ಗ್ರಾಮದ ಪ್ರತಿಯೊಂದು ಕುಟುಂಬವೂ ಶೌಚಾಲಯವನ್ನು ನಿರ್ಮಿಸಿಕೊಳ್ಳುವುದರೊಂದಿಗೆ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋದಗೂರು ಗ್ರಾಮದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಪೋಡಿ ಮುಕ್ತ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಶುಲ್ಕವಿಲ್ಲದೇ, ಪೋಡಿ ಅಳತೆ ಮಾಡುವುದು, ಆರ್.ಟಿ.ಸಿ ಮತ್ತು ಭೂದಾಖಲೆಗಳಲ್ಲಿ ಇರುವ ಕ್ಷೇತ್ರದ ವ್ಯತ್ಯಾಸ ಸರಿಪಡಿಸುವುದು, ಗ್ರಾಮವಾರು ಬಾಕಿ ಇರುವ ಪೋಡಿ ಪ್ರಕರಣಗಳನ್ನು ಅಳತೆ ಮಾಡುವುದು ಈ ಅಭಿಯಾನದಲ್ಲಿ ಕೈಗೊಳ್ಳಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಜಿಲ್ಲಾ ಭೂದಾಖಲೆ ನಿರ್ದೇಶಕ (ಡಿಡಿಎಲ್ಆರ್) ಅಜ್ಜಪ್ಪ ಮಾತನಾಡಿ ಗ್ರಾಮಸ್ಥರು ವರ್ಷದುದ್ದಕ್ಕೂ ತಾಲ್ಲೂಕು ಕಚೇರಿಗೆ ಸುತ್ತುವ ಬದಲಿಗೆ ಅಭಿಯಾನದ ಮೂಲಕ ತಮ್ಮ ಗ್ರಾಮಕ್ಕೆ ಭೂಮಾಪನ ತಂಡ ಭೇಟಿ ನೀಡಿದಾಗ ಅಗತ್ಯ ದಾಖಲೆಗಳೊಂದಿಗೆ ತಪ್ಪದೇ ಜಮೀನಿನಲ್ಲಿ ಹಾಜರಿದ್ದು, ಅಗತ್ಯ ಮಾಹಿತಿ ನೀಡಿ ಅಳತೆಗೆ ಸಹಕರಿಸಬೇಕು. ಈ ಮೂಲಕ ಭೂ ದಾಖಲೆ ನವೀಕರಿಸಿಕೊಂಡು ಜಮೀನುಗಳ ಹಕ್ಕು ಮತ್ತು ಗಡಿ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಆನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ವೆಂಕಟೇಶ್, ರಜಸ್ವ ನಿರೀಕ್ಷಕ ಸುಬ್ರಮಣಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -