ಒಟ್ಟು ಕುಟುಂಬಗಳು ಈಗ ಅಪರೂಪ. ಒಟ್ಟು ಕುಟುಂಬಗಳು ಬೇರೆ ಬೇರೆ ದಿಕ್ಕಿಗೆ ಒಡೆದ ಚೂರುಗಳಂತೆ ಹರಡಿ ಚದುರಿ ಹೋಗಿರುತ್ತವೆ. ಜೀವನ ನಿರ್ವಹಣೆಗಾಗಿ ಹಲವು ಉದ್ಯೋಗ, ಅದಕ್ಕಾಗಿ ಹಲವು ಊರುಗಳನ್ನು ಸೇರಿರುತ್ತಾರೆ. ಯಾವುದೋ ಮದುವೆ, ನಾಮಕರಣ ಮುಂತಾದ ಸಮಾರಂಭಗಳಲ್ಲಿ ಸೇರಿದರೂ ಅಲ್ಲಿ ಹಾಜರಾತಿ ಮಾತ್ರವಿರುತ್ತದೆ ಆತ್ಮೀಯತೆಯಲ್ಲ.
ಬೇರೆ ಬೇರೆ ಚದುರಿದ್ದ ಶಿಡ್ಲಘಟ್ಟ ಮೂಲದ ಕುಟುಂಬದ 300 ಕ್ಕೂ ಹೆಚ್ಚು ಮಂದಿ ಒಂದೆಡೆ ಸೇರಿ ಸಂಬಂಧವನ್ನು ಬೆಸೆದಂಥಹ ವಿಶೇಷತೆ ಈಚೆಗೆ ನಡೆದಿದೆ.
ಶಿಡ್ಲಘಟ್ಟ ಮೂಲದ ಎಸ್.ಎಂ.ಕೃಷ್ಣಪ್ಪ ತಮ್ಮ ಕೌಟುಂಬಿಕ ಸಂಬಂಧವುಳ್ಳ ಎಲ್ಲ ಬೇರು, ಕೊಂಬೆ, ಟಿಸಿಲು, ಹೂ, ಹಣ್ಣು, ಎಲೆ ಎಲ್ಲವನ್ನೂ ಒಂದೆಡೆ ಸೇರಿಸುವ ಕನಸು ಕಂಡು, ಮದುವೆ ಮನೆಯಲ್ಲಿ ಆಗುವಂತೆ ಛಾಯಾಚಿತ್ರಕ್ಕೆ ಸೀಮಿತವಾಗದಂತೆ ಸಂಬಂಧಿಕರೆಲ್ಲಾ ಆಟ, ಪೂಜೆ, ಸ್ಪರ್ಧೆ, ಸಂಗೀತ, ಮಾತು ಮುಂತಾದವುಗಳ ಮೂಲಕ ಅಪರೂಪದ ಕ್ಷಣಗಳನ್ನು ಅನುಭವಿಸಲು ತಯಾರಿ ನಡೆಸಿದರು.
ಶಿಡ್ಲಘಟ್ಟ, ಅಕ್ಕಪಕ್ಕದ ಗ್ರಾಮಗಳು, ನಾಮಗೊಂಡ್ಲು, ಬೆಂಗಳೂರು, ಶಿರಾ, ಚಿತ್ರದುರ್ಗ, ತುಮಕೂರು, ಮಾಲೂರು, ಚಿಂತಾಮಣಿ, ಆನೆಕಲ್ಲು, ದೇವನಹಳ್ಳಿ, ಗುಡಿಬಂಡೆ, ಗೌರಿಬಿದನೂರು ಮುಂತಾದೆಡೆಯ 50 ಕುಟುಂಬಗಳ 300 ಕ್ಕೂ ಹೆಚ್ಚು ಮಂದಿಯನ್ನು ಒಂದೆಡೆ ಸೇರಿಸಿ ಸಂಬಂಧಗಳಿಗೆ ಹೊಸತನವನ್ನು ನೀಡಿದರು.
‘ಹಲವಾರು ಕಡೆ ಹರಿದು ಹಂಚಿಹೋಗಿದ್ದ ಸಂಬಂಧಿಕರನ್ನು ಹುಡುಕಿ ಸಂಪರ್ಕಿಸಿ, ಒಪ್ಪಿಸಲು ಆರು ತಿಂಗಳು ಹಿಡಿಯಿತು. ತಮ್ಮ ಮನೆಯ ದೇವರಾದ ಆವಲಬೆಟ್ಟದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಎಲ್ಲರೂ ಸೇರಲು ಎರಡು ದಿನ ದೈನಂದಿನ ಬದುಕಿನಿಂದ ಮುಕ್ತವಾಗಿ ಸಂಬಂಧವನ್ನು ಪುನರ್ ಸ್ಥಾಪಿಸಲು ಸೂಕ್ತ ಸ್ಥಳ ಎಂದು ಆಲೋಚಿಸಿದೆವು.
ಮಕ್ಕಳಿಗೆ ಹಿರಿಯರು, ಹಿರಿಯರಿಗೆ ಮಕ್ಕಳನ್ನು ಪರಿಚಯಿಸಲಾಯಿತು. ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ಸಂಗೀತ, ಗಾಯನ, ಮಿಮಿಕ್ರಿ, ನೃತ್ಯ ನಡೆಸಲಾಯಿತು. ಚಿತ್ರಕಲೆ, ಕವನ ರಚನೆ, ಲೇಖನಗಳ ಬರವಣಿಗೆಯನ್ನು ಮಾಡಿಸಲಾಯಿತು. ಮಹಿಳೆಯರಿಗಾಗಿ ಹೂಕಟ್ಟುವ ಸ್ಪರ್ಧೆ, ರಾಗಿ ಮುದ್ದೆ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ದೇವರ ಅಭಿಷೇಕ, ಕಲ್ಯಾಣೋತ್ಸವದಲ್ಲಿ ಎಲ್ಲರೂ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದರು. ಆರ್.ಮಾನ್ಯ ಎಂಬ ಪುಟ್ಟ ಬಾಲೆಯ ಹುಟ್ಟು ಹಬ್ಬದಾಚರಣೆ, 60 ವರ್ಷ ಮೇಲ್ಪಟ್ಟ 15 ಮಂದಿ ಹಿರಿಯರ ಸನ್ಮಾನ ವಿಶೇಷವಾಗಿತ್ತು. ಆವಲಬೆಟ್ಟವನ್ನು ಶಕ್ತರು ಸರಕು ಸರಂಜಾಮುಗಳೊಂದಿಗೆ ನಡೆದು ಹೋದರೆ, ಹಿರಿಯರನ್ನು ಡೋಲಿಯ ಮೂಲಕ ಕರೆತರಲಾಯಿತು.
ಆವಲಬೆಟ್ಟದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಲಕ್ಷ್ಮೀ ಅಮ್ಮನ ಗುಡಿ, ಆಂಜನೇಯ ಗುಡಿ, ನಾಮದೋಣಿ ಎಂಬ ಹಳೆಯ ಬಾವಿ, ಗೋಪುರಗಳು, ಪ್ರಪಾತ ಬಂಡೆ ಎಲ್ಲವನ್ನೂ ವೀಕ್ಷಿಸಿ ಸಂಭ್ರಮಿಸಿದರು. ಕೌಟುಂಬಿಕ ಮೌಲ್ಯಗಳು ಹೆಚ್ಚಿಸಲು, ನಿಸರ್ಗದ ಮಡಿಲಲ್ಲಿ ಎರಡು ದಿನಗಳ ಕಾಲ ಇದ್ದದ್ದು ಸಾರ್ಥಕವಾಯಿತು. ಇತರರಿಗೂ ನಮ್ಮ ಪ್ರಯತ್ನ ಪ್ರೇರಣೆಯಾಗಲಿ’ ಎಂದು ಹಿರಿಯರಾದ ಎಸ್.ಎಂ.ಕೃಷ್ಣಪ್ಪ ವಿವರಿಸಿದರು.
- Advertisement -
- Advertisement -
- Advertisement -