ನಗರಗಳಲ್ಲಿ ಮಕ್ಕಳಿಗೆ ಈಜಲು ಈಜು ಕಲಿಯಲು ಈಜುಕೊಳಗಳಿರುತ್ತವೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲೂ ಜಿಲ್ಲಾಡಳಿತದಿಂದ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಈಜುಕೊಳವನ್ನು ನಿರ್ಮಾಣ ಮಾಡಲಾಗಿದೆ. ಆದರೆ ನೀರಿಗೆ ಪರಿತಪಿಸುತ್ತಿರುವ, ಅಂತರ್ಜಲ ಕುಸಿದಿರುವ ಗ್ರಾಮಗಳಲ್ಲಿನ ಮಕ್ಕಳಿಗೆ ಈಜು ಕನಸಿನ ಮಾತಾಗಿದೆ.
ಇಂಥಹುದರಲ್ಲಿ ಅಲ್ಪ ಸ್ವಲ್ಪ ನೀರಿರುವ ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ ಬಳಿಯಿರುವ ಕುಂಟೆಯು ಮಕ್ಕಳಿಗೆ ಈಜಿನ ಮತ್ತು ಮೋಜಿನ ತಾಣವಾಗಿದೆ. ಬೇಸಿಗೆಯ ಬಿಸಿಗೆ ತಂಪು, ಈಜಾಡುವ ಆನಂದ ಎರಡನ್ನೂ ಮಕ್ಕಳು ಅನುಭವಿಸುತ್ತಿದ್ದಾರೆ.
ಹಿಂದೆಲ್ಲ ವಿದ್ಯಾರ್ಥಿಗಳು, ಮಕ್ಕಳು ಬೇಸಿಗೆಯ ಕಾಲಕ್ಕಾಗಿ ಕಾಯುತ್ತಿದ್ದರು. ಸುಡುವ ಬಿಸಿಲು ಆಕಾಶದಿಂದ ಸುರಿ ಯುತ್ತಿದ್ದರೂ ಅದು ಅವರ ಪಾಲಿಗೆ ತಂಪಾಗಿ ಕಾಣುತ್ತಿತ್ತು. ಇದಕ್ಕಿರುವ ಕಾರಣ ಒಂದೇ. ಬೇಸಿಗೆಯಲ್ಲಿ ಶಾಲೆಗಳಿಗೆ ರಜೆ ಮತ್ತು ಬಾವಿಗಳಲ್ಲಿ ನೀರಿರುತ್ತಿದ್ದುದು. ಗ್ರಾಮದ ಬಳಿಯ ಕುಂಟೆ ಕೆರೆಗಳಿಗೆಲ್ಲ ಮಕ್ಕಳೇ ರಾಜರು. ತಮಗೆ ತಾವೇ ಈಜು ಕಲಿತು, ನೀರಿನ ಆಳ, ಅಗಲಗಳನ್ನು ಅಳೆಯುತ್ತಿದ್ದರು. ಅವರೊಳಗಿನ ಸಾಹಸ, ಸೃಜನಶೀಲತೆ ಈ ಪ್ರಕೃತಿಯ ಮಡಿಲಲ್ಲಿ ಚಿಗುರೊಡೆಯುತ್ತಿತ್ತು. ಆದರೆ ನೀರಿಗಾಗಿ ಹೋರಾಟ ನಡೆಸುತ್ತಾ ಹನಿ ಹನಿ ನೀರನ್ನು ಬೆಳೆಗಳಿಗೆ ಉಣಿಸುತ್ತಾ, ಕೂಡಿಟ್ಟ ನೀರನ್ನು ಜಾನುವಾರುಗಳಿಗೆ ನೀಡಬೇಕಾದ ಪರಿಸ್ಥಿತಿ ಜಿಲ್ಲೆಯ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.
ಜಿಲ್ಲೆಯ ಬಹುತೇಕ ಎಲ್ಲಾ ಕೆರೆ ಕುಂಟೆಗಳು ಬತ್ತಿಹೋಗಿವೆ. ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ, ಜನ ಹಾಗೂ ಜಾನುವಾರುಗಳು ಒಂದೊಂದು ಹನಿ ಕುಡಿಯುವ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ಉಂಟಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ಬಿದ್ದ ಅಕಾಲಿಕ ಮಳೆಯಿಂದಾಗಿ ಕುಂಟೆಗಳಲ್ಲಿ ಅಲ್ಪಸ್ವಲ್ಪ ನೀರು ಬಂದಿರುವುದು ಮಕ್ಕಳು ಈಜಾಡುವಂತಾಗಿದೆ. ಮಕ್ಕಳು ಬಿಸಿಲಿನ ತಾಪವನ್ನು ತಣಿಸಿಕೊಳ್ಳುತ್ತಿದ್ದರೆ, ದಾರಿಯಲ್ಲಿ ಹೋಗುತ್ತಿದ್ದ ನಾಗರೀಕರು ತಮ್ಮ ಬಾಲ್ಯದ ದಿನಗಳಲ್ಲಿ ಬಾವಿಗಳಲ್ಲಿ, ಕೆರೆಗಳಲ್ಲಿ ಈಜು ಹೊಡೆಯುತ್ತಿದ್ದ ಬಗ್ಗೆ ನೆನಪಿಸಿಕೊಂಡು ಹೋಗುತ್ತಿದ್ದರು.
- Advertisement -
- Advertisement -
- Advertisement -
- Advertisement -