30.1 C
Sidlaghatta
Saturday, April 1, 2023

ಜನಪ್ರತಿನಿಧಿಗಳು ಕೆಂಪೇಗೌಡರಿಂದ ರಾಜಕೀಯ ಮುತ್ಸದ್ಧಿತನವನ್ನು ಕಲಿಯಲಿ

- Advertisement -
- Advertisement -

ರೈತರು ಕಷ್ಟಪಟ್ಟು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ಕೊಡಲು ಸಾಧ್ಯವಿಲ್ಲದ ಆಡಳಿತ ನಡೆಸುವವರು ಕೆಂಪೇಗೌಡರಿಂದ ಏನು ಕಲಿತಿದ್ದಾರೆ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಅವರು ಖಾರವಾಗಿ ಪ್ರಶ್ನಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ನ್ಯಾಯಾಲಯದ ಸಮೀಪ ಶ್ರೀ ಕೆಂಪೇಗೌಡರ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮನ್ನಾಳುವ ಜನಪ್ರತಿನಿಧಿಗಳು ಕೆಂಪೇಗೌಡರಿಂದ ರಾಜಕೀಯ ಮುತ್ಸದ್ಧಿತನವನ್ನು ಕಲಿಯಬೇಕಿದೆ. ರಾಜ್ಯದಲ್ಲಿ 826 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶವೇನಾಯಿತು. ಮದ್ಯದ ವ್ಯವಹಾರ ಮಾಡುವವರಿಗೆ ವಿಮಾನ ಕಂಪೆನಿ ಮಾಡಲು ಕೋಟ್ಯಾಂತರ ಸಾಲ ಕೊಡಲಾಗುತ್ತದೆ. ಆದರೆ ಇದುವರೆಗೂ ಎಷ್ಟು ಮಂದಿ ರೈತರಿಗೆ ಸಾಲ ಕೊಟ್ಟಿದ್ದೀರಿ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಿಗೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ಕಲಾತಂಡಗಳು ವೇಷ ಭೂಷಣಗಳೊಂದಿಗೆ ಮೆರವಣಿಗೆಗೆ ಕಳೆ ತಂದಿದ್ದವು.

ಮೂರು ಎಕರೆ ಜಮೀನಿರುವವ ಒಂದು ಮನೆ ಕಟ್ಟಿಕೊಳ್ಳಲು ಆಗುತ್ತಿಲ್ಲ. ಆದರೆ ಏನೂ ಇಲ್ಲದ ಒಬ್ಬ ರಾಜಕಾರಣಿ ಸಂಪತ್ತಿನ ಅಧಿಪತಿಯಾಗುತ್ತಾನೆ. ರಾಜಕೀಯ ಪಟ್ಟಬದ್ಧ ಹಿತಾಸಕ್ತಿಗಳು ಒಂದೊಂದು ಊರಿನಲ್ಲೂ, ಗ್ರಾಮಗಳಲ್ಲೂ ಎರಡೆರಡು ಗುಂಪುಗಳನ್ನಾಗಿ ಮಾಡಿದ್ದಾರೆ. ಸಣ್ಣ ಗ್ರಾಮ ಪಂಚಾಯ್ತಿ ಚುನಾವಣೆಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡಲಾಗುತ್ತದೆ, ವೈದ್ಯಕೀಯದಂತಹ ಉನ್ನತ ಶಿಕ್ಷಣಕ್ಕೆ ಕೋಟಿಗಟ್ಟಲೆ ಹಣ ಪಡೆಯುತ್ತಾರೆ ಎಂದರೆ ಕಪ್ಪು ಹಣಕ್ಕೆ ಕಡಿವಾಣ ಹಾಕಿಲ್ಲ ಎಂದರ್ಥ. ಶೋಷಣೆ ನಿಲ್ಲಬೇಕಾದರೆ ಯುವಜನರು ಒಗ್ಗೂಡಬೇಕು. ನೀವು ಹೇಳಿದಂತೆ ರಾಜಕಾರಣಿಗಳು ಕೇಳಬೇಕು. ಅವರು ಹೇಳಿದಂತೆ ನೀವು ಕೇಳಬೇಕಿಲ್ಲ. ಕೆಂಪೇಗೌಡರಿಂದ ಏನೂ ಕಲಿತಿಲ್ಲದ ಜನಪ್ರತಿನಿಧಿಗಳಿಗೆ ನೀವು ಪಾಠ ಕಲಿಸಿ ಎಂದು ಹೇಳಿದರು.
ಐದು ಸಾವಿರ ಕೆರೆಗಳ ನಿರ್ಮಾತೃ ಕೆಂಪೇಗೌಡರು. 70 ವರ್ಷಗಳ ರಾಜಕೀಯ ಆಡಳಿತದಲ್ಲಿ ಅವಿಭಾಜ್ಯ ಕೋಲಾರ ಜಿಲ್ಲೆಯ ನೀರಾವರಿಗೆ ಕೆಲಸ ನಡೆದಿಲ್ಲ. ಈಗಂತೂ ಸಣ್ಣ ಹಾಗೂ ದೊಟ್ಟ ನೀರಾವರಿ ಇಲಾಖೆ ಸತ್ತು ಹೋಗಿದೆ. ದೇಶದ ಜನರನ್ನು ಜಾತಿ ಆಧಾರದ ಮೇಲೆ ಒಡೆದು ಸರ್ಕಾರ ರಚನೆ ಮಾಡಲು ಬಿಡಬಾರದು. ಸ್ವಾತಂತ್ರ್ಯವನ್ನು ಮಾನವೀಯ ಹಕ್ಕುಗಳನ್ನು ರಕ್ಷಿಸಬೇಕಿದೆ. ನೀರಾವರಿ ಹೋರಾಟಕ್ಕೆ, ಮೌಲ್ಯಾಧಾರಿತ ರಾಜಕಾರಣಕ್ಕೆ ಬೆಂಬಲವಾಗಿ ನಾನಿದ್ದೇನೆ ಎಂದು ಆವೇಶದಿಂದ ನುಡಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಎಲ್ಲಾ ಸಮುದಾಯಗಳ ಎಲ್ಲಾ ಕಸುಬುಗಳಿಗೆ ಮನ್ನಣೆ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂಬ ಸತ್ಯವನ್ನಿರಿತು ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ಬೃಹತ್ ಬೆಂಗಳೂರು ಆಗಿ ವಿಶ್ವ ಪ್ರಸಿದ್ದಿ ಪಡೆದಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಿಗೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ಕಲಾತಂಡಗಳು ವೇಷ ಭೂಷಣಗಳೊಂದಿಗೆ ಮೆರವಣಿಗೆಗೆ ಕಳೆ ತಂದಿದ್ದವು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಹಾಗು ವಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ ಅವರನ್ನು ಇಡೀ ನಾಡಿನ ಆಸ್ತಿ ಎಂದು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಆಶೀರ್ವಚನವನ್ನು ನೀಡಿದರು. ಹಾಸ್ಯ ಕಲಾವಿದ ಕೋಟೆ ನಾಗರಾಜ್‌ ಹಾಸ್ಯ ಭಾಷಣವನ್ನು ಮಾಡಿದರು.
ತಹಶೀಲ್ದಾರ್‌ ಅಜಿತ್‌ಕುಮಾರ್‌ರೈ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ತನುಜಾ ರಘು, ನಗರಸಭಾ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಗೋಪಾಲ್‌, ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮೇಲೂರು ಬಿ.ಎನ್‌.ರವಿಕುಮಾರ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸತೀಶ್‌, ಮೇಲೂರು ಕೆ.ಮಂಜುನಾಥ್‌, ಆರ್‌.ಎ.ಉಮೇಶ್‌, ಎಂಪಾಪಿರೆಡ್ಡಿ, ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ, ಶಿವಕುಮಾರಗೌಡ, ಮುನಿಕೃಷ್ಣಪ್ಪ, ಆರ್‌.ಶ್ರೀನಿವಾಸ್‌, ಪಿ.ವಿ.ನಾಗರಾಜ್‌, ಶಿವಾರೆಡ್ಡಿ, ಗುಡಿಯಪ್ಪ, ಸದಾಶಿವ, ಬಿ.ವಿ.ಮುನೇಗೌಡ, ಡಾ.ಧನಂಜಯರೆಡ್ಡಿ, ಅಶ್ವತ್ಥನಾರಾಯಣರೆಡ್ಡಿ, ಕಂಬದಹಳ್ಳಿ ಜಗದೀಶ್‌, ಸುರೇಂದ್ರಗೌಡ, ಕೇಶವರೆಡ್ಡಿ, ಆರ್‌.ಮುರಳಿ, ಡಿಎಸ್‌ಎನ್‌ ರಾಜು, ರಾಮಣ್ಣ ಹಾಜರಿದ್ದರು.
ಹುತಾತ್ಮ ಯೋಧನ ಪತ್ನಿಗೆ ಎರಡು ಲಕ್ಷ ರೂ ಚೆಕ್‌: ಹುತಾತ್ಮ ಯೋಧ ಯಣ್ಣಂಗೂರಿನ ಗಂಗಾಧರ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು. ಹುತಾತ್ಮ ಯೋಧನ ಪತ್ನಿ ಶಿಲ್ಪಾ ಅವರಿಗೆ ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಟ್ರಸ್ಟ್‌ ಅಧ್ಯಕ್ಷ ಮೇಲೂರು ಬಿ.ಎನ್‌.ರವಿಕುಮಾರ್‌ ಎರಡು ಲಕ್ಷ ರೂಗಳ ಚೆಕ್‌ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿ ದಿವ್ಯಶ್ರೀಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಲಾಪ್‌ಟಾಪ್‌ ನೀಡಿದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಕ್ಕಲಿಗ ಜನಾಂಗದ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಐಎಎಸ್‌ ಅಧಿಕಾರಿ ಪ್ರಿಯಾಂಕ, ಕ್ರೀಡಾಪಟು ಪ್ರೇಮ, 12 ಚಿನ್ನದ ಪದಕ ಪಡೆದಿರುವ ಬಿಂದುಜಾ, ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ, ಯೋಧ ಯಣ್ಣಂಗೂರು ರವಿಕುಮಾರ್‌, ಕಲಾವಿದ ತಿಪ್ಪೇನಹಳ್ಳಿ ರಾಘವಣ್ಣ, ಕ್ರೀಡಾಪಟು ನಾರಾಯಣಸ್ವಾಮಿ, ಪತ್ರಕರ್ತ ಸಿ.ಪಿ.ಈ. ಕರಗಪ್ಪ, ಕೃಷಿ ಪಂಡಿತ ಘಟಮಾರನಹಳ್ಳಿ ಆಂಜಿನಪ್ಪ ಅವರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕೆಂಪೇಗೌಡರ ವೇಷಧಾರಿಯೊಬ್ಬರ ಭಂಗಿ

ಅದ್ದೂರಿ ಮೆರವಣಿಗೆ: ನಗರ ಸೇರಿದಂತೆ ತಾಲ್ಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ವಕ್ಕಲಿಗ ಸಮುದಾಯದವರು ನಗರದ ಪ್ರಮುಖ ಬೀದಿಗಳಲ್ಲಿ ಕೆಂಪೇಗೌಡರ ಬೃಹತ್ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಶ್ರೀ ಕೆಂಪೇಗೌಡರ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ನಗರದ ಬಸ್ ನಿಲ್ದಾಣದ ಬಳಿ ಶಾಸಕ ಎಂ.ರಾಜಣ್ಣ ಮೆರವಣಿಗೆಗೆ ಚಾಲನೆ ನೀಡಿದರು.
ಕುದುರೆ ಸಾರೋಟದ ಕೆಂಪೇಗೌಡರ ಪಲ್ಲಕ್ಕಿಯ ಉತ್ಸವ ಸೇರಿದಂತೆ ತಾಲ್ಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ಕೆಂಪೇಗೌಡರ ವೇಷ ಭೂಷಣಗಳೊಂದಿಗೆ ಅಲಂಕರಿಸಿದ್ದ ಟ್ರ್ಯಾಕ್ಟರ್‌ಗಳು ಮೆರವಣಿಗೆಗೆ ಡೊಳ್ಳು ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಪೂಜಾ ಕುಣಿತ, ಪಟ ಕುಣಿತ, ನಾಸಿಕ್ ಡೋಲ್, ತಮಟೆ, ವೀರಗಾಸೆ ಮುಂತಾದ ಕಲಾ ತಂಡಗಳು ಮೆರವಣಿಗೆಗೆ ಕಳೆ ನೀಡಿದ್ದವು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂದಾಗ ರಸ್ತೆಯ ಅಕ್ಕಪಕ್ಕದ ಅಂಗಡಿ, ಮನೆ, ಮಠಗಳಲ್ಲಿನ ಜನರು ಹೊರಗಡೆ ಬಂದು ಮೆರವಣಿಗೆಯ ಉದ್ದಕ್ಕೂ ಸಾಗಿ ಬಂದ ಪಲ್ಲಕ್ಕಿಯ ಉತ್ಸವ ವಾಹನಗಳು, ಕಲಾ ತಂಡಗಳನ್ನು ಕಣ್ತುಂಬಿಕೊಂಡರು.
ವಾದ್ಯ ಕಲಾವಿದರ ಉತ್ಸಾಹ

ಮೆರವಣಿಗೆ ಮದ್ಯೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮೆರವಣಿಗೆಯ ಉದ್ದಕ್ಕೂ ಕೆಂಪೇಗೌಡರ ಭಾವಚಿತ್ರಗಳು, ಕೆಂಪೇಗೌಡರ ವೇಷಧಾರಿಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.

ಆಯೋಜಕರು ಪಿತೂರಿ ನಡೆಸಿದ್ದೀರಿ!: ಮುಖ್ಯ ಅತಿಥಿಯಾಗಿ ನನ್ನನ್ನು ಕರೆಸಿ ಜನರೆಲ್ಲ ಹೊರಟ ಮೇಲೆ ಕಡೆಯ ಭಾಷಣಕಾರರನ್ನಾಗಿ ನಿಲ್ಲಿಸಿದ್ದೀರಿ. ಪ್ರಾಸ್ತಾವಿಕ ಭಾಷಣದ ನಂತರ ನನ್ನ ಭಾಷಣ ಇರಬೇಕಿತ್ತು. ಕಾರ್ಯಕ್ರಮದ ಆಯೋಜಕರು ಏನಾದರೂ ಪಿತೂರಿ ನಡೆಸಿದ್ದೀರಾ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಅವರು ಅಸಮಧಾನ ವ್ಯಕ್ತಪಡಿಸಿದರು.
ಹೆಣ್ಣಿಗೆ ಸಮಾನತೆಯೆಂಬುದು ಕೇವಲ ಸಂವಿಧಾನದಲ್ಲಿ ಮಾತ್ರ ಇದೆಯೇ. ಈ ಕಾರ್ಯಕ್ರಮಕ್ಕೆ ಕೆಲವೇ ಮಂದಿ ಹೆಣ್ಣು ಮಕ್ಕಳು ಭಾಗವಹಿಸಿದ್ದಾರಲ್ಲ ಎಂದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!