‘ಏಳಿ ಕನ್ನಡಿಗರೇ ಎದ್ದೇಳಿ. ಜಾಗೃತರಾಗಿ ಸಿಡಿದೇಳಿ, ಬೇಡಬಂದಿಹರಿಲ್ಲಿ ಪ್ರಭುಗಳಾಗತಿಹರು, ಕರುನಾಡ ಸಿರಿ ಸಂಪದವ ದೋಚುತಿಹರು, ಛಲಬೇಕು ಬಲಬೇಕು ಗೆಲಬೇಕು ನಾವಿನ್ನು, ಒಗ್ಗೂಡಿ ಕರುನಾಡ ಸೋದರ ಸೋದರಿಯರೆ ತಾವಿನ್ನು, ಸಾಕಿನ್ನು ಕ್ಷಮೆಯು, ಸಾಕಿನ್ನು ದಯೆಯು, ಕರುನಾಡ ರಕ್ಷಣೆಯ ನಮ್ಮಯ ಗುರಿಯು’ ಎಂದು ಆವೇಷಭರಿತರಾಗಿ ನಾಡಿನ ರಕ್ಷಣೆಯ ಬಗ್ಗೆ ದೇವರಮಳ್ಳೂರು ಚನ್ನಕೃಷ್ಣ ಕವನ ವಾಚಿಸಿದರು.
ನಗರದ ಮುತ್ತೂರು ಬೀದಿಯ ಸುಂದರಾಚಾರಿ ಅವರ ಮನೆಯಲ್ಲಿ ಬುಧವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಮನೆಮನೆ ಕವಿಗೋಷ್ಠಿಯಲ್ಲಿ ಕವಿಗಳು ಕವನಗಳನ್ನು ಓದಿದರು.
‘ಬಡತನ ನಿವಾರಣೆಗಾಗಿ ಅಕ್ಕಿಭಾಗ್ಯ ಯೋಜನೆ, ಹಸಿವು ಇಂಗಿಸಲು ಅನ್ನಭಾಗ್ಯ ಯೋಜನೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಅಕ್ಷರ ದಾಸೋಹಭಾಗ್ಯ ಯೋಜನೆ, ಯುವಕ ಯುವತಿಯರ ಜೀವನಕ್ಕೆ ತಾಳಿಭಾಗ್ಯ ಯೋಜನೆ, ಹುಟ್ಟಿದ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ, ಜನಸಾಮಾನ್ಯರಿಗೆ ಈ ಎಲ್ಲಾ ಭಾಗ್ಯಗಳನ್ನೂ ಸವಿಯುವುದೇ ದೊಡ್ಡ ಸೌಭಾಗ್ಯ ಯೋಜನೆ’ ಎಂದು ಸರ್ಕಾರದ ಭಾಗ್ಯ ಯೋಜನೆಯ ಬಗ್ಗೆ ವಿ.ಕೃಷ್ಣ ಕವನ ಓದಿದರು.
‘ನಮ್ಮ ಮನೆಯ ಮುಂದಿಹುದು ಪಾರಿಜಾತ ಬ್ರಹ್ಮಕಮಲ ಮರುಗ ದವನ ಗರಿಕೆ ಪತ್ರೆ ತುಳಸಿ ಬೃಂದಾವನವು, ನಕ್ಷತ್ರದಂತಿಹ ಪಾರಿಜಾತವು, ಚಂದ್ರಮನಂತಿಹ ಬ್ರಹ್ಮಕಮಲವು, ಸುವಾಸಿತ ಪತ್ರೆಗಳಿಂದೊಡಗೂಡಿ ಬೃಂದಾವನದಿಹ ಶ್ರೀಕೃಷ್ಣನ ಪೂಜೆಗೆ ಕಾದಿಹವು’ ಎಂದು ಮನೆಯ ಮುಂದಿನ ಹೂದೋಟದ ಸುವಾಸನೆಯ ಘಮಲನ್ನು ಶ್ಯಾಮಸುಂದರ್ ವರ್ಣಿಸಿದರು.
‘ಅಮ್ಮನ ಮಮತೆ’, ‘ಮನಸ್ಸು ಮತ್ತು ನಾನು’, ‘ನೇಪಾಳದ ದುರಂತ’, ‘ಕನಸು’ ಮುಂತಾದ ವೈವಿದ್ಯಮಯ ವಸ್ತು ವಿಷಯಗಳನ್ನೊಳಗೊಂಡ ಕವನಗಳನ್ನು ಕವಿಗಳು ಓದಿದರೆ, ಕೆಲವರು ತಮ್ಮ ರಚನೆಯ ಕವನವನ್ನು ರಾಗಕಟ್ಟಿ ಹಾಡಿದರು.
ಮನೆಮನೆ ಕವಿಗೋಷ್ಠಿಯನ್ನು ಉದ್ಘಾಟಿಸಿದ ಶಿಕ್ಷಣ ಸಂಯೋಜಕ ಬಿ.ವಿ.ಮಂಜುನಾಥ್,‘ಈ ರೀತಿಯ ಉತ್ತಮ ಕವನಗಳು ಕೇವಲ ನಾಲ್ಕು ಗೋಡೆಗಳ ನಡುವೆ ಕೆಲವೇ ಜನರ ಆಲಿಸುವಿಕೆಗೆ ಸೀಮಿತವಾಗಬಾರದು. ಇವನ್ನು ನಾನು ಪುಸ್ತಕರೂಪಕ್ಕೆ ತರುವೆ. ಮುಂದೆ ನಡೆಯುವ ಕವಿ ಗೋಷ್ಠಿಯ ಕವನಗಳನ್ನೂ ಪುಸ್ತಕ ರೂಪಕ್ಕೆ ತನ್ನಿ. ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಕವನಗಳಲ್ಲಿ ಆಯ್ದು ಕೆಲವನ್ನು ಪುಸ್ತವನ್ನಾಗಿಸಿ’ ಎಂದು ಸಲಹೆ ನೀಡಿದರು.
ಕವಿಗಳಾದ ಕಾಶಿನಾಥ್, ಸುಂದರಾಚಾರಿ, ಮಂಜುನಾಥ, ಹೇಮಸುಂದರ್, ವಿ.ಕೃಷ್ಣ, ಶ್ಯಾಮಸುಂದರ್, ಶ್ರೀನಿವಾಸ್, ರಾಮಕೃಷ್ಣ, ಚನ್ನಕೃಷ್ಣ, ಮಾಲತಿ, ರಾಜೇಶ್ವರಿ, ವೆಂಕಟೇಶಪ್ಪ, ವೇಣು, ಎಸ್.ವಿ.ನಾಗರಾಜರಾವ್, ಜಯಶ್ರೀ, ಶಂಕರಣ್ಣ, ವಿನಾಯಕ ಭಾಗವಹಿಸಿದ್ದರು. ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಕೃ.ನಾ.ಶ್ರೀನಿವಾಸ್, ನಂದೀಶ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -