ಗಣೇಶ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಬೇಕು ಹಾಗೂ ರಾತ್ರಿಯಿಡೀ ಕುಣಿದು ಕುಪ್ಪಳಿಸಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸುವ ಕಾರ್ಯಕ್ಕೆ ಕಡಿವಾಣ ಹಾಕಿ ಹಗಲು ಹೊತ್ತಿನಲ್ಲಿ ವಿಸರ್ಜನೆ ಮೆರವಣಿಗೆ ನಡೆಸಬೇಕೆಂದು ಪೊಲೀಸರು ತಾಕೀತು ಮಾಡಿದ ಕಾರಣ ಬುಧವಾರ ಸಂಜೆಯ ವೇಳೆಗೆ ಬಹುತೇಕ ಗಣೇಶ ವಿಸರ್ಜನೆಯನ್ನು ನಡೆಸಲಾಯಿತು.
ಸಾರ್ವಜನಿಕವಾಗಿ ಇಟ್ಟಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಹನುಮಂತಪುರ ಗೇಟ್ ಬಳಿಯ ಕೃಷ್ಣಸ್ವಾಮಿ ದೇವಾಲಯದ ಬಳಿಯ ಕುಂಟೆಯನ್ನು ಪೊಲೀಸರು ನಿಗದಿಪಡಿಸಿದ್ದು, ಸುತ್ತ ಕಟಕಟೆಯನ್ನು ನಿರ್ಮಿಸಿದ್ದಾರೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೂರನೇ ದಿನ ಅಂದರೆ ಬುಧವಾರ ಬಹುತೇಕರು ವಿಸರ್ಜಿಸಿದರು. ಸುಮಾರು 45 ಗಣೇಶ ಮೂರ್ತಿಗಳನ್ನು ಬುಧವಾರ ಸಂಜೆ ವಿಸರ್ಜಿಸುವರೆಂದು ಪೊಲೀಸರು ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಡೋಲು, ತಮ್ಮಟೆ ಸದ್ದಿನೊಂದಿಗೆ ಯುವಕರು ಕುಣಿದು ಕುಪ್ಪಳಿಸುತ್ತಾ ಸಾಗಿದರು. ಬಣ್ಣಗಳನ್ನು ಪರಸ್ಪರ ಹಾಕಿಕೊಂಡು ಹೋಳಿ ಹಬ್ಬವನ್ನು ನೆನಪಿಸಿದರು. ಕೆಲವರದ್ದು ವಾಲಗದೊಂದಿಗಿನ ಮಂಗಳಸ್ವರವಾದರೆ, ಕೆಲವರದ್ದು ಅಬ್ಬರದ ವಾದ್ಯಗಳು. ಅಲ್ಲಲ್ಲಿ ಪಟಾಕಿ ಸಿಡಿಸುತ್ತಾ, ಚಂದಾ ಎತ್ತುತ್ತಾ, ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುತ್ತಾ, ಟ್ರಾಕ್ಟರ್ಗಳಲ್ಲಿ ಗಣೇಶನ ಮೂರ್ತಿಗಳನ್ನಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಇನ್ನೂ ನಗರದಲ್ಲಿ ಸುಮಾರು 20 ಗಣೇಶ ಮೂರ್ತಿಗಳನ್ನು ಇಟ್ಟಿದ್ದು ಶುಕ್ರವಾರ ಸಂಜೆ ಐದನೇ ದಿನ ವಿಸರ್ಜಿಸುವರೆಂದು ಪೊಲೀಸರು ತಿಳಿಸಿದ್ದಾರೆ.
- Advertisement -
- Advertisement -
- Advertisement -
- Advertisement -