ಅಪರೂಪದ ಶೈವ-ವೈಷ್ಣವ ಸಂಗಮ ಸ್ಥಳ ಎಂದೇ ಪ್ರಸಿದ್ಧವಾದ ನಗರದ ಅಗ್ರಹಾರ ಬೀದಿಯಲ್ಲಿರುವ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಬಿರುಕುಗಳು ಕಾಣಿಸಿಕೊಂಡು ಕುಸಿಯುವ ಹಂತದಲ್ಲಿದೆ.
ದೇವಾಲಯದ ಒಂದು ಭಾಗದ ತೊಲೆ ಮುರಿದಿದ್ದು, ಗೋಡೆ ಬಿರುಕುಬಿಟ್ಟಿದೆ. ಭಕ್ತರು ದೇವಾಲಯ ಕುಸಿಯದಂತೆ ಕಲ್ಲುಚಪ್ಪಡಿಯನ್ನು ಆನಿಸಿಟ್ಟಿದ್ದಾರೆ. ಜೋರು ಮಳೆ ಬಿದ್ದರೆ ದೇವಾಲಯದ ಮೇಲ್ಚಾವಣಿ ಕುಸಿಯುವುದನ್ನು ತಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಮೂಡಿದೆ.
ನಗರದ ದೇವಾಲಯಗಳಲ್ಲಿಯೇ ಅತ್ಯಂತ ಪ್ರಾಚೀನವಾದದ್ದು ಹಾಗೂ ಶೈವ ವೈಷ್ಣವ ದೇವರುಗಳು ಒಂದೆಡೆ ಇರುವ ವಿಶೇಷತೆಯನ್ನು ಈ ದೇವಾಲಯ ಹೊಂದಿದೆ. ಈ ದೇವಾಲಯದ ಮುಂಭಾಗದಲ್ಲಿ ಸುಮಾರು ನಾನ್ನೂರು ವರ್ಷಗಳಷ್ಟು ಹಳೆಯದಾದ ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿರುವ ಶಾಮಣ್ಣಬಾವಿ ಎಂಬ ಕಲ್ಯಾಣಿಯಿದೆ. ಗೌಡನ ಕೆರೆಯಿಂದ ಹೆಚ್ಚಾದ ನೀರು ಕಲ್ಯಾಣಿಗೆ ಹರಿಯುವಂತೆ ತೂಬನ್ನು ಈ ಕಲ್ಯಾಣಿಯಲ್ಲಿ ನಿರ್ಮಿಸಲಾಗಿದೆ. ಹಿಂದೆ ಸದಾಕಾಲ ನೀರಿರುತ್ತಿದ್ದ ಈ ಶಾಮಣ್ಣಬಾವಿಯು ನಗರದ ಎಲ್ಲಾ ಯುವಕರಿಗೆ ಈಜು ಕೊಳವಾಗಿತ್ತು.
ಶಾಮಣ್ಣಬಾವಿಯ ಒಂದೆಡೆ ವಿಶಾಲ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ಶಿವ ವಿಷ್ಣು ಸಂಗಮದ ದೇವಾಲಯವಿದೆ. ವಿಷ್ಣು ಮತ್ತು ಶಿವ ಒಂದೆಡೆ ಎಲ್ಲೂ ಕಣಸಿಗರು. ಆದರೆ ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಒಂದೆಡೆಯಿದ್ದಾರೆ. ಈ ದೇವಸ್ಥಾನದಲ್ಲಿ ಗಣಪತಿ, ಸೂರ್ಯನಾರಾಯಣಸ್ವಾಮಿ, ಸುಬ್ರಮಣ್ಯಸ್ವಾಮಿ, ಗಿರಿಜಾಂಭ, ಚನ್ನಕೇಶವಸ್ವಾಮಿ, ವೀರಾಂಜನೇಯ ದೇವರುಗಳಿವೆ. ಅಪರೂಪದ ಕೆತ್ತನೆಗಳುಳ್ಳ ಕಂಬಗಳಿವೆ.
‘ನಮ್ಮ ತಾಲ್ಲೂಕಿನಲ್ಲಿಯೇ ವಿಶೇಷವಾದ ಈ ದೇವಸ್ಥಾನವನ್ನು ಶೈವ, ವೈಷ್ಣವ ದೈವ ಸಂಗಮ ಕ್ಷೇತ್ರವೆನ್ನಬಹುದು. ಈ ದೇವಾಲಯ ಕುಸಿಯದಂತೆ ತಾತ್ಕಾಲಿಕವಾಗಿ ಕಲ್ಲಿನ ಚಪ್ಪಡಿಯೊಂದನ್ನು ನಿಲ್ಲಿಸಿದೆ. ಮಳೆ ಬೀಳುತ್ತಿದ್ದಂತೆಯೇ ಚಾವಣಿ ಕುಸಿಯುವ ಸಾಧ್ಯತೆಯಿದೆ. ತಕ್ಷಣ ತಾಲ್ಲೂಕು ಆಡಳಿತ, ಮುಜರಾಯಿ ಇಲಾಖೆ ಅಧಿಕಾರಿಗಳು ಈ ದೇವಸ್ಥಾನದ ದುರಸ್ಥಿ ಕಾರ್ಯ ನಡೆಸಬೇಕು. ಅತ್ಯಂತ ಪುರಾತನವಾದ್ದರಿಂದ ದೇವಾಲಯದ ಪುನರ್ ನಿರ್ಮಾಣವೇ ಆಗಬೇಕಾಗಿದೆ. ಕುಸಿಯುವ ಮುನ್ನವೇ ಕಾಮಗಾರಿಯನ್ನು ಪ್ರಾರಂಭಿಸಬೇಕಿದೆ’ ಎಂದು ಹಿರಿಯರಾದ ಎಸ್.ವಿ.ನಾಗರಾಜರಾವ್ ತಿಳಿಸಿದರು.
- Advertisement -
- Advertisement -
- Advertisement -
- Advertisement -