23.1 C
Sidlaghatta
Tuesday, August 16, 2022

ಎರಡು ಗುಂಪುಗಳ ನಡುವೆ ಘರ್ಷಣೆ

- Advertisement -
- Advertisement -

ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ೮ ಕ್ಕೂ ಅಧಿಕ ಮಂದಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಯ್ಯಪ್ಪನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಗ್ರಾಮದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಬೈಯಪ್ಪನಹಳ್ಳಿಯ ಅನಿಲ್, ಸುಹಾಸ್, ನಾರಾಯಣಸ್ವಾಮಿ, ಬೈರಾರೆಡ್ಡಿ, ಚಂದ್ರಶೇಖರ್ರೆಡ್ಡಿ, ಮಂಜುನಾಥ್ ಮತ್ತಿತರರು ಗಾಯಗೊಂಡಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ನಡೆದ ಘರ್ಷಣೆಯಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಬಹುತೇಕ ಮಂದಿ ಯುವಕರು ಮನೆಗಳನ್ನು ತೊರೆದಿದ್ದು ಗ್ರಾಮದಲ್ಲಿ ನೀರವಮೌನದ ವಾತಾವರಣ ಆವರಿಸಿದೆ. ಪೊಲೀಸರು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.
ಘಟನೆಯ ಹಿನ್ನೆಲೆ: ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯ ಬಯ್ಯಪ್ಪನಹಳ್ಳಿಯ ಕೆಲ ಯುವಕರು ತಮ್ಮ ಮೋಜಿಗಾಗಿ ದ್ವಿಚಕ್ರ ವಾಹನಗಳನ್ನು ಕದ್ದು ಬೆಂಗಳೂರು ಸೇರಿದಂತೆ ಹಲವೆಡೆಗಳಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು ಚಿಂತಾಮಣಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು ಎನ್ನಲಾಗಿದೆ.
ಕದ್ದ ಬೈಕ್ ಗಳನ್ನು ಎಲ್ಲೆಲ್ಲಿ ಮಾರಾಟ ಮಾಡಿದ್ದೀರಿ ತೋರಿಸಿ ಎಂದಾಗ ತಮಗೆ ಹಳೆಯ ದ್ವೇಷ ಇದ್ದ ಬಯ್ಯಪ್ಪನಹಳ್ಳಿಯ ಕೆಲ ಯುವಕರ ಮೇಲೆ ಮಾಹಿತಿ ನೀಡಿದ್ದಾರೆ, ಚಿಂತಾಮಣಿಯ ಪೊಲೀಸರು, ಬಯ್ಯಪ್ಪನಹಳ್ಳಿಯ ಯುವಕರನ್ನು ಕರೆದು ವಿಚಾರಣೆ ನಡೆಸಿ ವಿಚಾರಣೆಯಲ್ಲಿ ಬಂಧಿತ ಯುವಕರು ನೀಡಿರುವ ಮಾಹಿತಿ ಸುಳ್ಳೆಂದು ಪ್ರಾಥಮಿಕ ತನಿಖೆಯಿಂದ ಖಾತ್ರಿ ಮಾಡಿಕೊಂಡು ಯುವಕರನ್ನು ಬಿಟ್ಟು ಕಳುಹಿಸಿದ್ದಾರೆ.
ಇದಾದ ನಂತರ ದಂಡ ಕಟ್ಟಿ ಬಿಡುಗಡೆಯಾದ ಆರೋಪಿಗಳು ಗ್ರಾಮಕ್ಕೆ ಬಂದಾಗ ಗ್ರಾಮದ ಕೆಲ ಯುವಕರು ಹಿರಿಯರಿಗೆ ಮನವಿ ಮಾಡಿ ನಮ್ಮ ಮೇಲೆ ವಿನಾಕಾರಣ ಪೋಲೀಸರಿಗೆ ಮಾಹಿತಿ ನೀಡಿದ್ದ ಆರೋಪಿಗಳನ್ನು ಕರೆಸಿ ಬುದ್ದಿ ಹೇಳುವಂತೆ ಸೂಚಿದ್ದಾರೆ.
ಯುವಕರ ಮನವಿಯಂತೆ ಗ್ರಾಮದ ಕೆಲವು ಮುಖಂಡರು ಸೇರಿ ಪಂಚಾಯಿತಿ ಸೇರಿಸಿ ಗ್ರಾಮದ ಕೃಷ್ಣ, ಗಜೇಂದ್ರ, ಶ್ರೀನಿವಾಸ್, ಪವನ್, ಅಶೋಕ, ವಿನೋದ್ ಮತ್ತಿತರನ್ನು ಈ ಬಗ್ಗೆ ಪ್ರಶ್ನಿಸಿದಾಗ ಇದರಿಂದ ಕುಪಿತಗೊಂಡ ಶ್ರೀನಿವಾಸ್, ಗಜೇಂದ್ರ ಹಾಗೂ ಅವರ ಸಹಚರರು ಮಾರಕಾಯುಧಗಳಿಂದ ಸ್ಥಳದಲ್ಲಿದ್ದ ಅನಿಲ್, ಸುಹಾಸ್ ಮತ್ತಿತರರ ಮೇಲೆ ಏಕಾ ಏಕಿ ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ಹಿನ್ನಲೆಯಲ್ಲಿ ಬೈಯ್ಯಪ್ಪನಹಳ್ಳಿ ಗ್ರಾಮದ ಗಜೇಂದ್ರ, ಶ್ರೀನಿವಾಸ್, ನಾಗರಾಜ್ ಹಾಗೂ ಇತರೆ ಒಂಬತ್ತು ಮಂದಿ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ದಿಬ್ಬೂರಹಳ್ಳಿ ಪೊಲೀಸರು ನಾಗರಾಜ್ ಎಂಬಾತನನ್ನು ಬಂಧಿಸಿದ್ದು ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಗೆ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ರಮೇಶ್ ಮತ್ತಿತರರು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here