ಕೆಂಪೇಗೌಡ ಅವರ ದೂರದೃಷ್ಟಿ, ಸಾಮಾಜಿಕ ಕಳಕಳಿಯಿಂದ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಹೇಗೆ ಸಾಧ್ಯವಾಯಿತೋ ಅದೇ ರೀತಿ ಕೆಂಪೇಗೌಡರ ಹೆಸರಿಟ್ಟುಕೊಂಡ ಬಡಾವಣೆಯಿಂದಲೇ ಪಟ್ಟಣದ ಅಭಿವೃದ್ಧಿ ಪ್ರಾರಂಭವಾಗಲಿ ಎಂದು ತಾಲ್ಲೂಕು ಒಕ್ಕಲಿಗ ಸಂಘದ ನಿರ್ದೇಶಕ ಮುನಿಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಇದ್ಲೂಡು ರಸ್ತೆಯ ಕೆಂಪೇಗೌಡ ನಗರದಲ್ಲಿ ಶನಿವಾರ ನಡೆದ ಕೆಂಪೇಗೌಡ ನಗರದ ಮೂರನೇ ವಾರ್ಷಿಕೋತ್ಸವ ಹಾಗೂ ಒಕ್ಕಲಿಗರ ಯುವಸೇನೆ ನಗರ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕೆಂಪೇಗೌಡ ಅವರು ಬೆಂಗಳೂರು ಮಾರುಕಟ್ಟೆ ಸ್ಥಾಪಿಸಿ ಸುತ್ತಮುತ್ತಲಿನ ನಾನಾ ಗ್ರಾಮಗಳ ಗುಡಿ ಕೈಗಾರಿಕೆ ಮಾಡಿದ್ದ ಸಮುದಾಯಗಳಿಗೆ ನೆರವಾದರು. ಹಂತಹಂತವಾಗಿ ಬೆಂಗಳೂರನ್ನು ಅಭಿವೃದ್ಧಿ ಪಡಿಸಿದರು. ಅವರ ಕನಸಿನಿಂದಾಗಿ ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರ ಹೆಸರನ್ನಿಟ್ಟುಕೊಂಡ ಸಂಘಟನೆಗಳು ಕೇವಲ ಸಂಘಟನೆಗಳಷ್ಟೇ ಆಗಿರಬಾರದು. ಅವರ ಆದರ್ಶದ ಮುಂದುವರಿದ ಭಾಗದಂತಿರಬೇಕು. ಕೆಂಪೇಗೌಡರು ಹೇಗೆ ಎಲ್ಲಾ ಜಾತಿ, ವರ್ಗ, ಕಸುಬುಗಳ ಬಗ್ಗೆಯೂ ವಿಶಾಲ ಮನೋಭಾವದಿಂದ ರಾಷ್ಟ್ರಮಟ್ಟದ ಆಲೋಚನಾಪರರಾಗಿದ್ದರೋ ಅದೇ ರೀತಿ ಸಂಘಟನೆಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಊರಿನ ಬೆಳವಣಿಗೆಗೆ, ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಬಡಾವಣೆಗಳ ಹೆಸರನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿಲ್ಲ. ಆದರೂ ಜನರು ತಮ್ಮ ವಿಳಾಸಗಳನ್ನು ಎಲ್ಲೆಡೆ ಬರೆಯುವಾಗ ಬಳಸುತ್ತಿದ್ದಲ್ಲಿ ಚಾಲ್ತಿಗೆ ಬರುತ್ತದೆ ಮತ್ತು ಶಾಶ್ವತವಾಗುಳಿಯುತ್ತದೆ. ಪ್ರತಿಭಾವಂತರನ್ನು ಗುರುತಿಸಿ ಕೆಂಪೇಗೌಡರ ಹೆಸರಿನಲ್ಲಿ ಪುರಸ್ಕರಿಸಿ. ಹಿಂದೆ ಕೇವಲ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದ ಒಕ್ಕಲಿಗರು ಈಗ ವಿವಿಧ ಕ್ಷೇತ್ರದೆಡೆಗೆ ಹೋಗಬೇಕಾದ ಅನಿವಾರ್ಯತೆಯಿದೆ. ಶಿಕ್ಷಣ ಅತ್ಯವಶ್ಯವಿರುವುದರಿಂದ ಬಡ ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಎಂದು ನುಡಿದರು.
ಒಕ್ಕಲಿಗ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ಸಿ.ಆರ್.ಶಿವಕುಮಾರ್, ಸೊಣ್ಣಪ್ಪ, ಜೆ.ವೆಂಕಟಸ್ವಾಮಿ, ಇ.ನಾರಾಯಣಪ್ಪ, ಬಚ್ಚರೆಡ್ಡಿ, ಒಕ್ಕಲಿಗರ ಯುವಸೇನೆ ನಗರ ಘಟಕ ಅಧ್ಯಕ್ಷ ಆರ್.ಪುರುಷೋತ್ತಮ್, ಗೌರವಾಧ್ಯಕ್ಷ ಎ.ಚಂದ್ರಶೇಖರ್, ಉಪಾಧ್ಯಕ್ಷ ವಿಜಯ್, ತಾಲ್ಲೂಕು ಒಕ್ಕಲಿಗರ ಯುವಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಗೌರವಾಧ್ಯಕ್ಷ ಎಚ್.ಡಿ.ಶಶಿಕುಮಾರ್, ಉಪಾಧ್ಯಕ್ಷ ಎ.ಉಮೇಶ್, ಸಿ.ಎ.ಮುನಿರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -