ಆಧುನಿಕ ತಾಂತ್ರಿಕತೆ ಬಳಸಿಕೊಂಡು ಉತ್ತಮ ಗುಣಮಟ್ಟದ ರೇಷ್ಮೆಯನ್ನು ಉತ್ಪಾದನೆ ಮಾಡುವತ್ತ ರೈತರು ಉತ್ಸುಕರಾಗಬೇಕು ಎಂದು ಬಾಗೇಪಲ್ಲಿ ರೇಷ್ಮೆ ಸಹಾಯಕ ನಿರ್ದೆಶಕ ಅಮರ್ನಾಥ್ ಹೇಳಿದರು.
ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ರೇಷ್ಮೆ ಇಲಾಖೆ ಏರ್ಪಡಿಸಿದ್ದ ರೇಷ್ಮೆ ಕೃಷಿ ದ್ವಿತಳಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯಬೇಕು. ದ್ವಿತಳಿ ರೇಷ್ಮೆ ಗೂಡನ್ನು ಬೆಳೆಯಲು ಅಗತ್ಯವಾಗಿರುವ ವಿಧಾನಗಳನ್ನು ರೈತರು ಖಡ್ಡಾಯವಾಗಿ ಅನುಸರಿಸಬೇಕು.
ಹಿಪ್ಪುನೇರಳೆ ತೋಟಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡುವುದರೊಂದಿಗೆ ದ್ವಿತಳಿ ರೇಷ್ಮೆ ಗೂಡಿಗೆ ಪಕ್ವವಾಗಿರುವ ಹಿಪ್ಪುನೇರಳೆ ಸೊಪ್ಪನ್ನು ಕೊಡುವುದರಿಂದ ಉತ್ತಮ ಗುಣಮಟ್ಟದ ಬೆಳೆಯನ್ನು ಹಾಗೂ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ಖಡ್ಡಾಯವಾಗಿದ್ದು, ರೇಷ್ಮೆ ಹುಳುಸಾಕಾಣಿಕೆ ಮನೆಗಳಿಂದ ತೆಗೆದ ತ್ಯಾಜ್ಯವನ್ನು ಚೆನ್ನಾಗಿ ಕೊಳೆಸಿ ತೋಟಗಳಿಗೆ ನೀಡಬೇಕು. ಹಿಪ್ಪುನೇರಳೆ ಸೊಪ್ಪನ್ನು ಕಟಾವು ಮಾಡುವಂತಹ ಪದ್ದತಿಗಳನ್ನು ಬದಲಾವಣೆ ಮಾಡಬೇಕು. ತೋಟಗಳಿಗೆ ಬೇವಿನಹಿಂಡಿ, ಹೊಂಗೆಹಿಂಡಿಯನ್ನು ಕೊಡುವುದು ಸೂಕ್ತ. ಕಳಪೆ ಗುಣಮಟ್ಟದ ರಸಗೊಬ್ಬರಗಳನ್ನು ನೀಡುವುದು ಸೇರಿದಂತೆ ರಾಸಾಯನಿಕಗಳನ್ನು ಸಿಂಪಡಣೆ ಮಾಡಬಾರದು ಎಂದು ಎಚ್ಚರಿಸಿದರು.
ದ್ವಿತಳಿ ರೇಷ್ಮೆ ಗೂಡಿಗೆ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯವಿಲ್ಲದಿರುವುದರಿಂದ ರೈತರು ಬೆಳೆದ ದ್ವಿತಳಿ ರೇಷ್ಮೆ ಗೂಡನ್ನು ದೂರದ ರಾಮನಗರಕ್ಕೆ ಕೊಂಡೊಯ್ಯಬೇಕು ಹೀಗೆ ಕೊಂಡೊಯ್ಯಲು ಸಾಗಾಣಿಕೆ ವೆಚ್ಚ ದುಬಾರಿಯಾಗುತ್ತದೆ ಇದಕ್ಕೆ ರೈತರು ಏನು ಮಾಡಬೇಕು? ಎಂದು ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತಾಲೂಕಿನಾಧ್ಯಂತ ಹೆಚ್ಚು ಹೆಚ್ಚು ದ್ವಿತಳಿ ರೇಷ್ಮೆ ಗೂಡುಗಳನ್ನು ಉತ್ಪಾದನೆ ಮಾಡಿದಾಗ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದು. ಆದರೆ ಬಹುತೇಕ ರೈತರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರಾದರೂ ದ್ವಿತಳಿ ರೇಷ್ಮೆಗೂಡನ್ನು ಬೆಳೆಯಲು ಹಿಂದೇಟು ಹಾಕುವುದು ಸರಿಯಲ್ಲವೆಂದರು.
ಚಿಂತಾಮಣಿಯ ರೇಷ್ಮೆ ಸಹಾಯಕ ನಿರ್ದೇಶಕ ಕಾಳಪ್ಪ, ವಿಜ್ಞಾನಿ ಫಣಿರಾಜ್, ಶಿಡ್ಲಘಟ್ಟ ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ರೈತರಾದ ಶಿವಣ್ಣ, ನಿರಂಜನ್, ದೊಡ್ಡಮಾರಪ್ಪ, ಶೆಟ್ಟಿಹಳ್ಳಿ ಆಂಜಿನಪ್ಪ, ಬಚ್ಚರೆಡ್ಡಿ, ಕೆ.ಹೆಚ್.ಮಂಜುನಾಥ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -