ಪರಿಸರ ಸಮತೋಲನವನ್ನು ಕಾಪಾಡಲು ಗಿಡ ನೆಟ್ಟು ಬೆಳೆಸುವುದೊಂದೇ ಮಾರ್ಗ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ವತಿಯಿಂದ ಸೋಮವಾರ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಯಲು ಸೀಮೆಯ ಭಾಗಗಳಲ್ಲಿನ ಜನರು, ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಈ ಭಾಗದಲ್ಲಿ ನೀರಿನ ಅಭಾವವನ್ನು ತಡೆಗಟ್ಟಬಹುದಾಗಿದೆ. ಪರಿಸರ ನಾಶವಾಗಲು ಮಾನವನ ದುರಾಸೆಯೇ ಕಾರಣ. ಕೆರೆಗಳ ಒತ್ತುವರಿ, ಗುಂಡುತೋಪುಗಳ ನಾಶ, ರಾಜಕಾಲುವೆಗಳ ಒತ್ತುವರಿಗಳಿಂದಾಗಿ ಅಂತರ್ಜಲ ಕುಸಿತಗೊಂಡಿದೆ. ಪರಿಸರ ನಾಶದಿಂದಾಗಿ ಮರುಭೂಮಿಯಾಗಲಿದೆ. ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಿಸಿ ಮುಂದಿನ ಜನಾಂಗಕ್ಕೆ ಹಸಿರನ್ನು ಉಳಿಸಬೇಕು. ಇದರಿಂದ ಅಂತರ್ಜಲವೂ ವೃದ್ಧಿಸಲಿದೆ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಸುಬ್ಬರಾವ್ ಮಾತನಾಡಿ, ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಮರಗಳನ್ನು ಬೆಳೆಸುವುದರಿಂದ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಭೂಮಿಗಳಲ್ಲಿ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ರೈತರಿಗೆ ಇಲಾಖೆಯ ಮುಖಾಂತರ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಒಂದು ಹೆಕ್ಟರ್ಪ್ರದೇಶಕ್ಕೆ ೪೦೦ ಸಸಿಗಳನ್ನು ನೀಡಲಾಗುತ್ತದೆ. ತಮ್ಮ ಜಮೀನುಗಳಲ್ಲಿ ರೈತರು ನಾಟಿ ಮಾಡಿ ಪೋಷಣೆ ಮಾಡಿದರೆ, ಸರ್ಕಾರದಿಂದ ಮೊದಲ ವರ್ಷದಲ್ಲಿ ಒಂದು ಗಿಡಕ್ಕೆ ೧೦ ರೂಪಾಯಿಗಳು, ೨ ನೇ ವರ್ಷದಲ್ಲಿ ೧೫ ಮೂರನೇ ವರ್ಷದಲ್ಲಿ ೨೦ ರೂಪಾಯಿಗಳಂತೆ ಪ್ರೋತ್ಸಾಹಧನವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಶ್ರೀಗಂಧದ ಮರಗಳನ್ನೂ ಬೆಳೆಸಬಹುದಾಗಿದ್ದು, ೨೦ ವರ್ಷಗಳ ನಂತರ ಉತ್ತಮವಾಗಿ ಬೆಳೆದಂತಹ ಮರಗಳನ್ನು ಸರ್ಕಾರಿ ಸಾಬೂನು ಕಾರ್ಖಾನೆ, ಕಲ ಕುಶಲ ವಸ್ತು ಅಭಿವೃದ್ದಿ ಮಂಡಳಿಗೆ ರೈತರೇ ನೇರವಾಗಿ ಮಾರಾಟ ಮಾಡಬಹುದಾಗಿದೆ. ಶ್ರೀಗಂಧದ ಮರಗಳನ್ನು ಯಾರು ಬೆಳೆಸುತ್ತಾರೊ ಅವರೇ ಅದರ ಮಾಲೀಕರಾಗಿರುತ್ತಾರೆ ಸರ್ಕಾರಕ್ಕೆ ಯಾವುದೇ ತೆರಿಗೆಯನ್ನು ಕಟ್ಟುವಂತಿಲ್ಲ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 1000 ಗಿಡಗಳನ್ನು ಸಾರ್ವಜನಿಕರು ಹಾಗೂ ರೈತರಿಗೆ ವಿತರಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ಜಿಲ್ಲಾ ಸಹಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯತಿ ಸದಸ್ಯ ಯರ್ರಬಚ್ಚಪ್ಪ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷರಾದಹುಸೇನ್ಸಾಬ್, ಮೇಲೂರು ನಾಗರಾಜ್, ಮುನಿಕೆಂಪಣ್ಣ, ಪ್ರತೀಶ್, ಬಾಲಮುರಳಿಕೃಷ್ಣ, ನಾಗೇಶ್, ರಾಜಪ್ಪ, ಗುಡಿಹಳ್ಳಿ ನಾರಾಯಣಸ್ವಾಮಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -