ತಾಲ್ಲೂಕಿನ ದಿಬ್ಬೂರಹಳ್ಳಿ ಹತ್ತಿರದ ಬಚ್ಚನಹಳ್ಳಿ ಆಶ್ರಮ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ ಎಂದು ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ ಆರೋಪಿಸಿದ್ದಾರೆ.
ವಸತಿ ಶಾಲೆಯಲ್ಲಿ 125 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ನೀಡುತ್ತಿರುವ ಆಹಾರ ಗುಣಮಟ್ಟವಾಗಿಲ್ಲ. ಕೊಳೆತ ತರಕಾರಿಗಳಿಂದ ಆಹಾರ ತಯಾರಿಸಲಾಗುತ್ತಿದೆ. ಅಲ್ಪಮಟ್ಟದ ತರಕಾರಿ ಬಳಸಲಾಗುತ್ತಿದೆ. ವಾರಕ್ಕೆರಡು ಬಾರಿ ನೀಡಬೇಕಾದ ಕೋಳಿಮೊಟ್ಟೆ ಹಾಗೂ ಬಾಳೆಹಣ್ಣನ್ನು ವಾರಕ್ಕೊಮ್ಮೆ ಕೊಡಲಾಗುತ್ತಿದೆ. ಪ್ರತಿವಾರ ನೀಡಬೇಕಾದ ಮಾಂಸಾಹಾರ ಊಟವನ್ನು 40 ದಿನಗಳಾದರೂ ನೀಡಿಲ್ಲ. ಕುಡಿಯಲು ಫಿಲ್ಟರ್ ನೀರಿಲ್ಲದೆ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಬೆಳಿಗ್ಗೆ ಮತ್ತು ಸಂಜೆ ನೀಡಬೇಕಾದ ಕಾಫಿ, ಟೀ ಅಥವಾ ಹಾಲು ಬಿಸ್ಕೆಟ್ ನೀಡುತ್ತಿಲ್ಲ. ಮೆನು ಚಾರ್ಟ್ ವಸತಿ ಶಾಲೆಯಲ್ಲಿ ಹಾಕಿಲ್ಲ. ಯಾವ ದಿನ ಯಾವ ತಿಂಡಿ, ಊಟ ಹಾಗೂ ಸೌಲತ್ತುಗಳ ಬಗ್ಗೆ ಮಾಹಿತಿ ಇಲ್ಲದಾಗಿದೆ. ವಾರ್ಡನ್ ಪ್ರತಿನಿತ್ಯ ವಸತಿನಿಲಯಕ್ಕೆ ಆಗಮಿಸದೆ ಎರಡು ದಿನಕ್ಕೊಮ್ಮೆ ಬರುತ್ತಾರೆ. ವಸತಿ ನಿಲಯದಲ್ಲಿ ಬಯೋಮೆಟ್ರಿಕ್ ಅಳವಡಿಸದೆ ಹಾಜರಾತಿ ಪುಸ್ತಕದಲ್ಲಿ ಇಷ್ಟಾನುಸಾರವಾಗಿ ದಾಖಲಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಕೂಡಲೇ ಸರಿಪಡಿಸದಿದ್ದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
- Advertisement -
- Advertisement -
- Advertisement -
- Advertisement -