ಇದು ಅತ್ಯಂತ ಪುರಾತನ ಮೋರಿ. 1883 ರಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದದ್ದು. ಕೆಳಗೆ ಕೆರೆಗೆ ನೀರು ಹರಿದರೆ, ಮೇಲೆ ರಸ್ತೆಯಲ್ಲಿ ವಾಹನಗಳ ಸಂಚಾರ ನಿರಂತರವಾಗಿರುತ್ತವೆ. ಶಿಡ್ಲಘಟ್ಟ ನಗರದಿಂದ ಜಂಗಮಕೋಟೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬೋದಗೂರು ಗೇಟ್ ಬಳಿ ಇರುವ ಮೋರಿ ಇದು.
ಕಳೆದ ಒಂದು ತಿಂಗಳಲ್ಲಿ ಈ ಮೋರಿಯು ಕುಸಿದಿದೆ. ಈ ಮಾರ್ಗದಲ್ಲಿ ಅಧಿಕ ವಾಹನ ಸಂಚಾರದಿಂದ ದಿನೇ ದಿನೇ ಕುಸಿಯುತ್ತಿರುವ ಈ ಮೋರಿ ಹಂತಹಂತವಾಗಿ ಕುಸಿಯುತ್ತಿದೆ. ಲೋಕೋಪಯೋಗಿ ಇಲಾಖೆಯವರು ಮರಳು ತುಂಬಿದ ಚೀಲಗಳನ್ನು ರಸ್ತೆಯ ಮೇಲಿಟ್ಟು, ‘ಸೇತುವೆ ಶಿಥಿಲವಾಗಿದೆ, ನಿಧಾನವಾಗಿ ಚಲಿಸಿ’ ಎಂಬ ಫಲಕವನ್ನು ಹಾಕಿದ್ದಾರೆ. ಆದರೆ ಮೋರಿಯ ದುರಸ್ತಿಯೆಡೆಗೆ ಮಾತ್ರ ಕ್ರಮ ಕೈಗೊಂಡಿಲ್ಲ.
‘ಕಳೆದ ವರ್ಷವಷ್ಟೇ ಈ ರಸ್ತೆಯನ್ನು ಲಕ್ಷಾಂತರ ರೂಗಳ ಅಗಲೀಕರಣ ಮತ್ತು ಡಾಂಬರೀಕರಣ ಮಾಡಿದ್ದಾರೆ. ಆದರೆ 132 ವರ್ಷಗಳ ಹಳೆಯ ಮೋರಿಯನ್ನು ಸಧೃಢಗೊಳಿಸುವ ಬಗ್ಗೆ ಎಂಜಿನಿಯರುಗಳು ಕ್ರಮ ಕೈಗೊಂಡಿಲ್ಲ. ಇಷ್ಟು ಹಳೆಯ ಮೋರಿಯನ್ನು ಸ್ವಲ್ಪ ಆಸಕ್ತಿ ವಹಿಸಿ ಕಾಪಾಡಿದ್ದಿದ್ದರೆ, ಇನ್ನಷ್ಟು ವರ್ಷ ತೊಂದರೆಯಿರುತ್ತಿರಲಿಲ್ಲ. ಈ ರಸ್ತೆಯು ದಟ್ಟವಾದ ವಾಹನ ಸಂಚಾರದಿಂದ ಕೂಡಿದ್ದು, ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕಿದೆ. ಇಲ್ಲದಿದ್ದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕತ್ತಲಲ್ಲಿ ಪ್ರಾಣಾಪಾಯ ಸಂಭವಿಸಲೂ ಬಹುದು’ ಎಂದು ಮಳಮಾಚನಹಳ್ಳಿ ರವಿ ತಿಳಿಸಿದರು.
- Advertisement -
- Advertisement -
- Advertisement -
- Advertisement -