ಸೃಜನಾತ್ಮಕವಾಗಿ ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಕಲಿಕಾ ವಿಧಾನಗಳಿಗೆ ಪ್ರೋತ್ಸಾಹ ನೀಡುವ ‘ಕಲಿ–ಕಲಿಸು’ ಎಂಬ ಯೋಜನೆಯ ಉದ್ಘಾಟನೆ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನೆರವೇರಿತು.
ಕಲೆ ಸಂಸ್ಕೃತಿಯ ಬೆಳವಣಿಗೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ಸಂಸ್ಥೆ ಇಂಡಿಯಾ ಫೌಂಡೇಷನ್ ಫಾರ್ ಆರ್ಟ್ಸ್ (ಐಎಫ್ಎ) ಶಿಕ್ಷಣ ಪದ್ಧತಿಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಸೃಜನ ಕಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಿದೆ.
ಎರಡನೆಯ ತರಗತಿ ವಿದ್ಯಾರ್ಥಿ ನರಸಿಂಹ ಮೂರ್ತಿ ಚಿತ್ರ ಬರೆಯುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಾಲೆಯ ಮಕ್ಕಳು ಗ್ರಂಥಾಲಯದ ಪುಸ್ತಕಗಳನ್ನು ಓದಿ ಅದರ ಬಗ್ಗೆ ಅನಿಸಿಕೆಗಳನ್ನು ಬರೆಯುವ ‘ನಾನು ಓದಿದ ಪುಸ್ತಕ’ ಹಾಗೂ ಶಾಲಾ ಮಕ್ಕಳ ಲೇಖನಗಳು ಹಾಗೂ ಚಿತ್ರಗಳನ್ನು ಒಳಗೊಂಡ ‘ಬೇಲಿಹೂ’ ಎಂಬ ಗೋಡೆ ಪತ್ರಿಕೆಗಳು ಈ ಸಂದರ್ಭದಲ್ಲಿ ಬಿಡುಗಡೆಗೊಂಡವು. ಮಕ್ಕಳೊಂದಿಗೆ ಸಂವಾದ ಮಾಡಿದ ಅತಿಥಿಗಳು ಮಕ್ಕಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಕಡಲು ಪ್ರಕಾಶನದ ಶ್ರೀಧರ್ ಗೌಡ ಮಾತನಾಡಿ, ‘ಅನುವಾದದ ಮುಖಾಂತರ ಬೇರೆ ಭಾಷೆಯ ಪುಸ್ತಕಗಳು ಕನ್ನಡಕ್ಕೆ ಬರುತ್ತಿವೆ ಹಾಗೆಯೇ ಕನ್ನಡದ ಹಲವು ಪುಸ್ತಕಗಳು ಬೇರೆ ಭಾಷೆಗಳಿಗೆ ಅನುವಾದ ಆಗುತಿವೆ. ಕನ್ನಮಂಗಲ ಶಾಲೆಯ ಶಾಮಂತಿ ಕೂಡ ಒಂದು ದಿನ ಇಂಗ್ಲಿಷ್ ಭಾಷೆಗೆ ಅನುವಾದವಾಗಿ ಪ್ರಕಟಣೆಯಾಗಲಿ’ ಎಂದು ಆಶಿಸಿದರು.
ಸ್ನೇಹ ಯುವಕರ ಸಂಘದ ಅಧ್ಯಕ್ಷ ವಸಂತವಲ್ಲಭಕುಮಾರ್, ಐಎಫ್ಎ ಸಂಸ್ಥೆಯ ಕಲಿ-ಕಲಿಸು ಯೋಜನೆಯ ಶಾಲೆಗಳ ಸಂಯೋಜಕ ಬಸವರಾಜು, ನಮ್ಮ ಮೆಟ್ರೊ ರಂಗೋಲಿ ಕಲಾ ಕೇಂದ್ರದ ಕಲಾವಿದೆ ಸುರೇಖಾ, ಯಲಹಂಕದ ಸಮಾಜ ಸೇವಕ ಗೋಪಿನಾಥ್, ಕನ್ನಮಂಗಲ ಸ್ನೇಹ ಯುವಕರ ಸಂಘದ ಕಾರ್ಯದರ್ಶಿ ವಾಸುದೇವ್, ನಾಗರಾಜ್, ಕೇಶವಪ್ಪ, ಶಾಲೆಯ ಮುಖ್ಯ ಶಿಕ್ಷಕ ಎಚ್. ಮುನಿಯಪ್ಪ, ಶಿಕ್ಷಕರಾದ ಕೆ.ಶಿವಶಂಕರ್, ಜೆ.ಶ್ರೀನಿವಾಸ್, ಎಸ್.ಕಲಾಧರ್, ಟಿ.ಜೆ.ಸುನೀತ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -