21.1 C
Sidlaghatta
Saturday, July 27, 2024

ಚೀಮಂಗಲ ಸರ್ಕಾರಿ ಪ್ರೌಢಶಾಲೆ ವತಿಯಿಂದ ವರ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್ ಅವರಿಗೆ ಸನ್ಮಾನ

- Advertisement -
- Advertisement -

ಒಂದಿಷ್ಟು ತ್ರಿಭುಜಗಳು, ಕೆಲವು ವೃತ್ತಗಳು. ಹಾಗೆಯೇ ಕೆಲವು ರೇಖೆಗಳು..ಇವಿಷ್ಟನ್ನು ಒಂದು ಹದದಲ್ಲಿ ಬೆರೆಸಿದಾಗ ಕಣ್ಣ ಮುಂದೆ ಕೆಲವು ಜನರು ನಿಮ್ಮ ಮುಂದೆ ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗುವುದು ಕಂಡುಬರುತ್ತದೆ. ರೈತ ನೆಲವನ್ನು ಉಳುತ್ತಾನೆ. ಮಕ್ಕಳು ಆಟವಾಡುತ್ತಿರುತ್ತಾರೆ. ಒಂದೆಡೆ ಗುಡಿಸಲಿನ ಮುಂದೆ ರಾಗಿ ಬೀಸುತ್ತಿದ್ದರೆ, ಮತ್ತೊಂದೆಡೆ ಹೊಲ ಉಳುತ್ತಿರುತ್ತಾರೆ. ಇಷ್ಟೆಲ್ಲ ಬಿಡಿಬಿಡಿಯಾಗಿ ನೋಡುವ ಹೊತ್ತಿಗೆ ನಮ್ಮ ಮುಂದೆ ಸುಂದರ ದೃಶ್ಯ ಕಾವ್ಯ ಪ್ರಕಟವಾಗುತ್ತದೆ. ಗ್ರಾಮೀಣ ಜೀವನ ಕಣ್ಣ ಮುಂದೆ ಮೂಡಿ ಬರುತ್ತದೆ. ಸರಳವೂ ಮನಮೋಹಕವೂ ಆದ ಈ ಚಿತ್ತಾರಗಳ ಹೆಸರು ವರ್ಲಿ ಚಿತ್ರಗಳು!!
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮೇಲೆ ಈ ಚಿತ್ರಗಳು ರಾರಾಜಿಸುತ್ತಿವೆ. ಸರ್ಕಾರಿ ಶಾಲೆಗಳು ನಿಯಯಪಾಲನೆಗಾಗಿ ಕೆಟ್ಟದಾಗಿ ಬಿಡಿಸಿದ ಚಿತ್ರಗಳಿಂದ ವಿಕಾರವಾಗಿ ಕಾಣುತ್ತದೆಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಅಂತಹುದರಲ್ಲಿ ಕಲಾಪ್ರಕಾರವನ್ನು ಶಾಲಾ ಗೋಡೆಗಳ ಮೇಲೆ ಬಿಂಬಿಸುವುದರೊಂದಿಗೆ ಅತ್ತ ಶಾಲೆಗೂ ಅಂದ, ಇತ್ತ ವಿದ್ಯಾರ್ಥಿಗಳಿಗೂ ಕಲೆಯ ಬಗ್ಗೆ ಅವಗಾಹನೆ ಮೂಡಿಸುತ್ತಿದ್ದಾರೆ ಶಿಕ್ಷಕರು. ಈ ಕಲೆಯನ್ನು ಚಿತ್ರಿಸಿದವರೂ ಶಿಕ್ಷಕರೇ ಆಗಿರುವುದು ವಿಶೇಷವಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ಗಿಡ್ನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್‌ ಅವರು ಈ ಚಿತ್ರಗಳನ್ನು ಬಿಡಿಸಿದ್ದಾರೆ. ಹಣವನ್ನು ಬಯಸದೆ ಕೇವಲ ತಮ್ಮ ಸ್ನೇಹಿತರಾದ ಚೀಮಂಗಲದ ಶಿಕ್ಷಕರ ಒತ್ತಾಸೆಯಿಂದ ಈ ಚಿತ್ರಗಳನ್ನು ಬಿಡಿಸಿದ ಅವರನ್ನು ಶಾಲೆಯವರು ಗೌರವಿಸಿದ್ದಾರೆ.
ವರ್ಲಿ ಚಿತ್ರಗಳು ಹೆಸರೇ ಸೂಚಿಸುವಂತೆ ಮಹಾರಾಷ್ಟ್ರದವರ್ಲಿ ಬುಡಕಟ್ಟು ಜನಾಂಗದವರು ತಮ್ಮ ಗುಡಿಸಲುಗಳ ಮೇಲೆ ಬಿಡಿಸುವ ಚಿತ್ರಗಳು. ಸಾಂಪ್ರದಾಯಿಕ ರೀತಿಯಲ್ಲಿ ಅವರು ಸೆಗಣಿ, ಕೆಮ್ಮಣ್ಣಿನ ಹಿನ್ನೆಲೆಗೆ ಅಕ್ಕಿಯ ಹಿಟ್ಟಿನಲ್ಲಿ ಅದ್ದಿದ ಕುಂಚದಿಂದ ಇವುಗಳನ್ನು ಬಿಡಿಸುತ್ತಾರೆ. ಈ ಜನರು ಬಹಳ ಸರಳವಾದ ಜೀವನವನ್ನು ನಡೆಸುತ್ತಾರೆ. ಅವರು ಪ್ರಕೃತಿಯ ಆರಾಧಕರು. ಅವರ ಚಿತ್ರಗಳಲ್ಲಿನ ತ್ರಿಕೋನಗಳಿಗೆ ಬೆಟ್ಟ ಗುಡ್ಡಗಳೇ ಪ್ರೇರಣೆ. ವೃತ್ತಗಳು ಸೂರ್ಯ ಚಂದ್ರನಿಂದ ಪ್ರಭಾವಿತವಾದ ಆಕೃತಿಗಳು. ಸಾಮಾನ್ಯವಾಗಿ ಕೃಷಿ ಇವರ ಪ್ರಮುಖ ಉದ್ಯೋಗ. ಅವರ ಚಿತ್ರಗಳಲ್ಲಿ ಕೃಷಿಯ ಹಲವು ಹಂತಗಳಾದ ಬಿತ್ತುವಿಕೆ, ಫಸಲಿನ ಕೊಯಿಲು ಇತ್ಯಾದಿಗಳನ್ನು ಹೇರಳವಾಗಿ ಕಾಣಬಹುದು. ಬೇಟೆ,ಹಬ್ಬದ ಆಚರಣೆಗಳು, ಪ್ರಕೃತಿ, ನೃತ್ಯ, ವಿನೋದ ಮುಂತಾದ ಚಿತ್ತಾರಗಳೂ ಕಾಣಬರುತ್ತವೆ.
ಸಾಂಪ್ರದಾಯಿಕ ರೀತಿಯ ಈ ಚಿತ್ರಗಳು ಆಧುನಿಕ ರೂಪ ತಾಳುತ್ತಿವೆ. ಸೆಗಣಿ ಅಥವಾ ಕೆಮ್ಮಣ್ಣಿನ ಹಿನ್ನೆಲೆಗೆ ಬದಲಾಗಿ ಆ ಬಣ್ಣದ ಪೈಂಟುಗಳು ಬಳಕೆಯಾಗುತ್ತಿವೆ. ಅಕ್ಕಿಯ ಹಿಟ್ಟಿಗೆ ಬದಲಾಗಿ ಬಿಳಿಯ ಅಕ್ರಲಿಕ್ ವರ್ಣಗಳ ಬಳಕೆಯಾಗುತ್ತಿದೆ. ಮನೆಯ ಒಳಾಂಗಣ ಮತ್ತು ಹೊರಾಂಗಣ ಅಲಂಕಾರದಲ್ಲಿ, ವಸ್ತ್ರಗಳ ಮೇಲೆ,ಕಾಫಿ ಕಪ್ ಗಳ ಮೇಲೆ, ಪೆನ್ ಸ್ಟಾಂಡ್ ಗಳ ಮೇಲೆ ಹೀಗೆ ವರ್ಲಿಯ ವ್ಯಾಪ್ತಿ ವಿಸ್ತಾರವಾಗುತ್ತಾ ಸಾಗಿದೆ.
’ನಮ್ಮ ಶಾಲೆಯನ್ನು ಈ ಅಪರೂಪದ ಕಲೆಯಿಂದ ಅಲಂಕರಿಸಬೇಕು. ಮಕ್ಕಳಿಗೂ ಇಂಥಹ ಕಲೆಯ ಬಗ್ಗೆ ತಿಳುವಳಿಕೆ ನೀಡಬೇಕು. ಮಕ್ಕಳು ಕಲೆಯ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳಲಿ ಎಂಬ ಆಸೆಯಿಂದ ನಾವು ಚಿತ್ರಕಲಾ ಶಿಕ್ಷಕ ನಾಗರಾಜ್‌ ಅವರನ್ನು ಕೇಳಿದೆವು. ಈ ಚಿತ್ರಗಳನ್ನು ಬಿಡಿಸಲು ಸಾಕಷ್ಟು ಸಮಯ ಹಾಗೂ ಶಾರೀರಿಕ ದಣಿವಾಗುತ್ತದೆ. ಆದರೂ ಯಾವ ಫಲಾಪೇಕ್ಷೆಯಿಲ್ಲದೆ ಅವರು ಚಿತ್ರಗಳನ್ನು ಬಿಡಿಸಿಕೊಟ್ಟಿದ್ದಾರೆ. ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿದೆವು’ ಎಂದು ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್‌.ಶಿವಶಂಕರ್‌ ತಿಳಿಸಿದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!