23.1 C
Sidlaghatta
Tuesday, August 16, 2022

ಗ್ರಾಮೀಣ ಪುನರ್ರಚನೆ ಕಾರ್ಯಗಳಲ್ಲಿ ಯುವಕರ ಪಾತ್ರ ಪ್ರಮುಖವಾದದ್ದು

- Advertisement -
- Advertisement -

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಗ್ರಾಮೀಣ ಪುನರ್ರಚನೆ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸುವ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಗಾಂಧಿ ಕಂಡ ಕನಸು ನನಸಾಗಲಿ ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಜೀವನದ ಜತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ನಮ್ಮ ಗ್ರಾಮದಲ್ಲಿ ನಡೆಸುತ್ತಿರುವುದಕ್ಕೆ ಸಂತಸವಾಗಿದೆ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರನ್ನು ಸಾಮಾಜಿಕ, ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸುವುದರ ಮೂಲಕ ಶಿಕ್ಷಣಕ್ಕೆ ಸಾಮಾಜಿಕ ಸಂವೇದನೆಯ ಆಯಾಮ ದೊರಕಿಸಿಕೊಡುವುದು ಎನ್ಎಸ್ಎಸ್ನ ಉದ್ದೇಶಗಳಲ್ಲಿ ಒಂದು. ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಬೆರೆಯಲು, ಗ್ರಾಮೀಣ ಸಮಸ್ಯೆಗಳನ್ನು ಅರಿಯಲು, ಗ್ರಾಮೀಣ ನೈರ್ಮಲ್ಯ, ಪರಿಸರ ಪ್ರಜ್ಞೆ, ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ತಿಳಿವಳಿಕೆ ನೀಡುವ ಅವಕಾಶವನ್ನು ಎನ್ಎಸ್ಎಸ್ ಕಲ್ಪಿಸಿಕೊಡುತ್ತದೆ.
ಹಾಗಾಗಿ ಇಂಥಹ ಶಿಬಿರವು ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ನುಡಿದರು.
ವಿದ್ಯಾರ್ಥಿಗಳು ಜಾತಿ, ಜನಾಂಗ, ಧರ್ಮ, ಭಾಷೆ, ಲಿಂಗ ಯಾವುದೇ ಭೇದ ಮಾಡದೇ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬೆರೆತು ಕೆಲಸ ಮಾಡುವ, ಪರಸ್ಪರ ಹೊಂದಾಣಿಕೆಯಿಂದ ಜೀವಿಸುವ ಅವಕಾಶವನ್ನು ಶಿಬಿರ ಕಲ್ಪಿಸಿಕೊಡುತ್ತದೆ. ವಿದ್ಯಾರ್ಥಿಗಳಲ್ಲಿ ಚಾರಿತ್ರ್ಯ, ಧೈರ್ಯ, ಆತ್ಮವಿಶ್ವಾಸ, ನಾಯಕತ್ವ, ಶಿಸ್ತು, ಸಮಯ ಪ್ರಜ್ಞೆ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಿಕೆ, ಪ್ರಜಾಪ್ರಭುತ್ವದ ಮನೋಭಾವ, ಸಹಿಷ್ಣುತಾ ಭಾವನೆ, ವ್ಯಾವಹಾರಿಕ ಕೌಶಲ್ಯ, ಪರಸ್ಪರ ಸಹಾಯ- ಸಹಕಾರ, ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರಹಾಕುವಿಕೆಗೆ ವೇದಿಕೆ ಒದಗಿಸಿಕೊಡುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಇ.ಓ. ವೆಂಕಟೇಶ್, ನಗರಸಭೆ ಅಧ್ಯಕ್ಷ ಅಫ್ಸರ್ಪಾಷ, ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ, ಸದಸ್ಯ ಎ.ಎಂ.ತ್ಯಾಗರಾಜ್, ಎಂ.ಪಿ.ಸಿ.ಎಸ್ ಅಧ್ಯಕ್ಷ ರವಿಪ್ರಕಾಶ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪ, ಮುಖ್ಯ ಶಿಕ್ಷಕಿ ವೆಂಕಟಲಕ್ಷ್ಮಮ್ಮ, ಸಿ.ಡಿ.ಪಿ.ಓ ಲಕ್ಷ್ಮೀದೇವಮ್ಮ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಉಪನ್ಯಾಸಕರಾದ ಲಕ್ಷ್ಮಯ್ಯ, ಮುನಿರಾಜು, ಗ್ರಾಮಸ್ಥರಾದ ಅಂಬರೀಷ್, ಆನಂದ್, ಶೇಖರ್, ಪಿಡಿಓ ಅಂಜನ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here