಕೆ ಸುಣ್ಣ, ನೀರು ಮತ್ತು ಹೊದಿಕೆಯನ್ನು ನಿರ್ಮಿಸಿಕೊಟ್ಟಿದ್ದಾರೆ’ ಎಂದು ಅರ್ಚಕ ಸತ್ಯನಾರಾಯಣರಾವ್‌ ಹೇಳುತ್ತಾರೆ.
‘ವಾರಕ್ಕೊಮ್ಮೆ ನಡೆಯುವ ಸಂತೆಯ್ಲಲಿ ಉಳಿಯುವ ತ್ಯಾಜ್ಯವನ್ನು ದೇವಾಲಯದ ಸನಿಹದಲ್ಲಿ ಸುರಿಯುವುದರಿಂದ ಹಂದಿಗಳ ಕಾಟ ಹೆಚ್ಚಾಗಿದೆ. ಅತ್ಯಂತ ಪುರಾತನವಾದ ಈ ದೇವಾಲಯವನ್ನು ಮತ್ತು ಅದರ ಸುತ್ತಮುತ್ತಲಿನ ವಾತಾವರಣವನ್ನು ನಿರ್ಮಲವಾಗಿರುವಂತೆ ನೋಡಿಕೊಳ್ಳಬೇಕು. ದೇವಸ್ಥಾನಕ್ಕೆ ವಿದ್ಯುತ್‌ ದೀಪ, ಕಾಂಪೌಂಡ್‌ ಮತ್ತು ಸಂತೆ ಗೇಟಿನಿಂದ ರಸ್ತೆಯನ್ನು ನಿರ್ಮಾಣ ಮಾಡಿದಲ್ಲಿ ದೇವಾಲಯವು ತನ್ನ ಗತ ವೈಭವಕ್ಕೆ ಹಿಂದಿರುಗುತ್ತದೆ’ ಎಂದು ಅವರು ಹೇಳಿದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!