ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತಂತೆ ಚರ್ಚಿಸಲು ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ನಡೆಯಿತು.
ಈಚೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ಸಂಗಟನೆಗಳ ನೇತೃತ್ವದಲ್ಲಿ ಕಾಲೇಜಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಸರಿಪಡಿಸಿಲ್ಲವೆಂದು ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಯಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಎಂ.ರಾಜಣ್ಣ ಅವರು ಭಾಗವಹಿಸಿದ ಸಭೆಯು ಪ್ರಾಮುಖ್ಯತೆ ಪಡೆದಿತ್ತು.
ಸಭೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್,ಕಾಲೇಜಿನ ಸಮಸ್ಯೆಗಳ ಕುರಿತಂತೆ ಮನವಿ ಪತ್ರವನ್ನು ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಿಯಾದ ಕಾಂಪೋಂಡ್ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ಶೈಕ್ಷಣಿಕ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಸುಭದ್ರ ಕಾಂಪೋಂಡ್ ಇಲ್ಲದೆ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಬೆಳಿಗ್ಗೆ ಕಾಲೇಜು ಪ್ರಾರಂಭವಾಗುವ ವೇಳೆಗೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಮುಜುಗರ ಪಡುವ ಸನ್ನಿವೇಶ ಉಂಟಾಗಿರುತ್ತದೆ. ಸುಭದ್ರ ಕಾಂಪೋಂಡ್, ಹೆಣ್ಣುಮಕ್ಕಳಿಗೆ ಶೌಚಾಲಯ, ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಕಿಟಕಿಗಳ ಗಾಜು ಒಡೆದಿರುವುದರಿಂದ ಪೂರಕ ದುರಸ್ಥಿ, ಪ್ರಯೋಗಾಲಯಗಳು, ರಾತ್ರಿ ಪಾಳಿಯ ಕಾವಲುಗಾರನ ವ್ಯವಸ್ಥೆ ಮುಂತಾದ ಸೌಕರ್ಯಗಳನ್ನು ಒದಗಿಸುವಂತೆ ಮನವಿಯಲ್ಲಿ ಸಲ್ಲಿಸಿದರು.
ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಂ.ರಾಜಣ್ಣ,‘ಈಗಾಗಲೇ ಜಿಲ್ಲಾಧಿಕಾರಿಯವರೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಅತಿ ಶೀಘ್ರವಾಗಿ ಕಾಲೇಜಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಈಚೆಗೆ ವಿದ್ಯಾರ್ಥಿಗಳು ಸಂಘಟನೆಗಳ ಮುಖಂಡರೊಂದಿಗೆ ನಮ್ಮ ಮನೆಯ ಮುಂದೆ ಪ್ರತಿಭಟಿಸುವಾಗ ಅನುಚಿತವಾಗಿ ವರ್ತಿಸಿದ್ದು ಮನಸ್ಸಿಗೆ ಬೇಸರವಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರಿಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ದೂರು ನೀಡಿದ್ದೇನೆ’ ಎಂದು ಹೇಳಿದರು.
‘ಶಿಡ್ಲಘಟ್ಟದ ಮೊಟ್ಟಮೊದಲ ಪುರಸಭಾ ಅಧ್ಯಕ್ಷರಾಗಿದ್ದ ಬಿ.ಎಂ.ವಿರೂಪಾಕ್ಷಪ್ಪನವರು ಕಟ್ಟಿಸಿ ದಾನವಾಗಿ ಸರ್ಕಾರಕ್ಕೆ ನೀಡಿದ್ದ ಈಗಿನ ಕಾಲೇಜು ಕಟ್ಟಡವು ಹಳೆಯದಾಗಿದೆ. ಅದನ್ನು ಪುನಶ್ಚೇತನಗೊಳಿಸಲು 35 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.
ಪ್ರಾಂಶುಪಾಲ ಆನಂದ್, ಅಬ್ದುಲ್ ಸಮದ್, ಬದ್ರಿನಾಥ್, ಸುಬ್ಬಾರೆಡ್ಡಿ, ಚಿಕ್ಕಮುನಿಯಪ್ಪ, ಮಂಜುಳಾ, ದೀಪಕ್, ವೆಂಕಟಶಿವಾರೆಡ್ಡಿ, ಮಧು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -