ಪುಟ್ಟ ಪುಟಾಣಿಗಳು ಶಾಲೆಯ ಆವರಣದಲ್ಲಿರುವ ಗಿಡಗಳ ಎಲೆಗಳನ್ನು ಸಂಗ್ರಹಿಸುತ್ತಾರೆ. ವಿವಿಧ ಆಕಾರದ ಎಲೆಗಳನ್ನು ತಮ್ಮ ಪುಟ್ಟ ಕೈಯಲ್ಲಿ ಹಿಡಿಯುವಾಗಲೇ ಅವರ ಮನದಲ್ಲಿ ವಿವಿಧ ಪ್ರಾಣಿಗಳ, ಪಕ್ಷಿಗಳ ಆಕಾರ ಮೂಡುತ್ತಿರುತ್ತದೆ.
ಶಿಡ್ಲಘಟ್ಟದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಮೂರನೇ ತರಗತಿಯ ಪುಟಾಣಿಗಳ ಚಟುವಟಿಕೆಯಿದು.
ಅವರ ಕಲ್ಪನೆ ಹರಿದಂತೆ ವಿವಿಧ ಆಕಾರದ ಎಲೆಗಳನ್ನು ಜೋಡಿಸುತ್ತಾರೆ. ಆಮೆ, ಗಿಣಿ, ಜಿಂಕೆ, ಇಲಿ, ಆನೆ, ಮೀನು ಮೊದಲಾದ ರೂಪಗಳನ್ನು ಎಲೆಗಳನ್ನು ಹಾಗೂ ಹೂವಿನ ಎಸಳುಗಳನ್ನು ಬಳಸಿ ರೂಪಿಸುವಲ್ಲಿ ಇವರು ಸಿದ್ಧಹಸ್ತರಾಗಿದ್ದಾರೆ.
‘ಮಕ್ಕಳಿಗೆ ಸ್ವತಂತ್ರ್ಯ ನೀಡಬೇಕು. ಆಟದ ರೀತಿ ಅವರಿಗೆ ವಿಷಯವನ್ನು ತಿಳಿಸಿದರೆ ಬಲು ಬೇಗ ಗ್ರಹಿಸುತ್ತಾರೆ. ಎಲೆಗಳನ್ನು ಬಳಸಿ ಒಂದು ಗ್ರೀಟಿಂಗ್ ಕಾರ್ಡ್ ತಯಾರಿಸಿ ತೋರಿಸಿದೆ. ಈಗ ನನಗೇ ಅಚ್ಚರಿಯಾಗುವ ರೀತಿಯಲ್ಲಿ ಈ ಮಕ್ಕಳು ತಯಾರಿಸುತ್ತಿದ್ದಾರೆ’ ಎಂದು ಶಿಕ್ಷಕಿ ಜಯಂತಿ ತಿಳಿಸಿದರು.
‘ನಮ್ಮ ಶಾಲೆಯಲ್ಲಿ ವಿಶಾಲವಾದ ಕಾಂಪೋಂಡ್ ಹಾಗೂ ಹಳೆಯದಾದ ಗಿಡಮರಗಳಿವೆ. ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಈ ಮೂಲಕ ತಿಳಿಸಿಕೊಡಲಾಗುತ್ತಿದೆ. ಮಕ್ಕಳಿಗೆ ಗಿಡಮರಗಳ ಹೆಸರುಗಳು, ಎಲೆಗಳ ವಿಧಗಳು, ಪ್ರಾಣಿ ಪಕ್ಷಿಗಳ ಆಕಾರ ರೂಪಗಳು ಹೀಗೆ ಹಲವು ವಿಷಯಗಳು ಏಕಕಾಲದಲ್ಲಿ ಪರೋಕ್ಷವಾಗಿ ತಿಳಿಯುತ್ತಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಎನ್.ಕೃಷ್ಣಮೂರ್ತಿ.
‘ನಲಿ- ಕಲಿ ವಿಧಾನದ ಶಿಕ್ಷಣವನ್ನು ಸರ್ಕಾರಿ ಶಾಲೆಯ ಒಂದರಿಂದ ಮೂರನೇ ತರಗತಿಗಳಿಗೆ ಅಳವಡಿಸಲಾಗಿದೆ. ಇದು ಮಕ್ಕಳಿಗೆ ಸಂತಸದಾಯಕ ಹಾಗೂ ಚಟುವಟುಕೆ ಆಧಾರಿತ ಕಲಿಕಾ ವಿಧಾನವಾಗಿದೆ. ಸ್ವ-ಕಲಿಕೆ ಹಾಗೂ ಸ್ವ-ವೇಗದ ಕಲಿಕೆಗೆ ಈ ಪದ್ಧತಿ ಸಹಾಯಕವಾಗಿರುತ್ತದೆ. ಕಲಿಕಾ ಚಪ್ಪರದಲ್ಲಿ ಸಂತಸದಾಯಕವಾಗಿ ಮಕ್ಕಳು ಕಲಿಯುತ್ತಾ ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಇದು ಸಹಾಯಕ. ಎಲ್ಲಾ ಶಾಲೆಗಳಲ್ಲೂ ಈ ರೀತಿ ಸುತ್ತಮುತ್ತ ಇರುವ ಪರಿಸರದಿಂದಲೇ ಮಕ್ಕಳಿಗೆ ಚಟುವಟಿಕೆ ರೂಪಿಸುವುದು ಫಲಕಾರಿ’ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ವಿ.ಮಂಜುನಾಥ್ ಅಭಿಪ್ರಾಯಪಡುತ್ತಾರೆ.
- Advertisement -
- Advertisement -
- Advertisement -