ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ನಾಗರಿಕರಿಗೆ ತಿಳಿಸಬೇಕು. ಕೃಷಿ ಇಲಾಖೆಯಲ್ಲಿ ಕೃಷಿಭಾಗ್ಯ ಯೋಜನೆಯಡಿಯಲ್ಲಿ ಈಗಾಗಲೇ ಫಲಾನುಭವಿಗಳನ್ನು ಲಾಟಿರಿಯ ಮೂಲಕ ತಾಲ್ಲೂಕಿನಲ್ಲಿ ಒಟ್ಟು ೬೦೦ ಮಂದಿಯನ್ನು ಪ್ರತಿ ಹೋಬಳಿಗೆ ೧೫೦ ಮಂದಿಯಂತೆ ಆಯ್ಕೆಮಾಡಲಾಗಿದೆ. ಕಳೆದ ವರ್ಷದಲ್ಲಿ ನಿಗದಿ ಪಡಿಸಲಾಗಿದ್ದ ಕೃಷಿಭಾಗ್ಯ ಯೋಜನೆಯ ಕೃಷಿ ಹೊಂಡಗಳನ್ನು ರೈತರು ನಿರ್ಮಾಣ ಮಾಡಿಕೊಂಡಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿ ಲಕ್ಷ್ಮೀದೇವಮ್ಮ ಮಾತನಾಡಿ, ತಾಲ್ಲೂಕಿನಲ್ಲಿ ಶಿಥಿಲವಾಗಿರುವ ಅಂಗನವಾಡಿ ಕೇಂದ್ರಗಳನ್ನು ದುರಸ್ಥಿ ಮಾಡಲು ೭ ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ. ಶಾಲಾ ಪೂರ್ವ ಮಕ್ಕಳ ಊಟದ ಯೋಜನೆಯಡಿಯಲ್ಲಿ (ಎನ್.ಎಸ್.ಪಿ) ೫ ಕೋಟಿ ರೂಪಾಯಿಗಳ ಅನುದಾನ ಲಭ್ಯವಿದೆ. ಸಮಗ್ರ ಶಿಶು ಅಭಿವೃದ್ಧಿ ಸೇವೆಗಾಗಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ೮೬ ಲಕ್ಷ ೫೭ ಸಾವಿರ ರೂಪಾಯಿಗಳ ಅನುದಾನ, ಶಿಶುಪಾಲನಾ ಕೇಂದ್ರಗಳ ನಿರ್ವಹಣೆಗಾಗಿ ೧ ಲಕ್ಷ ೩೩ ಸಾವಿರ ರೂಪಾಯಿಗಳ ಅನುದಾನ ಲಭ್ಯವಿದೆ ಎಂದು ಸಭೆಗೆ ತಿಳಿಸಿದರು.
ಶಿಶುಪಾಲನಾ ಕೇಂದ್ರಗಳನ್ನು ಕಳೆದ ೨ ವರ್ಷಗಳಲ್ಲಿ ಮುಚ್ಚಲಾಗಿದ್ದು, ತಾಲ್ಲೂಕಿನಲ್ಲಿ ಎಲ್ಲಿಯೂ ಕೂಡಾ ಶಿಶುಪಾಲನಾ ಕೇಂದ್ರಗಳು ನಡೆಯುತ್ತಿಲ್ಲ. ಈ ಹಿಂದೆ ನಡೆದಂತಹ ಕೇಂದ್ರಗಳ ನಿರ್ವಹಣೆಯನ್ನು ಸರ್ಕಾರೇತರ ಸಂಸ್ಥೆಗಳು ವಹಿಸಿಕೊಂಡಿದ್ದರಿಂದ ಸರಿಯಾದ ನಿರ್ವಹಣೆ ಮಾಡದೇ ಕೊನೆಯ ಹಂತದಲ್ಲಿ ನಮ್ಮ ಮೇಲೆ ಒತ್ತಡ ಹೇರಿ ಬಿಲ್ಲುಗಳನ್ನು ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ತಾಲ್ಲೂಕಿನಲ್ಲಿ ಎಲ್ಲಿಯೂ ಶಿಶುಪಾಲನಾ ಕೇಂದ್ರಗಳು ನಡೆಯುತ್ತಿಲ್ಲ. ಆದರೆ ಲಿಂಕ್ ಡಾಕ್ಯುಮೆಂಟ್ನಲ್ಲಿ ಬಿಡುಗಡೆಯಾಗುತ್ತಿರುವ ಅನುದಾನವನ್ನು ಸರ್ಕಾರಕ್ಕೆ ಪುನಃ ವಾಪಸ್ಸು ಕಳುಹಿಸಲಾಗುತ್ತಿದೆ ಎಂದರು.
ತಾಲ್ಲೂಕಿನಲ್ಲಿ ಅಗತ್ಯವಾಗಿರುವ ಕಡೆಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರದು ಈ ಅನುದಾನವನ್ನು ಬಳಕೆ ಮಾಡಿಕೊಳ್ಳುವಂತೆ ಸದಸ್ಯರು ಅಧಿಕಾರಿಗಳಿಗೆ ತಿಳಿಸಿದರು.
ರೇಷ್ಮೆ ಇಲಾಖೆಯಿಂದ ಈಗಾಗಲೇ ರೈತರಿಗೆ ಹನಿನೀರಾವರಿ ಪದ್ದತಿಗೆ ಬಿಡುಗಡೆಯಾಗಿರುವ ಅನುದಾನಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗಿದೆ ಮತ್ತು ಹುಳು ಸಾಕಾಣಿಕೆ ಮಾಡುವಂತಹ ರೈತರುಗಳಿಗೆ ಸೋಲಾರ್ ದೀಪಗಳನ್ನು ವಿತರಣೆ ಮಾಡಲಾಗುತ್ತಿದೆ. ಕಳೆದ ತಿಂಗಳಿನಲ್ಲಿ ರೇಷ್ಮೆಯ ಬೆಲೆಗಳು ಕುಸಿತವಾಗಿದ್ದರಿಂದ ರೈತರು ಕಂಗಾಲಾಗಿದ್ದು, ರಾಜ್ಯ ಸರ್ಕಾರದಿಂದ ಈಗಾಗಲೇ ಅಧ್ಯಯನ ತಂಡದಿಂದ ಸಮೀಕ್ಷೆಯನ್ನು ಮಾಡಲಾಗಿದೆ ಎಂದು ರೇಷ್ಮೆ ಇಲಾಖೆ ಕೃಷಿ ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ, ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಶಿವಾನಂದ, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -