ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಪರಿವರ್ತನಾ ಯಾತ್ರೆ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಜನವರಿ ೧೨ ರಂದು ಶಿಡ್ಲಘಟ್ಟಕ್ಕೆ ಪರಿವರ್ತನಾ ಯಾತ್ರೆ ಆಗಮಿಸಲಿದ್ದು ಬಹಿರಂಗ ಸಭೆಯನ್ನುದ್ದೇಶಿಸಿ ಯಡಿಯೂರಪ್ಪ ಅವರು ಮಾತನಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿರುವ ಅಭಿವೃದ್ಧಿ ಯೋಜನೆಗಳು ಹಾಗೂ ಕೇಂದ್ರದ ಮೋದಿಯವರ ಜನಪರ ಯೋಜನೆಗಳಿಂದ ರಾಜ್ಯದಲ್ಲಿ ೧೫೦ ಕ್ಕೂ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಳ್ಳುವ ಮೂಲಕ ಸರ್ಕಾರ ರಚನೆ ಮಾಡಲಿದೆ.
ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿ ಶುಕ್ರವಾರ ಸಂಜೆ ಐದು ಗಂಟೆಗೆ ಬಹಿರಂಗ ಸಭೆ ನಡೆಯಲಿದ್ದು ಹತ್ತು ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ. ಪ್ರತೀ ಪಂಚಾಯಿತಿಯ ಹಳ್ಳಿಗಳಿಗೂ ಹೋಗಿ ಮನೆಮನೆಯಲ್ಲೂ ಮೋದಿಯವರ ಯೋಜನೆಗಳು ಹಾಗೂ ಬಿಜೆಪಿ ಕಾರ್ಯೋದ್ದೇಶಗಳನ್ನು ಪ್ರಚಾರ ಮಾಡಿದ್ದೇವೆ. ಯುವಕರು ಹೆಚ್ಚಾಗಿ ಸ್ಪಂದಿಸುತ್ತಿದ್ದಾರೆ. ಯುವಜನರ ಬೆಂಬಲದಿಂದ ನಾವು ಉತ್ಸಾಹ ಪಡೆದಿದ್ದೇವೆ ಎಂದು ಹೇಳಿದರು.
ಬಿಜೆಪಿ ಮುಖಂಡ ನಾರ್ಥ್ ಈಸ್ಟ್ ಸುರೇಶ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಷಾ ಅವರ ಮಾರ್ಗಸೂಚಿ ಪಾಲಿಸುತ್ತಿದ್ದೇವೆ. ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಜನವರಿ ೧೨ ರಂದು ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಬೇಕು. ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೂ ತೆರಳಿ ಉತ್ತಮವಾಗಿ ಸಂಘಟನೆ ಮಾಡಲಾಗಿದೆ. ಬಹುತೇಕ ಯುವಜನರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಪರಿವರ್ತನಾ ಯಾತ್ರೆಯ ನಂತರ ಪಕ್ಷಕ್ಕೆ ಹೊಸ ಆಯಾಮ ಸಿಗಲಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ, ದಾಮೋದರ್, ಮಂಜುಳಮ್ಮ, ಸುಜಾತಮ್ಮ, ರತ್ನಮ್ಮ, ರವಿಚಂದ್ರ, ಮುನಿರಾಜು ಕುಟ್ಟಿ, ಮಂಜುನಾಥ್, ಮಳ್ಳೂರು ಮಂಜು, ಕೃಷ್ಣಾರೆಡ್ಡಿ, ಬೈರಾರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -