ಪಕ್ಷಾತೀತವಾಗಿ ಜನರು ಒಗ್ಗೂಡಿ ನೀರಿಗಾಗಿ ಹೋರಾಡಬಹುದು ಎಂಬುದನ್ನು ಈ.ತಿಮ್ಮಸಂದ್ರ ಹಾಗೂ ಅಬ್ಲೂಡು ಪಂಚಾಯತಿಯ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ಮೂಲಕ ಸಾಧಿಸಿ ಹೋರಾಟಕ್ಕೆ ಮುನ್ನುಡಿ ಬರೆದಿದ್ದೇವೆ. ಗ್ರಾಮ ಪಂಚಾಯತಿ ಚುನಾವಣೆಯ ನಾಮಪತ್ರ ಹಿಂಪಡೆಯಲು ಸೋಮವಾರದವರೆಗೂ ಕಾಲಾವಕಾಶವಿದೆ. ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಈ ಹೋರಾಟಕ್ಕೆ ಇತರರೂ ಭಾಗಿಯಾಗಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಶ್ವತ ನೀರಾವರಿ ಹೋರಾಟಗಾರರು, ಬೈಕ್ ರ್ಯಾಲಿ ಮಾಡಿ ಚುನಾವಣೆ ಬಹಿಷ್ಕರಿಸಲು ಹೇಳಿದವರಲ್ಲಿ ಕೆಲವರು ಹಾಗೂ ಕೆಲವರ ಕುಟುಂಬದವರು ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ನೀರಾವರಿ ಹೋರಾಟಗಾರರು ಈಗಲಾದರೂ ತಮ್ಮತಮ್ಮ ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸಲು, ನಾಮಪತ್ರವನ್ನು ಹಿಂಪಡೆಯಲು ಜನರನ್ನು ಮನವೊಲಿಸುವ ಪ್ರಯತ್ನ ಮಾಡಲಿ ಎಂದು ಹೇಳಿದರು.
ನಮ್ಮ ಎರಡೂ ಗ್ರಾಮ ಪಂಚಾಯತಿಯವರು ಯಾವ ಸ್ವಾರ್ಥವೂ ಇಲ್ಲದೆ ಪಕ್ಷಾತೀತವಾಗಿ ರೈತರ ಜೀವನಾಧಾರ ನೀರಿನ ಕಾಳಜಿಯಿಂದ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ. ಈ ಮೂಲಕ ನಾವು ನೀರಿನ ಹೋರಾಟಕ್ಕೆ ತೊಡಗಿಸಿಕೊಂಡಿದ್ದೇವೆ. ನಮ್ಮ ತಾಲ್ಲೂಕಿನ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಉಮೇದುವಾರರೂ ರೈತ ಮಕ್ಕಳೇ ಆಗಿರುವುದರಿಂದ ಎಲ್ಲರೂ ಚರ್ಚಿಸಿ ಸೋಮವಾರದೊಳಗೆ ನಾಮಪತ್ರಗಳನ್ನು ಹಿಂಪಡೆದು ಚುನಾವಣೆ ಬಹಿಷ್ಕರಿಸಿ. ಹಲವಾರು ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ಹೋರಾಡಿದರೂ ಚರಂಡಿ ನೀರನ್ನು ಸಂಸ್ಕರಿಸಿ ನೀಡುವುದಾಗಿ ಈಗ ಹೇಳುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯ ಮೂಲಕವೂ ನಮ್ಮ ಕೆರೆಗಳು ತುಂಬದೆಂದು ಈಗ ನಮಗೆಲ್ಲಾ ಮನವರಿಕೆಯಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸಿ ಶಾಶ್ವತ ನೀರಾವರಿ ಹೋರಾಟವನ್ನು ಬೆಂಬಲಿಸಿ ಎಂದರು.
ಭೂಮಿಯಾಳದಿಂದ ಬಗೆದು ತರುತ್ತಿರುವ ವಿಷಪೂರಿತ ನೀರಿನಿಂದ ಈಗಾಗಲೇ ಆಯಸ್ಸನ್ನು ಕ್ಷೀಣಿಸಿಕೊಂಡಿರುವ ಬಯಲುಸೀಮೆಯ ಜನರು, ಇತ್ತ ಆರೋಗ್ಯವೂ ಇಲ್ಲದೆ, ಬೆಳೆ ಬೆಳೆಯಲಾಗದೆ, ಸಾಲಕ್ಕೆ ಸಿಲುಕಿ ನರಳುತ್ತಿದ್ದರೂ ನಮ್ಮನ್ನು ಆಳುವ ಸರ್ಕಾರಗಳಿಗೆ ಅರ್ಥವಾಗಿಲ್ಲ. ಅವರಿಗೆ ಅರ್ಥ ಮಾಡಿಸಲೆಂದೇ ಜನರು ಒಗ್ಗೂಡಬೇಕು. ನಮ್ಮೆರಡು ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸಿದರೆ ಸಾಲದು. ಎಲ್ಲರೂ ಕೈ ಜೋಡಿಸಬೇಕು. ಇನ್ನೂ ಕಾಲ ಮಿಂಚಿಲ್ಲ. ನಮ್ಮೊಂದಿಗೆ ಕೈಜೋಡಿಸಿ ಎಂದರು.
ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀನಾಥ್, ಕನಕಪ್ರಸಾದ್, ನಾರಾಯಣಸ್ವಾಮಿ, ಆರ್.ದೇವರಾಜ್, ಭಾಸ್ಕರರೆಡ್ಡಿ, ಮೌಲಾ, ವೆಂಕಟೇಶಪ್ಪ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -